ಪುತ್ತೂರು ಕುಲಾಲ ಸಂಘದ ವಾರ್ಷಿಕೋತ್ಸವ
ಕುಲಾಲ ಸಮಾಜ ಬಾಂಧವರು ರಾಜಕೀಯದಲ್ಲಿ ಮುಂದೆ ಬರಬೇಕು. ಕೇವಲ ಕೆಳಹಂತದ ಕಾರ್ಯಕರ್ತರಾಗಿಯೇ ಉಳಿದರೆ ಉತ್ತಮ ಜವಾಬ್ದಾರಿ ಸ್ಥಾನ ಸಿಗಲಾರದು ಎಂದು ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ರಾಜೇಂದ್ರ ಕುಮಾರ್ ಅಳಪೆ ಹೇಳಿದರು.
ಪುತ್ತೂರು ಪುರಭವನದಲ್ಲಿ ಇತ್ತೀಚೆಗೆ ನಡೆದ ಕುಲಾಲ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ರಾಜಕೀಯದಲ್ಲಿ ವಿವಿಧ ಹುದ್ದೆ ಅಲಂಕರಿಸಿದವರ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜಕೀಯವಾಗಿ ಮೇಲ್ಮಟ್ಟಕ್ಕೆ ಬರಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಘಟನೆಗೆ ಶಕ್ತಿ ತುಂಬುವ ಕೆಲಸ ಆಗಬೇಕು. ಇದಕ್ಕಾಗಿ ಸಮಾಜದ ಮೇಲೆ ಪ್ರೀತಿ ಇಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಭಾಸ್ಕರ ಎಂ.ಪೆರುವಾಯಿ ಮಾತನಾಡಿ ಮೊಟ್ಟೆತ್ತಡ್ಕದಲ್ಲಿರುವ ಸಂಘದ ನಿವೇಶನದಲ್ಲಿ ನಮ್ಮ ಸಮಾಜದ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ನಿರ್ಮಾಣದ ಯೋಜನೆ ಇದೆ. ಜೊತೆಗೆ ಸಂಘದ ಮಹಿಳಾ ಘಟಕ, ಯುವಕರ ಘಟಕ ರಚನೆ ಮಾಡಲಾಗುವುದು ಎಂದರು. ಉಡುಪಿ ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಕರುಣಾಕರ ವಿ ಮಾತನಾಡಿ ಆತ್ಮವಿಶ್ವಾಸದಿಂದ ಕೆಲಸ ಮಾಡಿದಾಗ ನಮ್ಮ ಸಂಘಟನೆ ಬೆಳೆಯುತ್ತದೆ ಎಂದರು. ಶಿಕ್ಷಣ ಇಲಾಖೆಯ ನಿವೃತ್ತ ದ್ವಿ.ದ.ಸಹಾಯಕ ಕೃಷ್ಣಪ್ಪ ಮೂಲ್ಯ ಬೆಳ್ಳಾರೆಯವರು ಮಾತನಾಡಿ ಸುಳ್ಯದಲ್ಲಿ ಯುವಕರ ಮೂಲಕ ನಾನು ಸಮಾಜ ಬಾಂಧವರನ್ನು ಸಂಘಟಿಸುತ್ತಿದ್ದೇನೆ ಎಂದರು. ಸಂಘದ ಗೌರವಾಧ್ಯಕ್ಷ ಬಿ.ಎಸ್ ಕುಲಾಲ್ರವರು ಮಾತನಾಡಿ ಸಂಘ ಬೆಳೆದು ಬಂದ ದಾರಿಯ ಕುರಿತು ವಿವರಣೆ ನೀಡಿದರು. ಸಂಘದ ಕಾರ್ಯದರ್ಶಿ ಚಂದ್ರಹಾಸ ಕುಲಾಲ್ ಪದವು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ವಸಂತ ಕುಲಾಲ್, ಮಾಜಿ ಅಧ್ಯಕ್ಷ ಶಿವಪ್ಪ ಮೂಲ್ಯ, ತುಕಾರಾಮ್ ಕುಲಾಲ್, ರವಿಚಂದ್ರ ಅತಿಥಿಗಳನ್ನು ಗೌರವಿಸಿದರು. ನ್ಯಾಯವಾದಿ ಮಹೇಶ್ ಕೆ.ಸವಣೂರು ಕ್ರೀಡಾ ಕೂಟದಲ್ಲಿ ವಿಜೇತರ ಬಹುಮಾನ ಕಾರ್ಯಕ್ರಮ ನಿರೂಪಿಸಿದರು. ಚೈತ್ರ ಡಿ ಮತ್ತು ಶ್ರೇಯಸ್ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಕೆ ಸ್ವಾಗತಿಸಿ, ಸಂಘದ ಜತೆ ಕಾರ್ಯದರ್ಶಿ ಜನಾರ್ದನ ಸಾರ್ಯ ವಂದಿಸಿದರು. ನವೀನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮದ್ಯಾಹ್ನ ಚಾ ಪರ್ಕ ಕಲಾವಿದರಿಂದ ‘ಪನಿಯರೆ ಆವಂದಿನ’ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.
ಗ್ರಾ.ಪಂ ಚುನಾವಣೆಯಲ್ಲಿ ಸದಸ್ಯರಾಗಿ ಆಯ್ಕೆಯಾದ ಪಡುವನ್ನೂರಿನ ದೇವಕಿ, ನೆಕ್ಕಿಲಾಡಿಯ ಜ್ಯೋತಿ, ರಾಮಕುಂಜ ಪ್ರೇಮಲತಾ ಮತ್ತು ಅಕ್ರಮ ಸಕ್ರಮ ಸಮಿತಿ ಸದಸ್ಯರಾಗಿ ಆಯ್ಕೆಗೊಂಡ ಪಿ.ವಿ.ದಿನೇಶ್ರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ವಿತರಿಸಲಾಯಿತು.
………………………… ………………………… ………………………… ………………….
ಸತ್ಯ, ಪ್ರಾಮಾಣಿಕತೆಗೆ ಇನ್ನೊಂದು ಹೆಸರು ಮೂಲ್ಯ
ಕುಲಾಲ, ಮೂಲ್ಯ ಎಂಬ ಪದ ಬಳಸಲು ನಮ್ಮ ಸಮಾಜ ಬಾಂಧವರು ಅಂಜಿಕೆ ಮಾಡುತ್ತಿದ್ದಾರೆ. ವಾಸ್ತವವಾಗಿ ನಾವು ಮಡಿಕೆ ಮಾಡುವುದಾದರೂ ಅದರಿಂದ ಸಮಸ್ತ ನಾಡಿನ ಜನತೆಗೆ ಆಹಾರಕ್ಕೆ ಉಪಯೋಗವಾಗಿದೆ. ಅದೇ ರೀತಿ ಹಿಂದಿನ ಕಾಲದಲ್ಲಿ ಸತ್ಯ ಮತ್ತು ಪ್ರಾಮಾಣಿಕೆತೆಗಾಗಿ ಅರಸರ ಆಸ್ಥಾನದಲ್ಲೂ ಮೂಲ್ಯತಿಗೆ ಇತ್ತು.
* ಆನಂದ ಕುಲಾಲ್ ಎಡ್ತೂರು ಸಂಚಾಲಕರು, ವಿವೇಕಾನಂದ ಯುವಕ ಮಂಡಲ,ಇರ್ವತ್ತೂರು