ಹಾವೇರಿ(ಜೂ.೦೨,ಕುಲಾಲ್ ವರ್ಲ್ಡ್ ನ್ಯೂಸ್): ವಿವಿಧ ರಾಜಕೀಯ ಪಕ್ಷಗಳು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕುಂಬಾರ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸುವ ನಿಟ್ಟಿನಲ್ಲಿ `ಕುಂಬಾರನ ನಡೆ..ವಿಧಾನಸೌಧದ ಕಡೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಅಖಿಲ ಕರ್ನಾಟಕ ಸರ್ವಜ್ಞ ಗುರುಪೀಠ ಸೇವಾ ಸಮಿತಿ ವತಿಯಿಂದ ಹಕ್ಕೊತ್ತಾಯ ನಡೆಸುವ ಅಭಿಯಾನದ ಮೊದಲ ಪೂರ್ವಭಾವಿ ಬಹಿರಂಗ ಸಭೆಯು ಹಾವೇರಿ ಜಿಲ್ಲೆಯ ರಾಜ್ಯ ಸರಕಾರಿ ನೌಕರರ ಸಂಘದಲ್ಲಿ ನಡೆಯಿತು.
ರಾಜ್ಯಾದ್ಯಂತ ಕುಂಬಾರ ಸಮುದಾಯ ಜನರು ೨೦ ಲಕ್ಷಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿದ್ದು, ಸುಮಾರು ವರ್ಷಗಳಿಂದಲೂ ಸಂಘಟನೆ ಮಾಡಿಕೊಂಡು ಬಂದಿದ್ದೇವೆ. ಇಂದು ರಾಜಕೀಯ ಪ್ರಜ್ಞೆ ಬೆಳೆಸಿಕೊಂಡು ರಾಜಕೀಯವಾಗಿಯೂ ಸಕ್ರಿಯರಾಗಿದ್ದೇವೆ. ನಮ್ಮ ಸಮಾಜದಿಂದ ಇಲ್ಲಿಯವರೆಗೂ ಒಬ್ಬ ಶಾಸಕರು, ಸಂಸದರೂ ಇಲ್ಲ, ಆದ್ದರಿಂದ ಕುಂಬಾರರಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಮುಂದಿನ ಚುನಾವಣೆಯಲ್ಲಿ ಕುಂಬಾರ ಸಮುದಾಯದಯದ ನಾಯಕರಿಗೆ ಟಿಕೆಟ್ ನೀಡುವಂತೆ ಸಭೆಯಲ್ಲಿ ಆಗ್ರಹಿಸಲಾಯಿತು.
ಸಭೆಯಲ್ಲಿ ಅಖಿಲ ಕರ್ನಾಟಕ ಸರ್ವಜ್ಞ ಗುರುಪೀಠ ಸೇವಾ ಸಮಿತಿಯ ಸಂಸ್ಥಾಪಕ ಮಂಜಪ್ಪ ಕುಂಬಾರ ಶರಣರು, ರಾಜ್ಯಾಧ್ಯಕ್ಷ ಶಂಕರ ಶೆಟ್ಟಿ ಕುಂಬಾರ,ಹಾವೇರಿ ಜಿಲ್ಲಾ ಅಧ್ಯಕ್ಷ ರೇವಣಪ್ಪ, ಕುಂಬಾರ ಸಮಾಜದ ಮುಖಂಡರಾದ ಪ್ರವೀಣ್ ಕುಮಾರ್ ಕೆ.ಟಿ, ಹರೀಶ್ ಎನ್, ಸಂಪತ್ ಕುಮಾರ್ ಪ್ರಜಾಪತಿ, ಬಸಣ್ಣ ಕುಂಬಾರ್, ಸಿದ್ಧಪ್ಪ ಚಕ್ರಸಾಲಿ ಮತ್ತು ಹಾವೇರಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕುಂಬಾರ ಸಂಘಟನೆಯ ಪದಾದಿಕಾರಿಗಳು ಮತ್ತು ಯುವ ಮುಖಂಡರು ಉಪಸ್ಥಿತರಿದ್ದರು.