ಮಂಗಳೂರು(ಜೂ.೦೨, ಕುಲಾಲ್ ವರ್ಲ್ಡ್ ನ್ಯೂಸ್): ದುಡಿದು ಸಾಕಬೇಕಾದ ಮಗನೇ ಹಾಸಿಗೆ ಹಿಡಿದಿದ್ದರೆ, ಬೀಡಿಕಟ್ಟಿ ಬದುಕು ಸವೆಸುತ್ತಿರುವ ಬಡ ತಾಯಿ ಮಗನ ಆರೈಕೆಗಾಗಿ ಸಹಾಯಯಾಚಿಸುತ್ತಿದ್ದಾರೆ.
ಸಾಮಾನ್ಯ ಕಾಯಿಲೆಯಾಗಿದ್ದರೆ ತಾಯಿಯೇ ದುಡಿದು ಚಿಕಿತ್ಸೆ ಒದಗಿಸಬಹುದಾಗಿತ್ತು. ಆದರೆ ಮಗನ ಎರಡೂ ಕಿಡ್ನಿ ವೈಫಲ್ಯವಾಗಿರುವುದರಿಂದ ಆಕೆ ಅಸಹಾಯಕರಾಗಿದ್ದಾರೆ. ಕಳೆದ ಏಳು ವರ್ಷಗಳಿಂದ ಅವರು ಕಿಡ್ನಿ ಚಿಕಿತ್ಸೆ ಮಾತ್ರವಲ್ಲ, ಸಹೃದಯಿ ಕಿಡ್ನಿ ದಾನಿಗಾಗಿಯೂ ಎದುರು ನೋಡುತ್ತಿದ್ದಾರೆ. ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಬೇಕಾಗಿರುವುದರಿಂದ ಚಿಕಿತ್ಸೆಗೆ ಹಣ ಹೊಂದಿ ಸಲು ಸಾಧ್ಯವಾಗದೆ ಬದುಕು ಇಲ್ಲಿಗೆ ಮುಗಿಯಿತು ಎಂದು ಚಿಂತಾಕ್ರಾಂತರಾಗಿದ್ದಾರೆ.
ಕಾಸರಗೋಡು ತಾಲೂಕು ಮೀಯಪದವು ಬೆಣ್ಣೆಮನೆ ನಿವಾಸಿ ದಿ. ಗೋಪಾಲ ಮೂಲ್ಯ ಅವರ ಪತ್ನಿ ಗಿರಿಜಾ ಅವರೇ ಮಗನ ಜೀವದಾನಕ್ಕಾಗಿ ಸಮಾಜದ ಸಹೃದಯರ ಮಾನವೀಯ ನೆರವು ಯಾಚಿಸುತ್ತಿರುವ ಮಹಿಳೆ. ಇವರ ಪುತ್ರ ಜಯರಾಜ್ (೩೬ ವರ್ಷ) ಬೇಕರಿಯಲ್ಲಿ ದುಡಿದು ಒಂದಿಷ್ಟು ಆದಾಯ ತರುತ್ತಿದ್ದ. ಈತನೊಂದಿಗೆ ಸಹೋದರನೂ ಸಹಾಯಕನಾಗಿದ್ದ. ಆದರೆ ಮನೆಗೆ ಆಧಾರವಾಗಿದ್ದ ಹಿರಿಯ ಮಗನೇ ಕಿಡ್ನಿ ವೈಫಲ್ಯಕ್ಕೀಡಾಗಿ ಹಾಸಿಗೆ ಹಿಡಿದಿದ್ದರೆ ಅಸಹಾಯಕ ತಾಯಿ ಮಗನನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕೆಂದು ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ.
ಗಿರಿಜಾ ಅವರ ಪತಿ ಗೋಪಾಲ ಮೂಲ್ಯ ಅವರು ಜೆಸಿಬಿ ಚಾಲಕರಾಗಿ ದುಡಿಯುತ್ತಿದ್ದರು. ಆದರೆ ದುರದೃಷ್ಟ ಬೆನ್ನುಹಿಡಿದಂತೆ ಅವರು ಕೆಲವು ವರ್ಷಗಳ ಹಿಂದೆಯೇ ಮರದಿಂದ ಬಿದ್ದು ಮೃತಪಟ್ಟಿದ್ದಾರೆ. ಈಗ ಮಕ್ಕಳದೇ ಆಶ್ರಯ. ಒಬ್ಬ ಮಗ ಬೇಕರಿಯಲ್ಲಿ ಮತ್ತೊಬ್ಬ ಮಗ ಮುಂಬಯಿಯ ಹೋಟೆಲೊಂದರಲ್ಲಿ ದುಡಿದು ಬರುತ್ತಿರುವ ಆದಾಯ ಜೀವನ ನಿರ್ವಹಣೆಗಷ್ಟೇ ಸಾಕಾಗುತ್ತಿದೆ.
ಗಿರಿಜಾ ಅವರ ಹಿರಿಯ ಪುತ್ರ ಜಯರಾಜ್ ನ ವಯಸ್ಸು ಈಗ 36 ವರ್ಷ. ಚಿಕ್ಕ ವಯಸ್ಸಿನಲ್ಲೇ ಈತನ ಎರಡೂ ಕಿಡ್ನಿಗಳು ವೈಫಲ್ಯಗೊಂಡಿದೆ. ಈತನನ್ನು ಬದುಕಿಸಬೇಕೆಂಬ ಹಂಬಲದಿಂದ ತಾಯಿ ಶತ ಪ್ರಯತ್ನ ನಡೆಸುತ್ತಿದ್ದಾರೆ. ಬೀಡಿ ಕಟ್ಟುವುದು ಬಿಟ್ಟು ಬೇರೆ ವೃತ್ತಿ ತಿಳಿಯದ ಅವರಾದರೂ ಕಿಡ್ನಿ ಮರುಜೋಡಣೆಗೆ ತಗಲುವ ಲಕ್ಷಾಂತರ ಹಣ ಎಲ್ಲಿಂದ ಹೊಂದಿಸಿಯಾರು ? ಅಲ್ಲದೆ ಕಿಡ್ನಿ ಪ್ಲಾಂಟೇಷನ್ ಗಾಗಿ O+ (ಓ ಪಾಸಿಟಿವ್) ರಕ್ತದ ಗುಂಪಿನ ಕಿಡ್ನಿಯ ಅವಶ್ಯಕತೆ ಇದೆ. ಹೀಗಾಗಿ ಸಾರ್ವಜನಿಕರ ನೆರವು ಯಾಚಿಸುತ್ತಿದ್ದಾರೆ. ಅವರ ಚಿಕಿತ್ಸೆಗೆ ಧನ ಸಹಾಯದ ಅಗತ್ಯವಿದೆ. ದಾನಿಗಳು, ಸಂಘ-ಸಂಸ್ಥೆಗಳು ಮನಸು ಮಾಡಿ ಹೆಚ್ಚಿನ ನೆರವು ನೀಡಿದ್ದಲ್ಲಿ ಅವರನ್ನು ಬದುಕಿಸಬಹುದು.
ಸಹಕರಿಸುವ ದಾನಿಗಳು ಮಂಜೇಶ್ವರದ ಕೆಳಗಿನ ಬ್ಯಾಂಕ್ ಖಾತೆಗೆ ಹಣ ಕಳಿಸಿ ಸಹಕರಿಸಬಹುದು.
Jayaraj B,
Syndicate Bank Manjeshwar Branch,
Kasaragod Dist.
S.B A/c No: 42122250001645, IFSC Code: SYNB0004212
Mobile : 8943444045