ಹಾವಿನ ವಿಷ ಹೀರಿ ಗೆಳೆಯನನ್ನು ಕಾಪಾಡಿದ ಬಾಲಕಿ ಈಕೆ
ಬಂಟ್ವಾಳ(ಜೂ.೨೬): ಶಾಲೆಯಲ್ಲಿ ಆಡುತಿದ್ದ ವೇಳೆ ಹಾವಿನ ಕಡಿತಕ್ಕೆ ಒಳಗಾದ ಗೆಳೆಯನ ದೇಹದಿಂದ ರಕ್ತವನ್ನು ಹೀರಿ ಆತನ ಪ್ರಾಣ ಉಳಿಸಲು ನೆರವಾದ ಬಂಟ್ವಾಳದ ನಾಯಿಲ ಗ್ರಾಮದ ಬಾಲಕಿ ಪ್ರತೀಕ್ಷಾ ಕುಲಾಲ್ ಗೆ `ಕನ್ನಡಪ್ರಭ-ಸುವರ್ಣ ನ್ಯೂಸ್’ನ ಪ್ರತಿಷ್ಠಿತ ‘ಶೌರ್ಯ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.
ಬೆಂಗಳೂರು ನಗರದ ಪುರಭವನದಲ್ಲಿ ನಡೆದ ವರ್ಣ ರಂಜಿತ ಕಾರ್ಯಕ್ರಮದಲ್ಲಿ ತಮ್ಮ ಪ್ರಾಣ ಪಣಕ್ಕಿಟ್ಟು ಇತರರ ಪ್ರಾಣ ಕಾಪಾಡಿದ ಹದಿನೆಂಟು ಮಂದಿ ಸಾಧಕರಿಗೆ ‘ಶೌರ್ಯ ಪ್ರಶಸ್ತಿ’ ನೀಡಲಾಗಿದ್ದು, ಇವರಲ್ಲಿ ಪ್ರತೀಕ್ಷಾ ಕುಲಾಲ್ ಒಬ್ಬಳಾಗಿದ್ದಾಳೆ. ಈ ವೇಳೆ ಗೃಹ ಸಚಿವ ಜಿ. ಪರಮೇಶ್ವರ್, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಅಂದು ನಡೆದಿದ್ದೇನು ?
ನಾಲ್ಕನೇ ತರಗತಿಯಲ್ಲಿ ಓದುತ್ತಿರುವ 9 ವರ್ಷದ ನಿತೇಶ್ 2014, ಫೆ.4ರಂದು ತನ್ನ ಸಹಪಾಠಿ ಪ್ರತೀಕ್ಷಾ ಸೇರಿದಂತೆ ಇತರೆ ಸ್ನೇಹಿತರೊಡನೆ ಬಿಡುವಿನ ವೇಳೆಯಲ್ಲಿ ಶಾಲೆಯ ಎದುರಿನ ಮೈದಾನದಲ್ಲಿ ಆಟವಾಡುತ್ತಿದ್ದ. ಆಟವಾಡುತ್ತ ಮೈದಾನದ ಬದಿಯಲ್ಲಿದ್ದ ಬೇಲಿ ಬಳಿ ತೆರಳಿದ್ದಾನೆ. ಅವನ ಹಿಂದೆಯೇ ಸ್ನೇಹಿತರು ತೆರಳಿದ್ದಾರೆ. ಅತ್ತಿತ್ತ ಸುಳಿದಾಡುತ್ತ ಕಾಲ ಬದಿಯೇ ಹಗ್ಗದಂತೆ ಬಿದ್ದಿದ್ದ ಹಾವನ್ನು ನಿತೇಶ್ ಕಟ್ಟಿಗೆಯ ತುಂಡು ಎಂದರಿತು ಎತ್ತಿಕೊಂಡಿದ್ದಾನೆ. ಆಗ ಹಾವು ನಿತೇಶ್ನ ಕೈಗೆ ಕಚ್ಚಿದೆ. ಇದನ್ನು ಕಂಡ ಸಹಪಾಠಿಗಳು ಹೆದರಿ ಕೂಗುತ್ತ ಓಡಿ ಹೋಗಿದ್ದಾರೆ.
ಆದರೆ, ಜತೆಗಿದ್ದ ಪ್ರತೀಕ್ಷಾ ಮಾತ್ರ ಎದೆಗುಂದದೆ ನಿತೇಶ್ ಬಳಿ ತೆರಳಿ ಧೈರ್ಯ ತುಂಬುತ್ತ ಹಾವು ಕಚ್ಚಿದ ಜಾಗದ ಮೇಲ್ಭಾಗದಲ್ಲಿ ಅಲ್ಲಿಯೇ ಬಿದ್ದಿದ್ದ ಹಗ್ಗದ ತುಂಡನ್ನು ವಿಷ ಮೇಲೇರದಂತೆ ಬಿಗಿದು ಕಟ್ಟಿದ್ದಾಳೆ. ಬಳಿಕ ಹಾವು ಕಚ್ಚಿದ ಜಾಗ ಯಾವುದೆಂದು ಕೇಳಿದ್ದಾಳೆ. ನಿತೇಶ್ ಹಾವು ಕಚ್ಚಿದ ಜಾಗ ತೋರಿಸುತ್ತಿದ್ದಂತೆ ಹಲ್ಲುಗಳಿಂದ ಕಚ್ಚಿ ವಿಷವನ್ನು ಹೀರಿ ಎಂಜಲು ಉಗಿದಿದ್ದಾಳೆ. ನಾಲ್ಕಾರು ಬಾರಿ ಕಚ್ಚಿ ವಿಷ ತೆಗೆದು ಉಗಿದ ಪ್ರತೀಕ್ಷಾ ನಂತರ ನಿತೇಶ್ನನ್ನು ಮುಖ್ಯೋಪಾಧ್ಯಾಯರ ಕೊಠಡಿಗೆ ಕರೆದುಕೊಂಡು ಬಂದಿದ್ದಾಳೆ. ಮುಖ್ಯೋಪಾಧ್ಯಾಯರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಪ್ರತೀಕ್ಷಾಗೆ ಪ್ರೇರಣೆಯಾಗಿದ್ದು ನಾಲ್ಕನೇ ತರಗತಿ ಗದ್ಯಪಾಠ!
ಸಹಪಾಠಿಗೆ ಹಾವು ಕಚ್ಚಿದಾಗ ಎದೆಗುಂದದೆ ಪ್ರಾಣ ಉಳಿಸಿದ ಪ್ರತಿಕ್ಷಾಗೆ ಪ್ರೇರಣೆಯಾಗಿದ್ದು ನಾಲ್ಕನೇ ತರಗತಿಯ ಪಠ್ಯಪುಸ್ತಕದಲ್ಲಿರುವ 21ನೇ ಗದ್ಯಪಾಠ ‘ಪ್ರಥಮ ಚಿಕಿತ್ಸೆ’. ಹಾವು ಕಚ್ಚಿದ ವೇಳೆ ಕೈಗೊಳ್ಳಬೇಕಾದ ತಕ್ಷಣದ ಕ್ರಮಗಳ ಬಗ್ಗೆ ಈ ಗದ್ಯಪಾಠದಲ್ಲಿದೆ. ಅದನ್ನು ಪ್ರತೀಕ್ಷಾ ಅಭ್ಯಸಿಸಿದ್ದಳು. ಹೀಗಾಗಿ ತಾನು ಓದಿದ್ದನ್ನು ಸಹಪಾಠಿಗೆ ಹಾವು ಕಚ್ಚಿದ ಸಂದರ್ಭದಲ್ಲಿ ಸಮಯಪ್ರಜ್ಞೆ ಮೆರೆದು ಅನುಷ್ಠಾನಗೊಳಿಸಿ ಪ್ರಾಣ ಉಳಿಸಿದ್ದಾಳೆ.
“ಹಾವು ಕಚ್ಚಿದಾಗ ಪ್ರಥಮ ಚಿಕಿತ್ಸೆ ನೀಡಿದರೆ ಒಳ್ಳೆಯದು ಎಂದು ನಾನು ಓದಿದ ಪಾಠದಲ್ಲಿತ್ತು. ಅದರ ನೆನಪಾಯ್ತು. ಹಾಗಾಗಿ ನಿತೇಶ್ ನ ಕೈಗೆ ಹಗ್ಗ ಕಟ್ಟಿ, ವಿಷವನ್ನು ಹೀರಿ ಉಗಿದೆ. ಅಂದು ನನ್ನ ಸಹಪಾಠಿ ಪ್ರಾಣಾಪಾಯದಿಂದ ಪಾರಾಗಿದ್ದ. ಇಂದು ಕನ್ನಡಪ್ರಭ-ಸುವರ್ಣ ನ್ಯೂಸ್ ನನಗೆ ಪ್ರಶಸ್ತಿ ನೀಡಿರುವುದು ಖುಷಿ ತಂದಿದೆ’ ಎಂದು ಪ್ರತೀಕ್ಷಾ ತಿಳಿಸಿದ್ದಾಳೆ. ಈಕೆ ಪಾಣೆಮಂಗಳೂರು ನಾಯಿಲ ಹರೀಶ್ ಕುಲಾಲ್-ಶೋಭಾ ದಂಪತಿಯ ಸುಪುತ್ರಿಯಾಗಿದ್ದು, ಇದೀಗ ಬೊಂಡಾಲ ಜಗನ್ನಾಥ ಶೆಟ್ಟಿ ಮೆಮೋರಿಯಲ್ ಶಾಲೆಯಲ್ಲಿ 8ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ.