ಬೆಂಗಳೂರು(ಜೂ.೨೧): ಕರ್ನಾಟಕ ರಾಜ್ಯ ಕುಂಭಕಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಶಿವಕುಮಾರ ಚೌಡ ಶೆಟ್ಟಿ ಅವರನ್ನು ಸರಕಾರ ನೇಮಿಸಿದೆ. ಬೆಂಗಳೂರಿನಲ್ಲಿ ಗುತ್ತಿಗೆದಾರರಾಗಿರುವ ಚೌಡ ಶೆಟ್ಟಿ ಅವರು ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘ ಹಾಗೂ ವಿಶ್ವ ಕುಂಬಾರರ ಸರ್ವಜ್ಞ ವೇದಿಕೆಯ ಅಧ್ಯಕ್ಷರಾಗಿದ್ದಾರೆ.
ಕುಂಬಾರಿಕೆ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು 2010-2011ನೇ ಸಾಲಿನಲ್ಲಿ ಕುಂಭಕಲಾ ಅಭಿವೃದ್ಧಿ ಮಂಡಳಿಯನ್ನು ರಚಿಸಿತ್ತು. ಆದರೆ ಇದಕ್ಕೆ ಪ್ರತ್ಯೇಕ ಅಧ್ಯಕ್ಷರನ್ನು ನೇಮಿಸಿರಲಿಲ್ಲ. ಇದೀಗ ರಾಜ್ಯಪಾಲರ ಆದೇಶದಂತೆ ಸರಕಾರ ಚೌಡ ಶೆಟ್ಟಿ ಅವರನ್ನು ಕುಂಭಕಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಿದೆ.
ಪ್ರಸ್ತುತ ಕುಂಭಕಲಾ ಅಭಿವೃದ್ಧಿ ಮಂಡಳಿಯು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಒಬ್ಬರೇ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕುಂಬಾರಿಕೆ ಅಭಿವೃದ್ಧಿಗಾಗಿ ಉತ್ಪನ್ನಗಳ ತಯಾರಿಕೆಗೆ ಅವಶ್ಯವಿರುವ ಆಧುನಿಕ ಉಪಕರಣಗಳನ್ನು ಕೊಳ್ಳಲು ಹಾಗೂ ದುಡಿಮೆ ಬಂಡವಾಳಕ್ಕಾಗಿ ಸಾಲ ಮತ್ತು ಸಹಾಯಧನ ಒದಗಿಸುವುದು ಮಂಡಳಿ ರಚನೆಯ ಪ್ರಮುಖ ಉದ್ದೇಶವಾಗಿದೆ.
ಕುಂಭಕಲಾ ಅಭಿವೃದ್ಧಿ ಮಂಡಳಿಯನ್ನು ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಬೇರ್ಪಡಿಸಿ ಪ್ರತ್ಯೇಕ ಕುಂಭ ನಿಗಮವನ್ನು ರಚಿಸಬೇಕೆನ್ನುವುದು ವಿವಿಧ ಕುಂಬಾರ ಸಂಘಟನೆಗಳ ಆಗ್ರಹವಾಗಿತ್ತು. ಇದೀಗ ಈ ನಿಟ್ಟಿನಲ್ಲಿ ಸರಕಾರ ಕಾರ್ಯಪ್ರವೃತ್ತವಾಗಿದೆ ಎಂದು ತಿಳಿದು ಬಂದಿದ್ದು, ಈ ಬಗ್ಗೆ ಕೆಲವೇ ದಿನಗಳಲ್ಲಿ ಆದೇಶ ಹೊರಬೀಳಬಹುದು ಎನ್ನಲಾಗುತ್ತಿದೆ.