ಮಂಗಳೂರು(ಜೂ.೧೭): 2016-17ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಊರಿಗೆ, ವಿದ್ಯಾಸಂಸ್ಥೆಗೆ, ಮನೆಗೆ ಕೀರ್ತಿ ತಂದಿರುವ ಕಾಸರಗೋಡು ಮಂಜೇಶ್ವರ ಮೀಯಪದವಿನ ಕುಮಾರಿ ಅಂಜಲಿ ಅವರು ಕೊಲ್ಯ ರಾಜೀವ ಆಳ್ವ ಟ್ರಸ್ಟ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮೀಯಪದವು ಕುಳಬೈಲಿನ ಪೂವಪ್ಪ ಟಿ. ಮೂಲ್ಯ ಮತ್ತು ಲೀಲಾವತಿ ದಂಪತಿಯ ಸುಪುತ್ರಿಯಾದ ಅಂಜಲಿ ಅವರು ಯಾವುದೇ ಕೋಚಿಂಗ್ ಕ್ಲಾಸ್ಗೂ ಹೋಗದೆ ಮನೆಯಲ್ಲೇ ಅಭ್ಯಾಸ ಮಾಡಿ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇಕಡಾ 98.5 ಅಂಕ ಪಡೆದಿದ್ದಾರೆ. ಸುಮಾರು ೩೫ ಕಿಮಿ ರೈಲಿನಲ್ಲಿ ನಿತ್ಯ ಪ್ರಯಾಣ ಮಾಡಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿರುವ ಅಂಜಲಿ ಅವರು ಸೋಮೇಶ್ವರ ಪರಿಜ್ಞಾನ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಅಂಜಲಿ ಅವರ ತಂದೆ ಪೂವಪ್ಪ ಟಿ. ಮೂಲ್ಯ ಅವರು ಕಾಸರಗೋಡು ಸೆಷನ್ಸ್ ಕೋರ್ಟ್ ಉದ್ಯೋಗಿಯಾಗಿದ್ದು, ತಾಯಿ ಲೀಲಾವತಿ ಅಂಗನವಾಡಿ ಶಿಕ್ಷಕಿಯಾಗಿದ್ದಾರೆ. ಯಾವುದೇ ಕೋಚಿಂಗ್ ಕ್ಲಾಸ್ಗೂ ಹೋಗದೆ ಮನೆಯಲ್ಲೇ ಶ್ರದ್ಧೆಯಿಂದ ಅಭ್ಯಾಸ ಮಾಡಿ ಇಷ್ಟೊಂದು ಅಂಕ ಪಡೆದಿರುವುದು ವಿಶೇಷವಾಗಿದೆ. ಶಿಕ್ಷಕರು ಹೇಳಿದ ಪಾಠವನ್ನು ಗಮನವಿಟ್ಟು ಕೇಳಿ ಮನೆಯಲ್ಲಿ ಚೆನ್ನಾಗಿ ಅಭ್ಯಾಸ ನಡೆಸಿರುವ ಅಂಜಲಿ ಬ್ಯುಸಿನೆಸ್ ಸ್ಟಡೀಸ್, ಅಕೌಂಟೆನ್ಸಿ, ಸ್ಟ್ಯಾಟಿಸ್ಟಿಕ್ಸ್, ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ. ಮುಂದೆ ಚಾರ್ಟರ್ಡ್ ಅಕೌಂಟೆಂಟ್ ಆಗಬೇಕೆನ್ನುವ ಕನಸು ಹೊಂದಿರುವ ಅವರು ಕೊಲ್ಯ ರಾಜೀವ ಆಳ್ವ ಟ್ರಸ್ಟ್ ಪ್ರಶಸ್ತಿಗೆ ಆಯ್ಕೆಯಾಗಿದ್ದು ಮುಂದಿನ ಭಾನುವಾರ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಹೆತ್ತವರು, ಶಿಕ್ಷಕರ ಪ್ರೇರಣೆ ತನ್ನ ಸಾಧನೆಗೆ ಪ್ರೇರಣೆ ನೀಡಿದ ಹೆತ್ತವರು ಹಾಗೂ ಶಿಕ್ಷಕರನ್ನು ಸ್ಮರಿಸಿಕೊಂಡಿರುವ ಅಂಜಲಿ , ನನ್ನ ಶೈಕ್ಷಣಿಕ ವಿಷಯದ ಕುರಿತಂತೆ ತಂದೆ-ತಾಯಿ ನೀಡಿದ ನಿರಂತರ ಸಲಹೆ, ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳುತ್ತಾರೆ.
——ಅಂಜಲಿ ಅವರ ಕುರಿತು ಅಬ್ಬಕ್ಕ ಟೀವಿಯಲ್ಲಿ ಪ್ರಸಾರವಾದ ವರದಿ——-