ಮಂಗಳೂರು(ಜೂ.೦೮): ಬೆನ್ನುಹುರಿಗೆ ಏಟು ಮಾಡಿಕೊಂಡು ದಯನೀಯ ಸ್ಥಿತಿಯಲ್ಲಿರುವ ಚಂದ್ರಶೇಖರ ಕುಲಾಲ್(ಸಿ.ಎಸ್ ಕುಲಾಲ್) ಅವರಿಗೆ `ಯುವನ ಟ್ರಸ್ಟ್’ ವತಿಯಿಂದ ನೆರವು ನೀಡಿ ಮಾನವೀಯತೆ ಮೆರೆದರು.
19 ವರ್ಷಗಳ ಹಿಂದೆ ರೈಲ್ವೇ ಮೇಲ್ಸೆತುವೆಯಿಂದ 50 ಅಡಿ ಆಳದ ಕಂದಕಕ್ಕೆ ಬಿದ್ದು, ಸೊಂಟದ ಕೆಳಭಾಗದಿಂದ ಚೈತನ್ಯವನ್ನೇ ಕಳೆದುಕೊಂಡು ಇಂದಿಗೂ ನಡೆಯಲು, ಇತರರಂತೆ ಕೆಲಸ ಮಾಡಲು ಶಕ್ತರಾಗದೇ ನಿತ್ಯ ನೋವಿನಲ್ಲೇ ಜೀವನ ಸಾಗಿಸುತ್ತಿರುವ ಚಂದ್ರಶೇಖರ್ ಅವರ ಮನೆಗೆ ತೆರಳಿದ `ಯುವನ ಟ್ರಸ್ಟ್’ ಪದಾಧಿಕಾರಿಗಳು 35 ಸಾವಿರ ರೂಪಾಯಿಯನ್ನು ಜೂನ್ ೦೭ರಂದು ರಂದು ಹಸ್ತಾ೦ತರಿಸಿದರು.
ಪರಮೇಶ್ವರ ಮೂಲ್ಯ ಹಾಗೂ ಕಾವೇರಿ ದಂಪತಿಗಳ ಐದು ಮಕ್ಕಳ ಪೈಕಿ ಮೂರನೇಯವರಾದ ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಮಿತ್ತ ಪರಾರಿ ನಿವಾಸಿ ಚಂದ್ರಶೇಖರ್ ಕುಲಾಲ್ (39) ಗ್ಯಾರೇಜ್ವೊಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಅವರು 1998, ಆಗಸ್ಟ್ 15ರಂದು ಗೆಳೆಯರೊಂದಿಗೆ ಮನೆಯಿಂದ ದೂರದಲ್ಲಿರುವ ರೈಲ್ವೇ ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ಕಂದಕಕ್ಕೆ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದರು. ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಸೊಂಟದ ಕೆಳಭಾಗದಿಂದ ಚೈತನ್ಯವನ್ನೇ ಕಳೆದುಕೊಂಡ ಪರಿಣಾಮ ಸುದೀರ್ಘ ಕಾಲ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿರಲಿಲ್ಲ.
ತಾನು ಮೊದಲಿನಂತಾಗಬೇಕೆನ್ನುವ ಶತ ಪ್ರಯತ್ನವನ್ನು ನಡೆಸಿದ ಚಂದ್ರಶೇಖರ್ ಮಣಿಪಾಲ, ಬೆಂಗಳೂರಿಗೂ ತೆರಳಿ ಚಿಕಿತ್ಸೆ ಪಡಕೊಂಡಿದ್ದರು.19 ವರ್ಷಗಳಿಂದ ವ್ಹೀಲ್ ಚೇರ್ ಮುಖಾಂತರವೇ ನಡೆಯಲು ಪ್ರಯತ್ನಿಸುತ್ತಿರುವ ಚಂದ್ರಶೇಖರ್ ಅವರಿಗೆ ಸಹೃದಯರು ಕೈಜೋಡಿಸಿ ನೆರವಾಗುವಂತೆ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ವರದಿ ಪ್ರಕಟಿಸಿ ವಿನಂತಿಸಿಕೊಂಡಿತ್ತು. ಇದಕ್ಕೆ ಸ್ಪಂದಿಸಿರುವ `ಯುವನ ಟ್ರಸ್ಟ್’ ಧನ ಸಹಾಯ ನೀಡಿ ಸಹಕರಿಸಿದೆ. ಇದಕ್ಕೂ ಮೊದಲು `ಕುಲಾಲ್ ವರ್ಲ್ಡ್’ ವಾಟ್ಸಾಪ್ ಬಳಗದ ಮಿತ್ರರು ಸೇರಿ 1,07,881/- ರೂ ನೆರವು ನೀಡಿದ್ದರು.