ಬಂಟ್ವಾಳ(ಜೂ.೦೭): ನಿರೀಕ್ಷೆ ಹುಸಿಯಾಗಿದೆ.. ಬದುಕುವ ಹಂಬಲ ಕೊನೆಗೂ ಈಡೇರಲಿಲ್ಲ. ನೂರಾರು ಸಹೃದಯಿಗಳ ಹರಕೆ, ಹಾರೈಕೆ, ಪ್ರಾರ್ಥನೆ ಕೈಗೂಡಲಿಲ್ಲ.. ಬ್ಲಡ್ ಕ್ಯಾನ್ಸರ್ ಹಾಗೂ ಟಿಬಿ ಕಾಯಿಲೆಯ ಮಧ್ಯೆ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದ ಬಂಟ್ವಾಳ ಕಾವಳಮುಡೂರು ಗ್ರಾಮದ ದಿ. ಐತಪ್ಪ ಮೂಲ್ಯ ಮತ್ತು ಗಿರಿಜಾ ದಂಪತಿಯ ಪುತ್ರ ಸಂತೋಷ ಯಾನೆ ಡೀಕಯ್ಯ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾರೆ.
ಹಲವು ಸಮಯಗಳಿಂದ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತೋಷ ಅವರನ್ನು ವಾರದ ಹಿಂದೆ ಡಿಸ್ಚಾರ್ಜ್ ಮಾಡಿ, ಹಾಸನದ ಹೊಯ್ಸಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಕೆಲ ದಿನ ಚಿಕಿತ್ಸೆ ಪಡೆದ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದರು. ಈ ನಡುವೆ ಅವರು ಮನೆಗೆ ವಾಪಸಾಗಿದ್ದರು. ನಿನ್ನೆ (ಜೂ. ೦೬) ರಾತ್ರಿ ೮.೩೦ರ ವೇಳೆಗೆ ತೀವ್ರ ಅಸ್ವಸ್ಥರಾಗಿದ್ದು, ಬಂಟ್ವಾಳ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಕಳೆದ ಹಲವು ಸಮಯಗಳಿಂದ ಬ್ಲಡ್ ಕ್ಯಾನ್ಸರ್ ಹಾಗೂ ಟಿ.ಬಿ ಕಾಯಿಲೆಯಿಂದ ಬಳಲುತ್ತಿದ್ದ ಸಂತೋಷ್ ಅವರು ಹಲವು ಕಡೆ ಚಿಕಿತ್ಸೆ ಪಡೆದಿದ್ದರು. ತಿಂಗಳ ಹಿಂದೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯ ವೈದ್ಯರು ಸಂತೋಷ್ ಅವರನ್ನು ಕೆಎಂಸಿ ಆಸ್ಪತ್ರೆಗೆ ಕರೆದೊಯ್ದು ಕಿಮೋಥೆರಪಿ ಚಿಕಿತ್ಸೆ ನೀಡುವಂತೆ ತಿಳಿಸಿದ್ದರು. ಆದರೆ ಹಣಕಾಸಿನ ತೊಂದರೆಯಿಂದ ಅಲ್ಲಿ ತೆರಳಲು ನಿರಾಕರಿಸಿದ್ದರು. ಇವರ ಚಿಂತಾಜನಕ ಸ್ಥಿತಿಯ ಬಗ್ಗೆ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ವರದಿ ಪ್ರಕಟಿಸಿತ್ತು. ಇವರಿಗೆ ತುರ್ತಾಗಿ ಹಣದ ಅವಶ್ಯಕತೆ ಇರುವುದನ್ನು ಮನಗಂಡ `ಕುಲಾಲ್ ವರ್ಲ್ಡ್’ ವಾಟ್ಸಪ್ ಗುಂಪಿನ ಸದಸ್ಯರು ಒಂದೇ ವಾರದಲ್ಲಿ ಒಟ್ಟು 88,191/- ರೂ. ಸಂಗ್ರಹಿಸಿ ನೀಡಿದ್ದರೆ, ಆ ಬಳಿಕ ಬೆಹರೈನ್ ಕುಲಾಲ ಮಿತ್ರರು 20 ಸಾವಿರ ರೂ. ಸಹಾಯಹಸ್ತ ನೀಡಿ ಮಾನವೀಯತೆ ಮೆರೆದಿದ್ದರು. ಆದರೆ ವಿಧಿ ಬರಹ ಬೇರೆಯೇ ಆಗಿತ್ತು. ಸಂತೋಷ್ ಜೀವನ್ಮರಣ ಹೋರಾಟದಲ್ಲಿ ಸೋತು ಬಾರದ ಲೋಕಕ್ಕೆ ಹೋಗಿದ್ದಾನೆ.