ಮಂಗಳೂರು(ಮೇ.೩೦): ರಕ್ತದ ಕ್ಯಾನ್ಸರ್ ಚಿಕಿತ್ಸೆಗೆ ಹಣವಿಲ್ಲದೆ ಉದಾರ ದಾನಿಗಳ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದ್ದ ಬಡ ಯುವಕನಿಗೆ `ಕುಲಾಲ್ ವರ್ಲ್ಡ್’ ವಾಟ್ಸಪ್ ಗ್ರೂಪಿನ ಸದಸ್ಯರು ಶೀಘ್ರ ಸ್ಪಂದಿಸಿ, ಒಟ್ಟು 88,191/- ರೂ. ಧನ ಸಹಾಯ ನೀಡಿ ಕಷ್ಟಕ್ಕೆ ನೆರವಾಗಿದ್ದಾರೆ.
ಬಂಟ್ವಾಳ ಕಾವಳಮುಡೂರು ಗ್ರಾಮದ ಐತಪ್ಪ ಮೂಲ್ಯ ಮತ್ತು ಗಿರಿಜಾ ದಂಪತಿಯ ಪುತ್ರ ಸಂತೋಷ ಯಾನೆ ಡೀಕಯ್ಯ ಅವರು ಕ್ಯಾನ್ಸರ್ ಮತ್ತು ಟಿ.ಬಿ ಎಂಬ ಮಹಾಮಾರಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಲ್ಲಿ ಕ್ಯಾನ್ಸರ್ ಗೆ ಕೀಮೋಥೆರಪಿ ಚಿಕಿತ್ಸೆ ಲಭ್ಯವಿಲ್ಲದ ಕಾರಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವಂತೆ ವೈದ್ಯರು ತಿಳಿಸಿದ್ದರು.
ಆದರೆ ಬಡತನದಿಂದ ತೀವ್ರ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದ ಸಂತೋಷ ಅವರಿಗೆ ಈ ಚಿಕಿತ್ಸೆ ಪಡೆಯಲು ಸಾಧ್ಯವಾಗಿರಲಿಲ್ಲ. ಇವರ ಚಿಂತಾಜನಕ ಸ್ಥಿತಿಯ ಕುರಿತು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ವರದಿ ಪ್ರಕಟಿಸಿದ್ದಲ್ಲದೆ, ತಮ್ಮ ವಾಟ್ಸಪ್ ಬಳಗದ ಸದಸ್ಯರಲ್ಲಿ ತುರ್ತು ಧನ ಸಹಾಯ ನೀಡುವಂತೆ ವಿನಂತಿ ಮಾಡಿತ್ತು. ಗ್ರೂಪಿನ ಅಡ್ಮಿನ್ ಗಳಾದ ನರೇಶ್ ಕೆ.ಟಿ ಹಾಗೂ ಹೇಮಂತ್ ಕುಮಾರ್ ಅವರು ಹಣ ಸಂಗ್ರಹದ ಜವಾಬ್ದಾರಿ ವಹಿಸಿಕೊಂಡಿದ್ದರು. `ಹನಿ ಕೂಡಿ ಹಳ್ಳ, ತೆನೆ ಕೂಡಿ ಕಣಜ’ ಎಂಬ ಮಾತಿನಂತೆ ಸಂತೋಷ ಅವರ ಸಂಕಷ್ಟಕ್ಕೆ ಮಿಡಿದ ಹಲವು ಸಹೃದಯರು ಧನ ಸಹಾಯ ನೀಡಿ ಉದಾರತೆ ಮೆರೆದಿದ್ದರು. ಫಲವಾಗಿ ಅಲ್ಪ ಸಮಯದಲ್ಲೇ 88,191/- (ಎಂಬತ್ತೆಂಟು ಸಾವಿರದ ನೂರತೊಂಭತ್ತೊಂದು) ರೂಪಾಯಿ ಸಂಗ್ರಹಗೊಂಡಿತ್ತು.
ಪ್ರಸ್ತುತ ಸಂತೋಷ್ ಅವರನ್ನು ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿರುವುದರಿಂದ ಸಂಗ್ರಹವಾದ ಮೊತ್ತವನ್ನು ಚೆಕ್ ಮೂಲಕ ಮೇ.೩೦ರಂದು ಸಂತೋಷ್ ಅವರ ಪೋಷಕರಾದ ಚಿಕ್ಕಮ್ಮ ಗುಲಾಬಿ ಹಾಗೂ ಸೋದರ ಸಂಬಂಧಿ ಹರೀಶ್ ಅವರಿಗೆ ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಹಸ್ತಾ೦ತರಿಸಲಾಯಿತು. ಈ ಸಂದರ್ಭ ಹಣ ಸಂಗ್ರಹದ ಜವಾಬ್ದಾರಿ ವಹಿಸಿಕೊಂಡಿದ್ದ `ಕುಲಾಲ್ ವರ್ಲ್ಡ್’ ನಿರ್ವಾಹಕರಾದ ನರೇಶ್ ಕೆ. ಟಿ ಬೆಳ್ತಂಗಡಿ , ಹೇಮಂತ್ ಕುಮಾರ್ ಕಿನ್ನಿಗೋಳಿ , ರಂಜಿತ್ ಕುಮಾರ್ ಮೂಡಬಿದ್ರಿ , ಮುಖೇಶ್ ಕುಲಾಲ್ ಕೊಲ್ಯ ಹಾಗೂ ಸದಸ್ಯರಾದ ರಮೇಶ್ ಕುಮಾರ್ ವಗ್ಗ, ಉದಯ ಕುಲಾಲ್ ಕಳತ್ತೂರು, ಅರುಣ್ ಕುಲಾಲ್ ಮೂಳೂರು, ಸೂರಜ್ ಕುಲಾಲ್ ಮಂಗಳೂರು , ಕಿರಣ್ ಕುಲಾಲ್ ಸುಳ್ಯ ಉಪಸ್ಥಿತರಿದ್ದರು. ಆಪತ್ಕಾಲದಲ್ಲಿ ತುರ್ತು ನೆರವು ನೀಡಿ ಉಪಕರಿಸಿದ ಎಲ್ಲ ಸಹೃದಯ ದಾನಿಗಳಿಗೆ ಸಂತೋಷ್ ಹಾಗೂ ಅವರ ಕುಟುಂಬಿಕರು ಕೃತಜ್ಞತೆ ಸಲ್ಲಿಸಿದ್ದಾರೆ.
ಹಣದ ಮುಗ್ಗಟ್ಟಿನಲ್ಲಿದ್ದ ಸಂತೋಷ್ ಅವರು ಸರಿಯಾದ ಬ್ಯಾಂಕ್ ಖಾತೆಯನ್ನೂ ಹೊಂದಿರಲಿಲ್ಲ. ಹಿಂದೆ ಯಾವತ್ತೋ ತೆರೆದಿದ್ದ ಖಾತೆಯೊಂದು ಇದ್ದರೂ ಹಣ ಸ್ವೀಕರಿಸಲು ಚೆಕ್ ಆಗಲೀ, ಎಟಿಎಂ ಕಾರ್ಡ್ ಆಗಲೀ ಇರಲಿಲ್ಲ. ಹೀಗಾಗಿ ಸಂತೋಷ್ ಅವರೇ ಖುದ್ದು ಬ್ಯಾಂಕಿಗೆ ತೆರಳಬೇಕಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಸಂತೋಷ್ ಅವರ ಈ ಸಮಸ್ಯೆಯನ್ನು ಮನಗಂಡ `ಕುಲಾಲ್ ವರ್ಲ್ಡ್’ ನ ಹೇಮಂತ್ ಕುಮಾರ್ ಅವರು ಸ್ಟೇಟ್ ಬ್ಯಾಂಕ್ ಉದ್ಯೋಗಿಯಾಗಿರುವ ಸೂರಜ್ ಕುಲಾಲ್ ಅವರ ಬಳಿ ಮಾತನಾಡಿದ್ದು, ಇದಕ್ಕೆ ವಿಶೇಷ ಅನುಮತಿಯನ್ನು ಪಡೆದ ಸೂರಜ್ ಖುದ್ದು ಆಸ್ಪತ್ರೆಗೆ ತೆರಳಿ ಸಂತೋಷ್ ಗೆ ಹೊಸ ಬ್ಯಾಂಕ್ ಖಾತೆ ತೆರೆಯಲು ಸಹಕರಿಸಿದ್ದಾರೆ. ಈ ಮಧ್ಯೆ ಚಿಕಿತ್ಸೆಗಾಗಿ ಸಂತೋಷರನ್ನು ಹಾಸನದ ಆಸ್ಪತ್ರೆಗೆ ಕರೆದೊಯ್ಯಬೇಕಾಗಿದ್ದು, ಇದಕ್ಕೆ ಹಣದ ಅವಶ್ಯಕತೆ ಇತ್ತು. ಹೀಗಾಗಿ ನೆರವು ನೀಡುವುದಾಗಿ ಭರವಸೆ ನೀಡಿದ್ದ ಹಲವರ ಬಳಿ ಸಂತೋಷ್ ಖಾತೆಗೆ ಹಣ ವರ್ಗಾಯಿಸುವಂತೆ ತಿಳಿಸಿದ್ದು, ಈ ಖಾತೆಗೆ 48,600/- ರೂ. ಜಮಾವಣೆಗೊಂಡಿತ್ತು. ನರೇಶ್ ಅವರ ಖಾತೆಗೆ ನೆರವು ರೂಪದಲ್ಲಿ ಜಮಾವಣೆಗೊಂಡ 39,591/- ರೂಪಾಯಿಯನ್ನು ಚೆಕ್ ಮೂಲಕ ನೀಡಲಾಗಿದೆ.