ಕುಂಬಾರ ಜಗತ್ತಿನ ಮೊದಲ ಶಿಲ್ಪಿ : ದಿನೇಶ್ ಬಳಂಜ
ಬೆಳ್ತಂಗಡಿ(ಮೇ.೩೦): ಕುಂಬಾರಿಕೆ ಎನ್ನುವುದು ಕೆಲಸ ಅಲ್ಲ, ಅದೊಂದು ಕಲೆ. ಕಲೆಯ ಮೂಲಕ ಆಕಾರ ನೀಡುವ ಕುಂಬಾರರು ಜಗತ್ತಿನ ಮೊದಲ ಶಿಲ್ಷಿ. ಕುಂಬಾರಿಕೆಯ ಮೂಲಕ ತಾಳ್ಮೆಯನ್ನು ಮೊದಲ ಬಾರಿಗೆ ಕಂಡುಕೊಂಡವ ಕುಂಬಾರ. ಮಡಕೆಯ ನೀರು ವೈಜ್ಞಾನಿಕವಾಗಿ ಆರೋಗ್ಯಕ್ಕೆ ಒಳ್ಳೆಯದು ಎಂಬುವುದನ್ನು ತೋರಿಸಿದ ಕುಂಬಾರರು ಜಗತ್ತಿನ ಮೊದಲ ವಿಜ್ಞಾನಿ ಎಂದು ನಾರಾವಿ ಸಂತ ಅಂಥೋನಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ದಿನೇಶ್ ಬಿ.ಕೆ. ಬಳಂಜ ಹೇಳಿದರು.
ಅವರು ಬೆಳ್ತಂಗಡಿ ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಆಶ್ರಯದಲ್ಲಿ ಕುಲಾಲ-ಕುಂಬಾರರ ಸಾಂಸ್ಕೃತಿಕ ಸಮಿತಿ, ಕುಲಾಲ-ಕುಂಬಾರರ ಯುವವೇದಿಕೆ ಹಾಗೂ ಕುಲಾಲ-ಕುಂಬಾರರ ಕ್ರೀಡಾ ಸಮಿತಿ ವತಿಯಿಂದ ಗುರುವಾಯನಕೆರೆ ಕುಲಾಲ ಮಂದಿರದಲ್ಲಿ ಮೇ ೨೭ರಂದು ಜರಗಿದ ಸಾಂಸ್ಕೃತಿಕ ಲೋಕದ ಅನಾವರಣ ಕುಂಭ ಕಲೋತ್ಸವ-೨೦೧೭ರ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಗುರುವಾಯನಕೆರೆ ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಪದ್ಮಮೂಲ್ಯ ಅನಿಲಡೆ ಮಾತನಾಡಿ, ನಮ್ಮಲ್ಲಿ ವಿವಿಧ ಜಾತಿ ಸಂಘಗಳಿದ್ದರೂ ಪರಸ್ಪರ ಹೊಂದಾಣಿಕೆಯಿಂದ ನಡೆಯಬೇಕು. ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಯುವಕರೂ ಕೂಡಾ ಇಂದು ಸಕ್ರೀಯರಾಗಿದ್ದಾರೆ. ಯುವಕರು ರಾಜಕೀಯವಾಗಿಯೂ ಸಕ್ರೀಯರಾಗಬೇಕು. ಈ ಮೂಲಕ ಶಕ್ತಿಯುತ ಸಮುದಾಯ ನಮ್ಮದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲಾಲ ಕುಂಬಾರರ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಅಶ್ವಿತ ಮೂಲ್ಯ ಓಡೀಲು ವಹಿಸಿ ಶುಭ ಕೋರಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ರಾಜ್ಯ ಕುಂಬಾರರ ಯುವವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಹರೀಶ್ ಕಾರಿಂಜ ಮಾತನಾಡಿ, ಕುಂಭ ಕಲಾ ನಿಗಮವನ್ನು ದೇವರಾಜು ಅರಸು ನಿಗಮದಿಂದ ಸ್ವತಂತ್ರಗೊಳಿಸಬೇಕು. ಇದಕ್ಕಾಗಿ ನಮ್ಮ ಹೋರಾಟ ನಿರಂತರವಾಗಲಿದೆ. ಮುಂದಿನ ವರ್ಷದ ನವೆಂಬರ್ ತಿಂಗಳಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದರು.
ವೇದಿಕೆಯಲ್ಲಿ ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಂಘದ ನಿರ್ದೇಶಕ ದಾಮೋದರ ಕುಲಾಲ್, ಕಬಕ ಕರ್ನಾಟಕ ಬ್ಯಾಂಕ್ನ ಮೆನೇಜರ್ ಅಶೋಕ್ ಕುಲಾಲ್, ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾದ ಸದಸ್ಯ ಮಿಥುನ್ ಕುಲಾಲ್ ಅಳಿಕೆ, ದಿನಕರ ಬಂಗೇರ ಖಂಡಿಗ, ಮೂರ್ಜೆ ರಾಜಲಕ್ಷ್ಮೀ ರೋಡ್ಲೈನ್ಸ್ನ ಮಾಲಕ ದಿನೇಶ್ ಕುಲಾಲ್, ಸ್ಥಳೀಯ ದಾನಿ ದೇವರಾಜ ಕುಲಾಲ್ ಪಾಂಡೇಶ್ವರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಮ್ಮಾನ:
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಭರತ್ ಕುಲಾಲ್, ಶ್ರೀನಾಥ್ ಕುಲಾಲ್, ಕು| ಅದೃಷ್ಟ, ದೇವಮ್ಮ ಹಾಗೂ ಪ್ರಭಾಕರ ಕುಲಾಲ್ ದಂಪತಿಯನ್ನು ಸಮ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಸಹಕಾರ ನೀಡಿದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬೆಳ್ತಂಗಡಿ ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ, ಕುಲಾಲ-ಕುಂಬಾರರ ಸಾಂಸ್ಕೃತಿ ಸಮಿತಿ, ಯುವವೇದಿಕೆ ಹಾಗೂ ಕುಲಾಲ-ಕುಂಬಾರರ ಕ್ರೀಡಾ ಸಮಿತಿ ಪದಾಧಿಕಾರಿಗಳು ಸಹಕರಿಸಿದರು. ಭರತ್ ಕುಲಾಲ್ ಪ್ರಾರ್ಥಿಸಿ ಸಾಂಸ್ಕೃತಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಖೇಶ್ ಕುಲಾಲ್ ಪಾಂಡೇಶ್ವರ ಸ್ವಾಗತಿಸಿದರು. ಅಭಿಜಿತ್ ಮೂಲ್ಯ ಕಾರ್ಯಕ್ರಮ ನಿರೂಪಿಸಿ ಜಯರಾಜ್ ಕುಲಾಲ್ ವಂದಿಸಿದರು. ಈ ಸಂದರ್ಭ ಜರಗಿದ ವಿವಿಧ ಸಾಂಸ್ಕೃತಿಕ ವೈಭವ ನೋಡುಗನ ಮನತಣಿಸಿತು.
———————————————————————
ಸರ್ವಜ್ಞ ಕುಂಬಾರ ಸಮುದಾಯದವನಾದರೂ ಆತನ ಸಿದ್ದಾಂತ ವಿಶ್ವಮಾನ್ಯ. ಆತನ ಚಿಂತನೆ, ತತ್ವ-ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು.
ದಿನೇಶ್ ಬಿ.ಕೆ. ಬಳಂಜ
———————————————————————
ಚಿತ್ರ-ವರದಿ : ಪದ್ಮನಾಭ ಕುಲಾಲ್, ವೇಣೂರು