ವಿದ್ಯೆಯ ಜೊತೆಗೆ ಮಕ್ಕಳಲ್ಲಿ ಸಂಸ್ಕಾರ ಮೂಡಿಸಿ: ವೇದಾವತಿ
ಬೆಳ್ತಂಗಡಿ(ಮೇ.೩೦): ವಿದ್ಯೆಯ ಜೊತೆಗೆ ಮಕ್ಕಳಿಗೆ ಭಜನೆಯ ಮೂಲಕ ಸಂಸ್ಕಾರ ಮೂಡಿಸಿ. ಮೊಬೈಲ್, ಟಿವಿ ಇವುಗಳು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಮಾರಕ. ಸಾಮಾಜಿಕ ಚಟುವಟಿಕೆಗಳೊಂದಿಗೆ ವಿದ್ಯೆಗೆ ಪ್ರೋತ್ಸಾಹ ನೀಡುವ ಜಾತಿ ಸಂಘಗಳ ಕಾರ್ಯ ಶ್ಲಾಘನೀಯ ಎಂದು ಬೆಳ್ತಂಗಡಿ ತಾ.ಪಂ. ಉಪಾಧ್ಯಕ್ಷೆ ವೇದಾವತಿ ಹೇಳಿದರು.
ಅವರು ಮೇ ೨೮ರಂದು ಮೂಲ್ಯರ ಯಾನೆ ಕುಲಾಲರ ಸಂಘ ವೇಣೂರು ಘಟಕದ ವತಿಯಿಂದ ಇಲ್ಲಿಯ ಲಯನ್ಸ್ ಕ್ಲಬ್ ಸಭಾಭವನದಲ್ಲಿ ಜರಗಿದ ೭ನೇ ವರ್ಷದ ಉಚಿತ ಪುಸ್ತಕ ವಿತರಣೆ ಹಾಗೂ ಸಾಧಕರ ಸಮ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಂಘಗಳಿಂದ ಪುಸ್ತಕ ಸಲಕರಣೆಗಳನ್ನು ಪಡೆಯುವ ಮಕ್ಕಳು ವಿದ್ಯಾಭ್ಯಾಸದ ಬಳಿಕ ಸಂಘವನ್ನು ಮರೆಯಬಾರದು. ಮುಂದಿನ ದಿನಗಳಲ್ಲಿ ನೀವು ಸಂಘದ ಬೆಳವಣಿಗೆಗೆ ಕಾರಣರಾಗಬೇಕು ಎಂದರು.
ಅಳದಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸದಾನಂದ ಕುಲಾಲ್ ಮಾತನಾಡಿ, ಪುಸ್ತಕ ವಿತರಣೆ ವಿದ್ಯಾ ದೇವತೆಯ ಸೇವೆ ಆಗಿದೆ. ಸಮುದಾಯ ಮುಂದುವರಿಯಲು ಶಿಕ್ಷಣ ಅಗತ್ಯ. ಪೋಷಕರೂ ಸಹ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕು. ಜಾತ್ಯಾತೀತ ದೇಶದಲ್ಲಿ ಜಾತಿ ಸಂಘಟನೆಗಳು ಬಲಿಷ್ಠವಾಗುತ್ತಿದೆ. ಸಂಘಟಿತರಾಗಿ ದುಡಿದಾಗ ಸಮುದಾಯ ಬಲಿಷ್ಠವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವೇಣೂರು ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಮಾತನಾಡಿ, ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರನ್ನು ಅಭಿನಂದಿಸಿದರು.
ಸನ್ಮಾನ:
ವೇಣೂರು ಗ್ರಾಮದ ಗುರಿಕಾರರಾಗಿರುವ ತಿಮ್ಮಯ್ಯ ಮೂಲ್ಯ ಅವರನ್ನು ಸಂಘದ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು. ಕಳೆದ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿಜಯ ಬ್ಯಾಂಕ್ ನಿವೃತ್ತ ಮೆನೇಜರ್, ಸರ್ವಜ್ಞವಾಣಿ ಪತ್ರಿಕೆಯ ಗೌರವ ಸಂಪಾದಕ ಸೋಮಯ್ಯ ಮೂಲ್ಯ ಹನೈನಡೆ, ಸಂಘದ ಮಾಜಿ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಹೇಮಾ ಶ್ರೀಧರ್ ಸಮ್ಮಾನಿತರ ಪರಿಚಯ ಪತ್ರ ವಾಚಿಸಿದರು. ಸಂಘದ ಕಾರ್ಯದರ್ಶಿ ಗಿರೀಶ್ ಕುಲಾಲ್ ಬಡೆಕ್ಕಿಲ ವರದಿ ವಾಚಿಸಿ ನಾಗೇಶ್ ಕುಲಾಲ್ ಸ್ವಾಗತಿಸಿದರು. ಗಿರೀಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿ ನೇಮಯ್ಯ ಕುಲಾಲ್ ವಂದಿಸಿದರು.
—————————————————————————————————-
ಕುಲಾಲ ಸಮುದಾಯದಲ್ಲಿ ಬಹಳಷ್ಟು ಪ್ರತಿಭೆಗಳಿವೆ. ಇವರು ಮುಖ್ಯವಾಹಿನಿಗೆ ಬರಬೇಕಾದರೆ ಆತ್ಮವಿಶ್ವಾಸದ ಕೊರತೆ ನೀಗಿಸುವಂತಾಗಬೇಕು.
ಸದಾನಂದ ಕುಲಾಲ್
——————————————————————————————————