ದೋಹಾ(ಮೇ.೨೯) : ಅವಳಿ ಮಕ್ಕಳೆಂದರೆ ಸಾಮಾನ್ಯವಾಗಿ ನೋಡಲು ಒಂದೇ ರೀತಿ ಇರುತ್ತಾರೆ. ಅಲ್ಲದೇ, ಒಂದೇ ರೀತಿಯ ಉಡುಗೆ, ತೊಡುಗೆಗಳ ಮೂಲಕ ಗಮನ ಸೆಳೆಯುತ್ತಾರೆ. ಈ ಅವಳಿ ಸಹೋದರಿಯರು ಪರೀಕ್ಷೆಯಲ್ಲಿಯೂ ಸಮಾನ ಅಂಕ ಗಳಿಸಿ ಅಚ್ಚರಿಮೂಡಿಸಿದ್ದು, ಇವರು ಮಾಡಿದ ಸಾಧನೆ ಕುತೂಹಲಕಾರಿಯಾಗಿದೆ.
ದೋಹಾ ಕತಾರ್ ನ ಕ್ಯೂ ಕೆಮ್ ಅಧಿಕಾರಿ, ಮೂಲತಃ ಕುಂದಾಪುರ ಬೇಳೂರಿನವರಾದ ಆನಂದ ಕುಂಬಾರ-ಜಯಲಕ್ಷ್ಮಿ ದಂಪತಿಯ ಪುತ್ರಿಯರಾದ ಅಕ್ಷಿತಾ ಹಾಗೂ ಅಂಕಿತಾ , ಸಿ.ಬಿ.ಎಸ್.ಇ.12ನೇ ತರಗತಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಸೇಮ್ ಮಾರ್ಕ್ಸ್ ತೆಗೆಯುವ ಮೂಲಕ ಗಮನ ಸೆಳೆದಿದ್ದಾರೆ. ಅವಳಿಗಳು ಬಹುತೇಕ ಎಲ್ಲ ನಡವಳಿಕೆಯಲ್ಲಿ ಸಮಾನವಾಗಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಫಲಿತಾಂಶದಲ್ಲೂ ತದ್ರೂಪಿಗಳಾಗಿರುವುದೇ ವಿಶೇಷ. ಕೆಲ ನಿಮಿಷದ ಅಂತರದಲ್ಲಿ ಜನಿಸಿದ ಈ ಅವಳಿ ಸಹೋದರಿಯರು ಯಾವಾಗಲೂ ಒಂದೇ ರೀತಿ ಇರುತ್ತಿದ್ದರು. ಇದೀಗ ಒಂದೇ ರೀತಿಯ ಅಂಕ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಇಬ್ಬರೂ ಶೇ.95.ರಷ್ಟು ಅಂಕ ಪಡೆದಿದ್ದಾರೆ. ಇವರು ದೋಹಾ ಕತಾರಿನ ಎಂಇಎಸ್ ಇಂಡಿಯನ್ ಸ್ಕೂಲ್ ನ ವಿದ್ಯಾರ್ಥಿನಿಯರಾಗಿದ್ದಾರೆ.