ಬಂಟ್ವಾಳ(ಮೇ.೨೧): ಮಾನವೀಯ ಸೇವೆಯೇ ಎಲ್ಲಕ್ಕಿಂತಲೂ ಶ್ರೇಷ್ಠವಾದುದು ಎಂದು ನಂಬಿ, ನೊಂದವರ ಬಾಳಿಗೆ ಬೆಳಕು ನೀಡುವ ಮಹತ್ವದ ಉದ್ದೇಶದಿಂದ ಆರಂಭಿಸಲಾದ `ಕುಲಾಲ್ ವರ್ಲ್ಡ್’ ವಾಟ್ಸಪ್ ಬಳಗದ ಮಿತ್ರರಿಂದ ಬೆನ್ನುಹುರಿಗೆ ಏಟು ಮಾಡಿಕೊಂಡು ದಯನೀಯ ಸ್ಥಿತಿಯಲ್ಲಿರುವ ಚಂದ್ರಶೇಖರ ಕುಲಾಲ್(ಸಿ.ಎಸ್ ಕುಲಾಲ್) ಅವರಿಗೆ ಧನ ಸಹಾಯ ನೀಡಿ ಆತ್ಮಸ್ಥೈರ್ಯ ತುಂಬಲಾಯಿತು.
19 ವರ್ಷಗಳ ಹಿಂದೆ ರೈಲ್ವೇ ಮೇಲ್ಸೆತುವೆಯಿಂದ 50 ಅಡಿ ಆಳದ ಕಂದಕಕ್ಕೆ ಬಿದ್ದು, ಸೊಂಟದ ಕೆಳಭಾಗದಿಂದ ಚೈತನ್ಯವನ್ನೇ ಕಳೆದುಕೊಂಡು ಇಂದಿಗೂ ನಡೆಯಲು, ಇತರರಂತೆ ಕೆಲಸ ಮಾಡಲು ಶಕ್ತರಾಗದೇ ನಿತ್ಯ ನೋವಿನಲ್ಲೇ ಜೀವನ ಸಾಗಿಸುತ್ತಿರುವ ಚಂದ್ರಶೇಖರ್ ಅವರ ಮನೆಗೆ ತೆರಳಿದ `ಕುಲಾಲ್ ವರ್ಲ್ಡ್’ ವಾಟ್ಸಪ್ ಮಿತ್ರರು ಸಂಗ್ರಹಿಸಿದ ಒಟ್ಟು 1,07,881/-(ಒಂದು ಲಕ್ಷದ ಏಳು ಸಾವಿರದ ಎಂಟುನೂರ ಎಂಬತ್ತೊಂದು) ರೂಪಾಯಿಯನ್ನು ಮೇ.21 ರಂದು ಹಸ್ತಾ೦ತರಿಸಿದರು.
ಈ ಸಂದರ್ಭ `ಕುಲಾಲ್ ವರ್ಲ್ಡ್’ ವಾಟ್ಸಪ್ ಗ್ರೂಪ್ ನ ಅಡ್ಮಿನ್ ಗಳಾದ ಹೇಮಂತ್ ಕುಮಾರ್ ಕಿನ್ನಿಗೋಳಿ, ರಂಜಿತ್ ಕುಮಾರ್ ಮೂಡಬಿದ್ರೆ, ನರೇಶ್ ಕೆ.ಟಿ ಬೆಳ್ತಂಗಡಿ, ಮುಖೇಶ್ ಕುಲಾಲ್ ಕೊಲ್ಯ ಹಾಗೂ ಸದಸ್ಯರಾದ ರಮೇಶ್ ಕುಮಾರ್ ವಗ್ಗ, ಸೂರಜ್ ಕುಲಾಲ್ ಮಂಗಳೂರು ಉಪಸ್ಥಿತರಿದ್ದರು.
ಪರಮೇಶ್ವರ ಮೂಲ್ಯ ಹಾಗೂ ಕಾವೇರಿ ದಂಪತಿಗಳ ಐದು ಮಕ್ಕಳ ಪೈಕಿ ಮೂರನೇಯವರಾದ ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಮಿತ್ತ ಪರಾರಿ ನಿವಾಸಿ ಚಂದ್ರಶೇಖರ್ ಕುಲಾಲ್ (39) ಗ್ಯಾರೇಜ್ವೊಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಚಂದ್ರಶೇಖರ್ 1998, ಆಗಸ್ಟ್ 15ರಂದು ಗೆಳೆಯರೊಂದಿಗೆ ಮನೆಯಿಂದ ದೂರದಲ್ಲಿರುವ ರೈಲ್ವೇ ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ಕಂದಕಕ್ಕೆ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದರು. ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಸೊಂಟದ ಕೆಳಭಾಗದಿಂದ ಚೈತನ್ಯವನ್ನೇ ಕಳೆದುಕೊಂಡ ಪರಿಣಾಮ ಸುದೀರ್ಘ ಕಾಲ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿರಲಿಲ್ಲ.
ತಾನು ಮೊದಲಿನಂತಾಗಬೇಕೆನ್ನುವ ಶತ ಪ್ರಯತ್ನವನ್ನು ನಡೆಸಿದ ಚಂದ್ರಶೇಖರ್ ಮಣಿಪಾಲ, ಬೆಂಗಳೂರಿಗೂ ತೆರಳಿ ಚಿಕಿತ್ಸೆ ಪಡಕೊಂಡಿದ್ದರು.19 ವರ್ಷಗಳಿಂದ ವ್ಹೀಲ್ ಚೇರ್ ಮುಖಾಂತರವೇ ನಡೆಯಲು ಪ್ರಯತ್ನಿಸುತ್ತಿರುವ ಚಂದ್ರಶೇಖರ್ ಅವರಿಗೆ ಸಹೃದಯರು ಕೈಜೋಡಿಸಿ ನೆರವಾಗುವಂತೆ `ಕುಲಾಲ್ ವರ್ಲ್ಡ್’ ಮಿತ್ರರ ಬಳಗ ವಿನಂತಿಸಿಕೊಂಡಿತ್ತು. ಇದಕ್ಕೆ ದೇಶ-ವಿದೇಶಗಳ ಮಾನವೀಯ ಕಳಕಳಿಯುಳ್ಳ ದಾನಿಗಳು ಸ್ಪಂದಿಸಿ, ನೆರವು ನೀಡಿದ್ದರು. ನೆರವು ನೀಡಿ ಸಹಕರಿಸಿದ ಸರ್ವ ದಾನಿಗಳಿಗೆ `ಕುಲಾಲ್ ವರ್ಲ್ಡ್ ಡಾಟ್ ಕಾಮ್ ‘ ಸಂಪಾದಕ ಮತ್ತು `ಕುಲಾಲ್ ವರ್ಲ್ಡ್’ ವಾಟ್ಸಾಪ್ ಬಳಗದ ಸ್ಥಾಪಕ ದಿನೇಶ್ ಬಂಗೇರ ಇರ್ವತ್ತೂರು, ಅಡ್ಮಿನ್ ಗಳಾದ ಹೇಮಂತ್ ಕುಮಾರ್, ರಂಜಿತ್ ಕುಮಾರ್, ನರೇಶ್ ಕೆ.ಟಿ, ಡಿ. ಎಸ್. ಕುಲಾಲ್, ಮುಖೇಶ್ ಕುಲಾಲ್ ಹಾಗೂ ಮಹಿಳಾ ಬಳಗ ಅಡ್ಮಿನ್ ಗಳಾದ ದಯಾ ಬಂಗೇರ, ಶೀಲಾ ಕಟ್ಟೆ, ರೇಣುಕಾ ಸಾಲ್ಯಾನ್, ರಶ್ಮಿ ಮೂಲ್ಯ ಅವರು ಧನ್ಯವಾದ ಅರ್ಪಿಸಿದ್ದಾರೆ.
ಸಹೃದಯಯರ ನೆರವಿಗಾಗಿ:
CHANDRASHEKARA
A/C NO.101201010014490
VIJAYA BANK
B.C.ROAD BRANCH
BANTWALA TQ
MANGALORE
IFSC CODE:VIJB0001012
ಚಂದ್ರಶೇಖರ್ ಕುಲಾಲ್ ಮೊಬೈಲ್ ಸಂಖ್ಯೆ : +91 9108587145