ಮಂಗಳೂರು(ಮೇ.೧೮): ಈತನ ಹೆಸರು ಸಂತೋಷ. ಆದರೆ ಬದುಕಿನಲ್ಲಿ ಸಂತಸವೆನ್ನುವುದು ಇವನ ಪಾಲಿಗೆ ಮರೀಚಿಕೆಯಾಗಿದೆ..!. ಇನ್ನೇನು ದುಡಿದು ಸ್ವಂತ ಬದುಕು ಕಟ್ಟಿಕೊಳ್ಳಬೇಕೆನ್ನುವ ಚಿಕ್ಕ ವಯಸ್ಸಿನಲ್ಲೇ ಈತನಿಗೆ ಕ್ಯಾನ್ಸರ್ ಮತ್ತು ಟಿ.ಬಿ ಎಂಬ ಮಹಾಮಾರಿ ಕಾಯಿಲೆ ಜೊತೆಜೊತೆಗೇ ಅಂಟಿಕೊಂಡು ಕಂಡ ಕನಸನ್ನು ನುಚ್ಚುನೂರು ಮಾಡಿದೆ. ಆರೋಗ್ಯ ಯಾತನೆಯ ಜೊತೆ ಚಿಕಿತ್ಸೆಗೆ ಹಣವಿಲ್ಲದೇ ಕಂಗಾಲಾಗಿರುವ ಈ ಯುವಕನಿಗೆ ಬಂದೊದಗಿದ ಸಂಕಷ್ಟ ನೋಡಿದರೆ ಕಲ್ಲು ಹೃದಯವೂ ಕರಗುವಂತಿದ್ದು, ಈ ಯುವಕನ ಬದುಕು ಇನ್ನೇನು ಕಮರಿ ಹೋಗುತ್ತದೆ ಎನ್ನುವ ಸ್ಥಿತಿಯಲ್ಲಿದೆ.
ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯ ಬೆಡ್ಡಿನ ಮೇಲೆ ತಲೆಮೇಲೆ ಕೈಹೊತ್ತು ಸೂರಿನತ್ತ ಮುಖಮಾಡಿ ಮಲಗಿರುವ ಈ ಸಂತೋಷ, ಬಂಟ್ವಾಳ ಕಾವಳಮುಡೂರು ಗ್ರಾಮದ ಐತಪ್ಪ ಮೂಲ್ಯ ಮತ್ತು ಗಿರಿಜಾ ದಂಪತಿಯ ಪುತ್ರ. ಈತನ ವಯಸ್ಸು 25 ವರ್ಷ.(ಮನೆಮಂದಿ ಮತ್ತು ಊರವರು ಈತನನ್ನು ಪ್ರೀತಿಯಿಂದ `ಡೀಕಯ್ಯ’ ಎಂದು ಕರೆಯುತ್ತಾರೆ) ಕೂಲಿ ಮಾಡಿ ಕುಟುಂಬಕ್ಕೆ ಆಸರೆಯಾಗಿದ್ದ ತಂದೆ ಇಹಲೋಕ ತ್ಯಜಿಸಿ ಇಪ್ಪತ್ತು ವರ್ಷಗಳಾಗಿವೆ. ಬಡತನದ ಬೇಗೆಯಲ್ಲಿ ಬೆಂದ ತಾಯಿ ಗಿರಿಜಾ ಬೀಡಿ ಕಟ್ಟಿ ಈತನಿಗೆ ಎಸ್ಸೆಸ್ಸೆಲ್ಸಿ ತನಕ ಓದಿಸಿದ್ದಾರೆ. ಆ ಬಳಿಕ ಒಬ್ಬನೇ ಮಗನಾಗಿ ಮನೆಯ ಜವಾಬ್ದಾರಿ ಹೊತ್ತ ಸಂತೋಷ ಕಲಿಕೆಗೆ ತಿಲಾಂಜಲಿ ಇಟ್ಟು ಸ್ವಜಾತಿ ಬಾಂಧವರ ವೆಲ್ಡಿಂಗ್ ಶಾಪ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡ. ದುಡಿದ ಹಣದಲ್ಲಿ ಮನೆ ನಿಭಾಯಿಸುವುದರ ಜೊತೆ, ಸಾಲಸೋಲ ಮಾಡಿ ತನ್ನ ಒಬ್ಬಳೇ ತಂಗಿ ಚಂದ್ರಾವತಿಗೆ ಮದುವೆ ಮಾಡಿದ್ದಾನೆ. ಇನ್ನೇನು ಬದುಕು ಮಗ್ಗುಲು ಬದಲಿಸಿತು ಎನ್ನುವಾಗಲೇ ಬರಸಿಡಿಲಿನಂತೆ ಬಂದೊದಗಿತ್ತು ಆಘಾತ!
ರಕ್ತದ ಕ್ಯಾನ್ಸರ್ ಜೊತೆಗೆ ಕ್ಷಯ ರೋಗ :
ಮನೆಗೆ ಆಧಾರವಾಗಿ ಮನೆಯ ಖರ್ಚು ವೆಚ್ಚಗಳನ್ನು ನಿಭಾಯಿಸುತ್ತಿದ್ದ ಸಂತೋಷ ಏಕಾಏಕಿ ಅಸ್ವಸ್ಥನಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಗುಣವಾಗಲಿಲ್ಲ. ಆ ಬಳಿಕ ವೈದ್ಯರು ಕ್ಷಯ ರೋಗ(ಟಿಬಿ)ವೆಂದು ತಿಳಿಸಿದ್ದು, ಇದಕ್ಕೆ ವಿವಿಧೆಡೆ ಮದ್ದು ಮಾಡಲಾಯಿತು. ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಮುಂದೆ ಮಂಗಳೂರಿನ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಕ್ಷಯ ರೋಗದ ಜೊತೆ ರಕ್ತದ ಕ್ಯಾನ್ಸರ್ ಇರುವುದು ಗೊತ್ತಾಯಿತು. ಚಿಕಿತ್ಸೆಗಾಗಿ ಮೊದಲು ಏ.ಜೆ ಆಸ್ಪತ್ರೆಗೆ, ಬಳಿಕ ಕೆಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಇಲ್ಲಿ ರೋಗ ಸ್ವಲ್ಪ ಹತೋಟಿಗೆ ಬಂದರೂ ಆಸ್ಪತ್ರೆಯ ಚಿಕಿತ್ಸೆ ವೆಚ್ಚ ದಿನೇ ದಿನೇ ಹೆಚ್ಚಾಗಿದ್ದು, ಇವರ ಬಳಿಯಿದ್ದ ಹಣ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಯಿತು. ಕೈಯಲ್ಲಿ ನಯಾಪೈಸೆ ಹಣವಿಲ್ಲದ ಕಾರಣ ಕೊನೆಗೆ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಧ್ಯೆ ಹೊಟ್ಟೆ ನೀರು ತುಂಬಿದಂತಾಗಿ ಉಬ್ಬಲು ತೊಡಗಿ, ಕಾಲಿನಲ್ಲಿ ರಕ್ತ ಹೆಪ್ಪುಗಟ್ಟಲು ಶುರುವಾಗಿದೆ. ಗಟ್ಟಿಮುಟ್ಟಾಗಿ ಸುಂದರವಾಗಿದ್ದ ಸಂತೋಷನ ಶರೀರ ಈಗ ಗುರುತು ಹಿಡಿಯಲಾರದಷ್ಟು ಕೃಶವಾಗಿದ್ದು ನೋಡುವವರಿಗೆ ಅಯ್ಯೋ..! ಎನಿಸುತ್ತದೆ.
ತೀವ್ರ ಬಡತನ-ಹಣಕಾಸಿನ ಅಡಚಣೆ :
ಕೆಟ್ಟು ಹೋದ ಆರೋಗ್ಯ ಸ್ಥಿತಿಯನ್ನು ಹತೋಟಿಗೆ ತರಲು ಕೀಮೋಥೆರಪಿ ಚಿಕಿತ್ಸೆಯ ಅಗತ್ಯವಿದ್ದು, ವೆನ್ ಲಾಕ್ ಆಸ್ಪತ್ರೆಯ ವೈದ್ಯರು ಕೆಎಂಸಿ ಆಸ್ಪತ್ರೆಗೆ ಸೇರಿಸುವಂತೆ ಸೂಚಿಸಿದ್ದಾರೆ. ಆದರೆ ಹಣಕಾಸಿನ ತೊಂದರೆಯಿಂದ ಇದು ಸಾಧ್ಯವಾಗಿಲ್ಲ. ಸಂತೋಷನ ಇಬ್ಬರು ಚಿಕ್ಕಮ್ಮಂದಿರು ಆಸ್ಪತ್ರೆಯಲ್ಲಿ ಆರೈಕೆಯಲ್ಲಿ ತೊಡಗಿದ್ದರಾದರೂ ಅವರೂ ಸ್ಥಿತಿವಂತರಲ್ಲ. ಸಂತೋಷನಿಗೆ ಸೂಕ್ತ ಚಿಕಿತ್ಸೆ ನೀಡಿದರೆ ಗುಣಮುಖನಾಗುತ್ತಾನೆ ಎನ್ನುವ ಭರವಸೆಯಲ್ಲಿದ್ದಾರೆ. ಈತನನ್ನು ಉಳಿಸಲು ಹಣ ಹೊಂದಿಸುವುದು ಹೇಗೆ ಎನ್ನುವುದೇ ಅವರಿಗಿರುವ ಚಿಂತೆ. ಸಂತೋಷನ ಜೀವನ್ಮರಣ ಹೋರಾಟದಲ್ಲಿ ಗೆಲುವು ಸಿಗಬೇಕಾದರೆ ತಕ್ಷಣ ಬೇಕಾಗಿರುವುದು ಹಣಕಾಸಿನ ವ್ಯವಸ್ಥೆ. ಸಹೃದಯಿಗಳು, ಸಂಘ ಸಂಸ್ಥೆಗಳು ಧನ ಸಹಾಯ ನೀಡಿದರೆ ಸಂತೋಷನ ಪ್ರಾಣ ಉಳಿಸಬಹುದು ಎನ್ನುವ ನಿರೀಕ್ಷೆಯಿಂದ ದೈನ್ಯದಿಂದಲೇ ಸಾರ್ವಜನಿಕರ ನೆರವನ್ನು ಯಾಚಿಸುತ್ತಿದ್ದಾರೆ. ನೀವು ನೀಡುವ ಹಣದಿಂದ ಸಂತೋಷ ಬಾಳಲ್ಲಿ ಹೊಸ ಭರವಸೆ ಮೂಡಿಸಬಹುದು.
ಧನ ಸಹಾಯ ಮಾಡಲು ಇಚ್ಛಿಸುವವರು ಸಂತೋಷ್ ನ ಕೆಳಗಿನ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಹುದು.
Santhosh
S/o Late Ithappa Moolya
State Bank Of India
Kottara Chowki Branch, Mangaluru
S.B A/c No. 20330433778
IFSC Code : SBIN0017796
Phone: 9008919083
(ಚಿತ್ರ-ಮಾಹಿತಿ: ಹೇಮಂತ್ ಕುಮಾರ್, ಕಿನ್ನಿಗೋಳಿ)