ಕಾರ್ಕಳ(ಮೇ.೧೫): ಸ್ವಂತ ಜಾಗವಿದ್ದರೂ ನೆಲೆಸಲು ವ್ಯವಸ್ಥಿತ ಸೂರಿಲ್ಲದೆ ಸಂಕಷ್ಟದಲ್ಲಿದ್ದ ಬಡ ಕುಟುಂಬಕ್ಕೆ `ಕುಲಾಲ ಚಾವಡಿ’ ವಾಟ್ಸಾಪ್ ತಂಡದ ಸದಸ್ಯರು 38,550 ರೂ. ಸಂಗ್ರಹಿಸಿ ನೆರವು ನೀಡುವ ಮೂಲಕ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ.
ಮಾಳ ಮಲ್ಲಾರಿನ ದಿ. ಸಿದ್ದು ಮೂಲ್ಯರ ಪತ್ನಿ ಅಪ್ಪಿ ಮೂಲ್ಯರು ತಮ್ಮ ಏಕೈಕ ಮಗಳ ಜೊತೆ ತಮ್ಮದೆನ್ನುವ ಐವತ್ತು ಸೆಂಟ್ಸ್ ಜಾಗದಲ್ಲಿ ಶಿಥಿಲಗೊಂಡ ಹಂಚಿನ ಮನೆಯಲ್ಲಿ ವಾಸವಾಗಿದ್ದು, ಅದು ಆಗಲೋ-ಈಗಲೋ ಬೀಳುವ ಸ್ಥಿತಿಯಲ್ಲಿತ್ತು. ಈ ಕುರಿತು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ `ಕಳಚಿದ ಸಂಸಾರದ ಆಧಾರಸ್ತಂಭ : ಸಹಾಯದ ನಿರೀಕ್ಷೆಯಲ್ಲಿದೆ ಬಡ ಕುಟುಂಬ’ ಎಂಬ ಶಿರೋನಾಮೆಯಲ್ಲಿ ವರದಿ ಪ್ರಕಟಿಸಿತ್ತು. ಈ ಕುಟುಂಬಕ್ಕೆ ವ್ಯವಸ್ಥಿತ ಮನೆಯ ಸೌಕರ್ಯವನ್ನು ಕಲ್ಪಿಸಿಕೊಡಬೇಕೆಂದು ಸಂಕಲ್ಪ ಮಾಡಿದ `ಕುಲಾಲ ಚಾವಡಿ’ಯ ಸದಸ್ಯರು ಹಲವಾರು ದಾನಿಗಳಿಂದ ಧನ ಸಂಗ್ರಹಿಸಿದ್ದರು. ಅದರಂತೆ ಒಟ್ಟು 38, 550 ರೂ. ಸಂಗ್ರಹಗೊಂಡಿದ್ದು, ಈ ಹಣವನ್ನು ಮೇ. 14ರಂದು ಅಪ್ಪಿ ಮೂಲ್ಯ ಅವರ ಮನೆಗೆ ತೆರಳಿ ಹಸ್ತಾ೦ತರಿಸಲಾಯಿತು.
ಈ ಸಂದರ್ಭ ಕಾರ್ಕಳ ಕುಲಾಲ ಸಂಘದ ಅಧ್ಯಕ್ಷರಾದ ಭೊಜ ಕುಲಾಲ್, ರಮೇಶ್ ಮೂಲ್ಯ ಮಾಳ, ಸುಧೀರ್ ಬಂಗೇರ ಕೆರವಾಶೆ, ಗೀತಾ ಕುಲಾಲ್ , ಹೇಮಂತ್ ಕುಮಾರ್ ಕಿನ್ನಿಗೋಳಿ,ಉದಯ್ ಕುಲಾಲ್ ಕಳತ್ತೂರು, ಅರುಣ್ ಕುಲಾಲ್ ಮೂಳೂರು, ಹೃದಯ್ ಕುಲಾಲ್, ರವಿ ಕುಲಾಲ್ ಕಡ್ತಲ, ಸದಾನಂದ ಮೂಲ್ಯ ವಾಂಟೇಚಾರು ಹಾಗೂ ಕುಲಾಲ ಚಾವಡಿಯ ಅಡ್ಮಿನ್ ಸಂತೋಷ್ ಕುಲಾಲ್ ಕಾರ್ಕಳ ಪದವು ಉಪಸ್ಥಿತರಿದ್ದರು.
ನಿರ್ಮಾಣ ಹಂತದಲ್ಲಿ ಮನೆ :
ಅಪ್ಪಿ ಮೂಲ್ಯ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಬೇಕೆಂಬ ಪಣತೊಟ್ಟ ಸ್ಥಳೀಯ ಯುವಶಕ್ತಿ ಬಳಗದ ಸದಸ್ಯರು ನಿರಂತರ ಪ್ರಯತ್ನಿಸಿದ್ದು, ಈ ಫಲವಾಗಿ ಗ್ರಾಮ ಪಂಚಾಯ್ತ್ ನಿಂದ ಆಶ್ರಯ ಯೋಜನೆಯಲ್ಲಿ ನಿವೇಶನ ಮಂಜೂರಾಗಿದೆ. ಇದೀಗ ಈ ನಿವೇಶನದಲ್ಲಿ ಮನೆ ನಿರ್ಮಾಣ ಕಾರ್ಯ ಆರಂಭಿಸಲಾಗಿದ್ದು, ತಳಪಾಯ ಹಾಕಲಾಗಿದೆ. ಮನೆ ಮಂಜೂರಾಗಲು ಆಗತ್ಯ ದಾಖಲೆಗಳ ಸಮೇತ ನಿರಂತರ ಶ್ರಮಿಸಿ ಈಗ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಯುವ ಉತ್ಸಾಹಿ ತರುಣ, ಯುವಶಕ್ತಿ ಬಳಗದ ಸಕ್ರಿಯ ಸದಸ್ಯರಾದ ರಂಜಿತ್ ಕುಲಾಲ್ ರವರಿಗೆ ಆತ್ಮಸ್ಥೈರ್ಯ ತುಂಬಿದ ಯುವಶಕ್ತಿ ಬಳಗದ ಸರ್ವ ಸದಸ್ಯರ ಬೆಂಬಲದ ಭರವಸೆಯಲ್ಲಿ ಕೆಲಸ ಮುಂದುವರಿಯುತ್ತಿದೆ. ಅಪ್ಪಿ ಮೂಲ್ಯರಿಗೆ ಹಣಕಾಸಿನ ನೆರವು ಲಭಿಸಲು ಸತೀಶ್ ಕಜ್ಜೋಡಿ ಅವರು ಲೇಖನ ಪ್ರಸ್ತುತ ಪಡಿಸಿದ್ದು, ಪ್ರಕಾಶ್ ಮೂಲ್ಯ ಇವರು ಹಣ ಸಂಗ್ರಹದ ಜವಾಬ್ದಾರಿ ವಹಿಸಿಕೊಂಡಿದ್ದರು.
ಅಪ್ಪಿ ಮೂಲ್ಯ ಇವರಿಗೆ ಇನ್ನೂ ಹೆಚ್ಚಿನ ಸಹಾಯದ ಅಗತ್ಯವಿದ್ದು ಸಹಾಯ ಮಾಡಲಿಚ್ಛಿಸುವ ದಾನಿಗಳು ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು.
CORPORATION BANK MALA
NAME:Appi Moolya
A/C No.035100101005831
IFSC CODE:CORP0000351