ಕುಂದಾಪುರ: ಹುಟ್ಟು ವಿಶೇಷ ಚೇತನರಾದ ಮೊಳಹಳ್ಳಿಯ ವಸಂತ ಕುಲಾಲ್ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಹುಟ್ಟಿನಿಂದಲೇ ವಸಂತ ಕುಲಾಲ್ ಗೆ ಸೊಂಟದ ಕೆಳಗಿನಿಂದ ಬಲ ಇಲ್ಲ. ಇವರು ನೆಲದಲ್ಲಿ ತನ್ನ ಕೈಗಳ ಸಹಾಯದಿಂದ ತೆವಳಿಕೊಂಡೇ ಹೋಗುತ್ತಾರೆ. ಆದರೆ ಇವರಿಗೆ ಎಸೆಸೆಲ್ಸಿ ಪರೀಕ್ಷೆ ಬರೆದು ಉತ್ತೀರ್ಣರಾಗಲು ಈ ಅಂಗವೈಕಲ್ಯ ಅಡ್ಡಿಯಾಗಿಲ್ಲ.
ಈತ ಮೊಳಹಳ್ಳಿಯ ರಾಮ ಕುಲಾಲ ಹಾಗೂ ಸರೋಜ ದಂಪತಿಯ ಪುತ್ರ .ರಾಮ ಕುಲಾಲ ಕೂಲಿ ಕೆಲಸ ಮಾಡಿಕೊಂಡಿದ್ದು ಇವರದ್ದು ಬಡತನದ ಜೀವನ. ಆದರೂ ಇತರರಂತೆ ತಾನು ಕಲಿಯಬೇಕೆಂಬ ಆಸೆ ಹಾಗೂ ಛಲದಿಂದ ವಸಂತ 2.ಕಿ.ಮೀ.ದೂರದ ಶಾಲೆಗೆ ರಿಕ್ಷಾ ಮೂಲಕ ಹೋಗಿ ಕಲಿತು ಈ ಸಾಧನೆ ಮಾಡಿದ್ದಾರೆ. ಬಿದ್ಕಲ್ ಕಟ್ಟೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯಾಗಿರುವ ವಸಂತ ಈ ಬಾರಿಯ ಪರೀಕ್ಷೆಯಲ್ಲಿ ಶೇ.56 ಅಂಕದೊಂದಿಗೆ ಉತ್ತಿರ್ಣರಾಗಿದ್ದಾರೆ.
ಶಾಲೆಗೆ ಹೋಗುವುದೆಂದರೆ ನನಗೆ ತುಂಬಾ ಆಸಕ್ತಿ. ಮುಂದೆ ನಾನು ಇನ್ನಷ್ಟು ಒಳ್ಳೆಯ ರೀತಿ ಓದಬೇಕೆಂದಿದ್ದೇನೆ. ಪ್ರತಿದಿನ ಶಾಲೆಗೆ ರಿಕ್ಷಾ ಮೂಲಕ ಹೋಗಲು 200 ರೂ ಖರ್ಚು ಆಗುತ್ತದೆ. ಸರಕಾರದಿಂದ ನನಗೆ 1200 ರೂ. ವಿಕಲಚೇತನರ ಮಾಸಾಶನ ಸಿಗುತ್ತದೆ. ನನ್ನ ಓದುವ ಆಸೆಗೆ ಮನೆಯಲ್ಲಿ ಬಡತನ ಅಡ್ಡಿಯಾಗುತ್ತಿದೆ ಎಂದು ಎನ್ನುತ್ತಾರೆ ವಸಂತ.