ಮುಂಬಯಿ(ಮೇ.೧೦): ಲೇಖಕ, ಕುಲಾಲ ಸಮಾಜದ ಮುಖವಾಣಿ `ಅಮೂಲ್ಯ’ ತ್ರೈ ಮಾಸಿಕದ ಸಂಪಾದಕ ನಾರಾಯಣ ನೆತ್ರಕೆರೆ ಅವರು ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸುಮಾರು ಎಪ್ಪತ್ತರ ವಯಸ್ಸಿನ ನಾರಾಯಣ ನೆತ್ರಕೆರೆಯವರು ಮೂಲತಃ ಬಂಟ್ವಾಳ ಸಮೀಪದ ನೆತ್ರಕೆರೆಯವರಾಗಿದ್ದು, ಶಿಪ್ಪಿಂಗ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು. ಮುಂಬಯಿ- ದುಬೈಗಳಲ್ಲಿ ಉನ್ನತ ಅಧಿಕಾರಿಯಾಗಿ ದುಡಿದು ನಿವೃತ್ತರಾಗಿದ್ದ ಅವರು ಕಳೆದ ಎಂಟು ವರ್ಷಗಳಿಂದ ಕುಲಾಲ/ ಕುಂಬಾರ ಸಮುದಾಯದ ಮುಖವಾಣಿಯಾಗಿ ಮುಂಬಯಿ ಕುಲಾಲ ಸಂಘದ ಪ್ರಾಯೋಜಕತ್ವದಲ್ಲಿ ಪ್ರಕಟವಾಗುತ್ತಿದ್ದ ಅಮೂಲ್ಯ ತ್ರೈ ಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದರು. ತುಳು ಕನ್ನಡಿಗರ ಸಾಹಿತ್ಯ ಬಳಗದಲ್ಲಿ ಒಂದು ಆಕರ್ಷಕ ಪತ್ರಿಕೆಯಾಗಿ ಮೂಡಿಬರುವಲ್ಲಿ ಶ್ರಮಿಸಿದ್ದ ನಾರಾಯಣ ಅವರು ಸಮುದಾಯದ ನೋವು-ನಲಿವು, ಸುಖ-ದುಃಖ, ಸಾಮಾಜಿಕ ತುಡಿತಗಳೊಂದಿಗೆ ಬರೆಯುತ್ತಾ ಅದನ್ನು ಅಮೂಲ್ಯದ ಮೂಲಕ ತೆರೆದಿಡುತ್ತಿದ್ದ ಸಹೃದಯಿ ಬರಹಗಾರರಾಗಿದ್ದರು. ಮುಂಬಯಿ ಕುಲಾಲ ಸಂಘದ ಜ್ಯೋತಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕ ಹಾಗು ಕೋಶಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು.
ಲವಲವಿಕೆಯಿಂದ ಓಡಾಡುತ್ತಿದ್ದ ನಾರಾಯಣ ಅವರು ಇಂದು ಮುಂಜಾನೆ ನವಿ ಮುಂಬಯಿ ಪನ್ವೇಲ್ ಪ್ರಜಾಪತಿ ಗಾರ್ಡನ್ ನ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ಮೃತರಾದರು. ಅವರ ಅಂತ್ಯಕ್ರಿಯೆಯು ನಾಳೆ(11/05/2017) ಮಧ್ಯಾಹ್ನ ಮಂಗಳೂರು ಪಡೀಲ್ ರೈಲ್ವೇ ಬ್ರಿಡ್ಜ್ ಸಮೀಪದ ಪಲ್ಲಕೆರೆಯಲ್ಲಿ ನಡೆಯಲಿದೆ ಎಂದು ಅವರ ಕುಟುಂಬಿಕರು ತಿಳಿಸಿದ್ದಾರೆ. ದಿವಂಗತರು ಪತ್ನಿ ರಾಜೇಶ್ವರಿ, ಪುತ್ರರಾದ ಅಭಿಷೇಕ್ ಹಾಗೂ ವೈಶಾಕ್ ಹಾಗೂ ಸಾವಿರಾರು ಬಂಧು ಮಿತ್ರರನ್ನು ಅಗಲಿದ್ದಾರೆ.