ಯುವ ಪೀಳಿಗೆಯಿಂದ ಮಾತ್ರ ಮೌಲ್ಯಯುತ ಸಮಾಜ ಸೃಷ್ಟಿ : ಮಾಣಿಲ ಮೋಹನದಾಸ ಸ್ವಾಮೀಜಿ
ಕಾರ್ಕಳ(ಮೇ.೦೧): ಇಂದಿನ ಯುವ ಸಮುದಾಯ ದುಶ್ಚಟಗಳನ್ನು ದೂರವಿಟ್ಟು, ದೇಸಿ ಸಂಸ್ಕೃತಿ, ಪರಂಪರೆಯನ್ನು ಗೌರವಿಸುವ ಮೂಲಕ ಪರಿವರ್ತನೆಗೆ ಸಂಕಲ್ಪ ಮಾಡಬೇಕು. ಯುವಪೀಳಿಗೆಯಿಂದಲೇ ಮೌಲ್ಯಯುತ ಸಮಾಜ ಸೃಷ್ಟಿಯಾಗಲು ಸಾಧ್ಯ ಎಂದು ಮಾಣಿಲ ಮೋಹನದಾಸ ಸ್ವಾಮೀಜಿ ಹೇಳಿದರು.
ಕುಲಾಲ ಸುಧಾರಕ ಸಂಘ ಕಾರ್ಕಳ ಇದರ ಆಶ್ರಯದಲ್ಲಿ ಜೋಡುರಸ್ತೆ ಬಳಿ ನೂತನವಾಗಿ ನಿರ್ಮಾಣಗೊಂಡ ಸಭಾಭವನವನ್ನು ಏಪ್ರಿಲ್ ೩೦, ಭಾನುವಾರದಂದು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದ ಅವರು, ಯುವ ಜನಾಂಗಕ್ಕೆ ಸತ್ಪಥದ ಮಾರ್ಗದರ್ಶನ ನೀಡಿ, ಸ್ವಾವಲಂಬನೆಯೊಂದಿಗೆ ಸಮಾಜದ ಎಲ್ಲ ಕ್ಷೇತ್ರಗಳಲ್ಲಿಯೂ ಗುರುತಿಸಿಕೊಳ್ಳಲು ನಾವೆಲ್ಲರೂ ಚಿಂತನೆ ನಡೆಸಬೇಕು. ಸಂಘಟನೆಯ ಯುವ ಪೀಳಿಗೆಯಿಂದ ಮೌಲ್ಯಯುತ ಸಮಾಜ ಕಟ್ಟಲು ಸಾಧ್ಯ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಕುಲಾಲ ಸಮಾಜದ ಪೋಷಕರು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಒಟ್ಟು ನೀಡಬೇಕು. ಇದಕ್ಕಾಗಿ ನೀಡಲಾಗುತ್ತಿರುವ ಸೌಲಭ್ಯಗಳನ್ನು ಬಳಸಿಕೊಳ್ಳುವ ಮೂಲಕ ಸುಶಿಕ್ಷಿತರಾಗಬೇಕು. ಕಾಂಗ್ರೆಸ್ ಸರಕಾರ ಹಿಂದುಳಿದ ವರ್ಗದ ಜನತೆಯ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ನೀಡಿದೆ. ಕಾರ್ಕಳ ಕುಲಾಲ ಸಂಘಕ್ಕೆ ೨೫ ಲಕ್ಷ ರೂ. ಅನುದಾನ ಸರಕಾರ ನೀಡಿದೆ. ಅಲ್ಲದೆ ಇನ್ನಷ್ಟು ಅನುದಾನ ನೀಡಲು ಪ್ರಯತ್ನಿಸಲಾಗುತ್ತದೆ ಸಮುದಾಯದ ಯುವಕರು ಹಾಗೂ ಮಹಿಳೆಯರಿಗೆ ವಿಶೇಷ ಶಕ್ತಿ ನೀಡುವ ನಿಟ್ಟಿನಲ್ಲೂ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಸಂಘದ ಅಧ್ಯಕ್ಷ ಭೋಜ ಕುಲಾಲ್ ಬೇಳಂಜೆ ಅಧ್ಯಕ್ಷತೆ ವಹಿಸಿದ್ದರು. ಕುಕ್ಕುಂದೂರಿನ ವೇದಮೂರ್ತಿ ಶಂಕರ ಭಟ್, ನಡುಬೊಟ್ಟು ಧರ್ಮದರ್ಶಿ ರವಿ ಎನ್, ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಶಾಸಕ ಸುನಿಲ್ ಕುಮಾರ್, ಮಾಜಿ ಶಾಸಕ ಗೋಪಾಲ ಭಂಡಾರಿ, ದಕ ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಡಾ. ಎಂ. ವಿ. ಕುಲಾಲ್, ಡಾ. ಅಣ್ಣಯ್ಯ ಕುಲಾಲ್, ತೇಜಸ್ವಿರಾಜ್, ತಾಪಂ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಸೌಂದರ್ಯ ರಮೇಶ, ಚಿತ್ರನಟ ರಾಜೇಶ್ ಮೂಲ್ಯ, ಎ, ಲಿಂಗಪ್ಪ, ಕೃಷ್ಣ ಟಿ, ಸುಮಿತ್ ಶೆಟ್ಟಿ, ಸುಹಾಸ್ ಹೆಗ್ಡೆ, ಅಶೋಕ್ ನಾಯಕ್, ರಾಜು ಬಂಗೇರ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸಂಘದ ಗೌರವಾಧ್ಯಕ್ಷ ಎಚ್ ಡಿ ಕುಲಾಲ್, ಅಧ್ಯಕ್ಷ ಭೋಜ ಕುಲಾಲ್, ಕಟ್ಟಡದ ವಿನ್ಯಾಸಗಾರ ಗೋಪಾಲ್ ಭಟ್, ಲೆಕ್ಕ ಪರಿಶೋಧಕ ವಾಸುದೇವ ರಾವ್ ಹಾಗೂ ಸಭಾಭವನಕ್ಕೆ ದೇಣಿಗೆ ನೀಡಿದ ಮಹನೀಯರನ್ನು ಈ ಸಂದರ್ಭ ಸನ್ಮಾನಿಸಲಾಯಿತು.