ಒಗ್ಗಟ್ಟೇ ಸಮುದಾಯದ ಶಕ್ತಿ : ಸದಾಶಿವ ಬಂಗೇರ
ಪುತ್ತೂರು(ಮೇ.೦೧): ಕುಲಾಲ ಜನಾಂಗವು ಸಾಮಾಜಿಕ ಹಾಗೂ ರಾಜಕೀಯವಾಗಿ ಮುನ್ನೆಲೆಗೆ ಬರಲು ಜನಾಂಗದ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು. ಹೀಗಾದಾಗ ಮಾತ್ರ ಸಮುದಾಯಕ್ಕೆ ಶಕ್ತಿ ಬರಲು ಸಾಧ್ಯ ಎಂದು ಬಂಟ್ವಾಳ ನಗರಾಭಿವೃದ್ಧಿ ಯೋಜನಾ ಅಧ್ಯಕ್ಷ ಸದಾಶಿವ ಬಂಗೇರ ಹೇಳಿದರು.
ಪುತ್ತೂರು ಪುರಭವನದಲ್ಲಿ ಏಪ್ರಿಲ್ 30ರಂದು ನಡೆದ ಕುಲಾಲ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಮುದಾಯದ ಯುವಕರು ತಮ್ಮೊಳಗಿರುವ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಮುಖ್ಯ. ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಅವಕಾಶ ವಂಚಿತರಾಗದೇ ಕೆಲವೊಮ್ಮೆ ಅವಕಾಶಗಳನ್ನು ತಾವಾಗಿಯೇ ಸೃಷ್ಟಿಸಿಕೊಳ್ಳಬೇಕು. ಕುಲಾಲ ಸಮಾಜ ಕೇವಲ ಮತ ಚಲಾವಣೆಗಷ್ಟೇ ಸೀಮಿತವಾಗದೇ ಅಧಿಕಾರ ಪಡೆದು ಅದರ ಚಲಾವಣೆಗೂ ಯತ್ನಿಸಬೇಕು ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಾಹಿತಿ, ಕುಂಬಾರ ಸರಕಾರೀ ನೌಕರರ ಸಂಘದ ರಾಜ್ಯ ನಿರ್ದೇಶಕ ಆನಂದ ಬಂಜನ್ ಮಾತನಾಡಿ, ಕುಲಾಲ ಸಮಾಜದ ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಕೆಎಎಸ್ ನಂತಹ ಉನ್ನತ ಶಿಕ್ಷಣವನ್ನು ಸಂಪಾದಿಸುವ ಮೂಲಕ ಸಮಾಜದ ಕೀರ್ತಿಯನ್ನು ಹೆಚ್ಚಿಸಬೇಕು. ಕುಂಬಾರ ಸರಕಾರೀ ನೌಕರರ ಸಂಘವು ಕೇವಲ ಸಂಘಟನೆ ಮಾತ್ರವಲ್ಲ, ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ನಾಗರೀಕ ಸೇವಾ ಪರೀಕ್ಷೆ ಬರೆಯಲು ಅನುಕೂಲವಾಗುವ ವ್ಯವಸ್ಥೆಯನ್ನೂ ಕಲ್ಪಿಸುತ್ತದೆ. ಇದಕ್ಕಾಗಿ ಉಚಿತ ವಸತಿ ಜೊತೆ ಕಲಿಕಾ ಸಾಮಗ್ರಿಯನ್ನೂ ನೀಡುತ್ತದೆ ಎಂದು ಹೇಳಿದರು.
ದ. ಕ ಮೂಲ್ಯರ ಮಾತೃ ಸಂಘದ ಉಪಾಧ್ಯಕ್ಷೆ ಮಮತಾ ಅಣ್ಣಯ್ಯ ಕುಲಾಲ್ ಮಾತನಾಡಿ, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದರ ಜೊತೆಗೆ ನೈತಿಕ ಮೌಲ್ಯಯುತ ಶಿಕ್ಷಣ ನೀಡಿ ದೇಶದ ಉತ್ತಮ ಪ್ರಜೆಗಳನ್ನಾಗಿಸಲು ಪಾಲಕರು ಯತ್ನಿಸಬೇಕು. ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು. ಈ ಮೂಲಕ ಪ್ರತಿಭಾವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ಹಾಗು ವಿವಿಧ ಕ್ಷೇತ್ರದ ಸಾಧಕರಾದ ಕೃಷ್ಣ ಮೂಲ್ಯ ಕೈರಂಗಳ, ಮೋನಪ್ಪ ಕುಲಾಲ್ ಆತೂರು, ತಿಮ್ಮಪ್ಪ ಕುಂಬಾರ, ಸೌಮ್ಯಶ್ರೀ ಮಾನಡ್ಕ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ದಿನೇಶ್ ಪಿ. ವಿ ಅಧ್ಯಕ್ಷತೆ ವಹಿಸಿದ್ದರು. ಪಂಜಿಕಲ್ಲು ಗ್ರಾಪಂ ಅಧ್ಯಕ್ಷ ದೇವಪ್ಪ ಕುಲಾಲ್, ಭಾಸ್ಕರ ಹಾಲಾಜಿ, ಭಾಸ್ಕರ ಪೆರುವಾಯಿ, ಚಂದಪ್ಪ ಶೇವಿರೆ, ಸಚ್ಚಿದಾನಂದ, ಸತೀಶ್ ಕುಲಾಲ್, ರತ್ನಾ ಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.