ಸರಳತೆ, ಮುಗ್ಧತೆ, ಪ್ರಾಮಾಣಿಕತೆಯಿಂದ ದೇವರ ಸಾಕ್ಷಾತ್ಕಾರ : ಅಣ್ಣಯ್ಯ ಕುಲಾಲ್
ಮಂಗಳೂರು(ಏ.೩೦): ಎಲ್ಲಿ ಸರಳತೆ, ಮುಗ್ಧತೆ, ಪ್ರಾಮಾಣಿಕತೆ ಇರುತ್ತದೋ ಅಲ್ಲಿ ದೇವರಿರುತ್ತಾನೆ. ಪರಮಾತ್ಮನ ಲೀಲೆ ಅಪಾರ. ಸತ್ಯದ ಮಾರ್ಗದಲ್ಲಿ ನಡೆಯುವವರಿಗೆ ಪರಮಾತ್ಮನ ಸಾಕ್ಷಾತ್ಕಾರ ದೊರೆಯುತ್ತದೆ ಎಂದು ವೈದ್ಯ, ಸಂಘಟಕ ಅಣ್ಣಯ್ಯ ಕುಲಾಲ್ ಉಳ್ತೂರು ಹೇಳಿದರು.
ನೀರುಮಾರ್ಗ ದೇವಸ ಬಂಜನ್ ಕುಟುಂಬಸ್ಥರ ನಾಗಮಂಡಲೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕುಂಬಾರ ಸಮುದಾಯದ ಬಂಜನ್ ಕುಟುಂಬದ ಈ ನಾಗಮಂಡಲದ ರೂವಾರಿಗಳಲ್ಲಿ ಗುತ್ತಿನವರು -ಗತ್ತಿನವರಿಲ್ಲ. ಆದರೆ ಅವರಲ್ಲಿ ಪ್ರಾಮಾಣಿಕ ಭಕ್ತಿ ಇದೆ. ಹಾಗಾಗಿ ಅವರಿಗೆ ದೇವರು ಒಲಿದು ಹರಸುತ್ತಾನೆ. ತುಳುನಾಡಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಆದಿಯಾಗಿ ನಂಬುವ ಪೂಜಿಸುವ ದೈವ ಇದ್ದರೆ ಅದು ನಾಗ. ಕಾರಣ ನಾಗನೆಂದರೆ ಪ್ರಕೃತಿ,ಮಳೆ, ಬೆಳೆ. ನಾಗ ಬನಗಳು ಹಿಂದಿನ ನಾಗಬನಗಳಾಗಿ ಉಳಿದರೆ ಮಾತ್ರ ಪ್ರಕೃತಿ ಉಳಿಯುತ್ತವೆ. ಮರ ಗಿಡ ಪೊದೆಯ ನಡುವಿನ ನಾಗ ಬನಗಳೇ ನಮ್ಮ ತುಳುನಾಡ ಜೀವಾಳ. ನಾಗ ನಡೆ ನಾಗ ನಾಡು ತುಳುನಾಡ ಐಕ್ಯತೆಯ ಮೂಲ ಮಂತ್ರ ಎಂದು ಅವರು ಹೇಳಿದರು.
ಆಡಂಬರ ಸಲ್ಲದು :
ನಾಗಬನಗಳು ಅದ್ದೂರಿ ಆಡಂಬರದ ಹೆಸರಲ್ಲಿ ಕಾಂಕ್ರೀಟ್ ಕಾಡುಗಳಾಗಬಾರದು. ಅಬ್ಬರದ ನಾಗಮಂಡಲಗಳಿಂದ ಮರ ಕಡಿದು ಗುಡ್ಡ ಅಗೆದು ಪರಿಸರವನ್ನ ಹಾಳು ಮಾಡ ಬಾರದು. ನಾಗಮಂಡಲ, ಬ್ರಹ್ಮಕಲಶ , ಅದ್ಧೂರಿಯ ದೇವಿ ಮಹಾತ್ಮೆ ಮಾಡುವಾಗ ಅದರಲ್ಲಿ ಒಂದಂಶವನ್ನ ನೊಂದವರಿಗೆ, ಬೆಂದವರಿಗೆ, ಮದುವೆ ಆಗದ ಹೆಣ್ಣು ಮಕ್ಕಳಿಗೆ ಕಾಯಿಲೆಯಿಂದ ಬಳಲುವವರಿಗೆ, ಮನೆ ಇಲ್ಲದವರಿಗೆ, ವಿದ್ಯಾಭ್ಯಾಸ ವಂಚಿತರಿಗೆ ನೀಡಲು ಪ್ರಯತ್ನಿಸಿದರೆ ಇಂತಹ ಧಾರ್ಮಿಕ ಆಚರಣೆಗಳು ಹೆಚ್ಚು ಅರ್ಥಪೂರ್ಣ ಹಾಗು ಸಮಾಜಮುಖೀ ಆಗುತ್ತವೆ. ಇದರಿಂದ ಜಾತಿ ಹಾಗು ಸಾಮಾಜಿಕ ಸಂಘ ಸಂಸ್ಥೆ ಗಳ ಮೇಲೆ ಬೀಳುವ ದೊಡ್ಡ ಜವಾಬ್ದಾರಿಗಳು ಕಡಿಮೆ ಆಗುತ್ತವೆ ಎಂದು ಮಾರ್ಮಿಕವಾಗಿ ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಜಿಪಂ ಉದಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ, ಧಾರ್ಮಿಕ ಚಿಂತನೆಯ ಜೊತೆಗೆ ಸಾಮಾಜಿಕ ಕಾಳಜಿ ಬೇಕು. ಆಚರಣೆಯ ಹೆಸರಲ್ಲಿ ಪ್ರಕೃತಿ ನಾಶ ಸಲ್ಲದು ಎಂದರು.
ಗುರುಪುರ ಬ್ಲಾಕ್ ಕಾಂಗ್ರೆಸ್ ನ ಪ್ರಥ್ವಿರಾಜ್ ಆರ್. ಕೆ ಮಾತನಾಡಿ ಬಂಜನ್ ಕುಟುಂಬದ ಈ ಸಾಧನೆ ಹೆಮ್ಮೆ ತಂದಿದೆ. ಈ ಕುಟುಂಬಸ್ಥರಿಂದ ಇಡೀ ಊರನ್ನು ಧಾರ್ಮಿಕವಾಗಿ ಒಂದಾಗಿಸುವ ಕೆಲಸ ಆಗಿದೆ ಎಂದು ಹೇಳಿದರು.
ಉದ್ಯಮಿ, ಬಿಜೆಪಿ ನಾಯಕ ರಾಜೇಶ್ ನಾಯಕ್ ಉಳೆಪಾಡಿ ಮಾತನಾಡಿ, ಕುಲಾಲ್ ಸಮುದಾಯದ ನಿಯತ್ತು ಹಾಗು ಕೃಷಿ ಪರಿಸರ ಸಾಗುವಳಿಯ ಹಿಂದೆ ನಾಗ ನ ಪ್ರೇರಣೆ ಇದೆ ಎಂದರು.
ಕಟೀಲು ವೇದಮೂರ್ತಿ ಲಕ್ಷ್ಮೀನಾರಾಯಣ ಅಸ್ರಣ್ಣ ಸಭಾ ಕಾರ್ಯಕ್ರಮ ಉದ್ಘಾಟಿಸಿ, ನಾಗಮಂಡಲೋತ್ಸವದ ಮಹತ್ವವನ್ನು ವಿವರಿಸಿದರು. ಮಾಣಿಲ ಮೋಹನದಾಸ ಸ್ವಾಮೀಜಿ, ಪೊಳಲಿ ವಿವೇಕ ಚೈತನ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಇತರ ಹಲವು ಧಾರ್ಮಿಕ, ರಾಜಕೀಯ ಹಾಗೂ ಕುಲಾಲ ಸಮುದಾಯದ ನಾಯಕರು ಸಭಯಲ್ಲಿ ಉಪಸ್ಥಿತರಿದ್ದರು.