ಮೂಲ್ಯರ ಸಂಘದ (ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ) ಜಿಲ್ಲಾ ಕಾರ್ಯದರ್ಶಿಯಾಗಿದ್ದ ಮಂಜೇಶ್ವರ ಸಂಕಪ್ಪ ಮೂಲ್ಯರು ಕಿಂಞಣ್ಣ ಮೂಲ್ಯರ ಜೊತೆ ಸೇರಿ ದಿನಾಂಕ 03-05-1925ರಂದು ತನ್ನ ಮನೆಯಲ್ಲಿ ನಡೆಯಲಿರುವ ಮೂಲ್ಯರ ಉದ್ಧಾರದ(ಅಭಿವೃದ್ಧಿಯ) 5ನೇ ಮಹಾಸಭೆಗೆ ಬರಲು ಆಹ್ವಾನಿಸಿ ಅಮೆತ್ತೋಡು ಗ್ರಾಮದ ಒಂದನೇ ಗುರಿಕಾರ ಅಮೆತ್ತೋಡು ಬಂಟು ಮೂಲ್ಯರಿಗೆ ಕಳಿಸಿದ 92 ವರ್ಷ ಹಳೆಯದಾದ ಆಮಂತ್ರಣ ಪತ್ರವೊಂದು ಲಭಿಸಿದೆ.
ಈ ಆಮಂತ್ರಣ ಪತ್ರದಲ್ಲಿ ಐದನೆಯ ಮಹಾಸಭೆ ಎಂಬ ಉಲ್ಲೇಖವಿದ್ದು. ಇದರ ಹಿಂದೆ ನಾಲ್ಕು ಮಹಾಸಭೆಗಳು ನಡೆದಿರುವುದು ನಮಗೆ ಅರಿವಾಗುತ್ತದೆ. ಅದೇ ರೀತಿ ಮಹಾಸಭೆಯ ಕೆಳಗೆ `ಒಳಸಭೆ’ ಎಂಬ ಪದ ಮುದ್ರಿತವಾಗಿದ್ದು, ಇದರಿಂದ ಒಳಸಭೆಯೂ ಸಂದರ್ಭಾನುಸಾರ ನಡೆಯುತ್ತಿತ್ತು ಎಂಬ ಅಂಶವೂ ಇಲ್ಲಿ ಸ್ಪಷ್ಟವಾಗುತ್ತದೆ.
ಭಾರತದಲ್ಲಿ ಮುದ್ರಣ ಮಾಧ್ಯಮಗಳು ವಿರಳವಾಗಿದ್ದ ಕಾಲದಲ್ಲೇ ಆಹ್ವಾನಪತ್ರಿಕೆಯನ್ನು ಮುದ್ರಿಸಿ ವೈಯಕ್ತಿಕವಾಗಿ ಕಳುಹಿಸಿ, ಮನೆಯಲ್ಲೇ ಮಹಾಸಭೆ ನಡೆಸಿ ಸ್ವಜಾತಿ ಪ್ರಗತಿಯ ಕುರಿತು ಪ್ರಯತ್ನಿಸಿದ ನಮ್ಮ ಹಿರಿಯರ ಸಾಧನೆ ನಮಗೆ ಮಾರ್ಗದರ್ಶನವಾಗಬಲ್ಲದು.
ಕಾಸರಗೋಡು ತಾಲೂಕಿನ ಮುಗು ಗ್ರಾಮದ ಅಮೆತ್ತೋಡು ಎಂಬಲ್ಲಿನ ಬಂಜನ್ ಕುಟುಂಬದ ಆದಿಮೂಲಸ್ಥಾನದ ದೈವಸ್ಥಾನದ ಭಂಡಾರದ ಮನೆಯಲ್ಲಿ ಮಣ್ಣಿನ ಮಡಕೆಯಲ್ಲಿ ಸಂರಕ್ಷಸಿಕೊಂಡು ಬಂದಿರುವ ಹಳೆಯ ಕಡತಗಳ ಎಡೆಯಲ್ಲಿ ದೊರಕಿದ ಈ ಪುರಾತನ ಆಮಂತ್ರಣ ಪತ್ರವನ್ನು ಸಂರಕ್ಷಿಸಿದ ಹಿರಿಯರ ಮುಂದಾಲೋಚನೆ ಶ್ಲಾಘನೀಯ. ದೈವಸ್ಥಾನದ ಕಾರ್ಯಕರ್ತರಾದ ಎ. ಕೃಷ್ಣ ಚನ್ನಿಕುಡೇಲು ಅವರು ಇದನ್ನು ಪತ್ರಿಕಾ ಪ್ರಕಟಣೆಗೆ ನೀಡಿ ಸಹಕರಿಸಿದ್ದಾರೆ.
- ಶಂಕರ ಕುಂಜತ್ತೂರು