19 ವರ್ಷಗಳಿಂದ ವ್ಹೀಲ್ ಚೇರ್ನಲ್ಲೇ ಜೀವನ – ನಿತ್ಯದ ಕೆಲಸಕ್ಕೆ ಮನೆ ಮಂದಿಯ ಆಶ್ರಯ
ಬಂಟ್ವಾಳ(ಏ.೨೧): ವಿಧಿಯಾಟ ಎಷ್ಟು ಕ್ರೂರವೆಂಬುದಕ್ಕೆ ಈ ಯುವಕನೇ ಸಾಕ್ಷಿ. ಛಲದಿಂದ ಬದುಕುಕೊಟ್ಟಿಕೊಳ್ಳಬೇಕು ಎಂಬ ಕನಸುಕಂಗಳಲ್ಲಿದ್ದ ಈತ ಹಾಸಿಗೆಯಿಂದೇಳಲಾಗದೇ ಪರಿತಪಿಸುವ ಸ್ಥಿತಿ ಮನಕಲುಕುವಂಥದ್ದು. ರೈಲ್ವೇ ಮೇಲ್ಸೆತುವೆಯಿಂದ 50 ಅಡಿ ಆಳದ ಕಂದಕಕ್ಕೆ ಬಿದ್ದ ಈ ಯುವಕ ಕಳೆದ 19 ವರ್ಷಗಳಿಂದ ವ್ಹೀಲ್ ಚೇರ್ನಲ್ಲಿ ದಿನ ಸಾಗಿಸುತ್ತಿದ್ದಾನೆ. ಬದುಕಿನಲ್ಲಿ ಎದುರಾದ ಆಕಸ್ಮಿಕ ದುರ್ಘಟನೆಯಿಂದ ನಡೆದಾಡುವ ಶಕ್ತಿಯನ್ನೇ ಕಳೆದುಕೊಂಡು ನಿತ್ಯದ ಪ್ರತಿ ಕೆಲಸಗಳಿಗೂ ಮನೆಮಂದಿಯನ್ನೇ ಆಶ್ರಿಸುವ ದಯನೀಯ ಸ್ಥಿತಿ ಆತನಿಗೆ ಒದಗಿದೆ.
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಮಿತ್ತ ಪರಾರಿ ನಿವಾಸಿ ಚಂದ್ರಶೇಖರ್ ಕುಲಾಲ್ (39) ಆ ನತದೃಷ್ಠ ಯುವಕ. ಪರಮೇಶ್ವರ ಮೂಲ್ಯ ಹಾಗೂ ಕಾವೇರಿ ದಂಪತಿಗಳ ಐದು ಮಕ್ಕಳ ಪೈಕಿ ಮೂರನೇಯವರಾದ ಚಂದ್ರಶೇಖರ್ಗೆ ಈಗ ಮನೆಯೇ ಪ್ರಪಂಚ. ಮನೆಮಂದಿಯೇ ಬಂಧು-ಬಳಗ, ಸ್ನೇಹಿತರು. ಎಲ್ಲರೊಡನೆ ಕೂಡಿ, ಬೆರೆತು ಬದುಕುವ ಕಾಲದಲ್ಲಿ ವಿಧಿಯ ಕ್ರೂರತೆಗೆ ಬಲಿಯಾಗಿ ಎಲ್ಲವನ್ನೂ ಕಳಕೊಂಡವನಂತೆ ಜೀವಿಸುವ ಅಸಹಾಯಕ ಪರಿಸ್ಥಿತಿ ಚಂದ್ರಶೇಖರ್ ಅವರದ್ದು.
ನಡೆದಿದ್ದೇನು?
ಅಂದು ಆಗಸ್ಟ್ 15,1998. ದೇಶದ ಜನತೆ 52ನೇ ಸ್ವಾತಂತ್ರ ದಿನಾಚರಣೆಯ ಸಂಭ್ರಮದಲ್ಲಿದ್ದ ದಿನ. ಆದರೆ ಚಂದ್ರಶೇಖರ್ ಪಾಲಿಗೆ ಸ್ವತಂತ್ರವಾಗಿ ಬದುಕುವ ಸ್ವಾತಂತ್ರ್ಯವನ್ನೇ ಕಳೆದುಕೊಂಡ ಕರಾಳ ದಿನ. ಗ್ಯಾರೇಜ್ವೊಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಚಂದ್ರಶೇಖರ್ ಕೂಡ ಗೆಳೆಯರೊಂದಿಗೆ ಸ್ವಾತಂತ್ರ್ಯ ಆಚರಿಸಲು ಅಂದು ಮನೆಯಿಂದ ಹೊರಟಿದ್ದರು. ಮನೆಯಿಂದ ಕೂಗಳತೆಯ ದೂರದಲ್ಲಿರುವ ರೈಲ್ವೇ ಹಳೆಯ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ಕಂದಕಕ್ಕೆ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾಗಿ ಗಂಭೀರ ಗಾಯಗೊಂಡರು. ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಸೊಂಟದ ಕೆಳಭಾಗದಿಂದ ಚೈತನ್ಯವನ್ನೇ ಕಳೆದುಕೊಂಡ ಪರಿಣಾಮ ಸುದೀರ್ಘ ಕಾಲ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ. ತಾನು ಮೊದಲಿನಂತಾಗಬೇಕೆನ್ನುವ ಶತ ಪ್ರಯತ್ನವನ್ನು ನಡೆಸಿದ ಚಂದ್ರಶೇಖರ್ ಮಣಿಪಾಲ, ಬೆಂಗಳೂರಿಗೂ ತೆರಳಿ ಚಿಕಿತ್ಸೆ ಪಡಕೊಂಡರು. ಯಾವುದೂ ನಿರೀಕ್ಷಿತ ಫಲ ನೀಡಲಿಲ್ಲ. 19 ವರ್ಷಗಳಿಂದ ಕುಳಿತಲ್ಲಿಂದ ಏಳಲಾಗದೇ ತನ್ನೆಲ್ಲಾ ಬೇಕು-ಬೇಡಗಳಿಗೆ ಮತ್ತೊಬ್ಬರನ್ನು ಆಶ್ರಯಿಸಬೇಕಾದ ಪರಿಸ್ಥಿತಿಯಿಂದ ಹೊರಬರಲಾಗಲಿಲ್ಲ. ಈ ನಡುವೆ ಬೆನ್ನುಮೂಳೆಯ ಭಾಗದಲ್ಲಿ ಹಾಕಲಾಗಿರುವ ರಾಡನ್ನು ಸಕಾಲದಲ್ಲಿ ತೆಗೆಯಲು ಶಸ್ತ್ರಚಿಕಿತ್ಸೆಗೆ ಹಣ ಹೊಂದಿಸಲಾಗದೇ ಇರುವುದರಿಂದ ಈಗ ತೀವ್ರ ನೋವು ಕಾಣಿಸಿಕೊಂಡಿದೆ.
ಉದಯೋನ್ಮುಖ ಕವಿ
ಚಂದ್ರಶೇಖರ್ ಅವರು ಒಬ್ಬ ಸದಭಿರುಚಿಯುಳ್ಳ ಉದಯೋನ್ಮುಖ ಕವಿಯೂ ಕೂಡಾ ಆಗಿದ್ದು `ಸಿ.ಎಸ್. ಕುಲಾಲ್’ ಎಂಬ ಕಾವ್ಯನಾಮಲ್ಲಿ ತುಳು-ಕನ್ನಡ ಕವಿತೆಗಳನ್ನು ಬರೆಯುತ್ತಾರೆ. ಅನಾರೋಗ್ಯದಿಂದ ಹಾಸಿಗೆ ಹಿಡಿದ ಬಳಿಕವೂ ಅವರ ಬರೆಯುವ ಶಕ್ತಿ, ಹುಮ್ಮಸ್ಸು ಕಡಿಮೆಯಾಗಿಲ್ಲ. ಇವರು ರಚಿಸಿರುವ ಕವಿತೆ ಹಾಗೂ ಜೀವನೋಲ್ಲಾಸ ಮೂಡುವಂತೆ ಮಾಡುವ ಸುಭಾಷಿತಗಳು ಸಾಮಾಜಿಕ ತಾಣಗಳಲ್ಲಿ ಸಾವಿರ ಲೆಕ್ಕದಲ್ಲಿ ಹಂಚಿಕೆಯಾಗುತ್ತವೆ. ಕವಿತೆಗಳನ್ನು ರಚಿಸುತ್ತಾ ತನ್ನ ಆಂತರ್ಯದ ನೋವು-ಸಂಕಟಗಳನ್ನು ಮರೆಯಲು ಚಂದ್ರಶೇಖರ್ ಯತ್ನಿಸುತ್ತಾರೆ. ಒಂದು ದಿನ ತಾನು ಮೊದಲಿನಂತಾಗುತ್ತೇನೆ ಎನ್ನುವ ಭರವಸೆ ಇಟ್ಟುಕೊಂಡಿರುವ ಚಂದ್ರಶೇಖರ್ ಅದೇ ಆಶಾ ಭಾವನೆಯೊಂದಿಗೆ ಬದುಕು ಸಾಗಿಸುತ್ತಿದ್ದಾರೆ.
ಕಾಲಿಗೆ ರೀಪಿನ ಆಧಾರ
ಕುಳಿತಲ್ಲೇ ಇರುವ ಚಂದ್ರಶೇಖರ್ ಅವರ ಮೂತ್ರ ವಿಸರ್ಜನೆಗೆ catheter ಬ್ಯಾಗ್ ಅಳವಡಿಸಲಾಗಿದ್ದು, ಮೂರು ತಿಂಗಳಿಗೊಮ್ಮೆ ಆಸ್ಪತ್ರೆಗೆ ತೆರಳಿ ಇದರ ಪೈಪ್ ಬದಲಾವಣೆ ಮಾಡಲಾಗುತ್ತಿದೆ. ಕುಳಿತಲ್ಲೇ ಇರುವುದರಿಂದ ಎರಡೂ ಕಾಲುಗಳು ಚಲನೆಯಿಲ್ಲದೆ ಬಾಗಲು ಆರಂಭವಾಗುತ್ತಿದೆ. ಇದಕ್ಕಾಗಿ ಮರದ ರೀಪಿನ ತುಂಡನ್ನು ಎರಡೂ ಕಾಲಿಗೆ ಕಟ್ಟಿ ನೇರ ಮಾಡಿರುವ ಸ್ಥಿತಿಯನ್ನು ಕಂಡರೆ ಎಂಥವರಿಗೂ ಮನ ಕಲುಕಿ ಅಯ್ಯೋ ಎನಿಸದಿರದು.
ಆರ್ಥಿಕ ಮುಗ್ಗಟ್ಟು
ರಿಮೋಟ್ ಆಧರಿತ ನಡಿಗೆಯ ವಿಶೇಷ ಚಿಕಿತ್ಸೆ ನೀಡಿದರೆ ಕನಿಷ್ಟ ನಡೆದಾಡಲು ಸಾಧ್ಯ ಎನ್ನುವ ವೈದ್ಯರೋರ್ವರ ಸಲಹೆ ಚಂದ್ರಶೇಖರ್ಗೆ ಹೊಸ ಹುರುಪು ನೀಡಿದೆ. ಈ ಚಿಕಿತ್ಸೆ ಮಾಡಿಸಿದರೆ ನಡೆದಾಡಬಹುದು ಎನ್ನುವ ನಿರೀಕ್ಷೆ ಅವರಲ್ಲಿ ಹುಟ್ಟಿಕೊಂಡಿದೆ. ಆದರೆ ಬೇಸಾಯವನ್ನು ಅವಲಂಬಿಸಿ ಬದುಕುತ್ತಿರುವ ಮನೆಯ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದೆ.
ಚಿಕಿತ್ಸೆ, ಮದ್ದಿಗಾಗಿ ಈಗಾಗಲೇ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಕೈ ಬರಿದು ಮಾಡಿಕೊಂಡಿರುವ ಚಂದ್ರಶೇಖರ್ ಸಹೃದಯಿ ದಾನಿಗಳ ನೆರವು ಎದುರು ನೋಡುತ್ತಿದ್ದಾರೆ. ಈಗಾಗಲೇ ಕೆಲ ವ್ಯಕ್ತಿಗಳು, ಸಂಘ ಸಂಸ್ಥೆಗಳು ನೆರವು ನೀಡಿರುವುದನ್ನು ನೆನಪಿಸಿಕೊಳ್ಳುವ ಆತ ದೈನ್ಯದಿಂದಲೇ ನೆರವಿಗಾಗಿ ಮೊರೆ ಇಡುತ್ತಿದ್ದಾರೆ.
——————————-
19 ವರ್ಷಗಳಿಂದ ವ್ಹೀಲ್ ಚೇರ್ನಲ್ಲೇ ಜೀವನ ನಡೆಸುತ್ತಿರುವ ಚಂದ್ರಶೇಖರ್ ಕುಲಾಲ್ (ಸಿ.ಎಸ್.ಕುಲಾಲ್) ಅವರ ದಯನೀಯ ಸ್ಥಿತಿಯನ್ನು ಕಂಡು ಮಾನವೀಯ ನೆಲೆಯಲ್ಲಿ `ಕುಲಾಲ್ ವರ್ಲ್ಡ್’ ವಾಟ್ಸಪ್ ಗ್ರೂಪಿನ ಪರವಾಗಿ ಹಣ ಸಂಗ್ರಹಿಸಿ ನೀಡಲು ತೀರ್ಮಾನಿಸಲಾಗಿದೆ. `ಕುಲಾಲ್ ವರ್ಲ್ಡ್’ ವಾಟ್ಸ್ ಆಪ್ ಗ್ರೂಪಿನ ಸದಸ್ಯ ಹೇಮಂತ್ ಕುಮಾರ್ ಇವರ ಕೆಳಗಿನ ಖಾತೆಗೆ ಹಣ ಸಂದಾಯ ಮಾಡಿ ಸಹಕರಿಸಬೇಕಾಗಿ ವಿನಂತಿ. ಹಣ ಸಂದಾಯ ಮಾಡಿದ ಪ್ರತಿಯೊಬ್ಬರ ವಿವರವನ್ನು kulalworld.com ವೆಬ್ ಸೈಟಿನಲ್ಲಿ ಪ್ರಕಟಿಸಲಾಗುವುದು.
Hemanth Kumar
Bank : State Bank of India
Branch: Kinnigoli
*Account No : 20026035037
IFSC Code : SBIN 0007903
ಹೇಮಂತ್ ಅವರ ಮೊಬೈಲ್ ಸಂಖ್ಯೆ : 9480922412