ಧಾರವಾಡ: ಬುದ್ಧಿ ವಿಕಾಸಕ್ಕೆ ಜೀವನದಲ್ಲಿ ಓದು ಮುಖ್ಯ. ಓದಿನಿಂದ ವ್ಯಕ್ತಿಯ ವ್ಯಕ್ತಿತ್ವ ಪರಿಪೂರ್ಣವಾಗಲು ಸಾಧ್ಯ. ಓದಿದಷ್ಟು ನಮ್ಮ ಜ್ಞಾನ ಹೆಚ್ಚುತ್ತ ಹೋಗಿ, ಅಜ್ಞಾನ ಅಳಿಯುತ್ತದೆ. ಅವಸರವಾಗಿ ಓದಿ ಅನರ್ಥ ಮಾಡಿಕೊಳ್ಳುವ ಬದಲು ನಿಧಾನವಾಗಿ ಓದಿ ಮನನ ಮಾಡಿಕೊಳ್ಳುವುದು ಉಪಯುಕ್ತ ಎಂದು ನಿವೃತ್ತ ಗ್ರಂಥಪಾಲಕ ಡಾ| ಎಸ್.ಕೆ. ಸವಣೂರ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘ ಪ್ರೊ| ಎಂ.ಆರ್. ಕುಂಬಾರ ದತ್ತಿ ಉಪನ್ಯಾಸ ಮಾಲೆ-2ರ ಅಂಗವಾಗಿ ಆಯೋಜಿಸಿದ್ದ “ಉತ್ತಮ ಜೀವನಕ್ಕಾಗಿ ಓದು’ ಉಪನ್ಯಾಸ ಹಾಗೂ ಡಾ| ರಾಜಶೇಖರ ಕುಂಬಾರ ಅವರ “ಇನೋವೇಶನ್ಸ್ ಫಾರ್ ಪ್ರಮೋಟಿಂಗ್ ಇಫೆಕ್ಟಿವ್ ಯುಜಸ್ ಆಫ್ ಲೈಬ್ರೆರಿಸ್’ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಪುಸ್ತಕ ಓದುವ ಹವ್ಯಾಸದಿಂದ ಮನಸ್ಸಿಗೆ ಶಾಂತಿ, ಪುಷ್ಟಿ ಸಿಗುತ್ತದೆ. ಪುಸ್ತಕ ಓದುವ ಹವ್ಯಾಸವುಳ್ಳವರು ಎಲ್ಲಿ ಹೋದರೂ ಸಂತೋಷವಾಗಿರಲು ಸಾಧ್ಯ. ಓದುವುದರಿಂದ ನಮ್ಮ ಬದುಕು ಸಮೃದ್ಧವಾಗುತ್ತದೆ. ಓದುವ ಹವ್ಯಾಸ ಇಲ್ಲದವನು ಹಣವಂತನಾಗಿದ್ದರೂ ದರಿದ್ರನು. ಮನುಷ್ಯನ ಜೀವನೋಲ್ಲಾಸಕ್ಕೆ ಓದು ಮುಖ್ಯ.
ಸದೃಢ ಶರೀರಕ್ಕೆ ವ್ಯಾಯಾಮ ಅವಶ್ಯ ಇರುವಂತೆ ಆರೋಗ್ಯಕರ ಮನಸ್ಸಿಗೆ ಓದು ಮುಖ್ಯ ಎಂದರು. ಡಾ| ಸಿ.ಆರ್. ಕರಿಸಿದ್ಧಪ್ಪ, ಜಿ.ಬಿ. ಹೊಂಬಳ, ಶ್ರೀನಿವಾಸ ವಾಡಪ್ಪಿ, ನಿಂಗಣ್ಣ ಕುಂಟಿ, ಮಹಾಂತೇಶ ನರೇಗಲ್, ಧರ್ಮಣ್ಣ ಕುಂಭಾರ, ಸಿ.ಬಿ. ಹೊಸಕೋಟಿ ಇತರರಿದ್ದರು.
ಡಾ| ಎಸ್.ಎಲ್. ಸಂಗಮ ಕೃತಿ ಪರಿಚಯಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಕಾರ್ಯಾಧ್ಯಕ್ಷ ಡಾ| ಡಿ.ಎಂ. ಹಿರೇಮಠ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಸತೀಶ ತುರಮರಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು