ಬೆಂಗಳೂರು(ಏ.೧೦): ಆಯುರ್ವೇದ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ನಿಡಗುಂದಾದ ಡಾ. ಅಂಬುಜಾಕ್ಷಿ ಕುಂಬಾರ್ ಅವರು ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 158 ಮಂದಿಗೆ ಕೆಂಪೇಗೌಡ ಪ್ರಶಸ್ತಿ ನೀಡಲಾಗಿದ್ದು ಇವರಲ್ಲಿ ಅಂಬುಜಾಕ್ಷಿ ಅವರೂ ಒಬ್ಬರಾಗಿದ್ದಾರೆ.
ಪಾಲಿಕೆ ಕೇಂದ್ರ ಕಚೇರಿಯಲ್ಲಿರುವ ಗಾಜಿನ ಮನೆಯಲ್ಲಿ ಏಪ್ರಿಲ್ ೧೧ರಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪಾಲಿಕೆ ಕೇಂದ್ರ ಕಚೇರಿ ಮುಂಭಾಗದಲ್ಲಿರುವ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆಗೆ ಮೇಯರ್ ಜಿ.ಪದ್ಮಾವತಿ ಮಾಲಾರ್ಪಣೆ ಮಾಡುವ ಮೂಲಕ ಕೆಂಪೇಗೌಡ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನಂತರ ನಗರದ ನಾಲ್ಕೂ ದಿಕ್ಕುಗಳಲ್ಲಿರುವ ಕೆಂಪೇಗೌಡರ ಗೋಪುರವಲ್ಲದೆ, ಮಾಗಡಿಯಲ್ಲಿ ಪತ್ತೆಯಾಗಿರುವ ಕೆಂಪೇಗೌಡರ ಸಮಾಧಿಯಿಂದಲೂ ಸಹ ಈ ಬಾರಿ ಜ್ಯೋತಿಯನ್ನು ತರಲಾಗುವುದು. ಆಯಾ ಭಾಗದ ಜನಪ್ರತಿನಿಧಿಗಳು ಜ್ಯೋತಿ ಯಾತ್ರೆಯ ನೇತೃತ್ವ ವಹಿಸಲಿದ್ದಾರೆ. ಮೇಯರ್ ಪದ್ಮಾವತಿ ಅವರು ಲಾಲ್ಬಾಗ್ನಲ್ಲಿರುವ ಗೋಪುರದಿಂದ ಜ್ಯೋತಿ ತರಲಿದ್ದು, ಐದೂ ದಿಕ್ಕುಗಳಿಂದ ಜ್ಯೋತಿ ಬರುವ ವೇಳೆ ಡೊಳ್ಳುಕುಣಿತ, ವೀರಗಾಸೆ ಸೇರಿದಂತೆ ಜಾನಪದ ಕಲಾತಂಡಗಳೊಂದಿಗೆ ಕೇಂದ್ರ ಕಚೇರಿಯಲ್ಲಿ ಜ್ಯೋತಿಯಾತ್ರೆ ಕಾರ್ಯಕ್ರಮ ಸಮಾಗಮಗೊಳ್ಳಲಿದೆ.
ಮಧ್ಯಾಹ್ನ 3.30ಕ್ಕೆ ಪಾಲಿಕೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಸುಮಾರು 100ಕ್ಕೂ ಹೆಚ್ಚು ಮಂದಿ ಉತ್ತಮ ನೌಕರರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ನಂತರ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ ಪಾಲಿಕೆ ನೌಕರರೇ ನಡೆಸಿಕೊಡುವ ನಾಟಕ ಪ್ರದರ್ಶನ ನಡೆಯಲಿದೆ.
ಡಾ. ಅಂಬುಜಾಕ್ಷಿ ಕುಂಬಾರ್ ಪರಿಚಯ
ಬದುಕನ್ನು ಬಟ್ಟಿ ಇಳಿಸಿ, ಸ್ವಯಂ ಶುದ್ಧಗೊಂಡವರು ಈ ಧರಣಿ ಮೇಲೆ ವಿರಳಾತಿ ವಿರಳ. ಹೊಸ ಆಲೋಚನೆಗಳ ಗಂಟು ಬಿಚ್ಚಿ ಸಮಾಜದ ಹುಳುಕುಗಳಿಗೆ ಮುಲಾಮು ಹಚ್ಚುವವರು ನಮ್ಮ ನಡುವೆ ಇದ್ದು ಇಲ್ಲದಂತಿರುತ್ತಾರೆ. ಇಂತಹವರನ್ನು ಬೆಳಕು ಹರಸಿ ಹೋಗುತ್ತದೆ. ದೇಶ, ಭಾಷೆ – ಜಾತಿ ಧರ್ಮದ ಗಡಿಗಳನ್ನು ಮೀರಿ ಮಾನವೀಯತೆಯನ್ನು ತಣ್ಣಗೆ ಸ್ಪರ್ಶಿಸಿ, ಅವನ್ನೂ ಆದ್ರ್ರಗೊಳಿಸುವ ಕಸುವುಗಳು ಇವರಲ್ಲಿರುತ್ತವೆ. ಹುಟ್ಟಿಗೊಂದು ಅರ್ಥ, ಬದುಕಿಗೊಂದು ಬೆಲೆ, ಹುಟ್ಟಿನ ಸಾರ್ಥಕತೆಗೊಂದು ಗುರಿ ಇಟ್ಟುಕೊಂಡು ಕಾಲದ ಜೊತೆ ಪಂಥ ಹೂಡುತ್ತಾರಿವರು. ಕಷ್ಟಗಳಿಗೆ ಬೆನ್ನಿಕೊಡದೆ, ಸುತ್ತಲಿನವರ ನೆಮ್ಮದಿಯಲ್ಲಿ ತಮ್ಮ ನಗುವನ್ನು ಅರಸುವವರು ಇಂತಹವರು.
ಇಂತಹವರಲ್ಲಿ ಅಂಬುಜಾಕ್ಷಿ ಕುಂಬಾರ್ರವರು ಸಹ ಒಬ್ಬರು. ಬುದ್ಧನ ಕರುಣೆ, ಬಸವಣ್ಣನವರ ಕಾಯಕ ಭಕ್ತಿ, ಗಾಂಧೀಜಿಯವರ ಸರಳತೆ, ಅಂಬೇಡ್ಕರ್ರವರ ಹೋರಾಟ, ಕೆಂಪೇಗೌಡರ ಅನ್ನದಾಸೋಹ, ರಾಷ್ಟ್ರನಿರ್ಮಾಣ ಈ ಎಲ್ಲಾ ಭವ್ಯ ಆದರ್ಶಗಳ ಸ್ಪೂರ್ತಿಯ ಸೆಲೆಯಿಂದ ಪ್ರಭಾವಿತಗೊಂಡು ತಮ್ಮ ಬದುಕು ಸಾರ್ಥಕವಾಗಬೇಕು, ಹುಟ್ಟು ಅಮರವಾಗಬೇಕೆಂಬ ಗುರಿಯೊಂದಿಗೆ ಸಮಾಜಮುಕಿಯಾಗಿ ಅನಾವರಣಗೊಳ್ಳುತ್ತಿರುವ ಅಂಬುಜಾಕ್ಷಿ ಕುಂಬಾರ್ರವರನ್ನು ಅರಿತಷ್ಟು ಆಳ, ಬೆರೆತಷ್ಟು ಭಾವ. “ಸರ್ವರಿಗಾಗಿಯೇ ಸರ್ವಂ” ಎಂದು ಬಲವಾಗಿ ನಂಬಿರುವ ಇವರು ತನ್ನ ಸುತ್ತಲಿನವರಿಗೆ ಹಸಿದಾಗ ಮೀನು ಕೊಡುವುದಷ್ಟೇ ಅಲ್ಲದೇ ಮೀನು ಹಿಡಿಯುವ ಕಲೆಯನ್ನೂ ಹೇಳಿಕೊಡಬೇಕೆಂದು ಅಂತರಾಳದ ದೈತ್ಯ ಶಕ್ತಿಯೊಂದಿಗೆ ಬದುಕು ಸಾಗಿಸುತ್ತಿರುವವರು. ಇವರಿಗೀಗ 52 ವರ್ಷ ವಯಸ್ಸು. ಹುಟ್ಟಿದ್ದು 1965 ಜುಲೈ 20ರಂದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ. ಓದಿದ್ದು ಬಿ.ಎ., ಎಂ.ಎಸ್., (ಭಾರತೀಯ ಆಯುರ್ವೇದ ಪದ್ಧತಿ). ವೃತ್ತಿಯಲ್ಲಿ ವೈದ್ಯರು. ಇವರ ಪತಿಯ ಹೆಸರು ಶ್ರೀ ಬಿ.ಎಸ್. ಕುಂಬಾರರು, ವೃತ್ತಿಯಲ್ಲಿ ಇಂಜಿನಿಯರ್. ಶ್ರೀಮತಿ ಅಂಬುಜಾಕ್ಷಿಯವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಪುತ್ರ. ಮೂವರು ಮಕ್ಕಳೂ ಸಹ ಎಂ.ಬಿ.ಬಿ.ಎಸ್. ಪದವಿಯನ್ನು ಮುಗಿಸಿದ್ದಾರೆ. ಅಂಬುಜಾಕ್ಷಿಯವರು ನಿರಂತರವಾಗಿ ದೀನರು, ದಲಿತರು, ಬಡವರು, ಶೋಷಿತರು, ಹಿಂದುಳಿದವರ ಬದುಕಿಗೆ ಆಶಾಕಿರಣವಾಗಬೇಕೆಂಬ ಆಶಯದಿಂದ ಸರ್ಕಾರಿ ಸೇವೆ ಹರಸಿ ಬಂದರೂ ಸಹ ವಿನಮ್ರವಾಗಿ ಅದನ್ನು ತಿರಸ್ಕರಿಸಿ ಸ್ವತಂತ್ರ ವೈದ್ಯೆಯಾಗಿ ಸಮಾಜದ ಸೇವೆಗೆ ತಮ್ಮನ್ನು ತಾವು
ಅರ್ಪಿಸಿಕೊಂಡಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಅಂಬುಜಾಕ್ಷಿ ಕುಂಬಾರ್ರವರ ಹೆಜ್ಜೆಯ ಗುರುತುಗಳು..
1992ನೇ ಸಾಲಿನಿಂದ ಖಾಸಗಿಯಾಗಿ ವೈದ್ಯಕೀಯ ವೃತ್ತಿಯನ್ನು ಆರಂಭಿಸಿ ಮುಂದುವರಿಸಿಕೊಂಡು ಬರುತ್ತಿರುವ ಅಂಬುಜಾಕ್ಷಿ ಕುಂಬಾರ್ರವರು “ಆಯುರ್ದೀಪ್” ಆಯುರ್ವೇದ ಆಸ್ಪತ್ರೆ ಮತ್ತು ಪಂಚಕರ್ಮ ಚಿಕಿತ್ಸಾ ಕೇಂದ್ರವನ್ನು ಬೆಂಗಳೂರಿನ ವಿಜಯನಗರದಲ್ಲ ಪ್ರಾರಂಭಿಸಿ ತಮ್ಮ ನೇತೃತ್ವದ ಅಡಿಯಲ್ಲಿ ಹಲವಾರು ನಿವೃತ್ತ ತಜ್ಞರು ಹಾಗೂ ಸಿಬ್ಬಂದಿಯನ್ನೊಳಗೊಂಡಂತೆ ಒಂದು ವಿಶೇಷ ಘಟಕವನ್ನು ತೆರೆದು ಭಾರತೀಯ ವೈದ್ಯ ಪದ್ಧತಿಯನ್ನು ಪ್ರಚಾರ ಮಾಡಿಸುವುದರ ಜೊತೆಗೆ ತಮ್ಮ ಪತಿಯ ಜಿಲ್ಲೆಯಾದ ಗುಲ್ಬರ್ಗ ಹಾಗೂ ಬೆಂಗಳೂರಿನ ಸಾವಿರಾರು ಬಡ ಹಿಂದುಳಿದ ದಲಿತ ಶೋಷಿತ ಜನರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ನೇತ್ರ ಚಿಕಿತ್ಸೆ, ಹೃದಯ ಶಸ್ತ್ರ ಚಿಕಿತ್ಸೆ ಇನ್ನೂ ಮುಂತಾದ ವಿಶೇಷ ಆರೋಗ್ಯ ಚಿಕಿತ್ಸೆಗಳನ್ನು ಮಾಡುತ್ತಾ ಬಂದಿದ್ದಾರೆ. ಬಂಜೆತನ ನಿವಾರಣೆ ಚಿಕಿತ್ಸೆಯ ಮೂಲಕ ಹಲವಾರು ಕುಟುಂಬಗಳ ಪಾಲಿನ ಆಶಾಕಿರಣವಾಗಿ ಹೊರಹೊಮ್ಮಿರುವ ಅಂಬುಜಾಕ್ಷಿಯವರು ಯಾವುದೇ ಪ್ರತಿಕೂಲ ಪರಿಣಾಮ ಬೀರದ ಭಾರತೀಯ ಆಯುರ್ವೇದದ ಪದ್ದತಿಯ ಮೂಲಕ ನೂರಾರು ಕುಟುಂಬಗಳ ಸಂಬಂಧ ಗಟ್ಟಿಗೊಳಿಸಿದ್ದಾರೆ.
ಅಂಬುಜಾಕ್ಷಿ ಕುಂಬಾರ್ರವರು ನವೆಂಬರ್ 2012ರಿಂದ ಚಿಂಚೋಳಿ ಮತ್ತು ಆಳಂದ ತಾಲ್ಲೂಕಿನ ನಿಡಗುಂದ ಮತ್ತು ವಿ.ಕೆ. ಸಲಗಾರ್ ಗ್ರಾಮಗಳಲ್ಲಿ ಕರ್ನಾಟಕ ಸರ್ಕಾರದ ಆಯುಷ್ ಇಲಾಖೆ ಮತ್ತು ಬೆಂಗಳೂರಿನ ಆಯುರ್ದೀಪ್ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಯನ್ನು ಪ್ರತಿ ವರ್ಷ ದನ್ವಂತ್ರಿ ಜಯಂತಿಯಂದು ಒಂದು ತಿಂಗಳ ಕಾಲ ಮಾಡುತ್ತಾ ಬಂದಿದ್ದಾರೆ.
ಸಾಮಾಜಿಕ / ಶೈಕ್ಷಣಿಕ ಕ್ಷೇತ್ರದಲ್ಲಿನ ಸೇವೆ :
ಗುಲ್ಬರ್ಗಾ ಜಿಲ್ಲೆ, ಚಿಂಚೋಳಿ ತಾಲ್ಲೂಕಿನ ನಿಡಂಗುಂದಾ ಗ್ರಾಮದಲ್ಲಿನ ಕಂಚಾಳ ಕುಂಟಿ ಬಸವಣ್ಣ ದೇವಸ್ಥಾನದ ಆವರಣದಲ್ಲಿ ಡಾ|| ಅಂಬುಜಾಕ್ಷಿ ಕುಂಬಾರರು ಪ್ರಾಥಮಿಕ ಮತ್ತು
ಪ್ರೌಢಶಾಲೆ, ಪದವಿಪೂರ್ವ ಕಾಲೇಜನ್ನು ಸ್ಥಾಪನೆ ಮಾಡಿ ಅದರ ಸಂಸ್ಥಾಪಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಾ ಚಿಂಚೋಳಿ ತಾಲ್ಲೂಕಿನ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಅನ್ನದಾಸೋಹದ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಇವರ ಶೈಕ್ಷಣಿಕ ಸೇವೆಯನ್ನು ನಾವು ಈ ಕೆಳಕಂಡಂತೆ ಗಮನಿಸಬಹುದು.
ಶಾಲೆಯ ಹೆಸರು : ನಂದೀಶ್ವರ ಪ್ರಾಥಮಿಕ ಪಾಠಶಾಲೆ (ಆಂಗ್ಲ ಮತ್ತು ಕನ್ನಡ ಮಾಧ್ಯಮ). ಪ್ರಸ್ತುತ ಅಧ್ಯಾಯನ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ : 246
ಪ್ರೌಢಶಾಲೆಯ ಹೆಸರು : ಶ್ರೀಮತಿ ತುಳಜಮ್ಮ ಶಂಕರಪ್ಪ ಕುಂಬಾರ ಪ್ರೌಢಶಾಲೆ. ಪ್ರಸ್ತುತ ಅಧ್ಯಾಯನ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ : 232
ಸಂಸ್ಕೃತ ಪಾಠ ಶಾಲೆ : ಬಸವೇಶ್ವರ ವೇದ ವಿಜ್ಞಾನ ಪಾಠ ಶಾಲೆ. ಪ್ರಸ್ತುತ ಅಧ್ಯಾಯನ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ : 50
ಶ್ರೀಮತಿ ಜಯಮ್ಮ ರಾಮಯ್ಯ ದೊಡ್ಡಬಳ್ಳಾಪುರ ಆಂಗ್ಲ ಪ್ರೌಢಶಾಲಾ ವಿದ್ಯಾಸಂಸ್ಥೆ . ಪ್ರಸ್ತುತ ಅಧ್ಯಾಯನ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ : 148
ಇದಲ್ಲದೆ ಅಂಬುಜಾಕ್ಷಿ ಕುಂಬಾರ್ರವರು ಕುಂಬಾರ ಹಾಗೂ ವಿವಿಧ ಧ್ವನಿರಹಿತ ಸಮಾಜದ ಮಹಿಳೆಯರು ಹಾಗೂ ಪುರುಷರು, ಯುವಕರಿಗಾಗಿ ಚಿಂಚೋಳಿಯಲ್ಲಿ
ಸುಮಾರು 50 ಎಕರೆ ಪ್ರದೇಶದಲ್ಲಿ ಕಸುಬು ಆಧಾರಿತ ಮಡಿಕೆ ತಯಾರಿಕೆ, ಚಾಪೆ ತಯಾರಿಕೆ, ಊದುಬತ್ತಿ ತಯಾರಿಕೆ, ಹೈನುಗಾರಿಕೆ ಇನ್ನು ಮುಂತಾದ ಸ್ವಉದ್ಯೋಗ
ತರಬೇತಿಯನ್ನು ನೀಡುತ್ತಾ ಬಂದಿರುತ್ತಾರೆ. ಪ್ರತಿವರ್ಷ ಕುಂಬಾರ ಜನಾಂಗದ ರಾಜ್ಯ ಮಟ್ಟದ ಸಮ್ಮೇಳನವನ್ನು ನಿಡಗುಂದದಲ್ಲಿ ಆಯೋಜಿಸಿ ರಾಜ್ಯ ಮಟ್ಟದ ಮುಖಂಡರುಗಳನ್ನು, ಕುಂಬಾರ ಜನಾಂಗದ ಸಾಧಕರನ್ನೂ ಸನ್ಮಾನಿಸಿ ಈ ಜನಾಂಗವನ್ನು ಒಗ್ಗೂಡಿಸಿ ಅವರಲ್ಲಿ ಅರಿವನ್ನು ಮೂಡಿಸುವ ಪ್ರಯತ್ನವನ್ನು ಅಂಬುಜಾಕ್ಷಿ ಕುಂಬಾರ್ರವರು ನಿರಂತರವಾಗಿ ಮಾಡುತ್ತಾ ಬಂದಿರುತ್ತಾರೆ.
www.kulalworld.com