ಕೋಶಾರರು ವೃತ್ತಿಯಲ್ಲಿ ಮಣ್ಣಿನ ಮಡಕೆ (ಬಹುಷಃ ಕೋಶ )ಗಳನ್ನು ಮಾಡುವ `ಕುಂಬಾರ’ ಕುಲದವರಾಗಿದ್ದಾರೆಂದು ‘ಪುರಂನಾನ್ನೂರು ಪಾಟ್ಟ್ ‘ ಎಂಬ ತಮಿಳ ಸಂಗ ಸಾಹಿತ್ಯ ಕೃತಿಯ 256ನೇ ಚರಣದಲ್ಲಿ ಉಲ್ಲೇಖಿಸಿದೆ . ಸತ್ತ ವೀರನೊಬ್ಬನ ಮಡದಿಯು ಒಬ್ಬ ಕೋಶಾರನಲ್ಲಿ `ಮುದುಮಕ್ಕತ್ತಾಳಿ’ಯನ್ನು ರಚಿಸಿಕೊಡಬೇಕೆಂದು ಮೇಲಿನ ಕೃತಿಯಲ್ಲಿ ಹೇಳಿದೆ. ಮುದುಂ ಅಂದರೆ `ದೊಡ್ಡ’ದು ಅಕ್ಕ ಎಂದರೆ `ಗಾತ್ರ’ ತಾಳಿ ಎಂದರೆ `ಪಾತ್ರೆ-ಕೋಶ’ (ಥಾಲಿ). ಒಟ್ಟರ್ಥದಲ್ಲಿ ದೊಡ್ಡದಾದ ಪಾತ್ರೆಯೆನ್ನಬಹುದು. ಸತ್ತ ಗಂಡನ ಅಸ್ಥಿ ಸಂಚಯನ ನಡೆಸಿ ಹೂಲಿಡಲು ತಕ್ಕುದಾದ ಒಂದು ದೊಡ್ಡ ಪಾತ್ರೆಯನ್ನು ರಚಿಸಿಕೊಡುವಂತೆ ಬೇಡಿಕೊಂಡಳೆಂಬ ವಿವರ ಮೇಲಿನ ಸಂಗಂ ಕೃತಿಯಲ್ಲಿ ಸೂಚಿಸಲ್ಪಟ್ಟಿದೆ. ಇದರಿಂದ ಅರ್ಥವಾಗುವುದೇನೆಂದರೆ ಕೋಶಾರರು ಕುಂಬಾರ ಸಮುದಾಯಕ್ಕೆ ಸೇರಿದವರೆಂದು. ಮಣ್ಣಿನಿಂದ ಮಡಿಕೆಗಳನ್ನು ತಯಾರಿಸುವ ಕುಲಾಲ ಕೆಲಸದ ಕುಂಬಾರರು ತುಳುನಾಡಿನಲ್ಲಿ ಸಾವಿರಾರು ವರುಷಗಳ ಹಿಂದಿನಿಂದಲೇ ವಾಸಿಸುತ್ತಾ ಬಂದವರಾಗಿದ್ದಾರೆ. ಈ ಕುಂಬಾರರನ್ನು ತುಳುವರು `ಮೂಲ್ಯ’ರೆನ್ನುತ್ತಾರೆ. ಮಲೆಯಾಳ ಭಾಷೆಯನ್ನಾಡುವ ಕುಂಬಾರರನ್ನು ‘ಕೊಯೋರ್ (ಬಹುವಚನ )`ಕೊಯೋನ್’ (ಏಕವಚನ ) `ಕೊಶೋರ್’ (ಬಹುವಚನ )ರೆಂದೂ ಕರೆಯುತ್ತಾರೆ. ತಿರುವಾಂಕ್ಕೂರು ಪ್ರದೇಶದ ಮಲಿಯಾಳಿ ಕುಂಬಾರರನ್ನು `ಕುಶವನ್’ (ಏಕವಚನ) `ಕುಶವರ್’ (ಬಹುವಚನ )ರೆಂದೂ ಕರೆಯುತ್ತಾರೆ…
ಪರಶುರಾಮನ ಸೃಷ್ಟಿಯ ಕತೆಯಲ್ಲಿ ಮಹಾರಾಷ್ಟ್ರದ ತ್ರ್ಯಂಬಕದಿಂದ ಕೇರಳದ ದಕ್ಷಿಣ ಕನ್ಯಾಕುಮಾರಿಯವರಗೆ “ಸಪ್ತಕೊಂಕಣಿ”ವೆಂದು ಕರೆಯಲ್ಪಟ್ಟ ’ಕೇರಳೋತ್ಪತ್ತಿ ’ಕೃತಿಯಲ್ಲಿ ಸಪ್ತ ಕೇರಳವೆಂದು ಕರೆಯಲ್ಪಟ್ಟ ಭೂಭಾಗವು “ತುಳುಬಾರಗ “(ತುಲಾಬಾರ) ಅರಸನಾದ ಭೋಜ ಮತ್ತು ಅವನ ವಂಶಸ್ಥರಿಂದ ತುಳುದೇಶ (ತುಲಾದೇಶ )ವೆನಿಸಿದ್ದರೂ ಅದು ರಾಜಕೀಯ ಭೂಮಿತಿಯಾಗಿದೆ. ಆದರೆ ಶುದ್ಧ ತುಳುವರ ಜನದಟ್ಟಣೆಯಿರುವ ಪ್ರದೇಶ ಮಾತ್ರ ತುಳುನಾಡು ಎನಿಸುವುದು .ಅಚ್ಚಗನ್ನಡ ಪ್ರದೇಶಗಳಾದ ಉತ್ತರ ಕನ್ನಡ ಜಿಲ್ಲೆ ಮತ್ತು ಶಿವಮೊಗ್ಗ ಜಿಲ್ಲೆಯನ್ನು ಹಿಂದೆ ಅಳಿದ್ದ ’ಸಾಲುವ’ (ಸಾಳ್ವ) ಅರಸರು ತಮ್ಮ ರಾಜ್ಯವನ್ನು ತುಳುದೇಶವೆಂದೇ ಶಾಸನಗಳಲ್ಲಿ ಉಲ್ಲೇಖಿಸಿದ್ದಾರೆ . ಹಾಗೆಂದು ಇವರ ಶಾಸನಗಳ ಭಾಷೆಯು ಕನ್ನಡವಾಗಿತ್ತು. ಅಂದರೆ ಆ ಪ್ರದೇಶಗಳು ತುಳು ಜನರ ಸ್ವಂತ ನೆಲೆಗಳಾಗಿರದು . ತುಳುವರ ಗಂಡು ಮೆಟ್ಟಿನ ಭೂಮಿಯು ಉಡುಪಿ ಜಿಲ್ಲೆಯ ಸೀತಾ ನದಿಯಿಂದ ಕಣ್ಣಾನ್ನೂರು ಜಿಲ್ಲೆಯ ದಕ್ಷಿಣದವರೆಗೂ ಇತ್ತು. ಕೇರಳದಲ್ಲಿ ಕಣ್ಣಾನ್ನೂರು ಜಿಲ್ಲೆಯ ಪಯ್ಯನ್ನೂರು ಸಮೀಪದ ತುಳುವನ್ನೂರು ಎಂಬ ಪ್ರದೇಶವಿದೆ. ಈಗ ’ತುಳು’ ಶಬ್ದ ಬಿಟ್ಟು ಅನ್ನೂರು ಎನ್ನುತ್ತಾರೆ. ಆದರೆ ವೈಷ್ಣವ ದೇವಾಲಯದ ಹೆಸರಿನಲ್ಲಿ ’ತುಳುವನ್ನೂರು’ಎಂದೇ ಉಲ್ಲೇಖವಿದೆ. ತುಳುವನ್ ಊರು ಅಂದರೆ `ತುಳುವನ ಊರು’ ಎಂದರ್ಥ. ಬಹುಶಃ ಅಲ್ಲಿ ತುಳುವನೊಬ್ಬ ಅರಸನಾಗಿ ಅಳಿರಬಹುದು. ಅದರ ಜ್ಞಾಪಕವಾಗಿ ಆ ಹೆಸರು ಬಂದಿರಬಹುದು. ಕಣ್ಣಾನ್ನೂರು ಜಿಲ್ಲೆಯ ಬಡಗು ಭಾಗದವರಗೆ ಚಾಲ್ತಿಯಲ್ಲಿರುವ ತುಳುನಾಡಿನ ಭೂತಾರಾಧನೆಯನ್ನು ಗಮನಿಸುವಾಗ ತುಳುನಾಡು ಕಣ್ಣಾನ್ನೂರು ಜಿಲ್ಲೆಯ ತನಕವಿತ್ತು ಎನ್ನಬಹುದು. ಮುಂದೆ ಮಲೆಯಾಳಿಗಳ ವಶವಾಗಿ ಕಾಸರಗೋಡು ಜಿಲ್ಲೆಯ ತನಕದ “ತುಳುನಾಡು’ ಮಲೆಯಾಳ ನಾಡಾಯಿತು ಎಂದು ಅಲ್ಲಿಯ ಇತಿಹಾಸದಿಂದ ತಿಳಿದು ಬರುತ್ತದೆ. ಇಂದಿಗೂ ತಲೆತಲಾಂತರಗಳಿಂದ ಆ ಭಾಗಗಳಲ್ಲಿ ತುಳುನಾಡಿನ ತುಳುವರಾದ ಮುಗೇರರು ಮಾವಿಲರಾಗಿಯೂ , ಪರವರ್ ವೇಲನ್ ಮ್ಮಾರ್ ಆಗಿಯೂ ಪಾಣ-ನಲಿಕೆಯವರು ಕೊಪಾಳರಾಗಿಯೂ ಅರಿಯಲ್ಪಟ್ಟು ವಾಸಿಸುತ್ತಾ ಬಂದಿದ್ದಾರೆ. ಹೆಚ್ಚು ಕಮ್ಮಿ ಕ್ರಿ.ಶ ಹತ್ತನೇ ಶತಮಾನದವರೆಗೆ ಮಲೆಯಾಳ ಭಾಷೆಯು ತಮಿಳಿನಿಂದ ಪ್ರತ್ಯೇಕಗೊಳ್ಳದೇ ಇದ್ದುದರಿಂದ ಅದುವರೆಗಂತೂ ಕಣ್ಣಾನ್ನೂರು ಜಿಲ್ಲೆಯವರೆಗೆ ತುಳುನಾಡು ಆಸ್ತಿತ್ವದಲ್ಲಿತ್ತು ಎನ್ನಬಹುದು. ಹೀಗೆ ಕರ್ನಾಟಕ ಮತ್ತು ಕೇರಳದ ಕರಾವಳಿಯ ನಾಲ್ಕು -ಐದು ಜಿಲ್ಲೆಗಳಲ್ಲಿ ಹರಡಿದ್ದು ಒಂದು ಸಾವಿರ ವರುಷಗಳ ಹಿಂದೆ ಆಸ್ತಿತ್ವದಲ್ಲಿದ್ದ ಅಚ್ಚ ತುಳು ಭಾಷೆಯನ್ನಾಡುವ ಅರಸರು ಮತ್ತು ಸಾಮಾನ್ಯ ಜನರ ನಾಡಾಗಿತ್ತು “ತುಳುನಾಡು ” ಈ ತುಳುನಾಡಿನ ಪ್ರದೇಶದಿಂದ ಕೋಶಾರರು (ಕೋರ್ಸಾ) ಎಂಬ ಯೋಧ ಜನಾಂಗದ ಬಗ್ಗೆ ತಮಿಳ್ನಾಡಿನ ಪುರಾತನ ಸಂಗಂ ಸಾಹಿತ್ಯದಲ್ಲಿ ಕೆಲವು ಪರಾಮರ್ಶೆಗಳು ಬಂದಿವೆ . ಈ ಮಾಹಿತಿಗಳನ್ನಿಟ್ಟುಕೊಂಡು ತುಳುನಾಡಿನ ಕೋಶಾರರು ಯಾರೆಂದು ಕೆಲವು ವಿದ್ವಾಂಸರು ಸಂಶೋಧನೆ ಮಾಡಿದ್ದಾರೆ . ಕಾರಣ ಪ್ರಸ್ತುತ ತುಳುನಾಡಿನಲ್ಲಿ ’ಕೋಶಾರ ’ ಎಂಬ ಹೆಸರಿನ ಸಮುದಾಯವಿಲ್ಲದಿರುವುದರಿಂದ ಆ ಹೆಸರು ಹೊತ್ತ , ಪ್ರಸ್ತುತ ತುಳುನಾಡಿನಲ್ಲಿರುವ ಯಾವುದಾದರೊಂದು ಸಮುದಾಯದವಾಗಿರಬುದೆಂಬ ಕುತೂಹಲದಿಂದ ಹಲವರು ಅಧ್ಯಯನ ನಡೆಸಿರುತ್ತಾರೆ
ಹೀಗೆ ಕೋಶಾರರ ಕುರಿತು ದೀರ್ಘವಾದ ಅಧ್ಯಯನವನ್ನು ಬಸ್ರೂರಿನ ಪ್ರೊ ಶಿವರಾಮ ಶೆಟ್ಟಿಯವರು ನಡೆಸಿರುತ್ತಾರೆ. ಅವರ ಅಧ್ಯಯನದಿಂದ ’ಕೋಶಾರ ’ ವರ್ಗವು ಬಂಟ ನಾಡವರ ಸಮುದಾಯಕ್ಕೆ ಸೇರಿದೆ ಎಂದು ಕಂಡುಕೊಂಡಿದ್ದಾರೆ. ತುಳುನಾಡಿನ ಬಂಟರೇ ತಮಿಳ್ ರಾಜರಲ್ಲಿಗೆ ಯೋಧರಾಗಿ ಹೋಗಿ ’ಕೋಶಾರ್’ರೆಂದು ಅಲ್ಲಿ ಕರೆಸಿದ್ದಾರೆ ಎಂದು ಕಂಡುಕೊಂಡಿದ್ದಾರೆ. ಈ ವಿದ್ವಾಂಸರ ಅಭಿಪ್ರಾಯಕ್ಕಿಂತ ವ್ಯತಿರಿಕ್ತವಾಗಿ ಮುಂಬೈ ನಿವಾಸಿಯಾದ ವಿದ್ವಾಂಸ ಶ್ರೀ ಬಾಬು ಶಿವ ಪೂಜಾರಿಯವರು ತುಳುನಾಡಿನ ಬೈದ್ಯ ಅಥವಾ ಪೂಜಾರಿ ಎಂದೆನಿಸಿದ ಬಿಲ್ಲವ ಜನಾಂಗದ ಯೋಧರೇ ತಮಿಳ್ ವಲಯದಲ್ಲಿ ಕೋಶಾರರಾಗಿದ್ದಾರೆ ಎಂದಿದ್ದಾರೆ . ಈ ಇಬ್ಬರು ವಿದ್ವಾಂಸರು ಬಹಳಷ್ಟು ಅಧ್ಯಯನ ಮಾಡಿದ ’ಕೋಶಾರ’ ಮೂಲದ ಬಗ್ಗೆ ಕುತೂಹಲ ಹುಟ್ಟುವುದು ಸಹಜ . ಈ ಇಬ್ಬರು ವಿದ್ವಾಂಸರು ತಮ್ಮ ತಮ್ಮ ಜಾತಿಯ ಮೇಲಿನ ಅಭಿಮಾನದಿಂದ ಅಧ್ಯಯನ ಮಾಡಿದ್ದಾರೆ . ಈ ರೀತಿಯ ಅಭಿಮಾನದಿಂದ ಇತಿಹಾಸವನ್ನು ಗಮನಿಸಿದಾಗ ದಿಕ್ಕು ತಪ್ಪುವುದು ಸಹಜ. ಈ ಕೋಶಾರರ ಬಗ್ಗೆ ಕಿಂಚಿತ ಸತ್ಯವನ್ನು ಕಾಣುವ ಉದ್ದೇಶದಿಂದ ಇದೇ ಲೇಖಕನು ಅಧ್ಯಯನ ನಡೆಸಿರುವುದು ಈ ಹಿಂದೆ ಮಡಿಕೇರಿಯಿಂದ ಹೊರಡುತ್ತಿದ್ದ “ತುಳುವರೆ ತುಡಿಪು ” ಎಂಬ ತುಳು ಪತ್ರಿಕೆಯಲ್ಲಿ ಜುಲಾಯಿ-ಆಗಸ್ಟ್ ತಿಂಗಳುಗಳಲ್ಲಿ ಬಂದಿರುತ್ತದೆ. ಈ ಲೇಖಕನಿಂದ ಕೋಶಾರರ ಬಗೆಗಿನ ಲೇಖನವೊಂದು ೨೦೦೪ರಲ್ಲಿ ಮದಿಪು ಎಂಬ ತುಳುಮಾಸಿಕ (ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಕಟಣೆ )ಕ್ಕೆ ಕಳುಹಿಸಲ್ಪಟ್ಟಿತ್ತಾದರೂ ಅದು ಅಲ್ಲಿ ಕಾಣೆಯಾಗಿತ್ತು. ಈ ಲೇಖನ ಪ್ರಕಟವಾಗಲಿಲ್ಲ.
ಕೋಶಾರ ಜನಾಂಗದ ಅಸ್ತಿತ್ವ
ಇಂದಿನ ಕೇರಳ ರಾಜ್ಯದ ದಕ್ಷಿಣಾರ್ಧ ಮತ್ತು ತಮಿಳ್ನಾಡಿನ ಪಶ್ಛಿಮದ ಕೆಲವು ಪ್ರದೇಶವನ್ನೊಳಗೊಂಡ ಹಿಂದಿನ ಚೇರ ರಾಜ್ಯ , ತಮಿಳ್ನಾಡಿನ ಹಿಂದಿನ ಚೋಳ ಮಂಡಲ ಪಲ್ಲವ ನಾಡು, ಪಾಂಡ್ಯ ನಾಡುಗಳನ್ನೊಳಗೊಂಡ ಭೂ ಭಾಗವು ತಮಿಳ ಭಾಷಿಕ ಅಧಿಪತ್ಯ ಮತ್ತು ಜನದಟ್ಟಣೆಯಿದ್ದ ಪ್ರದೇಶವಾಗಿತ್ತು. ಆದ್ದರಿಂದ ಈ ಭೂಭಾಗವನ್ನು `ತಮಿಳಕ’ ಎನ್ನುತ್ತಿದ್ದರು. ತಮಿಳ್ ಭಾಷೆಗೆ ಒಳ (ಆಕ) ಪಟ್ಟ ಭೂಭಾಗವೇ `ತಮಿಳಕ’ವಾಗಿದೆ. ಈ ತಮಿಳಕದ ಕಾಲದಲ್ಲಿ ಮಲೆಯಾಳ ಭಾಷೆ ಎಂಬುದಿರಲಿಲ್ಲ ಕ್ರಿ.ಶ ಏಳನೇ ಶತಮಾನದಲ್ಲಿ ಜನಿಸಿದ್ದ ಪ್ರಸಿದ್ಧ ಅದ್ವೈತ ಸ್ಥಾಪಕಾಚಾರ್ಯರಾದ ಕೇರಳದ ಬಂಬೂದಿರಿ ವರ್ಗಕ್ಕೆ ಸೇರಿದ ಆದಿ ಶಂಕರಾಚಾರ್ಯ ತಮ್ಮ ಸೌಂದರ್ಯ ಲಹರಿ ಕೃತಿಯಲ್ಲಿ ತಮ್ಮನ್ನು ದ್ರಾವಿಡಕವಿ ಎಂದಿದ್ದಾರೆ “ದ್ರಾವಿಡ ‘ ಎಂದರೆ ತಮಿಳು ಭಾಷೆಯೆಂದು ಅರ್ಥ. ಅಂದರೆ ಶಂಕರಾಚಾರ್ಯರ ಕಾಲದಲ್ಲಿ ಮಲೆಯಾಳವಿದ್ದಿಲ್ಲವೆನ್ನಬಹುದು. ಹೆಚ್ಚು ಕಮ್ಮಿ ಹತ್ತನೆಯ ಶತಮಾನದವರೆಗೂ ತಮಿಳಿನಿಂದ ಮಲಯಾಳ ಪ್ರತ್ಯೇಕಗೊಂಡಿಲ್ಲವೆಂದು ಭಾಷಾ ಶಾಸ್ತ್ರಜ್ಞರ ಅಭಿಪ್ರಾಯ. ಅಂದರೆ ಅದುವರಗೆ ಕೇರಳದ ಹೆಚ್ಚಿನ ಭಾಗವು ತಮಿಳಕಕ್ಕೆ ಸೇರಿತ್ತು ಎನ್ನಬಹುದು. ಅದರೆ ತಮಿಳಕದೊಳಗೆ ತುಳುನಾಡು ಸೇರಿರಲಿಲ್ಲ . ತಮಿಳಕದ ನೆರೆಯಲ್ಲಿದ್ದ ತುಳುನಾಡು ವೀರರ ನಾಡಾಗಿತ್ತು. ತುಳುನಾಡಿನ ಬ್ರಾಹ್ಮಣರನ್ನು ಹೊರತುಪಡಿಸಿ ತುಳುನಾಡಿನ ಎಲ್ಲ ಮೇಲು-ಕೀಳು ಜಾತಿಯ ಜನರು ವೀರ ಯೋಧರ ಕುಟುಂಬಸ್ಥರಾಗಿದ್ದರು. ಅಂದು ತುಳುನಾಡಿನಲ್ಲಿ ವೀರರನ್ನು ರೂಪಿಸಿವ ‘ಯೋಧ ತರಬೇತಿ ಕೇಂದ್ರಗಳು’ ಇದ್ದಿರಬೇಕು. ಮಾಸಾಧಿಕ ಜೈನರಾದ ಬಂಟ -ಜೈನ ಬಾರಗರ ಆರಾಧ್ಯ ದೇವತೆಯಾಗಿದ್ದ ಯಕ್ಷಬ್ರಹ್ಮ ಅಥವಾ ಕುದುರೆ ಏರಿದ ಬ್ರಹ್ಮ ದೇವತೆಯು ಗರಡಿ ದೇವತೆಯಾಗಿದೆ. ಗರಡಿ ಎಂಬುದು ಯೋಧರನ್ನು ತರಬೇತಿಗೊಳಿಸಿವ ವ್ಯಾಯಮ ಶಾಲೆಯಾಗಿದೆ. ತುಳುವಿನಲ್ಲಿ ‘ಕಳೇರಿ’ ಎಂದೂ ಮಲೆಯಾಳದಲ್ಲಿ ಕಳರಿ ಎಂದೂ ಕರೆಯುತ್ತಾರೆ. ಮುಗ್ಗೇರ್ಲ್ ದೈವದ ಗರಡಿ ಸ್ಥಾನಗಳಲ್ಲಿ ಮಾಸಾದಿಕ ದೇವತೆ ಅಥವಾ ಬ್ರಹ್ಮವು ಆರಾಧ್ಯ ಸ್ಥಾನದಲ್ಲಿದೆ .ಮಾಸಾದಿಕ ಜೈನರಾದ ಬಾರಗರಿಗೆ ಅಥಾವ ಯೋಧ ಕಾರ್ಯದ ಗುರುದೇವತೆಯಾಗಿದೆಯಷ್ಟೆ ಹೊರತು, ಅವರ ಸಮುದಾಯದ ದೇವತೆಯಾಗಿರದು. ತುಳುನಾಡಿನಾದ್ಯಂತ ಈ ಯಕ್ಷಬ್ರಹ್ಮದ ಅಥವಾ ಮಾಸಾದಿಕ ದೇವತೆ (ಬಹುಶ: ಇದನ್ನೇ ‘ವೀರಭದ್ರ’ವೆನ್ನುತ್ತಿದ್ದಾರೋ ಏನೋ ? ) ಯ ಗುಡಿ ಗರಡಿ ಕಂಬಗಳು ಧಾರಾಳವಿದೆ. ಈ ಆರಾಧನೆಯು ಪೂರ್ವದಿಂದಲೇ ಇದ್ದುದರಿಂದ ತುಳುನಾಡಿನಲ್ಲಿ ಯೋಧ ತರಬೇತಿ ಕೇಂದ್ರವು ಎರಡು ಸಾವಿರ ವರುಷಗಳಿಗಿಂತಲೂ ಹಿಂದೆಯೇ ಇದ್ದಿರಬೇಕು. ಅದರ ಫಲವಾಗಿ ಸಾಕಷ್ಟು ಯೋಧರು ಅಥಾವ ವೀರರು ತುಳುನಾಡಿನಲ್ಲಿ ಇದ್ದರು. ಇಂತಹ ತುಳುನಾಡಿನ ವೀರರಲ್ಲಿ ಮಡವರು, ಮುಗೇರರು, ಬಾರಗರು ಮತ್ತು ಕೋಶಾರ ಸಮುದಾಯಗಳು ಸೇರಿರಬೇಕು. ಆದರೆ ಬಾರಗರು `ರಾಟ್ಟ’ -`ರಟ್ಟ’ರಾದ ನಂತರ ತಮಿಳ್ನಾಡಿಗೆ ಹೋದದ್ದರಿಂದ ಅಲ್ಲಿ ನಟ್ಟವರ್ ಜಾತಿಯಾಗಿ ಪರಿಚಯಿಸಲ್ಪಟ್ಟಿದ್ದರು. ಅಂದರೆ ಈ ಬಾರಗರು ತುಳುನಾಡಿನಿಂದ ನೇರವಾಗಿ ಹೋದವರಲ್ಲ. ಅದೇ ರೀತಿ ಮೆಡವರ್ -ಮಳವರ್ ತುಳುನಾಡಿನಿಂದ ನೇರ ಹೋಗದೆ ಬೇರೆ ಪ್ರದೇಶದಿಂದ `ರಾಟ್ಟ’ರ (ನಟ್ಟವರ್) ಜೊತೆಹೋಗಿರಬೇಕು. ಕೇರಳದ ಆರಂಭದ ಅರಸರಾದ ಚೇರ ದೊರೆಗಳು ಮಡುವರ್ ವಿಭಾಗದಿಂದಾದ `ಚಾಂಟೋರ್’ ಅಥವಾ `ವಿಲ್ಲವರ್’ ಜಾತಿಗೆ ಸೇರಿದವರು ಎಂದು ಎಂದು ಸಂಶೋಧಕರ ಅಭಿಪ್ರಾಯ. ತಮಿಳ್ ಸಾಹಿತ್ಯದಲ್ಲಿ ಚೇರ ಅರಸರು ಚಾಂಟೋರ್ `ಪೆರುಮಕನ್’ (ಚಾಂಟರ ಹಿರಿಯ ಮಗ)ನೆಂದಿದೆ. ‘ಮುಗೇರರು ಕೊಡ ನೇರವಾಗಿ ತುಳನಾಡಿನಿಂದ ತಮಿಳಕಕ್ಕೆ ಹೋದವರಲ್ಲದಿರಬಹುದು. ಆದರೆ ಕೋಶಾರರು ತುಳುನಾಡಿನಿಂದಲೇ ತಮಿಳಕವನ್ನು ಪ್ರವೇಶಿಸಿದ್ದರಿಂದ ಕೋಶಾರರನ್ನು ತುಳನಾಡನ್ ಕೋಶಾರ್ ಎಂದು ತಮಿಳ್ ಪ್ರಾಚೀನ ಕೃತಿಗಳು ಸಾರಿವೆ. ತುಳುನಾಡಿಗೆ ಶಾಶ್ವತವಾದ ಕೀರ್ತಿ ಮತ್ತು ಹಮ್ಮೆಯನ್ನು ತಂದುಕೊಟ್ಟ ಈ ಕೋಶಾರರು ತುಳುನಾಡಿನಲ್ಲಿ ಅದೇ ಹೆಸರಿನಿಂದ ಇಂದು ಯಾಕೆ ಕಾಣುತ್ತಿಲ್ಲವೆಂಬುದು ಆಶ್ಚರ್ಯಕರವಾಗಿದೆ. ಅಂದರೆ ಕೋಶಾರರಿಗೆ ತುಳನಾಡಿನಲ್ಲಿ ಆಶ್ರಯವಿಲ್ಲದೆ ಹೋಯಿತೇ ಅಥವಾ ತುಳುನಾಡಿನ ಯಾವುದೋ ಒಂದು ಜನಾಂಗ ತಮಿಳಕಕ್ಕೆ ಹೋದ ನಂತರ ಅಲ್ಲಿ ಜಾತಿಯ ಹೆಸರು ಬದಲಾಯಿಸಿಕೊಂಡು ‘ಕೋಶಾರರೆಂದು’ ಕರೆಸಿಕೊಂಡರೇ ಎಂಬುದು ಸಂಶಯ. ಅಂತು ಕ್ರಿ.ಶ ಪೂರ್ವದ ತಮಿಳ್ ಸಂಗಂ ಕೃತಿಯಲ್ಲಿ ಗಮನಿಸಲ್ಪಟ್ಟ ‘ಕೋಶಾರ’ ರು ತುಳುನಾಡಿನವರಾಗಿ ತಮಿಳಕದಲ್ಲಿ ಆಸ್ತಿತ್ವವನ್ನು ಹೊಂದಿದ್ದಾರೆ ಎನ್ನಬಹುದು.
ಕೋಶಾರರು ತುಳುನಾಡಿನಲ್ಲಿ ಯಾರು..?
ತುಳುನಾಡಿನಲ್ಲಿ ‘ಕೋಶಾರ’ ಪದದ ಹುಟ್ಟಿಗೆ ಯಾವುದೇ ಸೂಚನೆಗಳು ಲಭ್ಯವಿಲ್ಲ. ಇದು ಸಂಸ್ಕ್ರತ ಭಾಷೆಯ ಗರಿಷ್ಟ ಪ್ರಭಾವಕ್ಕೊಳಗಾದ ಔತ್ತರೇಯ ಜನಾಂಗಗಳಿಗೆ ಸೇರಿರಬೇಕು. ಈ ಔತ್ತರೇಯ ಜನಾಂಗಗಳಲ್ಲಿ ಬ್ರಾಹ್ಮಣರು ಸಮೇತ ಬೇರ ಬೇರೆ ವಿಭಾಗದ ಜನವರ್ಗಗಳು ಸಾವಿರಾರು ವರ್ಷಗಳ ಪೂರ್ವದಲ್ಲಿಯೇ ತುಳುನಾಡಿಗೆ ಬಂದಿರಲು ಸಾಧ್ಯವಿದೆ. ಉತ್ತರ ಭಾರತದಿಂದ ದಕ್ಷಿಣದತ್ತ ವಲಸೆ ಬಂದ ಪ್ರಾಚಿನ ಭಾರತೀಯರ ಮಾಹಿತಿಗಳು ಪುರಾಣಗಳಲ್ಲಿ ಕಥಾರೂಪದಲ್ಲಿ ಬೇಕಾದಷ್ಷು ದೊರಕುತ್ತವೆ ಹಾಗೇ ಬಂದವರು ತುಳು ಮತ್ತು ಇತರ ಭಾಷೆಗಳ ಪದಗಳನ್ನು ಬಳಸುವುದು ಸಹಜ.
ಕನ್ನಡ, ಮಲಯಾಳ, ತಮಿಳಿನಲ್ಲಿ `ಮಳೆ’ `ಮಳ’ ಎಂದರೆ ಈ ಭಾಷೆಗಳ ಸಹೋದರಿ ಭಾಷೆಯಾದ ತುಳುವಿನಲ್ಲಿ `ಮರೆ’ ಎಂದು ಪ್ರಯೋಗದಲ್ಲಿದ್ದರೂ ಬಳಕೆಯಲ್ಲಿ ಮಳೆ ಎಂಬುದರ ಬದಲು `ಬರ್ಸ’ ಎನ್ನುತ್ತಾರೆ. ಈ ಬರ್ಸ ಎಂಬುದು ತುಳುವಿಗೆ ಪ್ರಕ್ಷಿಪ್ತವಾದುದು. ಇದು ಸಂಸ್ಕೃತದಲ್ಲಿ `ವರ್ಷ’ ಎನ್ನುತ್ತಾರೆ. ಸಂಸ್ಕೃತದ ಯಾವುದೋ ಒಂದು ಜ್ಞಾತಿ ಭಾಷೆಯಿಂದ ವರ್ಷದ ತದ್ಬವ ರೂಪವಾದ ಬರ್ಸ ತುಳುವಿನಲ್ಲಿ ಪ್ರಯೋಗದಲ್ಲಿ ಬಂದಿದೆ. ಹಿಂದಿಯಲ್ಲಿ ಮಳೆಯನ್ನು `ಬರಸ, ಬರ್ಸಾತ್’ ಕೊಂಕಣಿಯಲ್ಲಿ `ಬರಿಸ್’ ಬಂಗಾಲಿಯಲ್ಲಿ `ಬರಸ್’ ಪ್ರಯೋಗಗಳನ್ನು ಗಮನಿಸಬಹುದು. ತುಳುವರು ಮಳೆಗಾಲವನ್ನು `ಮರೆಗಲ’ `ಮರೆಕಾಲ’ (ಮರ್ಯಲ) ಎಂದು ಕರೆಯುವುದನ್ನು ಗಮನಿಸಿದಾಗ ಮರೆ ಎಂಬುದಾಗಿದ್ದು ಮರೆಗಾಲ ಶಬ್ಧ ಹುಟ್ಟಿದೆ. ಹಾಗಿದ್ದರೂ ಮಳೆಯನ್ನು `ಮರೆ’ ಎಂದು ಕರೆಯದೆ ತುಳು ಜನರು `ಬರ್ಸ’ (ಬರ್ಸೊ) ಎನ್ನುವುದರಿಂದ ತುಳುವರಲ್ಲಿ ಆರಂಭ ಕಾಲದಲ್ಲಿಯೇ ಔತ್ತರೇಯ
ಸಂಬಂಧವು ಪ್ರಗಾಡವಾಗಿತ್ತು ಎನ್ನಬಹುದು. ತುಳುಭಾಷೆಯು ಮಧ್ಯಪ್ರದೇಶದ ಕೆಲವು ಬುಡಕಟ್ಟುಗಳ ಮಧ್ಯ ದ್ರಾವಿಡ ಭಾಷೆಗಳೊಂದಿಗೆ ನಿಕಟ ಹೋಲಿಕೆಗಳನ್ನು ಹೊಂದಿದೆ ಎಂದು ಕೆಲವು ಭಾಷಾ ಶಾಸ್ತ್ರಜ್ಞರ ಅಭಿಪ್ರಾಯವನ್ನು ಗಮನಿಸಬಹುದು.
25 ಪೈಸೆಯ ಒಂದು ನಾಣ್ಯವನ್ನು ಅಂದರೆ ಹಿಂದಿನ `ಕಾಲು ರೂಪಾಯಿ’, (ನಾಲ್ಕಾಣೆ) ನಾಣ್ಯವನ್ನು ತುಳುವಿನಲ್ಲಿ `ಒಂಜಿ ಪಾವಲಿ’ (ಒಂದು ಪಾವಲಿ ) ಎನ್ನುತ್ತಾರೆ. ಇಲ್ಲಿ ಪಾವಲಿ ಶಬ್ಧವು ಹಿಂದಿಯ ಪಾವ್ ಪದವನ್ನು ನೆನಪಿಸುತ್ತದೆ .ಹಿಂದಿ ಮುಂತಾದ ಔತ್ತರೇಯ ಭಾಷೆಯಲ್ಲಿ `ಪಾವ್’ ಎಂದರೆ `ಕಾಲು’ ಎಂದರ್ಥವಿದೆ. ಅದೇ ರೀತಿ ತುಳುವರ ಅಳತೆಯಲ್ಲಿ “ಪಾವು ” ಎಂಬ ಅಳತೆಯ ಪಾತ್ರವು ‘ಕಾಲುಸೇರು’ ಎಂಬರ್ಥವನ್ನು ಬಿಂಬಿಸುತ್ತದೆ. ತುಳುವರ ಭೂತಾರಾಧನೆಯ ಸಂದರ್ಭದಲ್ಲಿ ಬಳಸುವ ಬಿಳಿಯ ಬಣ್ಣ ಹೆಚ್ಚಾಗಿ ಬೆಳ್ತಕ್ಕಿ ಹುಡಿಯನ್ನು `ಸಪೇತ್’ ಎಂದು ತುಳುವಿನಲ್ಲಿ ಹೇಳುತ್ತಾರೆ. ಸಪೇತ್ ಎಂಬುದು ಹಿಂದಿ ಸಮೇತ ಉತ್ತರದ ಭಾಷೆಗಳಲ್ಲಿ ಬಿಳಿಯ ಬಣ್ಣವನ್ನು ಸೂಚಿಸುತ್ತದೆ. ಇಂತಹ ಔತ್ತರೇಯ ಭಾಷೆಗಳ ಪದಗಳು ತುಳು ಭಾಷೆಯಲ್ಲಿ ಸ್ಥಾನವನ್ನು ಆರಂಭ ಕಾಲದಲ್ಲಿಯೇ ಹಿಡಿದಿರುವುದರಿಂದ ತುಳು ಭಾಷೆಯನ್ನು ಸೃಷ್ಟಿಸಿದ ಜನರೇ ಉತ್ತರದವರು ಎನ್ನಬಹುದು. ಕೆಲವು ಪದಗಳ ಆಧಾರದಿಂದಷ್ಟೆ ಒಂದು ಭಾಷೆಯ ಸ್ವರೂಪ ನಿರ್ಧಾರ ಮಾಡುವಂತಿಲ್ಲ ಎಂದಿದ್ದರೂ ಅಂಶಿಕವಾಗಿ ಒಪ್ಪಿಕೊಳ್ಳಬಹುದು. ಈ ಔತ್ತರೇಯ ಜನಾಂಗಗಳಲ್ಲಿ ಹಲವು ವಿಭಾಗಗಳ ಜನರು ಎರಡು ಸಾವಿರ ವರುಷಗಳಿಗಿಂತಲೂ ಪೂರ್ವದಲ್ಲಿ ತಪುಪಿರಬಹುದು.
ಹೀಗೆ ಉತ್ತರ ಭಾರತದಿಂದ ತುಳುನಾಡಿಗೆ ಬಂದಂತಹ ಸಮುದಾಯಗಳಲ್ಲಿ ಬ್ರಾಹ್ಮಣರು-ಮುಗ್ಗೇರರು, ಬಾರಗ-ಮಡವರ್ ಅಲ್ಲದೆ ಕೋಶಾರರೂ ಬಂದಿರಲೇಬೇಕು ಎಂದು ಊಹಿಸಲು ಎಡೆಯಿದೆ, ಅದನ್ನು ಮುಂದೆ ಗಮನಿಸುವೆವು.
`ಕೋಶಾರ’ ಎಂಬ ನಾಮಪದದ ನಿಷ್ಪತ್ತಿ ಹೇಗಾಗಿರಬಹುದು ಗಮನಿಸಿಸುವ. ಸಂಸ್ಕೃತ ಮತ್ತು ಸಂಸ್ಕೃತ ಭಾಷೆಯ ಜ್ಞಾತಿ ಭಾಷೆಗಳ ಸಂಬಂಧ ಪಡೆದ ತುಳು ಭಾಷೆಗೆ ಕೋಶಾರ ಎಂಬ ಆ ಪದವು ಔತ್ತರೇಯ ಭಾಷೆಗಳಿಂದಲೇ ಬಂದಿರಬಹುದು. ಸಂಸ್ಕೃತ ಜನ್ಯ ಕೋಶದಿಂದ ಕೋಶಾರ ನಿಷ್ಪತ್ತಿಯಾಗಿರಬಹುದು. ಕೋಶ ಎಂದರೆ ದವಸ – ಧಾನ್ಯ – ಹಣ – ಆಭರಣಾದಿ ಅಮೂಲ್ಯ ವಸ್ತುಗಳನ್ನು ಸುರಕ್ಷಿತವಾಗಿಡುವ ಪಾತ್ರೆ, ಕರಂಡ, ಕಪಾಟು ಅಥವಾ ಅಲಮಾರಿಯಾಗಿರಬಹುದು. ಇಂತಹ ಕೋಶಗಳನ್ನು ತಯಾರಿಸುವ ಮಂದಿ ಅಥವಾ ಕೋಶವನ್ನು ರಕ್ಷಿಸುವವರು ವೀರರೇ ಆಗಿರುವುದರಿಂದ ಕೋಶಾರರು ವೀರರಾಗಿರಬಹುದು. ಈ ಕೋಶಾರರು ತುಳುನಾಡಿನ ಬಾರಗರ ಬಾರಿಗೆ (ಧಾನ್ಯಕೋಶ) ಗಳ ಕಾವಲುಗಾರರಾಗಿಯೂ ಇದ್ದಿರಬೇಕು.
ಕ್ರಿ.ಪೂ ಮೂರನೆ ಶತಮಾನದಿಂದ ಕ್ರಿ.ಶ ನಾಲ್ಕನೇ ಶತಮಾನದವರಗೆ ಅಸ್ತಿತ್ವದಲ್ಲಿದ್ದ ತಮಿಳು ಸಾಹಿತಿಗಳ ಪರಂಪರಾಗತ ಸಾಹಿತ್ಯಿಕ ಸಂಘಟನೆಯನ್ನು `ಸಂಗಂ ಸಾಹಿತ್ಯ’
ಎನ್ನುತ್ತಾರೆ. ಈ ಕಾಲವನ್ನು `ಸಂಗಕಾಲ’ ವೆನ್ನುತ್ತಾರೆ. ಈ ಸಂಗಕಾಲದ ಸಾಹಿತ್ಯವನ್ನು ಪ್ರತ್ಯೇಕವಗಿ ಕ್ರಿ.ಶ ಒಂಭತ್ತನೇ ಶತಮಾನದ ಪಲ್ಲವ ಅರಸ ನಂದಿವರ್ಮನ ಸಮಕಾಲೀನವಾದ ಭಾರತಂಪ್ಪಾಡಿಯ ಪೆರುಂತೇವನ್ನಾರ್ ಎಂಬ ಕವಿಯು, ತನ್ನ `ಎಟ್ಟುತ್ತೊಕೈ’ ಎಂಬ ಎಂಟು ಅಧ್ಯಾಯಗಳ ಕೃತಿಯಲ್ಲಿ ಸಮಾಹರಿಸಿರುತ್ತಾನೆ . ಈ ಸಂಗಂ (ಸಂಘಂ ) ಕೃತಿಗಳಲ್ಲಿ ಕೋಶಾರರ ಬಗ್ಗೆ ಪರಾಮರ್ಶೆ ಇದೆ .
ತಮಿಳ್ ಸಂಗಕಾಲದ `ಆಗನಾನ್ನೂರ್’ `ಪುರಾನಾನ್ನೂರ್’ `ಪಡಿಟ್ಟುಪತ್ತ್’ `ತೊಳಕಾಪ್ಪಿಯಂ’ ಮುಂತಾದ ಸಂಗ ಸಾಹಿತ್ಯ ಕೃತಿಗಳಲ್ಲಿ `ಕೋಶಾರ’ರೆಂಬ ಜನಸಮುದಾಯವು
`ತುಳುನಾಡ’ವರೆಂದು ಉಲ್ಲೇಖಿಸಿರುವುದು ಗಮನೀಯ.
ತಮಿಳಕದಲ್ಲಿ ನಾಲ್ಕು ಭಾಷೆಯನ್ನಾಡುವ ( ನಾಲ್ಮೊಳಿ ) ಪ್ರವೀಣರೂ ಸತ್ಯಸಂಧರೂ, ಯುದ್ದವೀರರರೂ ಆದ ಕೋಶಾರರು ತುಳುನಾಡವರು ಎಂದು ಆಗನಾನ್ನೂರು ಪಾಟ್ಟ್ ಎಂಬ ಸಂಗ ಕೃತಿಯಲ್ಲಿ ಸುತ್ತಿಸಿದೆ. ತಮಿಳಕದಲ್ಲಿ ಮೆರೆದ ತುಳುನಾಡನ್ ಕೋಶಾರರು ತಮಿಳಕದ ಭಾಗವಾದ ಕೊಂಗುನಾಡಲ್ಲಿ ಸ್ಥಿರವಾಗಿ ವಾಸಿಸುತ್ತಿದ್ದ ಕುರಿತು ಅದೇ ಅಗನಾನ್ನೂರು ಪಾಟ್ಟ್ ಕೃತಿಯಲ್ಲಿ ಸೂಚಿಸಿದೆ. ಕೊಂಗುನಾಡು ಕರ್ನಾಟಕದ ಹಾಸನ, ಕೊಡಗು ಜಿಲ್ಲೆ, ಕೇರಳದ ಪಾಲಕ್ಕಾಡ್, ವಯನಾಡ್ ಮತ್ತು ತಮಿಳನ್ನಾಡಿನ ಸೇಲಂ ಕೊಯಂಬತ್ತೂರುಗಳನ್ನೊಳಗೊಂಡ ಪ್ರದೇಶವಗಿದೆ. ಹೆಚ್ಚು-ಕಮ್ಮಿ ಕ್ರಿ.ಶ ಒಂಭತ್ತನೇ ಶತಮಾನದಿಂದ ಕೊಂಗುನಾಡು ವಿಭಜಿಸಲ್ಪಟ್ಟು ಕೊಂಗುನಾಡಿನ ಪೂರ್ವದ ಬಯಲು ನಾಡು ತಮಿಳಕದ ಭಾಗವಾಗಿಯೂ ಕೊಂಗುನಾಡಿನ ಪಶ್ಚಿಮಾರ್ಧವಾದ ಮಲೆ ಪ್ರದೇಶವು ಮಲೆಯಾಳನಾಡಾಗಿ ಪರಿವರ್ತಿಸಿದೆ . ಮುಂದೆ ಈ ಮಲೆನಾಡಿನ ತಮಿಳ ಭಾಷಾಪ್ರಭೇದವು ಸೇರಿದೆ. ಕೊಂಗುನಾಡು ಆರಂಭತಃ ರಾಟ್ಟರ(ಬಾರಗ) ನಂತರ ಗಂಗ ಅರಸರ ವಶವಿತ್ತು. ಈ ಕೊಂಗುನಾಡಿನಿಂದ ತಮಿಳಕದ ಇತರ ಭಾಗಗಳಾದ ಪಾಂಡ್ಯ-ಚೇರ-ಜೋಳ ಮುಂತಾದ ಪ್ರದೇಶಗಳಿಗೆ ಕೋಶಾರರ ಸಂತತಿಯ ವಾಸ್ತವ್ಯ ಹೋಗಿದೆ. ಈ ಕುರಿತು ಇಳಂಗೋವಡಿಗಳ ಚಿಲಪ್ಪದಿಕ್ಕಾರ ಎಂಬ ತಮಿಳನ ಅಮರ ಕಾವ್ಯದಲ್ಲಿ ಕಾಣಬಹುದು. ಕ್ರಿ.ಶ ಒಂದನೆ ಶತಮಾನದಲ್ಲಿಯೇ ಕೋಶಾರರು ತುಳುನಾಡಿನಿಂದ ಕೊಂಗುನಾಡಿಗೆ ವಲಸೆ ಹೋಗಿರಬಹುದೆಂದು ಅಭಿಪ್ರಾಯ.
ಕೊಂಗುನಾಡಿನಲ್ಲಿ ಕೋಶಾರರು ತುಳುನಾಡಿನ ಸೀಮೆ ಅಥವಾ ಬಳಿಗಳಿಗೆ ತುಲ್ಯವಾದ ವೇಳಗಳ ಮುಖ್ಯಸ್ಥರಾಗಿ ತಮಿಳ್ ವೇಳನ್ರಾಗಿ ಭವಿಸಿದರು. ತುಳುನಾಡಿನ `ಬಳಿ'(ಸೀಮೆ )ಯ ಮುಖಂಡ ಬಲ್ಲಾಳ ಎನಿಸಿದರೆ, ಕೇರಳದಲ್ಲಿ ಪೆರುಮಾಳ್ ಆಗುತ್ತಾನೆ. ಆದರೆ ತಮಿಳನಾಡಿನಲ್ಲಿ ಬಲ್ಲಾಳ ಅಥಾವ ಪೆರುಮಾಳರು `ವೇಳನ್’ ರಾಗುತ್ತಾರೆ. ಹೀಗೆ ತಮಿಳಕದಲ್ಲಿ ವೇಳನ್ ರಾಗಿ ಉನ್ನತ ಸಮುದಾಯವಾಗಿ ಭವಿಸಿದ ಕೋಶಾರರು ಪ್ರವೃತಿಯಲ್ಲಿ ವೀರರಾಗಿದ್ದರು. ವೃತ್ತಿಯಲ್ಲಿ ಮಣ್ಣಿನ ಮಡಕೆ (ಬಹುಷಃ ಕೋಶ )ಗಳನ್ನು ಮಾಡುವ `ಕುಂಬಾರ’ ಕುಲದವರಾಗಿದ್ದಾರೆಂದು ‘ಪುರಂನಾನ್ನೂರು ಪಾಟ್ಟ್ ‘ ಎಂಬ ತಮಿಳ ಸಂಗ ಸಾಹಿತ್ಯ ಕೃತಿಯ 256ನೇ ಚರಣದಲ್ಲಿ ಉಲ್ಲೇಖಿಸಿದೆ . ಸತ್ತ ವೀರನೊಬ್ಬನ ಮಡದಿಯು ಒಬ್ಬ ಕೋಶಾರನಲ್ಲಿ `ಮುದುಮಕ್ಕತ್ತಾಳಿ’ಯನ್ನು ರಚಿಸಿಕೊಡಬೇಕೆಂದು ಮೇಲಿನ ಕೃತಿಯಲ್ಲಿ ಹೇಳಿದೆ. ಮುದುಂ ಅಂದರೆ `ದೊಡ್ಡ’ದು ಅಕ್ಕ ಎಂದರೆ `ಗಾತ್ರ’ ತಾಳಿ ಎಂದರೆ `ಪಾತ್ರೆ-ಕೋಶ’ (ಥಾಲಿ). ಒಟ್ಟರ್ಥದಲ್ಲಿ ದೊಡ್ಡದಾದ ಪಾತ್ರೆಯೆನ್ನಬಹುದು. ಸತ್ತ ಗಂಡನ ಅಸ್ಥಿ ಸಂಚಯನ ನಡೆಸಿ ಹೂಲಿಡಲು ತಕ್ಕುದಾದ ಒಂದು ದೊಡ್ಡ ಪಾತ್ರೆಯನ್ನು ರಚಿಸಿಕೊಡುವಂತೆ ಬೇಡಿಕೊಂಡಳೆಂಬ ವಿವರ ಮೇಲಿನ ಸಂಗಂ ಕೃತಿಯಲ್ಲಿ ಸೂಚಿಸಲ್ಪಟ್ಟಿದೆ. ಇದರಿಂದ ಅರ್ಥವಾಗುವುದೇನೆಂದರೆ ಕೋಶಾರರು ಕುಂಬಾರ ಸಮುದಾಯಕ್ಕೆ ಸೇರಿದವರೆಂದು. ಮಣ್ಣಿನಿಂದ ಮಡಿಕೆಗಳನ್ನು ತಯಾರಿಸುವ ಕುಲಾಲ ಕೆಲಸದ ಕುಂಬಾರರು ತುಳುನಾಡಿನಲ್ಲಿ ಸಾವಿರಾರು ವರುಷಗಳ ಹಿಂದಿನಿಂದಲೇ ವಾಸಿಸುತ್ತಾ ಬಂದವರಾಗಿದ್ದಾರೆ. ಈ ಕುಂಬಾರರನ್ನು ತುಳುವರು `ಮೂಲ್ಯ’ರೆನ್ನುತ್ತಾರೆ. ಮಲೆಯಾಳ ಭಾಷೆಯನ್ನಾಡುವ ಕುಂಬಾರರನ್ನು ‘ಕೊಯೋರ್ (ಬಹುವಚನ )`ಕೊಯೋನ್’ (ಏಕವಚನ ) `ಕೊಶೋರ್’ (ಬಹುವಚನ )ರೆಂದೂ ಕರೆಯುತ್ತಾರೆ. ತಿರುವಾಂಕ್ಕೂರು ಪ್ರದೇಶದ ಮಲಿಯಾಳಿ ಕುಂಬಾರರನ್ನು `ಕುಶವನ್’ (ಏಕವಚನ) `ಕುಶವರ್’ (ಬಹುವಚನ )ರೆಂದೂ ಕರೆಯುತ್ತಾರೆ.
ಈ ಮೇಲಿನ ಮಾಹಿತಿಗಳನ್ನಾಧರಿಸಿ ಚರ್ಚಿಸುವುದಾದರೆ ತಮಿಳ್ಮಾಡಿನ ಕೋಶರ, ಕೋಶಾರ್ ಜನಾಂಗವು ಕುಂಬಾರ ಜಾತಿಯಾಗಿತ್ತೆಂದು ಗಟ್ಟಿಗೊಳಿಸಬಹುದು. ವೀರಯೋಧರಾಗಿ ಮತ್ತು ಮಣ್ಣಿನ ಮಡಿಕೆಗಳನ್ನು ತಯಾರಿಸುವ ಹಾಗೂ ಮಾರಾಟ ಮಾಡುವ ಕುಲವೃತ್ತಿಯೊಂದಿಗೆ ತುಳುನಾಡಿನ ಕೋಶಾರರು ತುಳುನಾಡಿನ ಸಮೀಪದ ಸುಬ್ರಹ್ಮಣ್ಯದ ಘಾಟಿದಾರಿಯಲ್ಲಾಗಿ , ಕೊಡಗು ಪ್ರದೇಶದ ಮುಖಾಂತರ ‘ಕೊಂಗುನಾಡು’ ತಲುಪಿರಬೇಕು. ಇವರು ಶಾತವಾಹನ ಅರಸರ ಕಾಲದಲ್ಲಿ (ಆಂದರೆ ಕ್ರಿ.ಪೂ ಎರಡನೇ ಶತಮಾನದಲ್ಲಿ ) ಅವರ ಸೈನ್ಯದಲ್ಲಿಯೂ ದುಡಿದಿರಬೇಕು. ಶಾತವಾಹನರ ಕಾಲದಲ್ಲಿಯೇ ತುಳುನಾಡಿನ ಬಾರಗರು ಸೈನಿಕರಾಗಿ ಸೈನ್ಯದ ಮುಖಂಡರಾಗಿ `ಭಟಾರಕ’ (ಭಟಾರಿಕ ) ಅಥಾವ `ಭಟಾರ’ (ಅರ್ವಾಚೀನ ರೂಪ ಭಂಡಾರಿ) ಬೆಳಕಿಗೆ ಬಂದಿರಬೇಕು. ಈ ಭಟಾರಿಗಳಿಗೆ `ನಾಡು’ (ನಾಟ್ಟ) ಗಳ ಒಡೆತನ ದೊರೆತು `ನಾಡವರು’ `ನಾಟ್ಟವರ್’ (ನಟ್ಟವರ ನಟ್ಟ )ರಾದುದು. ನಾಡು ಶಬ್ಧದ ಸಂಸ್ಕೃತೀರಿಕರಣವಾದಾಗ `ನಾಡು’ ಎಂಬುದು ಪ್ರಾಕೃತದಲ್ಲಿ `ರಾಟ’ ಆಗಿಯೂ ಸಂಸ್ಕೃತದಲ್ಲಿ ರಾಷ್ಟ್ರವಾಗಿಯೂ ಪರಿವರ್ತಿಸಲ್ಪಟ್ಟು ರಾಷ್ಟ್ರಕ, ರಾಷ್ಟ್ರಕೂಟ, ರಾಟ್ಟರ್ (ರಟ್ಟರ್-ರಟ-ಲಾಟ-ಲಾತ ) ನಾಮಾಂತರಗಳು ಸೇರಿತು.
ಹೀಗೆ ಶಾತವಾಹನರ ಸೇವೆಯಲ್ಲಿ ಬಾರಗರು ಭಟಾರಕರಾದಾಗ ಭಟರಾಗಿ ತುಳುನಾಡಿನ ಮೂಲ್ಯ ಯಾನೆ ಕುಂಬಾರರು ಜೊತೆಗಾದರು. ಆಂಧ್ರದ ಗೋದಾವರಿ ತೀರದಲ್ಲಿರುವ ಶಾತವಾಹನ ಸಾಮ್ರಾಟರ ರಾಜಧಾನಿಯತ್ತ ತುಳುನಾಡಿನ ಎಷ್ಟೋ ಸಮುದಾಯಗಳು ಹೋಗಿರಲು ಸಾಧ್ಯವಿದೆ. ವಿಜಯ ನಗರ ಸಾಮ್ರಾಜ್ಯದ ದೊರೆಗಳಾದ “ತುಳುವ” ವಂಶದವರು ಮತ್ತು ಸಾಲುವ ವಂಶದವರು ಬಹುಷಃ ಪೂರ್ವದಲ್ಲಿ ತುಳುನಾಡಿನಿಂದ ಆ ಕಡೆ ಹೋಗಿ ನಲೆಸಿದವರಾಗಿರಬೇಕು. ತುಳುನಾಡಿನ ಬಾರಗ (ಬಂಟ) ಬೈದ್ಯ-ಬಿಲ್ಲವರ ಕುಂಬಾರರ -ಗುರು ಮನೆಗಳಲ್ಲಿರುವ ‘ತಿರುಪತಿ’ ವೆಂಕಟರಮಣನ ಮುಡಿಪು ಆಂಧ್ರದಲ್ಲಿ ಪೂರ್ವದಲ್ಲಿದ್ದ ಸಂಬಂಧವನ್ನು ಸೂಚಿಸುತ್ತದೆ . (ಬೈದ್ಯ-ಬಿಲ್ಲವರು ತಿರುಪತಿಯ ಕಾಳ ಬೈರವ ದೇವರಿಗೆ ಮುಡಿಪು ಕಟ್ಟುತ್ತಾರೆ) ಬಾರಗರ ಒಕ್ಕಲುಗಳಲ್ಲಿ ಮುಡಿಪು ಪೂಜೆ (ಹರಿಸೇವೆ)ಗಾಗಿ ತಿರುಪತಿಯ `ದಾಸ’ರೆಂಬ ಜನಾಂಗದವರನ್ನು ಅಂದಿನ ಕಾಲದಲ್ಲಿ ಕರೆತಂದಿರಬಹುದು. ಈ ಎಲ್ಲ ವಿಷಯಗಳಿಂದ ತಿಳಿಯುವುದೇನೆಂದರೆ ತುಳುನಾಡಿನ ಜನರು ಶಾತವಾಹನರ ಕಾಲದಲ್ಲಿ ಸೈನ್ಯದ ಅಳುಗಳಾಗಿ ಮುಖಂಡರಾಗಿ ಹೋಗಿದ್ದರೆಂದು. ಅಲ್ಲಿಂದ ತಿರುಗಿ ತುಳುನಾಡಿಗೆ ಬಂದ ಕೋಶಾರರು ತಾವು `ಆಂಧ್ರವೀರರು’ ಎಂದು ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದುದರಿಂದ ಮಲೆಯಾಳಿಗಳು ಕೋಶಾರರನ್ನೂ `ಆಂಧ್ರನ್ನಾಯರ್’ ಅಥವ `ಅಂಧಿರನ್ನಾಯರ್’ ಎಂದು ಕರೆದರು. ಕೇರಳದಲ್ಲಿ `ನಾಯರ್’ ಎಂದರೆ ಸೈನಿಕ, ಕಾವಲುಗಾರ, ಅಂಗರಕ್ಷಕ ಎಂಬೀ ಅರ್ಥಗಳಿವೆ. ಕೇರಳದ `ಗೊಲ್ಲ’ ಕುಲದವರನ್ನು ನಾಯರ್ ಎನ್ನುತ್ತಾರೆ. ಅದೇ ರೀತಿ ವೀರರಾದುದರಿಂದ ಕುಂಬಾರ ಕುಲದ ಕೋಶಾರರನ್ನೂ `ಕುಶವನ್ ನಾಯರ್’ (ಕುಶವನ್ ನಾಯನ್ನಾರ್ ) ಅಥವಾ ಆಂಧ್ರ ನಾಯರ್ ಎಂದು ಮಲೆಯಾಳದಲ್ಲಿ ಕರೆದರು.
ತುಳುನಾಡಿನಲ್ಲಿ ಶ್ರೇಷ್ಠ ವೀರರಾಗಿ ಬಾರಗ-ಬಂಟರಿದ್ದುದರಿಂದ ಕುಂಬಾರ ಸಮೇತ ಇತರ ಯಾವುದೇ ಜಾತಿಯನ್ನು ವೀರರೆಂಬರ್ಥದಲ್ಲಿ ತುಳುವರು ಕಂಡಿಲ್ಲವೆನ್ನಬಹುದು. ಮಲೆಯಾಳದ `ಶಬ್ದ ತಾರಾವಳಿ’ ಎಂಬ ನಿಘಂಟಿನಲ್ಲಿ `ಕುಶವನ್’ ಎಂದರೆ ಮಣ್ಣಿನ ಮಡಕೆ ತಯಾರಿಸುವವ ಎಂದಿದೆ. ಮಣ್ಣಿನಿಂದ ತಯಾರಿಸಿದ ಮಡಕೆಗಳ್ನು ಬೆಂಕಿಯಲ್ಲಿ ಕಾಸಿದಾಗ ಅದು `ಓಡು’ ಎನ್ನಿಸುತ್ತದೆ. ಆದ್ದರಿಂದ ತುಳುವಿನಲ್ಲಿ ಮಣ್ಣದಕರ (ಮಣ್ಣಿನ ಪಾತ್ರೆ) ಎನ್ನದೆ ಓಡುದಕರ (ಓಡಿನ ಪಾತ್ರೆ ) ಎನ್ನುತ್ತಾರೆ. ಓ ಒಡು ಪಾತ್ರೆ ಮಾಡುವವರೆಂಬ ಅರ್ಥದಲ್ಲಿ `ಮೂಲ್ಯ ಯಾನೆ ಕುಂಬಾರ ಯಾನೆ ಕುಲಾಲರನ್ನು “ಓಡಾರಿ” ಎಂದೂ ಕರೆಯುತ್ತಾರೆ. ಮಲಯಾಳದಲ್ಲಿ ಓಡನ್ ಎಂಬ ಪ್ರಯೋಗವೂ ಇದೆ. ಹೀಗೆ ಓಡಾರಿ, ಕುಲಾಲ, ಕುಂಬಾರ, ಮೂಲ್ಯರೆಂದೆನಿಸಿದ `ಕೋಶಾರ’ ಅಥವ `ಕೊಶವರ್’ ಅಥವ `ಕೊಯೊರ್’ ಜನಾಂಗದ ಮೂಲ ತುಳುನಾಡು ಆಗಿತ್ತು.
ತಮಿಳ್ ಸಂಗ ಸಾಹಿತ್ಯ ಕೃತಿಗಳಲ್ಲಿಯೂ `ಕೋಶಾರ’ರನ್ನು ಕೆಲವೂಮ್ಮೆ `ಕೋಯೊನ್’ ಎಂದು ಪದ ಬಳಸಿದ್ದು ಕಾಣುತ್ತದೆ. ತಮಿಳ್ನಾಡಿನ `ಕೊಯಂಬತ್ತೂರು’ ಎಂಬ ಪ್ರದೇಶವು ತುಳುನಾಡಿನಿಂದ ಕೊಂಗುನಾಡಿಗೆ ಹೋದ ಕೋಶಾರರ ಕೇಂದ್ರವಂತೆ. ಆ ಪ್ರದೇಶದ ವೇಳ್ ಮುಖಂಡರಾಗಿ ಕೋಶಾರರಿದ್ದರಂತೆ, ಈ ಕೋಶಾರರಿಂದಗಿ ಆ ಊರಿಗೆ ‘ಕೊಯಂಬತ್ತೂರು’ ಎಂಬ ಹೆಸರು ಬಂದಿದೆ ಎಂದು ಸಂಶೋಧಕರ ಅಭಿಪ್ರಾಯ. ಕೋಶಾರರಿಗೆ ಕೋಯೋನ್ ಎಂಬ ಮತ್ತೊಂದು ಹೆಸರಿದೆ. ಈ ಕೊಯೋನ್ಗಳ ಪುತ್ತೂರು `ಕೊಯಂಬತ್ತೂರು’ ಆಯಿತು.
`ಪುತ್ತೂರು’ ಎಂದರೆ ತುಳು-ತಮಿಳ-ಮಲೆಯಾಳ ಭಾಷೆಯಲ್ಲಿ ದೊರಕುವ ಧಾತುವಿನಿಂದ ಚಿಂತಿಸುವುದಾದರೆ ‘ಪುಸತ್ ‘ ಎಂದರ್ಥ. ‘ಸ’ ಕಾರ ಲೋಪವಾಗಿ ಪುತ್ -ಪುದ್ ಎಂಬ ರೂಪಗಳು ತುಳು-ಮಲೆಯಾಳದಲ್ಲಿ ಬಳಕೆಯಲ್ಲಿದೆ. ಹೊಸ ಅಕ್ಕಿ ಊಟಕ್ಕೆ ಪುದ್ ಬಾರ್ (ಪುದುವಾರ್, ಪುದ್ದರ್ )ಎಂದು ತುಳುವಿನಲ್ಲಿ ಹೇಳುತ್ತಾ ಬಂದಿರುತ್ತಾರೆ. ಪುದುಬೆಟ್ಟು (ಹೊಸಬೆಟ್ಟ) ಎಂಬ ಸ್ಥಳ ನಾಮವಿದೆ. ಅದೇ ರೀತಿ ತುಳುನಾಡಿನಲ್ಲಿ ಕೆಲವು ತುಂಡರಸರ ಆಡಳಿತ ಕೇಂದ್ರ ಅಥವ ರಾಜಧಾನಿಯನ್ನು `ಪುತ್ತಿಗೆ’ ಅಥವ `ಪುತ್ತೂರು’ ಎನ್ನುತ್ತಾರೆ .
ಪುತ್ ಎಂದರೆ ಹೊಸ ಎಂದರ್ಥ. ಆದ್ದರಿಂದ ಪುತ್ತೂರು ಎಂದರೆ ಹೊಸ ಊರು ಎಂದಾಗಿದೆ ಅದೇ ರೀತಿ ಪುತ್ಗೆ (ಹೊಸತಾದದ್ದು) ಪುತ್ತಿಗೆ ಆಯಿತು. ಅರಸರು ಹಳೆಯ ರಾಜಧಾನಿಯನ್ನು ತ್ಯಜಿಸಿ ‘ಹೊಸತ’ನ್ನು ರಾಜಧಾನಿಯಾಗಿಸಿದಾಗ `ಪುತ್ತೂರು’ `ಪುತ್ತಿಗೆ’ ಆಗುತ್ತದೆ. ಈ ಪುತ್ತೂರು ಕ್ರಿ.ಶ 16ನೇ ಶತಮಾನಕ್ಕಿಂತ ಹಿಂದೆಯೇ ಬಂಗ ಅರಸರ ರಾಜಧಾನಿಯಾಗಿತ್ತು. ಕಾಸರಗೋಡಿನ ಮೊಗ್ರಾಲ್ ಪುತ್ತೂರು ಮುಗೇರ ಅರಸರ ರಾಜಧಾನಿಯಾಗಿರಬೇಕು. ಉಳ್ಳಾಲದ ಚೌಟ ಅರಸರ ಹೊಸ ರಾಜಧಾನಿ ಮೂಡಬಿದಿರೆಯ `ಪುತ್ತಿಗೆ’ ಎನಿಸಿದೆ. (ಅವರನ್ನೂ ಪುತ್ತಿಗೆಯ ಚೌಟರೆಂದೇ ಕರೆಯುತ್ತಾರೆ) ಬೆಳ್ತಂಗಡಿಯ ಹತ್ತಿರ ಪುತ್ತಿಗೆ ಇದೆ. ಪುತ್ತಿಗೆಯಲ್ಲಿ ಚೌಟರ ಕುಲದೇವತೆ ಸೋಮನಾಥೇಶ್ವರ ದೇವಾಲಯವೂ ಇದೆ. ಆದ್ದರಿಂದ ಬೆಳ್ತಂಗಡಿಯ ಚೌಟರ ಪುತ್ತಿಗೆಯಾಗಿರಬಹುದು. ಉಡುಪಿಯ ಹತ್ತಿರವೂ `ಪುತ್ತೂರು’ ಇದೆ. ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲ್ಲೂಕಿನಲ್ಲಿ ಚೆರುವತ್ತೂರು (ಚಿರು ಪುತ್ತರು ಎಂದರೆ ಸಣ್ಣ ಪುತ್ತೂರು) ಇದೆ.
ಬಹುಷಃ ಬಿಹಾರದ ಹಿಂದಿನ ಮಗಧದ ರಾಜಧಾನಿ ‘ಪಾಟಲೀಪುತ್ರ ‘ಎಂಬುದು ಪುತ್ತೂರು ಎಂಬುದೇ `ಪುತ್ರ’ವಾಗಿರಬಹುದು. ಅದೇ ರೀತಿ ಕೇರಳಪುತ್ರ (ಕೇರಳ ಪುತ್ತೂರು=ವಂಜಿಯಾಗಿರಬಹುದು) ಸತಿಯ ಪುತ್ರ = ಸತಿಯ ಪುತ್ತೂರು ಆಗಿದೆ. ಈ ಸತಿಯ ಪುತ್ರವು ಕೊಂಗುನಾಡಿನ ಭಾಗವಾಗಿದ್ದ `ಅತಿಯಮಾನ್’ ಆಗಿದೆ ಎಂಬ ಅಭಿಪ್ರಾಯವಿದೆ (ತುಳುನಾಡು ಸತಿಯ ಪುತ್ರ ಅಥಾವ ಸತ್ಯ ಪುತ್ರ ಎಂಬುದಕ್ಕೆ ಯಾವುದೇ ಆಧಾರವಿಲ್ಲ) ತಮಿಳ್ನಾಡಿನ ಪೆರಂಬತ್ತೂರು ಪೆರುಂ ಅಂದರೆ ದೊಡ್ಡ ಅಥಾವ ಮಹಾ ಎಂಬರ್ಥದಲ್ಲಿದೆ `ಮಹಾ ಪುತ್ತೂರು’ ಎಂಬುದೇ `ಪೆರುಂಬತೂರು’ ಆಗಿದೆ.
ಹೀಗೆಯೇ ತುಳುನಾಡಿನಿಂದ ಕೊಂಗುನಾಡಿಗೆ ಹೋಗಿದ್ದ ’ಕೋಶಾರ್’ ಎಂಬ ’ಕೊಯೆರ್’ರಿಂದ ಸ್ಥಾಪಿಸಲ್ಪಟ್ಟ ಹೊಸ ಊರು ಅಥವಾ ರಾಜಧಾನಿ ’ಕೊಯಂಬತ್ತೂರು’ ಆಗಿದೆ. ತುಳುನಾಡಿನಲ್ಲಿಯೂ ’ಕೊಯ’ ಎಂಬ ಹೆಸರು ಇತ್ತು ಎಂದು ತುಳುನಾಡಿನ ಸ್ಥಳ ನಾಮಗಳನ್ನು ಪರಿಶೀಲಿಸಿದಾಗ ತಿಳಿದು ಬರುತ್ತದೆ. ’ಕೊಯ್ಯೂರು’, ಕೊಯ್ ನಾಡ್(ಕೊಯಿನಾಡ್), ’ಕೊಯಿಲ’ ಮುಂತಾದ ಸ್ಥಳನಾಮಗಳಲ್ಲಿ ಕೊಯೋರ ಸಂಬಂಧವನ್ನು ಮನವರಿಕೆ ಮಾಡಿಕೊಳ್ಳಬಹುದು.
ಕೆಲವು ಕಡೆ ’ಕೊಶೋನ್’ ಎನ್ನುವುದರ ಬದಲು ’ಕೊಚೋನ್’ ಎನ್ನುವ ಕ್ರಮವೂ ಇದೆ. ಅಂತೂ ತಮಿಳ್ ಸಂಗಂ ಸಾಹಿತ್ಯದಲ್ಲಿ ಗುರುತಿಸಲ್ಪಟ್ಟ ’ಕೋಶಾರ’ರೆಂಬ ಜನಾಂಗವು ತುಳುನಾಡಿನವರಾಗಿದ್ದರು. ಮಾತ್ರವಲ್ಲ ಅವರು, ತುಳುನಾಡಿನ ಕುಂಬಾರ ಯಾನೆ ಮೂಲ್ಯ ಯಾನೆ ಓಡಾರಿ ಯಾನೆ ಕುಲಾಲರೆಂಬ ಜಾತಿಯವರಾಗಿದ್ದರು ಎಂದು ಒಪ್ಪಿಕೊಳ್ಳಬಹುದು. ತುಳುನಾಡಿನಲ್ಲಿ, ನಲಿಕೆ ಜನಾಂಗದವರು ಕಟ್ಟುವ ಭೂತಗಳು (ಭೂತದ ವೇಷ ಧರಿಸಿದವರು) ’ಮೂಲ್ಯ’ ಎಂದು ’ಮುಗೇರ’ ವರ್ಗದ ದಲಿತರನ್ನು ಕರೆಯುವುದು ವಾಡಿಕೆ. (ಕೆಲವು ಕಡೆ ಬದಲಾವಣೆಗಳಿರಬಹುದು.) ’ಮೂಲ್ಯ’ ಮಣ್ಣಿನಲ್ಲಿ ಅಂದರೆ ಗದ್ದೆಯಲ್ಲಿ ದುಡಿಯುವ ಹಕ್ಕು ಇರುವ ಭೂಮಿ ಪುತ್ರರು ಅಥವಾ ಮಣ್ಣಿನ ಮಕ್ಕಳು ಎಂಬರ್ಥದಲ್ಲಿ ಬಳಕೆಯಲ್ಲಿದೆ.ಈ ಅರ್ಥದಲ್ಲಿ ಗದ್ದೆಯಲ್ಲಿ ದುಡಿಯುವ ಮತ್ತು ಮಣ್ಣಿಗೆ ಸಂಬಂಧಿಸಿದ ಕಾರ್ಮಿಕರಾಗಿ, ಒಬ್ಬೊಬ್ಬ ಒಡೆಯನ ಮೂಲದವರಾಗಿರುವುದರಿಂದ ಮುಗೇರರು ಮೂಲ್ಯ ಎಂದು ಭೂತಗಳಿಂದ ಕರೆಸಲ್ಪಟ್ಟರು. ಅದೇ ಸಮಯದಲ್ಲಿ ಮಣ್ಣಿನಿಂದ ಮಡಕೆ ತಯಾರಿಸುವ ವರ್ಗವಾದ ಕುಂಬಾರ ಅಥವಾ ಕೋಶಾರರಿಗೇ ಮಣ್ಣಿನಲ್ಲಿ ಹಕ್ಕು ಇರುವುದರಿಂದ, ಸಹಜವಾಗಿ, ಬಾರಗರ ಕೈಕೆಳಗೆ ದುಡಿಯುವವರಾದುದರಿಂದ `ಮೂಲ್ಯ’ರೆಂದು ಸಾಮಾನ್ಯರಿಂದ ಕರೆಸಿಕೊಂಡರು.
ಕೃಷಿ ನಡೆಯುವ ಮಳೆಗಾಲದಲ್ಲಿ ಮತ್ತು ಸಮಯವಿದ್ದರೆ ನಂತರದ ಋತುಗಳಲ್ಲಿಯೂ ಗದ್ದೆ ಬೇಸಾಯ ಮಾಡುತ್ತಾ ಬಾರಗರ ’ಬಾರಿಗೆ’ ಅಥವಾ ’ಪತ್ತಾಯ’ ತುಂಬುವ ರೈತರಾದ ತುಳುನಾಡಿನ ಕುಂಬಾರರು ಮಣ್ಣಿನಿಂದ ಮಡಕೆಯನ್ನು ತಯಾರಿಸಿ ಮಾರಾಟ ಮಾಡುತ್ತಾರೆ ಮತ್ತು ಯುದ್ಧದ ಸಂದರ್ಭದಲ್ಲಿ ’ಬಾರಗರ’ (ಭಟರಿಕ-ಭಟಾರಿ-ಭಂಡಾರಿ) ಜೊತೆ ಸೈನಿಕ ಸೇವೆಯನ್ನು ಮಾಡುತ್ತಾರೆ. ಜೊತೆಗೆ ತುಳುನಾಡಿನ ಭೂತಾರಾಧನೆಯ ಸಂದರ್ಭಗಳಲ್ಲಿ ಕೈದೀಪ ಹಿಡಿಯುವುದು ಮತ್ತು ದೀವಟಿಗೆ ಸೇವೆಯನ್ನು ಮಾಡುತ್ತಾರೆ. ಅಂತು, ತುಳುನಾಡಿನ ಚರಿತ್ರೆಯಲ್ಲಿ ಕುಂಬಾರರಿಗೆ ಅಪೂರ್ವ ಸ್ಥಾನವಿದೆ.
ಕೋಶಾರರು ವೀರರಾಗಿದ್ದರು
ಪ್ರಾಚೀನ ಚೇರ ರಾಜ್ಯ (ಕೇರಳ)ದ ಬಡಗು ತುದಿಯಲ್ಲಿರುವ ’ಪೂಳಿನಾಡು’ ಎಂಬ ತುಂಡು ರಾಜ್ಯದ ರಾಜಧಾನಿ ಪಾಳಿ ಪಟ್ಟಣವಾಗಿದೆ. ಈ ನಾಡನ್ನು ಏಳಿಮಲೆ ಎಂದೂ, ಮೂಷಿಕ ರಾಜ್ಯವೆಂದು (ಸಂಸ್ಕೃತ ಸಾಹಿತ್ಯದಲ್ಲಿ) ಕರೆದಿದ್ದಾರೆ. ಈ ಏಳಿಮಲೆ ರಾಜ್ಯದ ದೊರೆ ’ನಣ್ಣನ್’ ಎಂಬಾತನು, ಬಹಳ ಕ್ರೂರಿಯಾದ ನಣ್ಣನ್ (ನನ್ನನ್) ಅರಸನನ್ನು ತುಳುವರು ’ನಂದರಸು’ ಎನ್ನುತ್ತಾರೆ. ಈ ನಂದರಸನನ್ನು ಚೇರ ಅರಸನಾದ ’ನಾರ್ಮುಡಿ’ ಚೇರಲಾದನು ಸೋಲಿಸಿ ಆತನ ರಾಜ್ಯವನ್ನು ವಶಪಡಿಸಿದ್ದನಂತೆ. ಈ ನಾರ್ಮುಡಿ ಚೇರಲಾದನ್ ನ ಕಾಲವು ಕ್ರಿ.ಶ. ಎರಡನೆಯ ಶತಮಾನದ ಪೂರ್ವಾರ್ಧವಾಗಿದೆ ಎಂದು ಸಂಶೋಧಕರ ಅಭಿಮತ. ಕ್ರಿ.ಶ. ಎರಡನೇ ಶತಮಾನದ ಪೂರ್ವಾರ್ಧದಲ್ಲಿ ಆಳ್ವಿಕೆ ಆರಂಭಿಸಿದ್ದ ತುಳುನಾಡಿನ ಬಾರಗ ದೊರೆ ’ಜಯವೀರ ಪಾಂಡ್ಯ’ (ಭೂತಾಳ ಪಾಂಡ್ಯ)ನು ನಂದನ ರಾಜ್ಯವನ್ನು ವಶಪಡಿಸಿದ್ದನಂತೆ. ಈ ಭೂತಾಳ ಪಾಂಡ್ಯನು ಮತ್ತು ಆತನ ಪಡೆಯಲ್ಲಿದ್ದ ಕುಂಬಾರರು ಅಥವಾ ಮೂಲ್ಯರೆಂಬ ಕೋಶಾರರ ಸಹಾಯದಿಂದ ಚೇರ ಅರಸರ ಮಿತ್ರರಾಗಿ ನಂದರಸನನ್ನು ಸೋಲಿಸಿರುವುದನ್ನು ನಂಬಬಹುದು. ಈ ಕೋಶಾರರಿಗೆ ಭೂತಾಳಪಾಂಡ್ಯನು ತುಳುನಾಡಿನ ದಕ್ಷಿಣ ಮತ್ತು ಪೂರ್ವದ (ಇದು ನಂದರಸನ ವಶವಿದ್ದುದಾಗಿರಬಹುದು) ಭಾಗಗಳನ್ನು ಕೊಟ್ಟಿರಬಹುದು. ಏಳಿಮಲೆಯ ಅರಸ ನಂದನನ್ನು ಪರಾಜಯಪಡಿಸಲು ಚೇರ ಅರಸನಿಗೆ ಮಿತ್ರರಾಗಿ ಕೋಶಾರರು ಸಹಕರಿಸಿದ್ದರೆಂಬ ವಿವರವು ತಮಿಳ್ ಸಂಗ ಕೃತಿಯಾದ ’ಪದಿಟ್ಟ್ ಪತ್ತ್’ನಲ್ಲಿ ದಾಖಲೆಯಾಗಿದೆ.
ಹಾಗೆ ನಂದನ ರಾಜ್ಯದ ಬಡಗು ಭಾಗದಲ್ಲಿದ್ದ ತುಳುನಾಡಿನ ಈ ಭಾಗದಲ್ಲಿದ್ದ ತುಳುನಾಡಿನ ಈ ಭಾಗವನ್ನು ಪಡೆದ ಕೋಶಾರ ಮುಖಂಡನ ಹೆಸರು ’ಕೋಶ’ ಎಂದಿರಬೇಕು ಅಥವಾ ಕೋಶಗಳ ವ್ಯಾಪಾರಿ ಎಂಬ ಕಾರಣಕ್ಕೆ ’ಶೆಟ್ಟಿ’ ಎಂದು, ’ಕೋಶ ಶೆಟ್ಟಿ’ ಎಂದಿರಬೇಕು. ಕುಂಬಾರ ಪೇಟೆಯ ಮುಖ್ಯಸ್ಥನಾದ ಶ್ರೇಷ್ಟಿಯನ್ನು ’ಶೆಟ್ಟಿ’ ಎನ್ನಲು ಸಾಧ್ಯವಿದೆ. ಈ ಕೋಶ ಶೆಟ್ಟಿಯ ಹೆಸರಿನಿಂದಲೇ ತುಳುನಾಡಿನ ಕೋಶಾರರ ವಶವಿದ್ದ ಭೂಮಿಗೆ ಕೋಶಾರ ಸೀಮೆ ಎಂಬರ್ಥದಲ್ಲಿ ಕೋಶ ಶೆಟ್ಟಿಯ ಬಳಿ (ಬರಿ)ಯು ಮುಂದೆ ’ಕೊಶೈಟಿ’ ಬಳಿ (ಸೀಮೆ)ಯಾಯಿತು. ಈ ಕೊಶೈಟಿ ಸೀಮೆಯ ಎಲ್ಲಾ ಜಾತಿಯವರು ತಮ್ಮ ವಂಶದವರನ್ನು ಕೋಶೈಟಿ-ಕೊಚಿಟ್ಟಿ-ಕೋಟಿ ಎಂದು ನಾಮಾಂತರಿಸಿ ಕರೆದುಕೊಂಡು ಬಂದರು. ಇದು ಕ್ರಿ.ಶ. ಎರಡನೇ ಶತಮಾನದ ಬಳಿಯಾಗಿದೆ. ಬಹುಶಃ ಕ್ರಿ.ಶ. ಎರಡನೇ ಶತಮಾನದಿಂದ ಕೋಶಾರರು ತುಳುನಾಡಿನಿಂದ ರಟ್ಟರ ರಾಜ್ಯವಾದ ಕೊಂಗುನಾಡಿಗೆ ಹೋಗಿ ಪ್ರಸಿದ್ಧಿಗೆ ಬಂದಿರಬೇಕು. ಮುಂದೆ ಕೊಶೈಟ್ಟಿ ಬಳಿಯಲ್ಲಿ ವಿಭಜನೆ ಬಂದಿರಬೇಕು. ಬಂಟರಲ್ಲಿರುವ ಬಳಿ ನಾಮಗಳಲ್ಲಿ ’ಕೊಯರನ್ನಾಯೆ’ (ಕೊಯೋರ ಸೀಮೆ). ’ಓಡರನ್ನಾಯ’ (ಓಡಾರಿ ಸೀಮೆಯವರು) ಎಂಬುದು, ಕೊಶೈಟ್ಟಿ ಬಳಿಯ ವಿಭಜನೆಯನ್ನು ಸೂಚಿಸುತ್ತದೆ. ಈ ಮೇಲಿನ ಸಂಗತಿಗಳಿಂದ ಕೋಶಾರರು ಬಂಟರಿಗಿಂತಲೂ ಅಪ್ರತಿಮರಾದ ವೀರರಾಗಿದ್ದರು. ಆದರೆ ಅವರನ್ನು, ತುಳುವರು ’ಬಂಟ’ರೆಂದು ಜಾತೀಯವಾಗಿ ಕರೆದಿಲ್ಲ. ’ಒಳ್ಳೆ ಸೊರ್ಕುಂಡ ಮಂಡಲಿ, ಬಂಟೆ ಸೊರ್ಕುಂಡ ಬಲ್ಲಾಳೆ’ ಎಂಬ ಗಾದೆಮಾತಿನಂತೆ ತುಳುನಾಡಿನಲ್ಲಿ ವೀರರಾದವರು ಮಾತ್ರ ’ಬಲ್ಲಾಳ’ ಪದವಿಯನ್ನು ಹೊಂದುತ್ತಾರೆ. ಆದ್ದರಿಂದ ಬಂಟ ಜಾತಿಯಲ್ಲಿ ಬಲ್ಲಾಳ ಮನೆತನದವರ ಸಂಖ್ಯೆ ಹೆಚ್ಚಾಗಿದೆ. ಬಂಟರ ಜಾತಿಗೆ ಸೇರಿದ ಬಂಗ, ರೈ, ಶೇಕ, ಮೂಲ, ಮಲ್ಲಿ, ಪೆರ್ಗಡೆ, ತೋಳಾರ, ಸಾವಂತ, ಬುನ್ನಾಳ, ವರ್ಮ, ಕಂಬಳಿ, ಬಿನ್ನಾಣಿ, ಹೆಗ್ಗಡೆ ಮುಂತಾದ ಉಪನಾಮದ ವಂಶಸ್ಥರು ಬಲ್ಲಾಳ ಪದವಿಯನ್ನು ಹೊಂದಿದವರ ಸಂತತಿಯಾಗಿದ್ದಾರೆ. ಕೆಲವರು ಉಪನಾಮವನ್ನು ಬಿಟ್ಟು ’ಬಲ್ಲಾಳ’ ಎಂದು ಗತ್ತಿಗಾಗಿ ಧರಿಸುತ್ತಾರೆ. ಉದಾ: ತಿಮ್ಮಣ್ಣ ಬಂಗ ಬಲ್ಲಾಳ ಎನ್ನುವ ಬದಲು ತಿಮ್ಮಣ್ಣಬಂಗ ಎಂದೇ ಬಂಟರು ಧರಿಸುತ್ತಾರೆ ಹೊರತು ’ಬಲ್ಲಾಳ’ ಪದವಿಯನ್ನು ಉಪೇಕ್ಷಿಸುತ್ತಾರೆ. ರಾಮರೈ ಬಲ್ಲಾಳ ಎಂಬ ಹೆಸರಿನ ಬಂಟರು ತಮ್ಮ ಉಪನಾಮವಾದ ’ರೈ’ ಉಳಿಸಿ ಬಲ್ಲಾಳ ಪದವಿಯನ್ನು ತ್ಯಜಿಸುತ್ತಾರೆ. ಹೆಚ್ಚು ಕಮ್ಮಿ ಜೈನರೂ ಹೀಗೆಯೇ ಮಾಡುತ್ತಾರೆ. ಆದರೆ ಉಪನಾಮಗಳನ್ನು ತ್ಯಜಿಸಿ ಬಲ್ಲಾಳ ಪದವಿಯನ್ನು ಮಾತ್ರ ಧರಿಸುವ ’ಬಲ್ಲಾಳ’ರೆಂಬ ಜಾತಿಯು ತುಳುನಾಡಿನ ದಕ್ಷಿಣ-ಪೂರ್ವದ ಭಾಗವಾದ ಕಾಸರಗೋಡು ಜಿಲ್ಲೆ, ಪುತ್ತೂರು ತಾಲೂಕು ಮತ್ತು ವಿಟ್ಲ ಪ್ರದೇಶಗಳಲ್ಲಿ ಪ್ರಸ್ತುತವಿದ್ದಾರೆ. ಈ ಬಲ್ಲಾಳ ಜಾತಿಯವರು ಬಾರಗ ಮೂಲದ ಬಂಟರ ಜಾತಿಗೆ ಸೇರಿದವರಲ್ಲ. ಬಾರಗ ಮೂಲವೆಂದರೆ ಮಾಸಾದಿಕ ಜೈನ ಅಥವಾ ಜೈನ-ಎರಡು ವಿಭಾಗಕ್ಕೂ ಈ ಬಲ್ಲಾಳರೆಂಬ ಜಾತಿಯು ಸೇರಿಲ್ಲ. ಈ ಬಲ್ಲಾಳರನ್ನು ಸಾಮಂತ ಬಲ್ಲಾಳರೆಂದು ಕರೆಯುತ್ತಾರೆ.
ಆದರೆ ಕೋಶಾರ ವರ್ಗದ ಅಂದರೆ ಕುಂಬಾರ ವರ್ಗದ ಬಂಟ(ವೀರ)ರಿಗೆ ಒಂದು ಸೀಮೆಯೇ ಇರುವಾಗ ಆ ಸೀಮೆಗೆ ಅವರದೇ ಸಮುದಾಯದ ಬಲ್ಲಾಳರಿದ್ದೇ ಇರುತ್ತಾರೆ. ಈ ಕುಂಬಾರ ಬಲ್ಲಾಳ ಅಥವಾ ಕುಂಬ ಬಲ್ಲಾಳ ಅಥವಾ ಕೋಶಾರ ಬಲ್ಲಾಳರ ಕುಟುಂಬವು ತಮ್ಮ ಸಮುದಾಯದಿಂದ ಮೇಲ್ವರ್ಗವಾಗಿ ಭವಿಸಿ, ಈ ಮೇಲುವರ್ಗದ ಕುಂಬಾರ ಬಲ್ಲಾಳರು ಪ್ರತ್ಯೇಕ ಜಾತಿಯಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ.
ಕೆಲವು ಹಳೆಯ ಬಲ್ಲಾಳ ಬೀಡುಗಳಲ್ಲಿ ’ಚಿಕ್ಕ ಮಣ್ಣಿನ ಕುಡಿಕೆ’ಯನ್ನು ’ಮೂರಿ’ ಎಂದು ಹೆಸರಿಸಿದ ’ಮೂರಿದೈವ’ದ ಆರಾಧನೆಯನ್ನು ಕಾಣಬಹುದು. (ಕಾಸರಗೋಡಿನ ಕುಂಬ್ಡಾಜೆ ಬೀಡಿನೊಳಗೆ ಈಗಲೂ ಇದೆ) ಮಣ್ಣಿನ ಕುಡಿಕೆಯಲ್ಲಿ ದೇವತಾ ಸ್ಮರಣೆ ಮಾಡುವುದರ ಹಿನ್ನಲೆಯಲ್ಲಿ, ಮಣ್ಣಿನ ಮಡಕೆ ಮಾಡುತ್ತಿದ್ದ ತಮ್ಮ ಪೂರ್ವಜರ ಸ್ಮೃತಿಯನ್ನು ಕೋಶಾರ ಬಲ್ಲಾಳರು ಮಾಡುತ್ತಿರಬಹುದು. ತಾವು ಬಲ್ಲಾಳರಾದ ನಂತರ ತಮ್ಮ ಕುಲ ವೃತ್ತಿಯನ್ನು ತೊರೆದು ನಾಡು ಆಳುವ ಅರಸರಾಗಿ ಭವಿಸಿದರು. ಈ ಕುಂಬಾರ ಅಥವಾ ಕೋಶಾರ ಬಲ್ಲಾಳರು ನಂತರದ ರಾಜಕೀಯ ಸ್ಥಿತ್ಯಂತರದಿಂದ ತುಳುನಾಡು ಬಿಟ್ಟು ಕೊಂಗುನಾಡು ಸೇರಿರಬಹುದೇ? ಅಥವಾ ಪ್ರತ್ಯೇಕ ಜಾತಿಯಾಗಿ ತುಳುವರೆಡೆಯಲ್ಲಿ ಇರುವರೇ? ಅಥವಾ ಪುನಃ ಕುಂಬಾರ ಜಾತಿಯಲ್ಲಿ ಲೀನವಾಗಿಬಿಟ್ಟರೇ? ಎಂಬುದು ಸಂಶೋಧನೀಯ. ಅದೇ ರೀತಿ ಕೋಶಾರ ವರ್ಗದಲ್ಲಿ ವೀರತನವನ್ನೇ ಮುಖ್ಯವಾಗಿರಿಸಿ ವೀರ ವರ್ಗ ಅಂದರೆ ಬಂಟ ವರ್ಗವೊಂದು ಇದ್ದಿರಬೇಕು. ಈ ಕೋಶಾರ ಮೂಲದ ಅಂದರೆ ಕುಂಬಾರ ಮೂಲದ ಬಂಟರು ಏನಾದರು ಎಂಬುದು ಸಂಶೋಧನೀಯ. ಕೋಶಾರ ಮೂಲದ ಬಲ್ಲಾಳರ ಬೀಡುಗಳಲ್ಲಿ ಬಂಟರಾಗಿ ಅವರದ್ದೇ ಸಮುದಾಯದವರು ಇರುವುದು ಅಪೇಕ್ಷಣೀಯ. ಆ ಪ್ರಕಾರ ಬೀಡುಗಳ (ತುಳುವಿನಲ್ಲಿ ’ಬೂಡು’ ಎನ್ನುತ್ತಾರೆ) ಬಲ್ಲಾಳರು ಮತ್ತು ಬೂಡುಗಳ ಬಂಟರ ಕುರಿತು ಗಾಢವಾಗಿ ಪ್ರಯತ್ನಿಸಿದರೆ ಅವರ ಅಸ್ತಿತ್ವವನ್ನು ಗುರುತಿಸಬಹುದು.
ಶಿವನು ನಡೆಸಿದ ಯಾಗಾಗ್ನಿಯಲ್ಲಿ ’ಕುಶವತ್ತಿ’ಯ ಜನನವಾಯಿತು ಎಂಬ ಜಾನಪದ ಕತೆ ಮಲೆಯಾಳದಲ್ಲಿದೆ. ಅಂದರೆ ಮಣ್ಣನ್ನು ಕಲಸಿ ಪಾತ್ರೆ ಮಾಡಿ, ಅದನ್ನು ಅಗ್ನಿಯಲ್ಲಿ ಸುಟ್ಟು ಗಟ್ಟಿ ಮಾಡಿದ ಪಾತ್ರೆಗಳನ್ನು ಮೊದಲು ಸ್ತ್ರೀಯರು ಮಾಡುತ್ತಿದ್ದರೆಂದು ಕತೆಯ ಇಂಗಿತ. ಮುಂದೆ ಕ್ಷತ್ರಿಯ ವೀರರು ಈ ಸ್ತ್ರೀಯರನ್ನು ವರಿಸಿ ಕೋಶಾರ ವರ್ಗದ ಅಂದರೆ ಕುಂಬಾರ ವರ್ಗದ ಜಾತಿಯ ಸೃಷ್ಟಿಯಾಯಿತೆನ್ನಬಹುದು.
ಅಗಸ್ತ್ಯರು ಮತ್ತು ವಸಿಷ್ಠರೆಂಬ ಪ್ರಸಿದ್ಧ ಬ್ರಹ್ಮಋಷಿಗಳು ’ಮಿತ್ರಾವರುಣ’ರೆಂಬ ಋಷಿಗಳ ವೀರ್ಯದಿಂದ ’ಕುಂಬ’ (ಮಡಕೆ)ದಲ್ಲಿ ಹುಟ್ಟಿದ್ದರಂತೆ. ಹಾಗೆ ವೀರ್ಯವನ್ನು ಮಣ್ಣಿನ ಪಾತ್ರೆಯಲ್ಲಿಟ್ಟು ಮಕ್ಕಳು ಸೃಷ್ಟಿಯಾಗುವುದು ಅವೈಜ್ಞಾನಿಕವಾದದು. ನಿಜವಾಗಿ ಮಡಕೆ ತಯಾರಿಸುವ ಸ್ತ್ರೀಯಲ್ಲಿ ಮಿತ್ರವರುಣರಿಗೆ ಸಂತತಿಯಾಗಿರಬಹುದು. ಆದ್ದರಿಂದಲೇ ’ಋಷಿಮೂಲ’ ನೋಡಬಾರದು ಎಂದು ಪುರಾಣದ ನಿಷೇಧ ಬಂದದು. ಅಂತೂ ಕುಂಬಾರ ಸ್ತ್ರೀಯಲ್ಲಿ ಹುಟ್ಟಿದ ಅಗಸ್ತ್ಯ ಮತ್ತು ವಸಿಷ್ಠರು ವರ್ಣದಲ್ಲಿ ಬ್ರಾಹ್ಮಣರಾದರು. ಮಾತ್ರವಲ್ಲ ಗೋತ್ರ ಸ್ಥಾಪಕರೂ ಆದರು. ಈ ಅಗಸ್ತ್ಯರು ವಿಂಧ್ಯೆಯನ್ನು ದಾಟಿ ದಕ್ಷಿಣಕ್ಕೆ ಬಂದಿರುವ ಪುರಾಣ ಕತೆಗಳಿವೆ. ಈ ಅಗಸ್ತ್ಯರ ಜೊತೆ ಬ್ರಾಹ್ಮಣರೂ, ಮುಗೇರರೂ, ಕುಂಬಾರರು ದಕ್ಷಿಣಕ್ಕೆ ಬಂದಿರಬೇಕು. ತುಳುನಾಡಿನ ನೆಲೆಯಲ್ಲಿರುವ ಕೊಡಗಿನಲ್ಲಿ ಅಗಸ್ತ್ಯರ ಸಂಬಂಧ ಕಲ್ಪಿಸಿ ಕಾವೇರಿ ನದಿಯ ಹುಟ್ಟಿನ ಕತೆ ಈ ಭಾಗಗಳಾಲ್ಲಿ ಜನಜನಿತವಾಗಿದೆ. ಈ ಅಗಸ್ತ್ಯರ ನೆನಪು ಕುಂಬಾರರಿಗೂ ಇರಬೇಕು. ತಮಿಳ್ ಸಂಗಂ ಕೃತಿಯಾದ ’ತೋಲಕಾಫಿಯಂ’ನಲ್ಲಿ ’ನಚ್ಚಿನಿಯಾರ್’ ಕವಿಯು ಕತೆಗಟ್ಟಿದ ಪ್ರಕಾರ ’ತುವಾರವತಿ’ (ದ್ವಾರಕೆ)ಯಿಂದ ಶ್ರೀಕೃಷ್ಣನ ಕಾಲದಲ್ಲಿ ಅಗಸ್ತ್ಯ ಮುನಿಗಳು 18 ರಾಜರನ್ನು(ಬಾರಗರು!) ಮತ್ತು 18 ಮಂದಿ ವೇಳನ್ (ಕೋಶಾರ)ರನ್ನು ಕರೆದುಕೊಂಡು ಅರುವಾಳರ್ ಗಣದೊಂದಿಗೆ ತಮಿಳಕಕ್ಕೆ(ದಕ್ಷಿಣಕ್ಕೆ) ಬಂದರೆಂದಿದ್ದಾನೆ. ಈ ಕತೆಯು ಮತ್ತೆ ರಚಿಸಲ್ಪಟ್ಟ ಕತೆಯಾಗಿದ್ದುದರಿಂದ ಪೂರ್ತಿ ಸತ್ಯವಲ್ಲ. ಆದರೂ ಕೆಲವೊಂದು ವಿಷಯಗಳನ್ನು ಒಪ್ಪಬಹುದು. ಕ್ಷತ್ರಿಯರನ್ನೂ ಸೇವಕರನ್ನೂ ಅಗಸ್ತ್ಯಗೋತ್ರದ ಬ್ರಾಹ್ಮಣರು ಕರೆದುಕೊಂಡು ಈ ಭಾಗಗಳಿಗೆ ಬಂದರೆಂದು ಕಂಡುಕೊಳ್ಳಬಹುದು. ಅಗಸ್ತ್ಯರು ತಮ್ಮ ತಾಯಿಯ ಕಡೆಯ ಕುಂಬಾರರ ಬಗ್ಗೆ ಅಭಿಮಾನವಿಟ್ಟುಕೊಂಡಿದ್ದರೆನ್ನಬಹುದು.
ಅಗಸ್ತ್ಯರ ಕುರಿತು ತುಳುನಾಡಿನಲ್ಲಿಯೂ, ಸ್ಥಳ ಪುರಾಣಗಳಲ್ಲಿಯೂ ಬಹಳಷ್ಟು ಮಾಹಿತಿಗಳಿವೆ. ಈ ಅಗಸ್ತ್ಯರ ನಂತರವೇ ಪರಶುರಾಮ ಮುನಿಗಳ ಪ್ರವೇಶವಾಗಿರಬಹುದು. ಸಾಧರಣ ಇದೇ ಕಾಲದಲ್ಲಿ ’ಪುಲಸ್ತ್ಯ’ ಬ್ರಹ್ಮರ್ಷಿಗಳ ಆಗಮನವು ದಕ್ಷಿಣಕ್ಕೆ ಆಗಿರಬೇಕು. ರಾಮಾಯಣ ಕಾಲದ ಲಂಕಾಧಿಪತಿ ರಾವಣನ ತಂದೆ ’ವಿಶ್ರವಸ್ಸ್’ ಎಂದು. ಈ ’ವಿಶ್ರವಸ್ಸ್’ನ ತಂದೆ ’ಪುಲಸ್ತ್ಯ’ರೆಂಬ ಹೆಸರಿನ ಸಪ್ತರ್ಷಿಗಳಲ್ಲಿ ಒಬ್ಬರಾದ ಗೋತ್ರ ಸ್ಥಾಪಕರಾದ ಬ್ರಾಹ್ಮಣರಾಗಿದ್ದರು. ಈ ಪುಲಸ್ತ್ಯ ಋಷಿಯ ತಾಯಿಯು ’ಪುಲಯರ್’ ಎಂಬ ತಮಿಳಕರ ದಲಿತ ಜನಾಂಗವಾಗಿರಬಹುದು. ಆದ್ದರಿಂದ ’ಪುಲಸ್ತ್ಯ’ರೆಂಬ ಹೆಸರು ಬಂದಿರಬಹುದು. (ಋಷಿ ಮೂಲ, ನದಿಮೂಲ, ಸ್ತ್ರೀ ಮೂಲ ನೋಡಬಾರದಂತೆ, ನೋಡಿದರೆ ಸತ್ಯ ಗೊತ್ತಾಗುತ್ತದೆ. ಸತ್ಯ ಗೊತ್ತಾದರೆ ಋಷಿಗಳ ಬಗ್ಗೆ, ನದಿಗಳ ಬಗ್ಗೆ, ಸ್ತ್ರೀಯರ ಬಗ್ಗೆ ನಕರಾತ್ಮಕ ಭಾವನೆ ಬರಬಹುದೆಂದಾಗಿರಬಹುದು) ಇಂದಿಗೆ ಒಂಭತ್ತು ಸಾವಿರ ವರ್ಷಗಳ ಹಿಂದೆ ರಾಮಾಯಣದ ಘಟನೆ ನಡೆದಿದೆ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರ ನಿಗಮನ. ಇದು ಹೌದಾದರೆ ವಿಂಧ್ಯೆಯನ್ನು ದಾಟಿ ಅಗಸ್ತ್ಯರೂ ನಂತರ ಪರಶುರಾಮಾದಿ ಬ್ರಾಹ್ಮಣರೂ ಇತರರೂ ದಕ್ಷಿಣಕ್ಕೆ ಐದಾರು ಸಾವಿರ ವರ್ಷಗಳ ಹಿಂದೆಯೇ ಬಂದಿರುತ್ತಾರೆ ಎನ್ನಬಹುದು. ಆದರೆ ತುಳುನಾಡಿಗೆ ಪ್ರವೇಶವಾಗುವಾಗ ತುಂಬಾ ತಡವಾಗಿರಬಹುದು. ತುಳುನಾಡು ನೀರಿನಿಂದಾವೃತವಾಗಿ ಸಮುದ್ರದ ವಶವಿದ್ದಿರಬಹುದು. ಇಂದಿಗೆ ಏಳು ಸಾವಿರ ವರ್ಷಗಳ ಹಿಂದೆ ಶ್ರೀಕೃಷ್ಣನ ’ದ್ವಾರಕೆ’ (ಸೂರತ್ ಗುಜರಾತ್) ಮುಳುಗಿತ್ತಂತೆ. ಅದೇ ಕಾಲದಲ್ಲಿ ತುಳುನಾಡಿನ ಭೂಪ್ರದೇಶಗಳು-ಸಪ್ತಕೊಂಕಣ ಸಮೇತ ಸಮುದ್ರದ ಅಡಿಯಲ್ಲಾಗಿರಬಹುದು. ಮುಂದೆ ಎಷ್ಟೋ ಕಾಲದ ನಂತರ ಸಮುದ್ರದ ನೀರು ಹಿಂದೆ ಹೋಗಿ, ತುಳುನಾಡಿನ ಕರಾವಳಿ ಭೂಭಾಗವು ಬೆಳಕಿಗೆ ಬಂದಿರಬಹುದು. ಬೆಳಕಿಗೆ ಬಂದ ವೇಳೆ ’ಪರಶುರಾಮ’ನ ಜನರು ಪ್ರವೇಶಿಸಿರಬಹುದು. ಮೊದಲು ಬ್ರಾಹ್ಮಣರು ಮತ್ತು ಮುಗೇರರು ನಂತರ ಕೋಶಾರರು ಬಾರಗರು ತುಳುನಾಡಿಗೆ ಬಂದು ವಲಸೆ ನಿಂತಿರಬಹುದು. ಹೆಚ್ಚು ಕಮ್ಮಿ ಕ್ರಿ.ಪೂರ್ವ 3-4 ಶತಮಾನಗಳಲ್ಲಿ ಬೌದ್ಧ ಧರ್ಮದ ಅತಿ ಪ್ರಸರಣದ ಕಾಲದಲ್ಲಿ ಮಧ್ಯಪ್ರದೇಶದ ಕಡೆಯಿಂದ ಜನಾಂಗಗಳು ಸುರಕ್ಷಿತ ಸ್ಥಳವೆಂಬ ನೆಲೆಯಲ್ಲಿ ತುಳು ಕೊಂಕಣಕ್ಕೆ ಬಂದಿರಬಹುದು. ಈ ಬಗ್ಗೆ ಇದಮಿತ್ಥಂ ತೀರ್ಮಾನಕ್ಕೆ ಬರಲು ವ್ಯಾಪಕ ಕ್ಷೇತ್ರ ಕಾರ್ಯ, ಬೇರೆ ಬೇರೆ ಪ್ರದೇಶಗಳ ಕೃತಿಗಳ-ಐತಿಹ್ಯಗಳ ಅಧ್ಯಯನ ಆಗಬೇಕು. ಇದನ್ನಂತೂ ನಿಶ್ಚಯಿಸಬಹುದು. ತಮಿಳಕದ ಸಂಗಂ ಸಾಹಿತ್ಯದಲ್ಲಿ ಉಲ್ಲೇಖಿಸಲ್ಪಟ್ಟ ವೀರರು ನಾಲ್ಕು ಭಾಷೆಗಳನ್ನು ಆಡುವ, ಮಣ್ಣಿನ ಪಾತ್ರೆ(ಥಾಲಿ)ಗಳನ್ನೂ ರಚಿಸುವ ತುಳುನಾಡನ್, ಕೋಶಾರರು, ತುಳುನಾಡಿನ ಕುಂಬಾರ ಅಥವಾ ಮೂಲ್ಯ ಅಥವಾ ಓಡಾರಿ ಎಂದು ಕರೆಯಲ್ಪಡುವ ಜನಾಂಗವಾಗಿದೆ. ಈ ಜನಾಂಗ ಕ್ರಿ.ಶ. ಎರಡನೇ ಶತಮಾನದಲ್ಲಿ ತುಳುನಾಡಿನ ಕೆಲವು ಭಾಗಗಳ ಸೀಮಾ ಮುಖಂಡರಾದ ಬಲ್ಲಾಳರೂ ಆಗಿದ್ದರು ಮತ್ತು ಬಂಟರೂ ಆಗಿದ್ದರು ಎಂದು ಕಂಡುಕೊಳ್ಳಬಹುದು. ಆದರೆ ಈ ಕೋಶಾರರು ಕುಲಾಲ ಅಥವಾ ಕುಂಬಾರ ಜಾತಿಯಾಗಿಯೂ ಕೋಶಾರ ಬಂಟ ಜಾತಿಯಾಗಿಯೂ, ಕೋಶಾರ ಬಲ್ಲಾಳ ಜಾತಿಯಾಗಿಯೂ ಕೋಶಾರ ಬಂಟ ಜಾತಿಗಳಾಗಿ ಬೇರ್ಪಟ್ಟಿರಬಹುದು, ಈ ಕೋಶಾರ ಬಂಟರಿಗೂ ಮತ್ತು ಕೋಶಾರ ಬಲ್ಲಾಳರಿಗೂ ತುಳುನಾಡಿನ ಬಾರಗ ಮೂಲದ ಮಾಸದಿಕ ಜೈನ ವರ್ಗದ ಒಕ್ಕೆಲ್ ಬಂಟರೊಳಗೆ ಯಾವುದೇ ರಕ್ತ ಸಂಬಂಧವಿರಲು ಸಾಧ್ಯವಿಲ್ಲವೆಂದು ಕಂಡುಕೊಳ್ಳಬಹುದು.
ಅಡಿ ಟಿಪ್ಪಣಿಗಳು
1. ಆದಿ ಶಂಕಾರಾಚಾರ್ಯರು ಒಂಭತ್ತನೇ ಶತಮಾನದ ಆದಿಯ ಭಾಗದಲ್ಲಿ ಜನಿಸಿದ್ದರೆಂಬ ಅಂದರೆ. ಕ್ರಿ.ಶ. 805ರ ಮೇ ಒಂದು ಅಥವಾ ಎಪ್ರಿಲ್ ಮೂವತ್ತರಂದು ಜನಿಸಿದ್ದಾರೆ ಎಂದು ” ಶ್ರೀಮಚ್ಛಂಕರ ವಿಜಯ” ಕೃತಿಯ ಒಂದು ಶ್ಲೋಕವನ್ನು ಆಧರಿಸಿ ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.
2. ’ಮಳೆ’ಯನ್ನು ತುಳುವಿನಲ್ಲಿ ’ಮರೆ’ ಎನ್ನುತ್ತಿದ್ದರೆಂಬ ಅಭಿಪ್ರಾಯ ದಿ| ಸೇಡಿಯಾಪು ಕೃಷ್ಣ ಭಟ್ಟರೆಂಬ ಪ್ರಸಿದ್ಧ ಸಂಶೋಧಕರದ್ದು.
3. ತುಳುನಾಡಿನ ಭೂತಾರಾಧನೆಯ ಸಂದರ್ಭದಲ್ಲಿ ನಲಿಕೆ ಜನಾಂಗದವರು ಕಟ್ಟುವ ಭೂತ-ದೈವಗಳು ಮುಗೇರ ದಲಿತರನ್ನು ’ಮೂಲ್ಯ’ ಎಂದು ಏಕವಚನದಲ್ಲಿ ಸಂಬೋಧಿಸುತ್ತದೆ. ಅದೇ ಸಂದರ್ಭದಲ್ಲಿ ಕೋಶಾರ ಅಥವಾ ಕುಂಬಾರರನ್ನು ದೈವಗಳು ’ಮೂಲ್ಯರೇ’ ಎಂದು ಬಹುವಚನದಲ್ಲಿ ಕರೆಯುವುದು ರೂಢಿ. ತುಳುನಾಡಿಗೆ ಸಂಬಂಧಿಸಿ ಮುಗೇರರು ಮತ್ತು ಕುಂಬಾರರು ಪುರಾತನ ವರ್ಗದವರೆಂದು ಭಾವಿಸಬಹುದು. ಇತರ ಸಮಯದಲ್ಲಿ ನಲಿಕೆ ಜನಾಂಗದವರು ಕುಂಬಾರರನ್ನು ’ಮಲ್ಲಿಪಾಲ್’ ಎನ್ನುತ್ತಾರೆ. ’ಮಲ್ಲಿ’ ಎಂದರೆ ಮಲ್ಲಯುದ್ಧ ಅಥವಾ ಗರಡಿ ವಿದ್ಯೆಯ ಪರಿಣತರೆಂದು ಅರ್ಥ. ಮಲ್ಲಿಪಾಲ್ ಎಂಬುದರಿಂದ ಗರಡಿ ಕಲೆಯಲ್ಲಿ ಸಿದ್ದ ಹಸ್ತರೆಂದು ಭಾವಿಸಬಹುದು. (ಬಂಟ ಬಾರಗರಲ್ಲಿ ’ಮಲ್ಲ’ ಎಂಬ ಉಪನಾಮಧಾರಿಗಳಿದ್ದರೆ) ’ಬೈದ್ಯ’ ಬಿಲ್ಲವರನ್ನು ಅಂದರೆ ಬಿಲ್ಲವ ಪೂಜಾರಿ ಸಮುದಾಯವನ್ನು ನಲಿಕೆ ಜನಾಂಗದ ಭೂತ ದೈವವು ’ಪದಿನಾಜಿದೋಳ ಬಾರಿಗದ ಮೂಲ್ಯರೆ’ ಎನ್ನುತ್ತದೆ. ’ದೋಳ’ ಎಂದರೆ ’ಪಲ್ಲಕ್ಕಿ’ ಎಂದರ್ಥ ತುಳುವಿನಲ್ಲಿದೆ. ಹದಿನಾರು ಪಲ್ಲಕ್ಕಿ ಇರುವ ಬಾರಿಗೆಯ ಮೂಲ್ಯರೇ ಎಂದಾಗ, ಹದಿನಾರು ಪಲ್ಲಕ್ಕಿಗಳಿರುವ ದೊಡ್ಡ ಅರಮನೆಯ ಸೇವಕರು ಅಥವಾ ಹದಿನಾರು ಸೀಮೆಗಳ ಪಲ್ಲಕಿಯಿರುವ ಬಾರಿಗೆಯ ಸೇವಕರೇ ಎಂಬುದು ಅದರ ವಾಚಾರ್ಥ . ಕಾಸರಗೋಡಿನಲ್ಲಿರುವ ಮಣಿಯಾಣಿ ಸಮುದಾಯದವರು ದೈವಗಳ ಬಾಯಿಯಿಂದ ’ಬಾರಿಗದ ಮೂಲ್ಯರೇ’ ಎಂದು ಕರೆಸಿಕೊಂಡಿದ್ದಾರೆ. ಇದು ಸಾಮಾನ್ಯ ’ಬಾರಿಗೆ’ಯಾಗಿರಬೇಕು. ಈ ಬಾರಿಗೆಗಳ ಸೇವಕರೇ ಎಂಬುದೇ ಅದರ ಅರ್ಥ. ಮರಾಠಿ ಭಾಷೆಯನ್ನಾಡುವ ನಾಯ್ಕರ್ ಸಮುದಾಯವನ್ನು ’ಪತ್ತು ಒಕ್ಕೆಲ್ ಮೂಲ್ಯರೇ’ ಎಂದು ದೈವ ಕರೆಯುತ್ತದೆ. ಅಂದರೆ ಮಹರಾಷ್ಟ್ರ ಕಡೆಯಿಂದ ಹತ್ತು ಕುಟುಂಬಗಳು ಕೃಷಿ ಕೆಲಸಗಳಿಗಾಗಿ ಬಂದ ಸೇವಕರೆಂದರ್ಥ. ’ಕೊಡಗ’ರನ್ನು ’ನೂತ್ತಾಜಿ ಬಾರಿಗರ ಮೂಲ್ಯರೇ’ ಎಂದು ದೈವಗಳು ಅನ್ನುತ್ತವೆ. ಅಂದರೆ ಕೊಡಗಿನ ಮೂಲನಿವಾಸಿ ಜನಾಂಗಗಳು, ಹಿಂದಿನ ಕಾಲದಲ್ಲಿ ಬಾರಿಗೆ (ಆಡಳಿತ ಕೇಂದ್ರ)ಗಳ ಸೇವಕರಾಗಿದ್ದರೆಂದರ್ಥ. ಇಲ್ಲಿ ’ಮೂಲ್ಯ’ ಎಂಬ ಪದಕ್ಕೆ ಮಣ್ಣಿಗೆ ಸಂಬಂಧಿಸಿ ಗದ್ದೆಯ ಕೃಷಿಯನ್ನು ಮಾಡುವ ಕೃಷಿಕ ಅಥವಾ ಕಾರ್ಷಿಕ ಸೇವಕರೆಂಬ ಅರ್ಥದಲ್ಲಿ ಸ್ವೀಕರಿಸಬಹುದು. ಕಾಲ ನಂತರ ’ಬಾರಿಗೆ’ಗಳು ಆಡಳಿತದ ಕೇಂದ್ರಸ್ಥಾನವಾದುದಾದರೂ ಆರಂಭದಲ್ಲಿ ಭತ್ತ ಸಂಗ್ರಹಿಸುವ ಬಾರಗರ ’ಬಾರಿಗೆ’ಗಳಾಗಿತ್ತು. ಒಂದೊಂದು ಬಾರಿಗೆಯ ಅಂಕಿತದಲ್ಲಿ ಸಾವಿರಗಟ್ಟಲೆ ಎಕರೆ ಗದ್ದೆಗಳಿರಬಹುದು. ಬಾರಿಗೆಗಳು ಸೀಮೆಯ ಕೇಂದ್ರಗಳಾದಾಗ ದೋಳ ಬಾರಿಗೆ (ಸೀಮಾ ರಾಜಧಾನಿ-ಸೀಮೆಯ ಅರಸು ಬಲ್ಲಾಳನ ಅರಮನೆ)ಗಳಾಗಿ ವಿಕಸಿಸಿತು.
4. ಬಂಟರಿಗೆ ಹಿಂದಿನ ಕಾಲದಲ್ಲಿ ಖಾಸಗಿ ಕಾರ್ಯದರ್ಶಿಗಳಾಗಿ ಮೂಲ್ಯರು ಅಂದರೆ ಕುಂಬಾರರು ಇರುತ್ತಾರೆ. ಬಂಟರು ನೇರವಾಗಿ ಯಾರನ್ನೂ ಕೊಲ್ಲರು. ಕೊಲ್ಲಲು ಆಜ್ಞೆ ಮಾಡುತ್ತಾರೆ. ಈ ಆಜ್ಞೆಯನ್ನು ಶಿರಸಾವಹಿಸಿ ನಡೆಸುವ ಶೂರರು ’ಮೂಲ್ಯ (ಕುಂಬಾರ)ರು ಎಂಬುದು ಪ್ರತೀತಿ, ಮೂಲ್ಯರಷ್ಟು ಶೀಘ್ರವಾಗಿ ಬೈದ್ಯರಾಗಲಿ, ಇತರ ಜನಾಂಗಗಳಾಗಲಿ ಸ್ಪಂದಿಸುವುದಿಲ್ಲವಂತೆ. ಬಂಟ-ಜೈನ ಬಾರಗರ ನಿಷ್ಟಾವಂತ ಸೇವಕರು ಮೂಲ್ಯ (ಕುಂಬಾರ) ಎಂಬುವುದರಲ್ಲಿ ಸಂಶಯವಿಲ್ಲ. ಅದೇ ರೀತಿ ’ಮಣ್ಸ’ರೆಂಬ ದಲಿತ ಜನಾಂಗ ಮತ್ತು ’ಮುಂಡಾಲ’ರೆಂಬ ದಲಿತ ಜನಾಂಗಗಳು ಬಂಟ ಬಾರಗರ ನಿಷ್ಠಾವಂತ ಸೇವಕರಾಗಿದ್ದರು.
5. ಕಾಸರಗೋಡು ಜಿಲ್ಲೆಯ ’ಬಲ್ಲಾಳ’ರೆಂಬ ಜಾತಿಯವರನ್ನು ನಲಿಕೆ ಜನಾಂಗದವರು ಭೂತ ಕಟ್ಟಿದ ಮೇಲೆ ’ತಳೆಮಣೆಕರ್ತುಳು’ ಎಂದು ಗೌರವದಿಂದ ಕರೆಯುತ್ತಾರೆ. ’ಕುಂಟಾರು ಬೀಡು’ ಕುಟುಂಬಸ್ಥರಾದ ಬಲ್ಲಾಳ ಜಾತಿಯವರನ್ನು `ಕುಂಟಾರು ಬೂಡು ತಳಮಣೆಕರ್ತುಳು’ ಎಂದು ಭೂತಾವೇಷದ ಸಂದರ್ಭದಲ್ಲಿ ಕರೆಯಲ್ಪಟ್ಟಿತ್ತು. ’ಬೂಡು’ ಎಂಬ ತುಳು ರೂಪವು ಕನ್ನಡದ ಬೀಡಿನ ತದ್ಭವ ಪದ. ತೆಲುಗಿನಲ್ಲಿ ’ವೀಡ್’ ತಮಿಳ್ ನಲ್ಲಿ ’ವೀಟ್ಟ್’ ಮಲೆಯಾಳದಲ್ಲಿಯೂ ’ವೀಟ್ಟ್’ ರೂಪದಲ್ಲಿದೆ. ತುಳುವಿನಲ್ಲಿ ’ಮನೆ’ಯನ್ನು ’ಇಲ್ಲ್’ ಎಂದೇ ಕರೆಯುತ್ತಾರೆ. ’ಬೂಡು’ ಎಂಬ ಪ್ರಯೋಗವು ’ಇಲ್ಲ್’ನ ಬದಲಿಗೆ ಬರಲು ಕಾರಣ ಕನ್ನಡ ಸೀಮೆಯ ಅರಸರ ಮತ್ತು ಜನಾಂಗಗಳ ಪ್ರದೇಶವಾಗಿರಬಹುದು. ಅದೇ ರೀತಿ ಮನೆ (ಮಣೆ) ಪ್ರಯೋಗ ನೋಡಬಹುದು. ಸ್ಥಳದ ಮನೆ ಎಂಬುದನ್ನು ತಳಮಣೆ ಎಂದು ದೈವವು ಹೇಳಿದೆ. ನಿರ್ದಿಷ್ಟ ಪ್ರದೇಶದ ಮನೆಯ ’ಕರ್ತುಗಳು’ (ಕರ್ತೃಗಳು) ಯಜಮಾನರೆಂಬುದೇ ಅರ್ಥ. ಹಾಗೆಂದು ಈ ಬಲ್ಲಾಳರ ಜಾತೀಯ ಜನರನ್ನು ’ಬಾರಗ’ರೆಂದು ಕರೆಯುವುದಿಲ್ಲ. ಅದೇ ಸಂದರ್ಭದಲ್ಲಿ ಈ ಬಲ್ಲಾಳ ಜಾತೀಯ ಜನರನ್ನು ’ಬಾರಗ’ರೆಂದು ಕರೆಯುವುದಿಲ್ಲ. ಅದೇ ಸಂದರ್ಭದಲ್ಲಿ ಈ ಬಲ್ಲಾಳರ ವೀಡನ್ನು ಪ್ರತ್ಯೇಕವಾಗಿ ’ಬೂಡು ಬಾರಿಗೆ’ ಎನ್ನುತ್ತವೆ ದೈವಗಳು. ಉದಾ: ಅದೂರಿನಲ್ಲಿರುವ ’ಚಳ್ಳಂಗೋಡು’ ಬೂಡು ಬಾರಿಗೆ ಎಂಬ ಪ್ರಯೋಗ ಇಲ್ಲಿನ ಭೂತಾರಾಧನೆಯ ಸಂದರ್ಭದಲ್ಲಿ ಬಳಕೆಯಾಗುತ್ತದೆ. ಪ್ರಸ್ತುತ ಇಂತಹ ’ಬೂಡು’ ನಾಶವಾಗಿದೆ. ಮೂಲತಃ ಬಂಟ-ಜೈನ ಬಾರಗರ ಮನೆಯನ್ನು ಬಾರಿಗೆ (ಬಾಲಿಕೆ-ಬರ್ಕೆ-ಬಾರ ಬೂಡು) ಎನ್ನುತ್ತಾರೆ. ಹೊರತು ಅನ್ಯರ ಪಾಲಿಗೆ ನಂತರ ಪ್ರಯೋಗವಾದ ಶಬ್ಧವಾಗಿದೆ. ಕಾರಣ ಬಾರಿಗೆ ಎಂಬ ಪದಕ್ಕೆ ಆಳುವವನ ಮನೆ-ಕಛೇರಿಗೆ ಎಂಬ ಅರ್ಥಕ್ಕೆ ತಿರುಗಿಕೊಂಡು ಬಂದಾಗ ಬಾರಿಗೆ ಶಬ್ಧವು ಇತರ ಸಮುದಾಯದವರ ಆಡಳಿತಾತ್ಮಕ ಮನೆ-ಕಛೇರಿಗೆ ಪ್ರಯೋಗಿಸಲ್ಪಟ್ಟಿತು. ’ಗುತ್ತು ಬಾರಿಗೆ’ ಎಂಬ ಪ್ರಯೋಗವಿದೆ. ಗ್ರಾಮದ ಅಧಿಕಾರವಿರುವ ಬಾರಿಗೆಯು ಗುತ್ತು ಬಾರಿಯಾಗುತ್ತದೆ. ಇಂತಹ ಗುತ್ತುಗಳು ಬಂಟ-ದೈವದ, ಬಾರಗರ ಪಾಲಿಗೆ ಜಾಸ್ತಿ ಇರುವುದು. ಕೆಲವು ಗ್ರಾಮಗಳಲ್ಲಿ ಗುತ್ತುಗಳ ಸಂಖ್ಯೆ ಹೆಚ್ಚಿರುತ್ತದೆ. ಕಾರಣ ಬೇರೆ ಬೇರೆ ಅರಸರ ಆಡಳಿತ ಕಾಲದಲ್ಲಿ ಬೇರೆ ಬೇರೆ ಬಾರಿಗೆಯವರು ಗುತ್ತುಗಳನ್ನು ಹೊಂದುತ್ತಾರೆ. ಕೊನೆಗಾಲದಲ್ಲಿ ಪಡೆದ ಬಾರಿಗೆಯವನ ಒಂದನೆ ಗುತ್ತು ಆಗುತ್ತದೆ. ಅವನಿಗಿಂತ ಹಿಂದಿನದು ಎರಡನೇ ಗುತ್ತು ಬಾರಿಗೆಯವನಾಗಿ ಹಿಂದೂಡಲ್ಪಡುತ್ತಾನೆ. ಎರಡನೇಯವನಿಗಿಂತ ಹಿಂದಿನ ಗುತ್ತು ಬಾರಿಗೆಯವ ಮೂರನೇ ಸ್ಥಾನಕ್ಕೆ ತಳ್ಳಲ್ಪಡುತ್ತಾನೆ. ಮೂರನೇಯವನಿಗಿಂತ ಹಿಂದಿನವ ನಾಲ್ಕನೇ ಸ್ಥಾನವನ್ನು ಪಡೆಯುತ್ತಾನೆ. ಕೆಲವು ಗ್ರಾಮಗಳಲ್ಲಿ ಐದುಗುತ್ತು, ಆರುಗುತ್ತು, ಎಂಟುಗುತ್ತುಗಳೂ ಇವೆ. (ಕೆಲವು ಕಡೆಗಳಲ್ಲಿ ’ಗುತ್ತು’ ಎಂದು ಸುಮ್ಮನೆ ಸೇರಿಸಿ ಹೇಳುತ್ತಾರೆ.) ಅದೇನೇ ಇದ್ದರೂ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಗುತ್ತು ಬಾರಿಗೆಯವನಿಗೆ ಗ್ರಾಮದ ದೈವರಾಧನೆಯಲ್ಲಿ ಹೆಚ್ಚಿನ ಮಹತ್ವವಿರುತ್ತದೆ. ಕಾರಣ ಆತ ಹೆಚ್ಚು ಪುರಾತನ ಕಾಲದಿಂದ ಭಾಗವಹಿಸಿದವ. ಉದಾ: ತುಳುನಾಡಿನ ಪುರಾತನ ರಾಜಧಾನಿಯಾದ ಮಂಗಳೂರು ಪ್ರದೇಶದಲ್ಲಿ ದೈವ-ಭೂತಾರಾಧನೆಯ ಸಂದರ್ಭದಲ್ಲಿ ’ಒಂದನೇ ಗುತ್ತು’ ಆಗಿರುವುದು ಕೊಡಿಯಾಲ್ ಬೈಲ್ ಗುತ್ತು ಆಗಿದೆ. ಆದರೆ ಅಲ್ಲಿ ನಾಲ್ಕನೆಯದ್ದಾಗಿ ತಳ್ಳಲ್ಪಟ್ಟ ಬಡಿಲ ಗುತ್ತು ಬಹಳ ಪುರಾತನದ್ದಾದ ಒಂದನೇ ಗುತ್ತು ಆಗಿರುವುದರಿಂದ ಭೂತಾರಾಧನೆಯ ಕೋಲ-ನೇಮ-ಜಾತ್ರೆಗಳ ಸಂದರ್ಭಗಳಲ್ಲಿ ದೈವಗಳಿಗೆ ಹೆಚ್ಚು ನಿಕಟವಾಗಿರುವುದು ಬಡಿಲ ಗುತ್ತು ಮನೆತನದ ಬಂಟ ಬಾರಗರು.
ಕೇಶವ ಶೆಟ್ಟಿ.ಕೆ. ಆದೂರು (ತುಳು ಸಂಶೋಧಕರು)
(ಟೈಪಿಂಗ್ ಸಹಕಾರ : ಸತೀಶ್ ಕುಲಾಲ್ ನಡೂರು, ರಂಜಿತ್ ಕುಮಾರ್ ಮೂಡಬಿದ್ರೆ)


