ಹಾವೇರಿ(ಏ.೦೧): ‘ತ್ರಿಪದಿ ಕವಿ ಸರ್ವಜ್ಞನವರ ಜನ್ಮ ಹಾಗೂ ಮರಣದ ಸ್ಥಳದ ಬಗ್ಗೆ ಜನರಲ್ಲಿ ಅನೇಕ ಗೊಂದಲಗಳಿವೆ. ಹಿರೇಕರೂರು ತಾಲ್ಲೂಕಿನ ಮಾಸೂರಿನಲ್ಲಿ ಅವರ ಮೂರ್ತಿ, ಸಮಾಧಿ ಸ್ಥಳ, ಕಾಶಿ ವಿಶ್ವನಾಥ ದೇವಾಲಯ ಹಾಗೂ ತಂದೆ ಬಸವರಸನವರ ಮೂರ್ತಿ ಸೇರಿದಂತೆ ಅನೇಕ ಪುರಾವೆಗಳಿವೆ. ಆದ್ದರಿಂದ, ಸರ್ಕಾರ ‘ಸತ್ಯ ಶೋಧನಾ ಸಮಿತಿ’ ರಚಿಸಿ, ಗೊಂದಲಗಳನ್ನು ಬಗೆಹರಿಸಬೇಕು’ ಎಂದು ರಾಜ್ಯ ಇತಿಹಾಸ ಸಮಿತಿ ಸದಸ್ಯ ಬುರಡೆಕಟ್ಟೆ ಮಂಜಪ್ಪ ಹೇಳಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಬಗ್ಗೆ ಸರ್ಕಾರವೇ ‘ಸತ್ಯ ಶೋಧನಾ ಸಮಿತಿ’ಯನ್ನು ರಚಿಸಿ, ಸಂಶೋಧನೆ ನಡೆಸಬೇಕು. ಸಮಿತಿಯು ಸತ್ಯಾಸತ್ಯೆಗಳನ್ನು ಪತ್ತೆ ಹಚ್ಚಿ ಜನರಲ್ಲಿರುವ ಗೊಂದಲಗಳನ್ನು ಬಗೆಹರಿಸಬೇಕು’ ಎಂದು ಅವರು ಮನವಿ ಮಾಡಿದರು.
‘ಸಾಹಿತಿ ಚನ್ನಪ್ಪ ಉತ್ತಂಗಿಯವರ ‘ಸರ್ವಜ್ಞನ ವಚನಗಳು’ ಎಂಬ ಗ್ರಂಥದಲ್ಲಿ ಸರ್ವಜ್ಞನವರ ತಂದೆ ಬಸವರಸ ಇಲ್ಲಿನ ಕಾಶಿ ವಿಶ್ವನಾಥ ದೇವರ ಆಶೀರ್ವಾದದಿಂದ ಸಂತಾನ ಭಾಗ್ಯ ಪಡೆದಿದ್ದಾರೆ. ಅಂಬಲೂರ ಬಸವರಸ ಹಾಗೂ ಪತ್ನಿ ಮಾಳವ್ವ ಸೇರಿದ ಸ್ಥಳ ಎಂದು ಉಲ್ಲೇಖಸಿದ್ದಾರೆ’ ಎಂದರು.
‘ಅಂಬಲ’ ಎಂದರೆ ಧರ್ಮ ಶಾಲೆ, ಚಾವಡಿ, ಮಂಟಪ ಎಂಬ ಅರ್ಥವಿದೆ. ಮಡಿಕೆ ಸುಡುವ ವೇಳೆಯಲ್ಲಿ ಹೊಗೆ (ಕಾರ್ಬನ್ ಡೈ ಆಕ್ಸೈಡ್) ಸಾಮಾನ್ಯ. ಆದ್ದರಿಂದ, ಕುಂಬಾರ ಓಣಿ ಊರಿನ ಹೊರಗಡೆ ಇರುತ್ತದೆ. ಇಲ್ಲಿಯೂ ಕುಂಬಾರ ಓಣಿ, ಧರ್ಮ ಶಾಲೆ ಹಾಗೂ ಚಾವಡಿಯು ಮಾಸೂರಿನ ಅಗಸೆ ಬಾಗಿಲ ಹೊರಗಿದೆ’ ಎಂದರು
‘ಸರ್ವಜ್ಞನವರ ತಾಯಿ ‘ಮಾಳವ್ವ’ ಕೂಡಾ ಮಾಸೂರಿನ ಅಗಸಿ ಬಾಗಿಲ ಪಕ್ಕದಲ್ಲಿರುವ ಕುಂಬಾರ ಓಣಿಯವರು. ಧರ್ಮಶಾಲೆ, ಚಾವಡಿ ಇದ್ದ ಸ್ಥಳವೇ ‘ಅಂಬಲೂರ’ ಆಗಿತ್ತು’ ಎಂದರು.
‘ಮಾಸೂರಿನಲ್ಲಿ ಸರ್ವಜ್ಞನವರ ತಂದೆ ಬಸವರಸನವರು ಇದ್ದರು. ಇದಕ್ಕೆ ಸಂಬಂಧಿಸಿದಂತೆ ಮಾಸೂರಿನಲ್ಲಿ ನಾಗರೀ ಲಿಪಿಯಲ್ಲಿ ಕೆತ್ತಲಾದ ಮಾಸೂರು ಬಸವರಸ ಶಿಲ್ಪವೂ ಇದೆ. ಮಾಸೂರಿನ ಕಾಶಿ ವಿಶ್ವನಾಥ ದೇವಾಲಯದ ಎದುರು ಸಮಾಧಿ ನಿರ್ಮಿಸಿದ್ದಾರೆ. ಸುಮಾರು 10 ಅಡಿ ಸುತ್ತಳತೆಯ ಬುನಾದಿಯಿಂದ ಕೂಡಿದೆ. ಯಾವುದೇ ಸಾಮಾನ್ಯ ಮನುಷ್ಯನ ಸಮಾಧಿಯನ್ನು ಅಷ್ಟು ದೊಡ್ಡದಾಗಿ ಕಟ್ಟುವುದಿಲ್ಲ. ಸ್ಥಳೀಯವಾಗಿ ಇಂದಿಗೂ ಅದನ್ನು ಸರ್ವಜ್ಞನವರ ಸಮಾಧಿ ಎಂದೇ ಕರೆಯುತ್ತಾರೆ’ ಎಂದರು.
‘ಸರ್ವಜ್ಞನವರು ತಮ್ಮ ಪೂಜೆಗಾಗಿ ಬನಶಂಕರಿ ದೇವಾಲಯ ಸಮೀಪದ ತೆರೆದ ಬಾವಿಯಿಂದ ನೀರನ್ನು ತೆಗೆದುಕೊಳ್ಳುತ್ತಿದ್ದರಂತೆ. ಅದಕ್ಕೆ ಸ್ಥಳೀಯರು ‘ಸರ್ವಜ್ಞನ ಬಾವಿ’ಯೇ ಎಂದು ಕರೆಯುತ್ತಾರೆ’ ಎಂದ ಅವರು, ‘ಸರ್ವಜ್ಞನವರ ಸಮಾಧಿ ಹಾಗೂ ಕಾಶಿ ವಿಶ್ವನಾಥ ದೇವಾಲದ ಜೀರ್ಣೋದ್ಧಾರ ಆಗಬೇಕಿದೆ. ಈ ಸ್ಥಳಗಳನ್ನು ಪ್ರವಾಸಿ ತಾಣಗಳಾಗಿ ಮಾಡಿ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದಂತೆ ಸರ್ವಜ್ಞ ಪ್ರಾಧಿ ಕಾರಕ್ಕೂ ಅನುದಾನವನ್ನು ನೀಡಬೇಕು.
ಪ್ರಾಧಿಕಾರ ಕೇಂದ್ರ ಕಚೇರಿಯನ್ನು ಮಾಸೂರಿನಲ್ಲಿಯೇ ಸ್ಥಾಪಿಸಬೇಕು, ಸರ್ವಜ್ಞ ತ್ರಿಪದಿ ವಾಚನಾಲಯವನ್ನು ನಿರ್ಮಿಸಬೇಕು ಹಾಗೂ 10 ಎಕರೆ ಜಾಗವನ್ನು ಅಭಿವೃದ್ಧಿಗೆ ಮೀಸಲಿ ಡಬೇಕು’ ಎಂದರು. ಸರ್ವಜ್ಞನ ಮಾಸೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಜು ಸುಣಗಾರ, ನಿವೃತ್ತ ಶಿಕ್ಷಕ ಎಚ್.ಎಂ.ತಳವಾರ, ನಾಗರಾಜ ಎಚ್ ಇದ್ದರು.