ಬಂಟ್ವಾಳ(ಮಾ.೩೧): ದ.ಕ ಜಿಲ್ಲೆಯ ಮೊದಲ ಕುಲಾಲ ಸಮುದಾಯದ ಮುಖವಾಣಿ ಪತ್ರಿಕೆ ಸರ್ವಜ್ಞವಾಣಿ ಶುಕ್ರವಾರ ಸಂಜೆ ಲೋಕಾರ್ಪಣೆಗೊಂಡಿತು. ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭ ಮಾತನಾಡಿದ ಅವರು ಸಮುದಾಯದ ಅಭಿವೃದ್ಧಿಯೊಂದಿಗೆ ಉನ್ನತ ಚಿಂತನೆಗಳನ್ನಿಟ್ಟುಕೊಂಡು ಮಾದರಿ ಪತ್ರಿಕೆಯಾಗಿ ಸರ್ವಜ್ಞವಾಣಿ ಹೊರಹೊಮ್ಮಲಿ ಎಂದು ಶುಭಾಶೀರ್ವಾದ ನೀಡಿದರು. ಈ ಸಂದರ್ಭ ಪತ್ರಿಕೆಯ ಸಂಪಾದಕ ಪದ್ಮನಾಭ ಕುಲಾಲ್ ವೇಣೂರು, ಗೌರವ ಸಂಪಾದಕರಾದ ಸೋಮಯ್ಯ ಮೂಲ್ಯ ಹನೈನಡೆ, ಹರೀಶ್ ಕಾರಿಂಜ, ಪತ್ರಕರ್ತರಾದ ಸಂದೀಪ್ ಸಾಲ್ಯಾನ್, ಬಿ.ಎಸ್.ಕುಲಾಲ್, ವಿಷ್ಣುಗುಪ್ತ ಪುಣಚ, ಸಚ್ಚೀಂದ್ರ ನಾಯಕ್ ಮತ್ತಿತರರು ಹಾಜರಿದ್ದರು.
ಸರ್ವಜ್ಞವಾಣಿ ಕುಲಾಲ -ಕುಂಬಾರ ಸಮುದಾಯದ ಧ್ವನಿಯಾಗಿ ಪತ್ರಿಕೆ ಪ್ರಕಟಗೊಳ್ಳಲಿದ್ದು ಪ್ರತಿ ತಿಂಗಳು ಓದುಗರ ಕೈ ಸೇರಲಿದೆ. ಪ್ರಾಯೋಗಿಕ ಸಂಚಿಕೆಯಾಗಿ ಪತ್ರಿಕೆಯನ್ನು ಹೊರತರಲಾಗಿದ್ದು ಸ್ವಜಾತಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಪತ್ರಿಕೆ ಕಾರ್ಯನಿರ್ವಹಿಸಲಿದೆ ಎಂದು ಸಂಪಾದಕ ಪದ್ಮನಾಭ ಕುಲಾಲ್ ವೇಣೂರು ತಿಳಿಸಿದ್ದಾರೆ.