ಶಿಕ್ಷಣ ಪಡೆದು ಅಭಿವೃದ್ಧಿ ಹೊಂದಿ : ಡಾ.ಆರ್.ವಿ. ಮಂಜುಳಾ
ವಿಜಯಪುರ(ಮಾ.೨೪): ಕುಂಬಾರ ಸಮಾಜ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿದ್ದು ಸಮಾಜದ ಜನತೆ ಒಗ್ಗಟ್ಟಾಗಿ ಶಿಕ್ಷಣವಂತರಾಗಿ ಮುನ್ನಡೆ ಸಾಧಿಸಬೇಕು ಎಂದು ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತೆ ಡಾ.ಆರ್.ವಿ. ಮಂಜುಳಾ ಕಿವಿಮಾತು ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜರುಗಿದ ಕುಂಬಾರ ಸರ್ಕಾರಿ, ಅರೆ ಸರ್ಕಾರಿ ನೌಕರರ ಸಹಕಾರ ಸಂಘ ನಿಯಮಿತ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಸ್ವಾವಲಂಬಿ ಬದುಕಿಗೆ ಮಾರ್ಗ ತೋರಿಸಿ ಪ್ರಗತಿ ಸಾಧಿಸಬೇಕು ಎಂದರು. ಸಾನ್ನಿಧ್ಯ ವಹಿಸಿದ್ದ ತೆಲಸಂಗದ ಕುಂಬಾರ ಗುರುಪೀಠದ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಉಪ- ಮೇಯರ್ ಗೋಪಾಲ ಘಟ ಕಾಂಬಳೆ ಮಾತನಾಡಿ, ಕುಂಬಾರಿಕೆ ಕಲೆ ನಶಿಸಿ ಹೋಗುತ್ತಿದೆ, ಶ್ರೀಮಂತವಾದ ಕುಂಬಾರಿಕೆ ಕಲೆ ಉಳಿಸಿ ಬೆಳೆಸಿಕೊಂಡು ಹೋಗುವುದು ಎಲ್ಲರ ಕರ್ತವ್ಯವಾಗಿದ್ದು, ಇದಕ್ಕೆ ಪೂರಕವಾಗಿ ನಗರದಲ್ಲಿ ಕುಂಬಾ ರರ ಉತ್ಪನ್ನಗಳ ಮಾರಾಟಕ್ಕೆ ಸೂಕ್ತ ಸ್ಥಳಾವಕಾಶ ಒದಗಿಸಲು ಅಗತ್ಯ ನೆರವು ನೀಡಲಾಗುವುದು ಎಂದರು.
ಶಂಕರ ಕುಂಬಾರ, ಗುರುರಾಜ್, ವಿವೇಕ, ಶ್ರೀಶೈಲ ಬಳಗಾನೂರ, ಚನ್ನ ಸಂಗಪ್ಪ, ಚಂದ್ರಶೇಖರ, ಕೃಷ್ಣ ಕಾಡಾ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ, ಬಸಣ್ಣ, ರಾಣಿ ಚನ್ನಮ್ಮ ಪ್ರಶಸ್ತಿ ಪುರಸ್ಕೃತ ರಾದ ಬಸಲಿಂಗಮ್ಮ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀಕಾಂತ, ತಾಳಿ ಕೋಟೆ ಎಪಿಎಂಸಿ ಸದಸ್ಯ ಮಹಾ ದೇವಪ್ಪ ಅವರನ್ನು ಸನ್ಮಾನಿಸಿ ಗೌರವಿಸ ಲಾಯಿತು. ಸಂಘದ ಅಧ್ಯಕ್ಷ ಎಸ್.ಜಿ. ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಸ್.ಕುಂಬಾರ ಸ್ವಾಗತಿಸಿದರು. ಚಂದ್ರಕಾಂತ ಕುಂಬಾರ ವಂದಿಸಿದರು.