ಬಂಟ್ವಾಳ(ಮಾ.೨೨): ಬಂಟ್ವಾಳ ಪುರಸಭಾ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಸದಾಶಿವ ಬಂಗೇರ ಆಯ್ಕೆಯಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದ ಇವರು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ನಿಕಟವರ್ತಿಯಾಗಿ ಗುರುತಿಸಿಕೊಂಡಿದ್ದರು. ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಪಿಯೂಸ್ ಎಲ್. ರೊಡ್ರಿಗಸ್ ಅಧಿಕಾರವಧಿ ಮುಗಿದ ಬಳಿಕ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಆಡಳಿತಾಧಿಕಾರಿಯಾಗಿ ಮಂಗಳೂರು ಸಹಾಯಕ ಕಮಿಷನರ್ ಡಾ.ಅಶೋಕ್ ಕಾರ್ಯ ನಿರ್ವಹಿಸುತ್ತಿದ್ದರು.
ಸದಾಶಿವ ಬಂಗೇರ ಅವರು ಪುರಸಭೆಯ ಎರಡನೆ ಅವಧಿಯ ಅಧ್ಯಕ್ಷನೆಂದೇ ಬಿಂಬಿತರಾಗಿದ್ದು, ಕೊನೆಗಳಿಗೆಯಲ್ಲಿ ಅಧ್ಯಕ್ಷ ಹುದ್ದೆ ಕೈತಪ್ಪಿದ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರಲ್ಲಿ ಮುನಿಸಿಕೊಂಡಿದ್ದರು. ತದ ನಂತರ ಅವರು ಪಕ್ಷದ ಚಟುವಟಿಕೆಯಿಂದಲೂ ದೂರ ಇದ್ದರು. ಸದಾ ಕ್ರೀಯಾಶೀಲವಾಗಿ ಪುರಸಭೆಯ ಸಾಮಾನ್ಯ ಸಭೆಯ ಚರ್ಚೆಯಲ್ಲೂ ಭಾಗವಹಿಸುತ್ತಿದ್ದ ಅವರು ನಂತರ ವಿಪಕ್ಷ ಸಾಲಿನಲ್ಲಿ ಕುಳಿತು ವೌನಕ್ಕೆ ಶರಣಾಗುತ್ತಿದ್ದರು. ಕೇವಲ ಹಾಜರಾತಿಗಾಗಿ ಮಾತ್ರ ಸಭೆಗೆ ಆಗಮಿಸಿ ಗೌರವ ಧನ, ಉಪಹಾರ ಸ್ವೀಕರಿಸದೆ ತೆರಳುತ್ತಿದ್ದರು. ಅಲ್ಲದೆ ಪುರಸಭೆ ಅಧ್ಯಕ್ಷ ಹುದ್ದೆ ಕೈ ತಪ್ಪಿದ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಕುಲಾಲ ಸಮುದಾಯ ಕೂಡಾ ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿತ್ತು. ಈ ನಿಟ್ಟಿನಲ್ಲಿ ಸದಾಶಿವ ಬಂಗೇರರಿಗೆ ಬಂಟ್ವಾಳ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹುದ್ದೆ ನೀಡಲಾಗಿದೆ.
ಬುಡಾ ಅಲ್ಲ : ಯೋಜನಾ ಪ್ರಾಧಿಕಾರ ಬಂಟ್ವಾಳ ಯೋಜನಾ ಪ್ರಾಧಿಕಾರವೋ ಅಥವಾ ನಗರಭಿವೃದ್ಧಿ ಪ್ರಾಧಿಕಾರವೋ ಎನ್ನುವ ಬಗ್ಗೆ ಜನಸಾಮಾನ್ಯರಲ್ಲಿ ಗೊಂದಲವಿದೆ. ಸಾಮಾನ್ಯ ಭಾಷೆಯಲ್ಲಿ ಯೋಜನಾ ಪ್ರಾಧಿಕಾರವನ್ನೇ ಬುಡಾ (ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರ) ಎಂದು ಕರೆಯಲಾಗುತ್ತಿದೆ. ನಗರಾಭಿವೃದ್ಧಿ ಪ್ರಾಧಿಕಾರ ಎಂಬುದು ಸ್ವಾಯತ್ತ ಸಂಸ್ಥೆ. ನಗರಾಭಿವೃದ್ಧಿ ಪ್ರಾಧಿಕಾರ ಅಸ್ಥಿತ್ವಕ್ಕೆ ಬರಬೇಕಾದರೆ ಅದರದ್ದೇ ಆದ ನೀತಿ ನಿಯಮಗಳಿವೆ. ಜನಸಂಖ್ಯೆ, ವಿವಿಧ ಮೂಲಗಳಿಂದ ಬರುವ ಆದಾಯದ ಪ್ರಮಾಣ, ಒಳಗೊಂಡಿರುವ ಗ್ರಾಮಗಳು, ಅವುಗಳ ಭೌಗೋಳಿಕ ವ್ಯಾಪ್ತಿ ಹೀಗೆ ಹಲವು ಮಾನದಂಡವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ನಗರಾಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ನಂತರ ಅದಕ್ಕೆ ಹಲವು ವಿಶೇಷ ಅಧಿಕಾರ ಇರುತ್ತದೆ. ಶುಲ್ಕ ವಸೂಲಿ ಮಾಡುವ ಅಧಿಕಾರ, ಯೋಜನೆಗಳ ನಕ್ಷೆ ಸಿದ್ಧಪಡಿಸುವ ಅಧಿಕಾರ, ಜೊತೆಗೆ ಅಧ್ಯಕ್ಷರನ್ನೊಳಗೊಂಡ ಸಮಿತಿ, ಅಧಿಕಾರಿ ವರ್ಗವೂ ಇರುತ್ತದೆ. ಆದರೆ ಪ್ರಸ್ತುತ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಬುಡಾ ಅಸ್ಥಿತ್ವದಲ್ಲಿಲ್ಲ. ಬದಲಾಗಿ ಯೋಜನಾ ಪ್ರಾಧಿಕಾರವಷ್ಟೇ (ಪ್ಲಾನಿಂಗ್ ಅಥಾರಿಟಿ) ಇದೆ. ಯೋಜನೆ ಸಿದ್ಧಪಡಿಸುವ, ಕಟ್ಟಡ ಪರವಾನಿಗೆ ನೀಡುವ ಸಂದರ್ಭದಲ್ಲಿ ತಾಂತ್ರಿಕ ಅಭಿಪ್ರಾಯ ನೀಡುವ ಅಧಿಕಾರ ಯೋಜನಾ ಪ್ರಾಧಿಕಾರಕ್ಕಿದೆ. ಈ ಹಿಂದೆ ಈ ಕಾರ್ಯ ನಗರ ಯೋಜನಾ ಸಹಾಯಕ ನಿರ್ದೇಶಕರ ವ್ಯಾಪ್ತಿಗೆ ಒಳಪಟ್ಟಿತ್ತು. ಸ್ಥಳೀಯ ಯೋಜನಾ ಪ್ರದೇಶಕ್ಕೆ ರೂಪಿಸಿರುವ ಮಹಾಯೋಜನೆಯ ನಕ್ಷೆಯಲ್ಲಿ ತಿಳಿಸಿರುವಂತೆ ಕೆಲಸ ಕಾರ್ಯ ನಡೆಯಿತ್ತಿವೆಯೋ ಎಂಬ ಉಸ್ತುವಾರಿ ನೋಡಿಕೊಳ್ಳುವ ಹಾಗೂ ವರದಿಯನ್ನು ನಗರ ಯೋಜನಾ ಇಲಾಖೆಗೆ ಕಳುಹಿಸುವ ಜವಾಬ್ದಾರಿ ಈ ಯೋಜನಾ ಪ್ರಾಧಿಕಾರಕ್ಕಿದೆ.