ಕುಲಾಲರಿಗೆ ಸಮಾಜಕ್ಕೆ ರಾಜಕೀಯ ಸ್ಥಾನಮಾನ ಕಲ್ಪಿಸಲು ಆಗ್ರಹ
ಕುಂದಾಪುರ(ಮಾ.೧೩): ಕುಲಾಲ ಸಮುದಾಯ ಈ ನೆಲದ ನಾಗರಿಕತೆಯ ಹುಟ್ಟಿನೊಂದಿಗೆ ಜನ್ಮತಳೆದ ಶ್ರೇಷ್ಠ ಸಮುದಾಯ. ಕುಂಬಾರ, ಮೂಲ್ಯ, ಹಾಂಡ, ಗುನುಗ ಹೀಗೆ ಬೇರೆ ಬೇರೆ ಹೆಸರುಗಳಿಂದ ಈ ನಾಡಿನ ಮೂಲೆ ಮೂಲೆಯಲ್ಲು ಸಾಕಷ್ಟು ಸಂಖ್ಯೆಯಲ್ಲಿರುವ ಕುಂಬಾರ ಸಮುದಾಯ ಇಂದು ಬಲಿಷ್ಠ ಶಕ್ತಿಯಾಗಿ ಒಗ್ಗೂಡುತ್ತಿವೆ. ಸಮುದಾಯಕ್ಕೆ ಮುಂಬರುವ ಚುನಾವಣೆಯಲ್ಲಿ ರಾಜಕೀಯ ಸ್ಥಾನಮಾನ ಕೊಡುವ ಕೆಲಸವನ್ನು ಎಲ್ಲ ರಾಜಕೀಯ ಪಕ್ಷಗಳು ಮಾಡಬೇಕು ಎಂದು ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆಯ ಸ್ಥಾಪಕಾಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಆಗ್ರಹಿಸಿದರು.
ಅವರು ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆಯ ಹೆಂಗವಳ್ಳಿ ಘಟಕದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡುತ್ತಿದ್ದರು. ಸಮುದಾಯದ ಸಂಘಟನೆಗೆ ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆ ರಾಜ್ಯಕ್ಕೆ ಮಾದರಿಯಾಗಿದ್ದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಮುಂಚೂಣಿಯಲ್ಲಿವೆ. ಕುಂದಾಪುರ, ಕಾರ್ಕಳ, ಕಾಪು, ಸುರತ್ಕಲ್, ಕುಳಾಯಿ, ಬೆಳ್ತಂಗಡಿ, ಬಂಟ್ವಾಳ ಹಾಗೂ ಉಳ್ಳಾಲ ವಿಧಾನಸಭಾ ಯುವ ಘಟಕಗಳು ಪೈಪೋಟಿಯ ರೀತಿಯಲ್ಲಿ ಕುಲಾಲ ಯುವಕರನ್ನು ಸಂಘಟಿಸುತ್ತಿವೆ. ಇದು ಎಲ್ಲ ಪಕ್ಷಗಳ ರಾಜಕರಣಿಗಳ ಗಮನಕ್ಕೆ ಬಂದಿದ್ದು ಕುಂಬಾರ ಸಮುದಾಯಕ್ಕೆ ಮುಂದಿನ ಚುನಾವಣೆಗಳಲ್ಲಿ ಸಾಮಾಜಿಕ ನ್ಯಾಯ ಸಿಗುವ ಭರವಸೆ ಸಿಕ್ಕಿದೆ ಎಂದು ಅವರು ಹೇಳಿದರು.
ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದ ಕುಲಾಲ ಸಮಾಜ ಸುಧಾರಕ ಸಂಘ ಕುಂದಾಪುರದ ಅಧ್ಯಕ್ಷರು, ವೈದ್ಯರಾಗಿರುವ ಡಾ ಎಮ್. ವಿ. ಕುಲಾಲ್, ಕುಲಾಲ ಯುವ ವೇದಿಕೆಗಳಡಿಯಲ್ಲಿ ಸಮಸ್ತ ಕುಲಾಲರು ಒಗ್ಗೂಡುತ್ತಿದ್ದು ಸಮುದಾಯ ಸಂಘಟನೆಗಳು ಬಲಿಷ್ಟವಾಗುತ್ತಿವೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಹಲವು ಕುಲಾಲ ನಾಯಕರು ಈಗ ತಯಾರಾಗಿದ್ದು ಅವರಿಗೆ ಚುನಾವಣೆಗಳಲ್ಲಿ ಸ್ಪರ್ಧಿಸುವ ಅವಕಾಶವನ್ನು ರಾಜಕೀಯ ಪಕ್ಷಗಳು ನೀಡಬೇಕು ಎಂದರು.
ಕರಾವಳಿ ಕುಲಾಲ ಯುವ ವೇದಿಕೆ ಹೆಂಗವಳ್ಳಿ ಘಟಕದ ಅಧ್ಯಕ್ಷರಾದ ಗೋವಿಂದ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂದಾಪುರದ ಕುಲಾಲ ಸಮಾಜ ಸುಧಾರಕ ಸಂಘದ ಅಧ್ಯಕ್ಷರಾದ ನಿರಂಜನ ಅಸೋಡು, ಕರಾವಳಿ ಕುಲಾಲ ಯುವ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಲಾಲ್ ನಡೂರು, ಕರಾವಳಿ ಕುಲಾಲ ಯುವ ವೇದಿಕೆ ಕುಂದಾಪುರ ವಿಧಾನಸಭಾ ಮಟ್ಟದ ಅಧ್ಯಕ್ಷರಾದ ಹರೀಶ್ ಕುಲಾಲ್ ಕೆದೂರು, ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸುಪ್ರೀತಾ ಉದಯ್ ಕುಲಾಲ್, ಬೈಂದೂರು ವಲಯದ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಮಡಾಮಕ್ಕಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜು ಕುಲಾಲ್, ಕಾರ್ಕಳ ಕುಲಾಲ ಸಮಾಜ ಸುಧಾರಕ ಸಂಘದ ಅಧ್ಯಕ್ಷರಾದ ಭೋಜು ಕುಲಾಲ್, ಪೆರ್ಡೂರಿನ ಕುಂಬಾರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುಲಾಲ್ ಪಕ್ಕಾಲು, ಹೆಂಗವಳ್ಳಿ ಕುಲಾಲ ಯುವ ಸಂಘಟನೆಯ ಮಾರ್ಗದರ್ಶಕ ಕೊರಗ ಕುಲಾಲ್ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹೆಂಗವಳ್ಳಿ ಕುಲಾಲ ಯುವ ವೇದಿಕೆಯ ಉಪಾಧ್ಯಕ್ಷ ರಮೇಶ್ ಕುಲಾಲ್ ಪ್ರಸ್ತಾವನೆಗೈದರು. ಕಾರ್ಯದರ್ಶಿ ತಿಮ್ಮಪ್ಪ ಕುಲಾಲ್ ಸ್ವಾಗತಿಸಿದರು. ಮಂಜುನಾಥ್ ಹಿಲಿಯಾಣ ಕಾರ್ಯಕ್ರಮ ನಿರೂಪಣೆಗೈದರು.
ಹಕ್ಕೊತ್ತಾಯ
ರಾಜ್ಯ ಕುಂಭಕಲಾ ನಿಗಮದ ಜೊತೆ ರಾಷ್ಟ್ರೀಯ ಕುಂಬಕಲಾ ನಿಗಮ ನೀಡುವಂತೆ ಕರ್ನಾಟಕ ರಾಜ್ಯ ಕುಂಬಾರ ಮಹಾಸಂಘ ಹಾಗೂ ಕುಂಬಾರ ಸರ್ವಜ್ಞ ವೇದಿಕೆಯ ಮೂಲಕ ಕೇಂದ್ರ ಸರಕಾರಕ್ಕೆ ಹಕ್ಕೊತ್ತಾಯ ಮಂಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಅಲ್ಲದೆ ಮುಂದಿನ ನವೆಂಬರ್ ತಿಂಗಳಿನಲ್ಲಿ ಉಡುಪಿಯಲ್ಲಿ ಬೃಹತ್ ವಿಶ್ವ ಕುಂಬಾರರ ಸಮ್ಮೇಳನ ಹಾಗೂ ವಿಶ್ವ ಸರ್ವಜ್ಞ ಪ್ರಶಸ್ತಿಯನ್ನು ಸ್ಥಾಪಿಸಿ ಕುಂಬಾರ ಸಮುದಾಯಕ್ಕೆ ಸಾಮಾಜಿಕ ಹಾಗೂ ರಾಜಕೀಯ ನ್ಯಾಯಕ್ಕಾಗಿ ಹಕ್ಕೊತ್ತಾಯ ಮಾಡಲು ಸಭೆಯಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲಾಯಿತು.