ಮಾಳ ಮಲ್ಲಾರು ಗ್ರಾಮದ ದಿ. ಸಿದ್ದು ಮೂಲ್ಯರ ಕುಟುಂಬಕ್ಕೆ ಬೇಕಿದೆ ನೆರವಿನ ಆಸರೆ
ಕಾರ್ಕಳ(ಮಾ.೧೧): ಅಭಿವೃದ್ಧಿ ಮತ್ತು ಬದಲಾವಣೆಯ ಕನಸುಗಳ ರಂಗು ಕಣ್ತುಂಬಿಕೊಳ್ಳೋ ಈ ಪ್ರಸಕ್ತ ಸನ್ನಿವೇಶದಲ್ಲಿ ನಾಗರಿಕತೆಯ ಸ್ಪರ್ಶಕ್ಕೂ ನಿಲುಕದ ಕೆಲವೊಂದು ಅನಕ್ಷರಸ್ಥ ಕುಟುಂಬಗಳ ಅನಾಗರೀಕ ಪದ್ಧತಿಗಳು ಪ್ರಜ್ಞಾವಂತ ಸಮಾಜಕ್ಕೊಂದು ಸವಾಲಾಗಿ ಧುತ್ತನೆ ಎದುರಾಗುವುದಿದೆ. ಹಾಗೇಯೇ ಅಂತದ್ದೊಂದು ಪ್ರಶ್ನೆಯಾಗಿ ಕಾಡಿದ ಮಾಳ ಗ್ರಾಮದ ಪ್ರಗತಿನಗರವಾಸಿ ದಿ. ಸಿದ್ದು ಮೂಲ್ಯರ ಸಂಸಾರದ ಕಥೆಯಿದು.ಕುಡಿತದ ದುಶ್ಚಟದಿಂದ ಆರು ತಿಂಗಳ ಹಿಂದೆ ಇಹಲೋಕ ತ್ಯಜಿಸಿದ ಸಿದ್ದು ಮೂಲ್ಯರು ತನ್ನ ಮಡದಿ, ಮಗಳಿಗಾಗಿ ಉಳಿಸಿ-ಬೆಳೆಸಿ ಹೋಗಿದ್ದು ತಾನು ಕುಡಿತಕ್ಕಾಗಿ ಮಾಡಿದ ಸಾಲದ ಹೊರೆಯೊಂದೇ !
ತಮ್ಮದೆನ್ನುವ ಐವತ್ತು ಸೆಂಟ್ಸ್ ಜಾಗದಲ್ಲಿ ಶಿಥಿಲಗೊಂಡು ಜೀರ್ಣಾವಸ್ಥೆಯಲ್ಲಿರುವ ಹಂಚಿನ ಮನೆಯ ಚಾವಡಿಯಲ್ಲಿ ಹರಕು ಚಾಪೆ ಹರವಿಕೊಂಡು ಉತ್ತಾರಾಭಿಮುಖದ ದ್ವಾರದತ್ತ ನೆಟ್ಟ ನೋಟದಲ್ಲೇ, ಭವಿಷ್ಯದಲ್ಲಿ ಉನ್ನತಿಯ ಬೆಳ್ಳಿಕಿರಣಗಳು ತಮ್ಮ ಬದುಕಿನಲ್ಲೂ ಮೂಡಲಿವೆಯೆಂಬ ಆಶಾವಾದದಲ್ಲಿರುವ ಸಿದ್ದು ಮೂಲ್ಯರ ಪತ್ನಿ ಅಪ್ಪಿ ಮೂಲ್ಯರದು ತನ್ನ ಮನೆಯಂತೆಯೇ ಮೈ ಕಸುವು ಕಳಕೊಂಡು ಸವಕಲಾದ ಆರುವತ್ತೈದರಂಚಿನ ದುರ್ಬಲ ಶರೀರ. ಬತ್ತಿದ ಬಾವಿಯೊಳಗೆ ಒಸರಿನ ಪಸೆಯಂತೆ ಕಣ್ತುಂಬಿಕೊಳ್ಳೊ ಕಣ್ಣೀರೊಂದೇ ಜೀವ ಚೈತನ್ಯಕ್ಕೊಂದು ಸಾಕ್ಷಿ. ಮಗಳದು೨೫-೨೮ರ ಪ್ರಾಯದಲ್ಲೂ ಎಂಟರ ಬಾಲೆಯ ಮುಗ್ದತೆ. ಅಕ್ಷರ ಜ್ಞಾನವಿಲ್ಲದೆ, ಸಿದ್ದು ಮೂಲ್ಯರ ಕುಡಿತದ ದರ್ಪಕ್ಕೆ , ಏಟಿನ ದಬ್ಬಾಳಿಕೆಗೆ ಮನಸ್ಸು, ಬುದ್ಧಿ ಮುದುರಿ ಮುದುಡಿ ಕುಳಿತಿದ್ದು, ಪ್ರೌಢತೆ ಪ್ರಬುದ್ಧತೆಯ ಪ್ರಾಜ್ಞತೆಯಲ್ಲಿ ಮನಸು ಅರಳಲೇ ಇಲ್ಲ.
ಸಿದ್ದು ಮೂಲ್ಯರ ಜೀವಿತಾವಧಿಯವರೆಗೆ ಹೊರ ಜಗತ್ತಿನ ನೆರಳು ಸೋಕದೆ ಗೃಹ ಬಂಧನದ ದೌರ್ಜನ್ಯಕೊಳಕ್ಕಾದ ಈ ಎರಡು ಜೀವಗಳು ಈಗ ಗಂಡು ನೆಲೆಯಿಲ್ಲದೆ, ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗೆ ಬಿಟ್ಟಂತಹ ಅನುಭವದಲ್ಲಿ ಹೊರ ಪ್ರಪಂಚದತ್ತ ಇಣುಕುವ ಪ್ರಯತ್ನ ಮಾಡುತ್ತಿವೆ . ಹೊಟ್ಟೆ ಹೊರೆಯೋ ಚಿಂತೆ ಒಂದೆಡೆಯಾದರೆ ಸೂರಿಲ್ಲದಿರುವ ಚಿಂತೆ ಮತ್ತೊಂದೆಡೆ ಸೇರಿಕೊಂಡು ಅರೆಗಳಿಗೆಯ ನೆಮ್ಮದಿಯ ನಿದ್ದೆಯನ್ನು ಕಸಿದುಕೊಂಡಿದೆ. ತಿಂಗಳೆರಡು ಕಳೆದರೆ ಮಳೆಗಾಲ ಆರಂಭವಾಗಲ್ಲಿದ್ದು, ಮೊದಲ ಮಳೆಯ ಅಬ್ಬರಕ್ಕೆ ಶಿಥಿಲಗೊಂಡ ಮನೆಯು ಧರಶಾಯಿಯಾಗುವುದು ಖಚಿತವಾಗಿದೆ. ಹೀಗಾದಲ್ಲಿ ಈ ಹೆಣ್ಣು ಸಂಸಾರ ಸಾರ್ವಜನಿಕ ಬಸ್ ನಿಲ್ದಾಣದಲ್ಲೇ ಆಶ್ರಯ ಪಡೆಯುವ ಅನಿವಾರ್ಯತೆ ಎದುರಾಗಬಹುದು. ಸಹೃದಯಿ ದಾನಿಗಳ ನೆರವಿನ ನಿರೀಕ್ಷೆಯಲ್ಲಿರುವ ಈ ಸಂಸಾರಕ್ಕೆ ಗ್ರಾಮ ಪಂಚಾಯತ್ ನಿಂದ ಆಶ್ರಯ ಯೋಜನೆಯ ನಿವೇಶನ ಮಂಜೂರಾಗಿದೆ.
ಮನೆ ಮಂಜೂರಾಗಲು ಆಗತ್ಯ ದಾಖಲೆಗಳ ಸಮೇತ ನಿರಂತರ ಶ್ರಮಿಸಿ ಈಗ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಯುವ ಉತ್ಸಾಹಿ ತರುಣ, ಯುವ ಶಕ್ತಿ ಬಳಗದ ಸಕ್ರಿಯ ಸದಸ್ಯರಾದ ರಂಜಿತ್ ಕುಲಾಲ್ ರವರಿಗೆ ಆತ್ಮಸ್ಥೈರ್ಯ ತುಂಬಿದ ಸ್ಥಳೀಯ ಸಂಘಟನೆಯಾದ ಯುವಶಕ್ತಿ ಬಳಗದ ಸರ್ವ ಸದಸ್ಯರ ಬೆಂಬಲದ ಭರವಸೆಯಲ್ಲಿ ಕೆಲಸ ಮುಂದುವರಿಯುತ್ತಿದ್ದು ಪೂರ್ಣ ಮನೆ ನಿರ್ಮಾಣಕ್ಕೆ ಅನುದಾನಕ್ಕಿಂತ ಅಧಿಕ ಮೊತ್ತದ ಹಣದ ಅವಶ್ಯಕತೆ ಇದೆ. ದಯನೀಯ ಸ್ಥಿತಿಯಲ್ಲಿರುವ ಈ ಅನಾಥ ಹೆಣ್ಣು ಸಂಸಾರಕ್ಕೆ ಮಾನವೀಯತೆಯ ನೆಲೆಯಲ್ಲಿ ದಿಕ್ಕು ತೋರೋ ಈ ಸತ್ಕಾರ್ಯಕ್ಕೆ ಸಹೃದಯವಂತರು ಸ್ಪಂದಿಸಿ ಧನ ಸಹಾಯದ ಮೂಲಕ ಸಹಕರಿಸಬೇಕಾಗಿದೆ.
ಧನ ಸಹಾಯ ಮಾಡುವವರು ಈ ಖಾತೆಗೆ ಜಮಾ ಮಾಡಬೇಕಾಗಿ ವಿನಂತಿ.
CORPORATION BANK MALA
NAME : APPI MOOLYA
A/C NO : 035100101005831
IFSC CODE CORP0000351
ಬರಹ : ಸತೀಶ್ ಕಜ್ಜೋಡಿ, ಕಾರ್ಕಳ