ಸರ್ವಜ್ಞ ಹಾಗೂ ಬುದ್ಧನ ತಾಯಿ ಕುಂಬಾರರು : ಕ್ರೆಡಿಟ್ ಐ ಸಂಸ್ಥೆ ಟ್ರಸ್ಟಿ ಡಾ. ಎಂ. ಪಿ. ಹರ್ಷ
ಮೈಸೂರು(ಮಾ.೦೬): ಮಹಾಕವಿ ಸರ್ವಜ್ಞ ಜಯಂತಿಯನ್ನು ಮೈಸೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೈಸೂರು ಜಿಲ್ಲಾ ಕುಂಬಾರರ ಸಂಘ ಸಂಸ್ಥೆಯ ಸಹಯೋಗದೊಂದಿಗೆ ಮಹಾಕವಿ ಸರ್ವಜ್ಞ ಜಯಂತಿ ಆಚರಣೆಯು ಕಲಾಮಂದಿರದಲ್ಲಿ ಅದ್ಧೂರಿಯಾಗಿ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅಧ್ಯಕ್ಷತೆವಹಿಸಿ ಮಾತನಾಡಿ, ಬದುಕಿನ ಸಮಸ್ಯೆಗಳನ್ನು ನೇರ, ನಿಷ್ಠುರವಾಗಿ ಹೇಳಿರುವುದು ಸರ್ವಜ್ಞನ ವೈಶಿಷ್ಟ್ಯ. ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಆತನ ತ್ರಿಪದಿಗಳು ದೇವರಂತೆ ಸರ್ವವ್ಯಾಪಿಯಾಗಿದೆ ಎಂದರು.
ಕ್ರೆಡಿಟ್ ಐ ಸಂಸ್ಥೆಯ ಟ್ರಸ್ಟಿ ಡಾ. ಎಂ. ಪಿ ಹರ್ಷ ಮಾತನಾಡಿ, ಸರ್ವಜ್ಞ ಎಂದರೆ ಎಲ್ಲವನ್ನೂ ಬಲ್ಲವನು. ಆತನ ಹಿನ್ನೆಲೆಯನ್ನು ಅರಿತುಕೊಳ್ಳುವುದು ಬಹಳ ಮುಖ್ಯ. ಆದರೆ ಇವತ್ತು ಇತಿಹಾಸ ತಿರುಚುವ ಯತ್ನ ನಡೆದಿದೆ. ಭಗವಾನ್ ಬುದ್ಧನ ತಾಯಿ ಕೂಡ ಕುಂಬಾರ ಜನಾಂಗದವರು. ಈ ಸತ್ಯವನ್ನು ಮರೆಮಾಚಲಾಗುತ್ತಿದೆ ಎಂದು ವಿಷಾದಿಸಿದರು.
ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಚಿತ್ರದುರ್ಗದ ಕುಂಬಾರ ಗುರುಪೀಠದ ಬಸವಕುಂಬಾರ ಗುಂಡಯ್ಯ ಸ್ವಾಮೀಜಿ, ಶಾಸಕ ಎಂ.ಕೆ ಸೋಮಶೇಖರ್, ವಾಸು, ಮೈಲಾಕ್ ಅಧ್ಯಕ್ಷ ವೆಂಕಟೇಶ್, ಆರ್. ಶ್ರೀನಿವಾಸ್, ಶಿವಣ್ಣ, ಕುಲಾಲಗುಂಡ ಬ್ರಹ್ಮಾರ್ಯ ಕುಂಬಾರರ ಸಂಘದ ಅಧ್ಯಕ್ಷ ಹೆಚ್.ಎಸ್.ಪ್ರಕಾಶ್ , ಉಪಾಧ್ಯಕ್ಷ ಹೆಚ್.ಸುಂದರ್, ಪ್ರಧಾನ ಕಾರ್ಯದರ್ಶಿ ಕೆ.ಆರ್.ಸೋಮಶೇಖರ್, ಖಜಾಂಚಿ ಎಸ್.ಹೆಚ್.ನಾಗರಾಜು, ಮೈಸೂರು ವಿಭಾಗದ ಹರೀಶ್, ನಾಗಣ್ಣ ಕೇರಗಹಳ್ಳಿ, ಕೆ.ಪಿ.ವೆಂಕಟೇಶ್, ಎಂ.ಮಾರಶೆಟ್ಟಿ ಹಾಜರಿದ್ದರು.
ಗಮನಸೆಳೆದ ಭವ್ಯ ಮೆರವಣಿಗೆ
ಸರ್ವಜ್ಞ ಜಯಂತಿ ಅಂಗವಾಗಿ ಸರ್ವಜ್ಞನ ಭಾವಚಿತ್ರದ ಮೆರವಣಿಗೆ ಎಲ್ಲರ ಗಮನಸೆಳೆಯಿತು. ಮಹಾಪೌರ ಎಂ. ಜೆ ರವಿ ಕುಮಾರ್ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಬೆಳ್ಳಿರಥದ ಸಾರೋಟಿಯಲ್ಲಿ ಸರ್ವಜ್ಞನ ಭಾವಚಿತ್ರ ಪ್ರತಿಷ್ಠಾಪಿಸಲಾಗಿತ್ತು. ಜಾನಪದ ಕಲಾತಂಡದ ಡೊಳ್ಳು, ನಗಾರಿ, ತಮಟೆ ಸದ್ದು, ಜನಪದ ದೊಣ್ಣೆ ವರಸೆ, ಕತ್ತಿ ವರಸೆ, ಕಂಸಾಳೆ ಕುಣಿತ ಎಲ್ಲರನ್ನು ಆಕರ್ಷಿಸಿತು. ಇದರೊಂದಿಗೆ ವಿವಿಧ ಕುಂಬಾರ ಸಂಘದ ಮಹಿಳೆಯರು ಕಳಸ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕುಂಬಾರರ ಕುಲ ಕಸುಬಾದ ಮಡಿಕೆ-ಕುಡಿಕೆ ತಯಾರಿಕೆ ಪ್ರಾತ್ಯಕ್ಷಿಕೆ ಕೂಡಾ ಮೆರವಣಿಗೆಯಲ್ಲಿ ನಡೆಯಿತು.ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದಿಂದ ಹೊರಟ ಭವ್ಯ ಮೆರವಣಿಗೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕಲಾಮಂದಿರ ಸೇರಿ ಅಂತ್ಯಗೊಂಡಿತು.