ಸರ್ವಜ್ಞರ ನೆನಕೆಯಲ್ಲಿ ಸುರತ್ಕಲ್ ಕುಲಾಲ ಸಂಘ ಮಾದರಿ : ಡಾ. ಅಣ್ಣಯ್ಯ ಕುಲಾಲ್
ಮಂಗಳೂರು(ಮಾ.೦೫): ಸರ್ವಜ್ಞರ ಹೆಸರಲ್ಲಿ ರಾಜ್ಯದಲ್ಲೇ ಪ್ರಪ್ರಥಮ ಸರ್ವಜ್ಞ ಸ್ಮಾರಕ ಮಿನಿ ಸಭಾಭವನವನ್ನು ಲೋಕಾರ್ಪಣೆ ಮಾಡುವ ಮೂಲಕ ರಾಜ್ಯದ ಕುಂಬಾರ ಸಮುದಾಯಕ್ಕೆ ಕುಲಾಲ್ ಸಂಘ ಸುರತ್ಕಲ್ ಮಾದರಿಯಾಗಿದೆ ಎಂದು ಕರಾವಳಿ ಕುಲಾಲ/ಕುಂಬಾರ ಯುವ ವೇದಿಕೆಯ ಸ್ಥಾಪಕಾಧ್ಯಕ್ಷ ಅಣ್ಣಯ್ಯ ಕುಲಾಲ್ ಹೇಳಿದರು.
ಸಂಘದ ವತಿಯಿಂದ ನೂತನವಾಗಿ ನಿರ್ಮಾಣಗೊಂಡ ಮಿನಿ ಸಭಾಭವನದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಈ ಹಿಂದೆ ಕರಾವಳಿಯಲ್ಲಿ ಪ್ರಪ್ರಥಮ ಬಾರಿ ಸರ್ವಜ್ಞ ಮೂರ್ತಿಯ ಮೆರವಣಿಗೆಯನ್ನ ಸುರತ್ಕಲ್ ಸಂಘದಿಂದ ಮಂಗಳೂರಿನ ಕುಲಾಲ ಮಾತೃ ಸಂಘದವರೆಗೆ ಯಶಸ್ವಿಯಾಗಿ ಮಾಡಿ ಸುದ್ದಿ ಮಾಡಿರುವ ಸುರತ್ಕಲ್ ಕುಲಾಲ್ ಸಂಘವು ಮತ್ತೊಮ್ಮೆ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದೆ. ಸಮಾಜಕ್ಕೆ ಕೀರ್ತಿ ತರುವ ಇಂತಹ ಕಾರ್ಯಗಳು ನಿರಂತರವಾಗಿ ನಡೆಯಬೇಕಿದೆ ಎಂದು ಹೇಳಿದರು.
ಸಭಾಭವನದ 30 ಕೆವಿ ಜನರೇಟರನ್ನು ಕುಲಾಲ ಮಾತೃ ಸಂಘದ ಅಧ್ಯಕ್ಷ ಸುಜೀರ್ ಕುಡುಪು ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಸುಧಾಕರ ಕುಲಾಲ್ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ದ. ಕ ಕುಲಾಲ ಸಂಘದ ಅಧ್ಯಕ್ಷ ಎ. ಎನ್ ಕುಲಾಲ್ ಮುಂತಾದ ಗಣ್ಯರು ಭಾಗವಹಿಸಿದ್ದರು.
ಇದೇ ವೇಳೆ ಟಿ. ಸೇಸಪ್ಪ ಮಾಸ್ತರ್, ಬಾಳ ಬೂಬ ಮೂಲ್ಯ ಕೃಷ್ಣಾಪುರ, ರಾಮಣ್ಣ ಕುಲಾಲ್ ಪೆರ್ಡೂರು, ರಶ್ಮಿ ಎಸ್ ಕುಲಾಲ್, ಧೃತಿ ಕುಲಾಲ್ ಮುಂತಾದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು . ಬೆಳಿಗ್ಗೆ ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ಸಭಾ ಕಾರ್ಯಕ್ರಮದ ಬಳಿಕ ಕುಲಾಲ ಸಂಘದ ಸದಸ್ಯರಿಂದ `ಮಣ್ಣಲ್ಲಿ ಹೊನ್ನ ಕಂಡ ಕುಂಬಾರ’ ವಿಶಿಷ್ಠ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.