ಮಂಗಳೂರು(ಫೆ.೦೧): ಕೊಲ್ಯ ಸೋಮೇಶ್ವರ ಸೀತಾರಾಮ ಬಂಗೇರ ಸನ್ಮಾನ ಸಮಿತಿ ವತಿಯಿಂದ ಶ್ರೀ ಶಾರದಾ ಮಹೋತ್ಸವ ಸಮಿತಿಯ ಸಹಯೋಗದೊಂದಿಗೆ ಹಿರಿಯ ಧಾರ್ಮಿಕ-ಸಾಮಾಜಿಕ-ರಾಜಕೀಯ ಮುತ್ಸದ್ಧಿ ಸೀತಾರಾಮ ಬಂಗೇರ ಅವರಿಗೆ ೭೫ ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಫೆ.26ರಂದು ಉಳ್ಳಾಲ ವಲಯ ನಾಗರಿಕರ ಪರವಾಗಿ ಕೊಲ್ಯ ಶಾರದಾ ಸದನ ವಠಾರದಲ್ಲಿ ಪೌರ ಸನ್ಮಾನವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಕಳೆದ ೪-೫ ದಶಕಗಳಿಂದ ಉಳ್ಳಾಲದಂತಹ ಕೋಮು ಸೂಕ್ಷ್ಮ ಪರಿಸರದಲ್ಲಿ ಸಾಮಾಜಿಕವಾಗಿ ನೇರ ನಡೆ-ನುಡಿಯಿಂದ ನಿಸ್ವಾರ್ಥ ಸೇವೆ ಮಾಡಿರುವ ಸೀತಾರಾಮ ಬಂಗೇರ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಇದೇ ಸಂದರ್ಭ ಬೆಳಿಗ್ಗೆ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ನೇತ್ರದಾನ ನೋಂದಾವಣೆ, ಸೀತಾರಾಮ್ ಅವರ ಬದುಕು-ವಿಚಾರಗೋಷ್ಠಿ ವಿಚಾರ ಮಂಡನೆ, ಮಧ್ಯಾಹ್ನ `ಭೀಷ್ಮ ಗೆಲ್ಮೆ’ ಯಕ್ಷಗಾನ ತಾಳಮದ್ದಳೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ `ನಿತ್ಯೆ ಬನ್ನಗ’ ತುಳು ನಾಟಕ ಪ್ರದರ್ಶನ ನಡೆಯಿತು.
ಸೀತಾರಾಮ್ ಅವರ ಬದುಕು-ಸಾಧನೆ ಕುರಿತು ಡಾ. ಅಣ್ಣಯ್ಯ ಕುಲಾಲ್, ಫಾರೂಕ್ ಉಳ್ಳಾಲ, ರವೀಂದ್ರ ರಾಜ್ ಉಳ್ಳಾಲ ವಿಚಾರ ಮಂಡಿಸಿದರು. ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ, ತೊಕ್ಕೊಟ್ಟು ಚರ್ಚಿನ ಧರ್ಮಗುರು ಡಾ. ಜೆಬಿ ಸಲ್ದಾನಾ, ಉಳ್ಳಾಲ ದರ್ಗಾದ ಹಾಜಿ ರಶೀದ್ ಉಳ್ಳಾಲ , ಕಸ್ತೂರಿ ಪಂಜ, ಸೌಂದರ್ಯ ರಮೇಶ ಮುಂತಾದ ಗಣ್ಯರು ಉಪಸ್ಥಿತರಿದ್ದರು.