ಕುಲಾಲರು ಶೋಷಣೆ ಮುಕ್ತರಾಗಬೇಕು : ಸಚಿವ ರಮಾನಾಥ ರೈ
ಮಂಗಳೂರು (ಫೆ.೨೦) : ಹಿಂದುಳಿದ ವರ್ಗಗಳ ಎಲ್ಲಾ ಸಮುದಾಯದ ಬಲವರ್ಧನೆಗೆ ಸಮಾವೇಶ ಪೂರಕ. ಕುಲಾಲರು ಶೋಷಣೆ ಮುಕ್ತರಾಗಬೇಕು. ಈ ನಿಟ್ಟಿನ ನಿರ್ಧಾರ ಸಮಾವೇಶಗಳಲ್ಲಿ ಮೂಡಿಬರಬೇಕು ಎಂದು ದಕ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಕುಳಾಯಿ ಕುಲಾಲ ಸಂಘ, ಮಹಿಳಾ ಸಂಘದ ೩೦ನೇ ವಾರ್ಷಿಕೋತ್ಸವ ಪ್ರಯುಕ್ತ ಕುಳಾಯಿ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣದಲ್ಲಿ ನಡೆದ `ಕುಲಾಲರ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕುಲಾಲ ಸಮುದಾಯದ ಬೇಡಿಕೆಗಳ ಬಗ್ಗೆ ಹಕ್ಕೊತ್ತಾಯ ಮಂಡಿಸಿದ ಡಾ. ಅಣ್ಣಯ್ಯ ಕುಲಾಲ್, ಪ್ರಾಮಾಣಿಕತೆ ಮತ್ತು ಜಾತ್ಯತೀತ ಮನೋಭಾವ ರೂಢಿಸಿಕೊಂಡು ಅಪ್ರತಿಮ ಪ್ರತಿಭೆಗಳನ್ನು ಹೊಂದಿರುವ, ರಾಜ್ಯದಲ್ಲಿ ಸುಮಾರು ೨೦ ಲಕ್ಷದಷ್ಟಿರುವ ಕುಲಾಲ ಸಮುದಾಯಕ್ಕೆ ಅನ್ಯಾಯವಾಗಿದೆ. ವಿವಿಧ ರಾಜಕೀಯ ಪಕ್ಷಗಳು ಕುಲಾಲ ಸಮುದಾಯವನ್ನು ಮೇಲೆತ್ತುವ ಕೆಲಸವನ್ನು ಮಾಡಬೇಕಾಗಿದೆ ಎಂದರು.
ಕುಂಭ ನಿಗಮವನ್ನು ರಾಜ್ಯ ಸರಕಾರ ಮುಂದಿನ ಒಂದು ವರ್ಷದಲ್ಲಿ ಸ್ಥಾಪಿಸಲಿ. ಇದಕ್ಕೆ ತಪ್ಪಿದಲ್ಲಿ ಮುಂದಿನ ಅವಧಿಯಲ್ಲಿ ನಾವು ನಿರ್ಮಿಸುತ್ತೇವೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಭರವಸೆ ನೀಡಿದರು.
ಮಾಣಿಲ ಮೋಹನದಾಸ ಸ್ವಾಮೀಜಿ, ನಡುಬೊಟ್ಟು ಧರ್ಮದರ್ಶಿ ರವಿ ಎನ್ ಆಶೀರ್ವಚನ ನೀಡಿದರು. ರಾಜ್ಯ ಕುಂಬಾರ ಮಾಹಾ ಸಂಘದ ಅಧ್ಯಕ್ಷ ಶಿವಕುಮಾರ್ ಚೌಡಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಥ್ವಿರಾಜ್, ಕುಲಾಲ ಯುವವೇದಿಕೆ ರಾಜ್ಯ ಅಧ್ಯಕ್ಷ ತೇಜಸ್ವೀರಾಜ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅನಿಲ್ ದಾಸ್, ಬೆಂಗಳೂರು ಕುಲಾಲ ಸಮಾಜದ ಅಧ್ಯಕ್ಷ ವಿಠಲ್ ಕನೀರುತೋಟ, ಕುದುರೆಮುಖ ಅದಿರು ಕಪಿನಿ ನಿವೃತ್ತ ಅಧಿಕಾರಿ ಎ. ಎಸ್ ರಾಮಪ್ಪ, ಕುಲಾಲ ಮಾತೃ ಸಂಘದ ಅಧ್ಯಕ್ಷ ಸುಜೀರ್ ಕುಡುಪು, ಮನಪಾ ಸದಸ್ಯೆ ಪ್ರತಿಭಾ ಕುಳಾಯಿ, ವೈದ್ಯ ಡಾ. ಭರತ್ ಶೆಟ್ಟಿ, ಚಿತ್ರನಟ ಕಾರ್ತಿಕ್ ಬಂಜನ್, ಕುಳಾಯಿ ಕುಲಾಲ ಸಂಘದ ಅಧ್ಯಕ್ಷ ಕುಮಾರ್ ಕುಲಾಲ್ ಕಾವಿನಕಲ್ಲು, ಮಹಿಳಾ ಸಂಘದ ಅಧ್ಯಕ್ಷೆ ಬೇಬಿ ಪದ್ಮನಾಭ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಕರಾವಳಿ ಕುಲಾಲ ಯುವ ವೇದಿಕೆಯ ಅಧ್ಯಕ್ಷ ಜಯೇಶ್ ಗೋವಿಂದ್ ಸ್ವಾಗತಿಸಿದರು. ರಕ್ಷಾ ಮತ್ತು ಬಳಗ ಸ್ವಾಗತಿಸಿದರು. ಸಂತೋಷ್ ಕುಲಾಲ ಕಾರ್ಯಕ್ರಮ ನಿರೂಪಿಸಿದರು. ಗಂಗಾಧರ ಬಂಜನ್ ವಂದಿಸಿದರು. ಇದೆ ಸಂದರ್ಭ ಸಮಾಜದ ವಿವಿಧ ಸಾಧಕರನ್ನು ಸನ್ಮಾಯಿಸಲಾಯಿತು.