ಪುತ್ತೂರು: ಪುತ್ತೂರು ನಗರದ ಸರ್ಕಲ್ ವೊಂದಕ್ಕೆ ತ್ರಿಪದಿ ಕವಿ ಸರ್ವಜ್ಞನ ಹೆಸರನ್ನು ಇಡಲಾಗುವುದು ಎಂದು ಶಾಸಕಿ ಶಕುಂತಲಾ ಶೆಟ್ಟಿ ಹೇಳಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿ ಹಾಗೂ ಕುಲಾಲ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಸೋಮವಾರ ಪುರಭವನದಲ್ಲಿ ಕವಿ ಸರ್ವಜ್ಞ ಜಯಂತಿ ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕವಿ ಸರ್ವಜ್ಞನ ಹೆಸರನ್ನು ಪುತ್ತೂರಿನಲ್ಲೊಂದು ಸರ್ಕಲ್ ಗೆ ಇಡುವಂತೆ ಕುಲಾಲ ಸಂಘದವರು ಮನವಿ ಮಾಡಿದ್ದಾರೆ. ಪುತ್ತೂರು-ಉಪ್ಪಿನಂಗಡಿ ಚತುಷ್ಪಥ ರಸ್ತೆ ಕಾಮಗಾರಿ ನಡೆಯುವ ಸಂದರ್ಭ ಕೆಮ್ಮಾಯಿ ಅಥವಾ ಕೊಟೇಚಾ ಹಾಲ್ ಬಳಿ ಸರ್ಕಲ್ ನಿರ್ಮಿಸಿ ಸರ್ವಜ್ಞರ ಹೆಸರನ್ನು ಇಡಲಾಗುವುದು. ಈ ಬೇಡಿಕೆಗೆ ನಗರಸಭೆಯಿಂದಲೂ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಅವರು ಹೇಳಿದರು. ಶಾಲಾ ಶಿಕ್ಷಣವಿಲ್ಲದೆ ಸಮಾಜದಿಂದ ಪಡೆದ ಅನುಭವ ಜ್ಞಾನವನ್ನೇ ತ್ರಿಪದಿ ರೂಪದಲ್ಲಿ ರಚಿಸಿ ಸಮಾಜಕ್ಕೆ ಕಟ್ಟಿಕೊಟ್ಟ ಸರ್ವಜ್ಞರ ಆದರ್ಶ ಸರ್ವಶ್ರೇಷ್ಠವಾದುದು ಎಂದರು.
ಫಿಲೋಮಿನಾ ಕಾಲೇಜಿನ ಉಪನ್ಯಾಸಕ ಚಂದ್ರಶೇಖರ್ ಸರ್ವಜ್ಞ ಸಂಸ್ಮರಣಾ ಉಪನ್ಯಾಸ ನೀಡಿದರು. ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ರಘುನಂದನ್ ಮೂರ್ತಿ, ತಾಪ೦ ಅಧ್ಯಕ್ಷೆ ಭವಾನಿ ಶಿವಾನಂದ, ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು, ಪುಡಾ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ, ಕುಲಾಲ ಸಂಘದ ದಿನೇಶ್ ಪಿವಿ, ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ, ತಹಶೀಲ್ದಾರ್ ಗಾರ್ಗಿ ಜೈನ್ ಮೊದಲಾದವರು ಉಪಸ್ಥಿತರಿದ್ದರು.