ಸರ್ವಜ್ಞ ವಚನಗಳು ಅಜರಾಮರ: ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ
ಕೊಪ್ಪಳ: ತ್ರಿಪದಿ ಕವಿ ಸರ್ವಜ್ಞರ ವಚನಗಳು ಇಂದಿಗೂ ಪ್ರಸ್ತುತ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.ಜಿಲ್ಲಾಡಳಿತದ ವತಿಯಿಂದ ನಗರದ ಶಾದಿ ಮಹಲ್ನಲ್ಲಿ ಸೋಮವಾರ ಕವಿ ಸರ್ವಜ್ಞ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.ಸಣ್ಣ-ಸಣ್ಣ ಸಮಾಜಗಳ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಶಿಕ್ಷಣ ಅತ್ಯವಶ್ಯಕ. ಶಿಕ್ಷಣದಿಂದ ಸಮಾಜದ ಸರ್ವತೋಮುಖ ಅಭಿವೃದ್ಧಿ ಕಾಣಲು ಸಾಧ್ಯ. ಸಮಾಜಗಳು ಅಭಿವೃದ್ಧಿಯತ್ತ ಸಾಗಿದರೆ ಜಯಂತಿಗಳ ಆಚರಣೆಗೆ ಅರ್ಥಬರುತ್ತದೆ ಎಂದರು.
ಕುಂಬಾರ ಸಮಾಜದ ತರಬೇತಿ ಕೇಂದ್ರ, ಸರ್ವಜ್ಞರ ಹೆಸರಿನಲ್ಲಿ ಉದ್ಯಾನ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಂಗಮೇಶ ಉಪಾಸೆ ಅವರು ವಿಶೇಷ ಉಪನ್ಯಾಸ ನೀಡಿ, ತ್ರಿಪದಿ ಕವಿ ಸರ್ವಜ್ಞರವರನ್ನು ನೀತಿಭೋದಕರೆಂದು ಇತಿಹಾಸ ಪರಂಪರೆಯಲ್ಲಿ ಗುರುತಿಸಲಾಗಿದೆ. ಜಗತ್ತಿನಲ್ಲಿ ಬೇಕಾದಂತಹ ಸಾಮಾನ್ಯ ವೇದ ಪುರಾಣಗಳನ್ನು ಒಪ್ಪುವುದಿಲ್ಲ. ಬದುಕು ಮುಖ್ಯ ಎಂದು ಹೇಳಿದ ಅವರ ತ್ರಿಪದಿಗಳು ಜನಪರ ಮೌಖಿಕ ಅರಿವನ್ನು ತಮ್ಮ ವಚನಗಳಲ್ಲಿ ಹೇಳಿದ್ದಾರೆ. ಜಾತಿ, ಮತ, ಪಂಥ ಯಾಕೆ ಎಂದು ಪ್ರಶ್ನಿಸಿದ ಅವರು, ಹುಟ್ಟು ಆಕಸ್ಮಿಕ ಸಾವು ನಿಶ್ಚಿತ. ಬದುಕು ಮತ್ತು ಸಾವಿನ ನಡುವೆ ಮನುಷ್ಯರಾಗಿ ಬಾಳುವುದು ಮುಖ್ಯ ಎಂಬುದು ಕವಿ ಸರ್ವಜ್ಞ ಅವರು ಮನುಕುಲಕ್ಕೆ ನೀಡಿದ ಸಂದೇಶವಾಗಿದೆ ಎಂದರು.
ಸಮಾರಂಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್ ಜುಲ್ಲು ಖಾದರ್ ಖಾದ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ ಘಾಳಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ಜಿ.ಪಂ. ಸದಸ್ಯ ಗೂಳಪ್ಪ ಹಲಗೇರಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ತಹಶಿಲ್ದಾರ ಗುರುಬಸವರಾಜ, ಮುತ್ತುರಾಜ ಕುಷ್ಟಗಿ, ಕಳಕಪ್ಪ ಕುಂಬಾರ, ನಿಂಗಪ್ಪ ಕುಂಬಾರ, ಪ್ರಭು ಕುಂಬಾರ ಇದ್ದರು.
———
ಕುಷ್ಟಗಿ ವರದಿ:
ಸಮಾಜದ ಅಂಕುಡೊಂಕುಗಳನ್ನು ತ್ರಿಪದಿಗಳ ಮೂಲಕ ಎತ್ತಿ ತೋರಿಸಿ, ಮನುಷ್ಯ ಧರ್ಮವನ್ನು ಪ್ರತಿಪಾದಿಸಿದ ಕ್ರಾಂತಿಕಾರಿ ಕವಿ ಸರ್ವಜ್ಞನ ವಚನಗಳು ಪ್ರಸ್ತುತ ಎಂದು ತಹಶೀಲ್ದಾರ್ ಎಂ.ಗಂಗಪ್ಪ ಹೇಳಿದರು.
ಪಟ್ಟಣದಲ್ಲಿ ತಾಲ್ಲೂಕು ಆಡಳಿತ ಏರ್ಪಡಿಸಿದ್ದ ಸರ್ವಜ್ಞ ಜಯಂತಿ ಉದ್ಘಾಟಿಸಿ ಮಾತನಾಡಿ, ಸಮಾಜ ಸುಧಾರಕ ಸರ್ವಜ್ಞನನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸುವುದು ಸಂಕುಚಿತ ಮನೋಭಾವ ಸರಿಯಲ್ಲ ಎಂದರು.
ಬುತ್ತಿಬಸವೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಟಿ. ಕುಂಬಾರ ಮಾತನಾಡಿ, ಕೆಳಸ್ತರದಲ್ಲಿ ಜನಿಸಿದರೂ ಜಗಕೆಲ್ಲ ಜ್ಞಾನದ ಬೆಳಕು ನೀಡಿದ ಮಹಾನ್ ಕವಿ ಜನ್ಮದಿನವನ್ನು ಸಾರ್ವಜನಿಕವಾಗಿ ಆಸರಿಸುವ ಮೂಲಕ ಸರ್ಕಾರ ಸರ್ವಜ್ಞ ಅವರಿಗೆ ಮಹೋನ್ನತ ಗೌರವ ಸಮರ್ಪಣೆ ಮಾಡಿದೆ ಎಂದು ಹೇಳಿದರು.
ಸರ್ವಜ್ಞ, ಬಸವಣ್ಣ, ಕನಕದಾಸರು ಮಾನವತೆ ಸಂದೇಶ ಸಾರಿದರೆ ಹೊರತು ಜಾತಿ ಧರ್ಮಗಳ ಆಧಾರದ ಮೇಲೆ ಸಮಾಜವನ್ನು ವಿಭಜಿಸಿದವರಲ್ಲ. ಅವರ ತತ್ವ, ವಿಚಾರ ಹಾಗೂ ಸಂದೇಶಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ತಾಲ್ಲೂಕು ಕುಂಬಾರ ಸಮಾಜದ ಅಧ್ಯಕ್ಷ ರಾಮಣ್ಣ ಕುಂಬಾರ, ಪ್ರಮುಖರಾದ ಸಂಗಪ್ಪ ಕುಂಬಾರ, ವೀರಪ್ಪ ಕನ್ನಾಳ, ರವಿಕುಮಾರ ಕುಂಬಾರ, ಶರಣಪ್ಪ ಕುಂಬಾರ, ಬಸವರಾಜ ಕುಂಬಾರ, ಚನ್ನಪ್ಪ ನಿಡಶೇಸಿ, ಸರ್ಕಲ್ ಇನ್ಸ್ಪೆಕ್ಟರ್ ಗಿರೀಶ್ ರೋಡ್ಕರ್, ಶಿರಸ್ತೇದಾರ ರಜನಿಕಾಂತ ಇದ್ದರು. ಆದಯ್ಯ ಹಿರೇಮಠ ನಿರೂಪಿಸಿದರು.
ಯಲಬುರ್ಗಾ ವರದಿ:
ಸರ್ವ ಶ್ರೇಷ್ಠ ಕವಿ ಸರ್ವಜ್ಞ ಹಾಗೂ ಮಹಾರಾಜ ಛತ್ರಪತಿ ಶಿವಾಜಿ ಅವರ ವಿಚಾರಧಾರೆ ಹಾಗೂ ಆದರ್ಶ ಪ್ರಸ್ತುತ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿ ಉಮಾಪತಿ ಶೆಟ್ಟರ್ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸರ್ವಜ್ಞ ಹಾಗೂ ಶಿವಾಜಿ ಜಯಂತಿಯಲ್ಲಿ ಮಾತನಾಡಿದರು.
ತಹಶೀಲ್ದಾರ್ ರಮೇಶ ಅಳವಂಡಿಕರ್ ಮಾತನಾಡಿ, ತ್ರಿಪದಿ ಸಾಹಿತ್ಯದ ಮೂಲಕ ಲೋಕದ ಅಂಕುಡೊಂಕು ತಿದ್ದುವ ಪ್ರಯತ್ನ ಮಾಡಿದ ಸರ್ವಜ್ಞನ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಯಶ್ರೀ ಅರಕೇರಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ, ಅಧಿಕಾರಿಗಳಾದ ಮುನಿರಾಜು, ಎಸ್.ವಿ. ಭಜಂತ್ರಿ, ನಾಗಪ್ಪ ಸಜ್ಜನ್, ಮಲ್ಲಿಕಾರ್ಜುನ ಶಾಸ್ತ್ರಿಮಠ ಶರಣಪ್ಪ ಅರಕೇರಿ ಭಾಗವಹಿಸಿದ್ದರು.
ಜಯಂತಿ ಆಚರಣೆಗೆ ನಿರಾಸಕ್ತಿ
ಗಂಗಾವತಿ: ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸರ್ವಜ್ಞನ ಜಯಂತಿ ಆಚರಿಸುವಂತೆ ಸರ್ಕಾರ ಸೂಚಿಸಿದ್ದರೂ, ತಾಲ್ಲೂಕು ಪಂಚಾಯಿತಿ, ಕೃಷಿ, ತೋಟಗಾರಿಕೆ, ನೋಂದಣಿ, ಅಬಕಾರಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರ ಯೋಜನಾ ಪ್ರಾಧಿಕಾರ ಸೇರಿದಂತೆ ಬಹುತೇಕ ಕಚೇರಿಗಳಲ್ಲಿ ಸೋಮವಾರ ಜಯಂತಿ ಆಚರಿಸಲಿಲ್ಲ.
ಕಂದಾಯ ಇಲಾಖೆಯಲ್ಲಿ ನಡೆದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಶಿರಸ್ತೇದಾರ ಅನಂತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಶಿರಸ್ತೇದಾರ ವಿರುಪಾಕ್ಷಪ್ಪ ಹೊರಪ್ಯಾಟಿ, ಆಹಾರ ನಿರೀಕ್ಷಕಿ ನಂದಾಪಲ್ಲೇದ, ಸಿಬ್ಬಂದಿ ಹೈದರ್, ಸೌಭಾಗ್ಯಮ್ಮ, ಅನಿತಾ, ಸಾವಿತ್ರಿಬಾಯಿ ಪಾಲ್ಗೊಂಡಿದ್ದರು.
ಶಿವಮೊಗ್ಗ : ತ್ರಿಪದಿಗಳಿಂದ ಸಮಾಜ ತಿದ್ದಿದ ಕವಿ ಸರ್ವಜ್ಞ
ಶಿವಮೊಗ್ಗ: ಸರ್ವಜ್ಞ ತಮ್ಮ ತ್ರಿಪದಿಗಳ ಮೂಲಕ ಸಮಾಜದ ಓರೆ, ಕೋರೆ ತಿದ್ದುವ ಪ್ರಯತ್ನ ಮಾಡಿದ್ದಾರೆ ಎಂದು ಶಾಂತಲಾ ಕಲಾವೇದಿಕೆಯ ಪ್ರಮುಖ ಟಿ.ಎಸ್. ಪಂಚಾಕ್ಷರಪ್ಪ ಹೇಳಿದರು.
ನಗರದ ಕುವೆಂಪು ರಂಗಮಂದಿರ ದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ರ ಆಶ್ರಯದಲ್ಲಿ ಹಮ್ಮಿಕೊಳ್ಳ ಲಾಗಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ಸರ್ವಜ್ಞರು ಚಿಕ್ಕ ವಯಸ್ಸಿನಲ್ಲಿ ಇದ್ದಾಗಲೇ ದಾರ್ಶನಿಕರಾಗುವ ಎಲ್ಲಾ ಲಕ್ಷಣ ಅವರಲ್ಲಿ ಕಂಡುಬಂದಿತ್ತು. ಚಿಕ್ಕ ವಯಸ್ಸಿನಲ್ಲಿಯೇ ಅಧ್ಯಾತ್ಮದ ಕಡೆಗೆ ಹೆಚ್ಚಿನ ಒಲವು ತೋರಿಸುತ್ತಿದ್ದರು. ತಾಯಿಯಂತೆ ಪ್ರಪಂಚದ ಎಲ್ಲಾ ಸ್ತ್ರೀಯರು ತಾಯಿ ಸಮಾನರು ಎಂದು ಹೇಳಿದ್ದ ಮಹಾನ್ ವ್ಯಕ್ತಿ ಸರ್ವಜ್ಞ ಎಂದು ಅಭಿಪ್ರಾಯಪಟ್ಟರು.
‘ಚಿಕ್ಕ ವಯಸ್ಸಿನಲ್ಲೇ ಮನೆ ತೊರೆದು ಬಂದ ಅವರಿಗೆ ಸಮಾಜವೇ ಗುರುವಾಯಿತು. ಸಮಾಜದಲ್ಲಿ ಎಲ್ಲರಿಂದ ಒಂದೊಂದು ನುಡಿ ಕಲಿತ ಅವರಲ್ಲಿ ವಿದ್ಯೆಯ ಪರ್ವತವೇ ಅಡಗಿತ್ತು. ಅವರು ವಚನಗಳ ಮೂಲಕ ಸಮಾಜ ತಿದ್ದುವ ಪ್ರಯತ್ನ ಮಾಡಿದ್ದರು’ ಎಂದರು.
ದೇವರನ್ನು ದೇಗುಲಗಳಲ್ಲಿ ಹುಡುಕುವ ಬದಲು, ನಮ್ಮೊಳಗೆ ದೇವರನ್ನು ಹುಡುಕಬೇಕು. ಆ ದೇವರನ್ನು ಒಬ್ಬ ಗುರುವಿನ ಮಾರ್ಗದರ್ಶನದಲ್ಲಿಯೇ ಹುಡುಕಬೇಕು ಎಂದು ಗುರುವಿನ ಮಹತ್ವವನ್ನು ವಚನಗಳ ಮೂಲಕ ಹೇಳಿದ್ದಾರೆ ಎಂದರು.
ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಮಾತನಾಡಿ, ‘ನಾವೆಲ್ಲರೂ ಪ್ರತಿನಿತ್ಯ ಒಂದಲ್ಲಾ ಒಂದು ರೀತಿ ಸರ್ವಜ್ಞರನ್ನು ನೆನಪಿಸಿಕೊಳ್ಳುತ್ತೇವೆ. ಅಂತಹ ಸರ್ವಜ್ಞರು ನಾಡಿನಾದ್ಯಂತ ಸಂಚರಿಸಿ ಸಮಾಜ ತಿದ್ದುವ ಮೂಲಕ ಸನ್ಮಾರ್ಗದತ್ತ ಕೊಂಡೊಯ್ಯಲು ಶ್ರಮಿಸಿದ್ದಾರೆ ಎಂದು ಬಣ್ಣಿಸಿದರು.
ಜಿಲ್ಲಾ ಕುಂಬಾರ ಸಂಘದ ಗೌರವಾಧ್ಯಕ್ಷ ಸಿ.ಎಚ್. ಚಂದ್ರಶೇಖರಪ್ಪ, ಅಧ್ಯಕ್ಷ ಚಂದ್ರಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ವೆಂ.ನಾಯಕ್, ತಹಶೀಲ್ದಾರ್ ಕೇಶವ ಮೂರ್ತಿ ಉಪಸ್ಥಿತರಿದ್ದರು.
————
‘ದಾರ್ಶನಿಕರ ತತ್ವ ಅಳವಡಿಸಿಕೊಳ್ಳಿ’
ಶಿಕಾರಿಪುರ: ‘ಸರ್ವಜ್ಞ ಲೋಕ ಕಲ್ಯಾಣದ ಗುರಿಯನ್ನು ಹೊಂದಿದ್ದರು. ತ್ರಿಪದಿಗಳ ಮೂಲಕ ಜನ ಸಾಮಾನ್ಯರ ಒಡನಾಡಿಯಾಗಿದ್ದರು. ದಾರ್ಶನಿಕರು ನೀಡಿದ ತತ್ವ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಶಾಸಕ ಬಿ.ವೈ. ರಾಘವೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಕುಂಬಾರ ಸಮಾಜ ಆಶ್ರಯದಲ್ಲಿ ನಡೆದ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಗರದ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಸಣ್ಣಹನುಮಪ್ಪ ಮಾತನಾಡಿ, ‘ಸರ್ವಜ್ಞ ತ್ರಿಪದಿಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದರು. ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ ದಾರ್ಶನಿಕರನ್ನು ಜಾತಿಗೆ ಸೀಮಿತಗೊಳಿಸಬಾರದು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕುಂಬಾರ ಸಮಾಜದ ಅಧ್ಯಕ್ಷ ಕೆ.ಶಿವರುದ್ರಪ್ಪ ಮಾತನಾಡಿ, ‘ಕುಂಬಾರ ಸಮಾಜ ಬಾಂಧವರು ಸಮುದಾಯ ಭವನ ನಿರ್ಮಿಸಲು ಶಾಸಕರು ನಿವೇಶನ ಒದಗಿಸಬೇಕು’ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಬಿ.ವೈ. ರಾಘವೇಂದ್ರ, ‘ಸಮುದಾಯ ಭವನ ನಿರ್ಮಿಸಲು ಪುರಸಭೆ ಮೂಲಕ ನಿವೇಶನ ಕೊಡಿಸಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.
ತಹಶೀಲ್ದಾರ್ ಬಿ. ಶಿವಕುಮಾರ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಪಿ. ನಾಗರಾಜಗೌಡ, ಸದಸ್ಯ ಟಿ.ಎಸ್. ಮೋಹನ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಚ್.ನಾಗರಾಜ್, ನಿರ್ದೇಶಕ ದೂದಿಹಳ್ಳಿ ಬಸವರಾಜ್, ಕುಂಬಾರ ಸಮಾಜದ ಮುಖಂಡರು ಉಪಸ್ಥಿತರಿದ್ದರು.