ಉಡುಪಿ(ಫೆ.೨೦): ಮಾನವೀಯತೆಗೆ ಹಲವು ಮುಖ, ನಾವು ಇನ್ನೊಬ್ಬರಿಗೆ ಸಹಾಯ ಮಾಡಲು ಮನಸು ಮಾಡಿದರೆ ಅದಕ್ಕೆ ನೂರು ದಾರಿಗಳು.. ಅವಧಿಗೆ ಮುನ್ನವೇ ಜನನವಾಗಿ ಸರಿಯಾದ ತೂಕವಿಲ್ಲದೇ ಪ್ರಾಣಾಪಾಯದಲ್ಲಿದ್ದು, ವೈದ್ಯರ ಶುಶ್ರೂಷೆಯಲ್ಲಿದ್ದ ಮಗುವಿನ ಪೋಷಣೆಗೆ ಹಣವಿಲ್ಲದೇ ಕಂಗಾಲಾಗಿದ್ದ ದಂಪತಿಗೆ ಸೂಕ್ತ ಕಾಲದಲ್ಲಿ ಸಹೃದಯರು ನೆರವಿನ ಹಸ್ತ ನೀಡಿದ ಅಪೂರ್ವ ನಿದರ್ಶನದ ವರದಿ ಇಲ್ಲಿದೆ..
ಪೆರ್ಡೂರು ನಿವಾಸಿ ಸುಖೇಶ್ ಅವರ ಪತ್ನಿ ಪ್ರತಿಮಾ ಅವರಿಗೆ ಸತತವಾಗಿ ಮೂರು ಬಾರಿ ಗರ್ಭಪಾತವಾಗಿದ್ದು, ನಾಲ್ಕನೇ ಬಾರಿಗೆ ಗರ್ಭ ಧರಿಸಿದ್ದರು. ಆದರೆ ಶಿಶುವಿನ ಬೆಳವಣಿಗೆ ಸರಿಯಾಗಿ ಇಲ್ಲದೇ ಇರುವ ಕಾರಣ 7ನೇ ತಿಂಗಳಿಗೆ ಸಿಸೇರಿಯನ್ ಮಾಡಲಾಗಿತ್ತು. ಈ ಹೆಣ್ಣು ಮಗುವಿನ ತೂಕ ಕೇವಲ 800 ಕಿ.ಗ್ರಾ೦ ಇದ್ದುದರಿಂದ ಆಸ್ಪತ್ರೆಯ ventilator ನಲ್ಲಿಟ್ಟು ಪೋಷಣೆ ಮಾಡುವುದು ಅನಿವಾರ್ಯವಾಗಿತ್ತು. ಅದಕ್ಕಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿತ್ತು. ಅಕಾಲಿಕ ಜನನವಾದ ಮಗುವಿನ ಆರೈಕೆಯು ಸೂಕ್ಷ್ಮ ವಿಚಾರವಾಗಿದ್ದು, ಇದು ವೆಚ್ಚದಾಯಕವಾಗಿದೆ. ಇದಕ್ಕೆ ಅಂದಾಜು 3 ಲಕ್ಷ ರೂಪಾಯಿ ಖರ್ಚು ಆಗಬಹುದು ಎಂದು ವ್ಯೆದ್ಯರು ಹೇಳಿದ್ದರು. ಆದರೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಭರಿಸುವ ಶಕ್ತಿ ಚಾಲಕ ವೃತ್ತಿಯಲ್ಲಿರುವ ಸುಖೇಶ್ ಅವರಿಗೆ ಅಸಾಧ್ಯವಾಗಿದ್ದು ಅವರು ದಾನಿಗಳ ನೆರವು ಯಾಚಿಸಿದ್ದರು. ಈ ಕುರಿತ ವರದಿಯನ್ನು `ಕುಲಾಲ್ ವರ್ಲ್ಡ್ ಡಾಟ್ ಕಾಮ್ ‘ ಪ್ರಕಟಿಸಿತ್ತು.
ಇವರ ಕೋರಿಕೆಗೆ ಕಂಡು ಮರುಗಿದ ಪೆರ್ಡೂರು ಕುಲಾಲ ಸಂಘ ಹಾಗೂ ಕಾಪು ಕುಲಾಲ ಯುವ ವೇದಿಕೆಯ ಸದಸ್ಯರು ದಾನಿಗಳಿಂದ ಹಣ ಸಂಗ್ರಹಿಸಿ ನೀಡಲು ಮುಂದಾಗಿದ್ದು, ವಾಟ್ಸಾಪ್ ನಲ್ಲಿ ಈ ಬಗ್ಗೆ ಮನವಿ ಮಾಡಿ, ಹಂಚಿದ್ದರು. ಇದಕ್ಕೆ ಮಾನವೀಯ ನೆಲೆಯಲ್ಲಿ ಸ್ಪಂದಿಸಿದ ದಾನಿಗಳು, ಸಂಘ ಸಂಸ್ಥೆಗಳು ನೆರವು ನೀಡಿ ಮಗುವಿನ ಚಿಕಿತ್ಸೆಗೆ ಆಸರೆಯಾಗಿದ್ದಾರೆ. ಆ ಫಲವಾಗಿ ಸ್ವಲ್ಪ ಸಮಯದಲ್ಲೇ ರೂ .1,38,000/- (ಒಂದು ಲಕ್ಷದ ಮೂವತ್ತ ಎಂಟು ಸಾವಿರ ರೂ.)ಸಂಗ್ರಹವಾಗಿತ್ತು. ಈ ಹಣವನ್ನು ಫೆಬ್ರವರಿ 20ರಂದು ಸಂಜೆ 5 ಗಂಟೆಗೆ ಮಣೆಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಂದನ ಕುಟುಂಬಕ್ಕೆ ಹಸ್ತಾ೦ತರ ಮಾಡಲಾಯಿತು.
ಈ ಸಂಧರ್ಭ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಶಂಕರ್ ಕುಲಾಲ್ ಪೆರಂಪಳ್ಳಿ, ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುಲಾಲ್ , ಪೆರ್ಡೂರು ಕುಲಾಲ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಕುಲಾಲ್, ಪೆರ್ಡೂರು ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ ಯೋಗೀಶ್ ಕುಲಾಲ್, ಜತೆ ಕಾರ್ಯದರ್ಶಿ ಸುಧಾಕರ್ ಕುಲಾಲ್, ಪೆರ್ಡೂರು ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಎ ಮೂಲ್ಯ ,ಸೇವಾದಳ ದಳಪತಿ ಗಣೇಶ್ ಕುಲಾಲ್, ಕಾಪು ಕುಲಾಲ ಯುವ ವೇದಿಕೆ ಅಧ್ಯಕ್ಷ ಉದಯ ಕುಲಾಲ್, `ಕುಲಾಲ್ ವರ್ಲ್ಡ್’ ವಾಟ್ಸಾಪ್ ಗ್ರೂಪಿನ ಎಡ್ಮಿನ್ ಹೇಮಂತ್ ಕುಲಾಲ್ ಕಿನ್ನಿಗೋಳಿ ಮತ್ತಿತರರು ಉಪಸ್ಥಿತರಿದ್ದರು. ದಾನಿಗಳ ಸಕಾಲಿಕ ಉಪಕಾರವನ್ನು ಸ್ಮರಿಸಿದ ಸುಖೇಶ್ ದಂಪತಿಗಳು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
ಎರಡು ದಿನದಲ್ಲಿ ಡಿಸ್ಚಾರ್ಜ್ : ಜನಿಸುವಾಗ 800 ಕಿ.ಗ್ರಾ೦ ತೂಕವಿದ್ದ ಮಗು ಆಸ್ಪತ್ರೆ ಸಿಬ್ಬಂದಿಗಳ ಸತತ ಪ್ರಯತ್ನದ ಫಲವಾಗಿ ಪ್ರಸ್ತುತ ಒಂದೂವರೆ ಕೆಜಿ ತೂಗುತ್ತಿದ್ದು, ಆರೋಗ್ಯದಿಂದಿದೆ. ಈಗಾಗಲೇ ಮಗುವನ್ನು ತಾಯಿ ಸುಪರ್ದಿಗೆ ನೀಡಿದ್ದು. ಇನ್ನೆರಡು ದಿನಗಳಲ್ಲಿ ಆಸ್ಪತೆಯಿಂದ ಬಿಡುಗಡೆಯಾಗುವ ಸಂಭವವಿದೆ ಎಂದು ತಿಳಿದು ಬಂದಿದೆ.
ಮಗುವಿನ ಆರೈಕೆಗಾಗಿ ಈಗಾಗಲೇ ಲಕ್ಷಾಂತರ ವ್ಯಯಿಸಿ ಕಂಗಾಲಾಗಿರುವ ಸುಖೇಶ್ ಅವರಿಗೆ ಸಹಾಯ ಮಾಡುವ ದಾನಿಗಳು ಕೆಳಗಿನ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬಹುದು.
Sukesh
Corporation Bank
Udupi Branch
A/c no:520101000147350
IFSC:CORP0000001