ಮಂಗಳೂರು (ಫೆ.೨೦) : ರಾಜ್ಯದಲ್ಲಿ ಕುಲಾಲ ಸಮುದಾಯವು ಆರ್ಥಿಕವಾಗಿ, ಸಾಮಾಜಿಕವಾಗಿ ತೀರಾ ಹಿಂದುಳಿದಿರುವಂತಹ ಜಾತಿಗಳಲ್ಲಿ ಒಂದು. ಈ ಜಾತಿ ಸಮುದಾಯದ ಸಂಘಟನೆಗಳು ಕಳೆದ ಹಲವು ವರುಷಗಳಿಂದ ರಾಜ್ಯದಲ್ಲಿ ಪ್ರತ್ಯೇಕ ಜಾತಿಗಣತಿ ನಡೆಸಲು ಹಾಗೂ ಇನ್ನಿತರ ಸವಲತ್ತುಗಳನ್ನು ಒದಗಿಸಿಕೊಡಲು ರಾಜ್ಯದ ಸರಕಾರಗಳನ್ನು ಒತ್ತಾಯಿಸುತ್ತಾ ಬಂದರೂ ಒದಗಿಸಿಕೊಡುವಲ್ಲಿ ಸರಕಾರಗಳು ಸಂಪೂರ್ಣವಾಗಿ ವಿಫಲವಾಗಿದೆ.
ಈ ನಿಟ್ಟಿನಲ್ಲಿ ಕುಲಾಲ ಸಮುದಾಯವು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಖ್ಯವಾಗಿ ಕುಂಭ ನಿಗಮವನ್ನು ದೇವರಾಜ ಅರಸು ನಿಗಮದಿಂದ ಪ್ರತ್ಯೇಕಿಸಿ, ಪ್ರತ್ಯೇಕ ಕುಂಭ ಕಲಾ ನಿಗಮವನ್ನು ಸ್ಥಾಪಿಸಿ, ಕುಂಬಾರರ ಸಮುದಾಯದವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು. ಹಾಗೂ ಪ್ರತೀ ವರ್ಷ ಕುಂಬಾರರ ಅಭಿವೃದ್ಧಿಗೆ 50 ಕೋಟಿ ನೀಡಬೇಕು. ಕುಂಬಾರರ ಅಭಿವೃದ್ಧಿಗೆ ಮುಖ್ಯವಾಗಿ ಸರ್ಕಾರಿ ಉದ್ಯೋಗದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ, ಖಾಸಗಿ ರಂಗದಲ್ಲಿ ವಿಶೇಷ ಮೀಸಲಾತಿ ನೀಡಬೇಕು. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಸರ್ವಜ್ಞ ಸಮುದಾಯ ಭವನ ನಿರ್ಮಿಸಲು ಒಂದು ಎಕರೆ ಸರ್ಕಾರಿ ಜಾಗ ನೀಡಬೇಕು ಹಾಗೂ ಸರ್ವಜ್ಞ ಭವನವನ್ನು ಸರ್ಕಾರವೇ ನಿರ್ಮಿಸಿ ಕೊಡಬೇಕು.
ರಾಜ್ಯದ ಎಲ್ಲಾ ಕುಂಬಾರ ಕುಲಾಲ ಸಮುದಾಯ ಭವನಗಳಿಗೆ ಹೆಚ್ಚು ಅನುದಾನವನ್ನು ನೀಡಬೇಕು. ಮುಖ್ಯವಾಗಿ ಕುಂಬಾರರ ಯುವಕರಿಗೆ ಸ್ವ-ಉದ್ಯೋಗ ಹಾಗೂ ಉದ್ಯಮ ನಡೆಸಲು ವಿಶೇಷ ರೀತಿಯಲ್ಲಿ ಕಡಿಮೆ ಬಡ್ಡಿಯ ಸಾಲ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು. ಕುಂಬಾರರ ಸಮುದಾಯದ ಹೆಣ್ಮಕ್ಕಳಿಗೆ ಶಿಕ್ಷಣ ಮತ್ತು ಮದುವೆಗೆ ವಿಶೇಷ ಅನುದಾನ ನೀಡಬೇಕು. ರಾಜ್ಯದ ಹಾಗೂ ಜಿಲ್ಲೆಯ ಕಡುಬಡತನದ ಕುಂಬಾರರನ್ನು ಗುರುತಿಸಿ, ಅವರಿಗೆ ನಿವೇಶನ ಹಾಗೂ ವಸತಿಯನ್ನು ನಿರ್ಮಿಸಿ ಕೊಡಬೇಕು, ಕುಂಬಾರರ ಸಮುದಾಯದ ನಾಯಕರಿಗೆ ರಾಜಕೀಯ ಸ್ಥಾನಮಾನ ನೀಡಬೇಕು, ಕುಂಬಾರರ ಧಾರ್ಮಿಕ ಕೇಂದ್ರಗಳಿಗೆ ವಿಶೇಷ ಅನುದಾನ ನೀಡಬೇಕು ಎಂಬ ಇನ್ನಿತರ ಹಲವಾರು ಬೇಡಿಕೆಗಳನ್ನು ಒತ್ತಾಯಿಸಲು ಮಾತ್ರವಲ್ಲ ಕುಲಾಲ ಸಮುದಾಯವನ್ನು ಸಂಘಟಿಸುವ ನಿಟ್ಟಿನಲ್ಲಿ ಕುಲಾಲ ಸಂಘವು ಮತ್ತು ಕುಲಾಲ ಸಮುದಾಯದ ಎಲ್ಲಾ ಒಡನಾಡಿ ಸಂಘ ಸಂಸ್ಥೆ ಮತ್ತು ಸಹಕಾರಿ ಸಂಘದ ನೇತೃತ್ವದಲ್ಲಿ ‘ಕುಲಾಲರ ಸಂಭ್ರಮ’ 2017 ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವು ತಾ. 26-02-2017ರಂದು ಕುಳಾಯಿ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣದಲ್ಲಿ ನಡೆಯಲಿದೆ.
ಹೆಚ್ಚಿನ ವಿವರಕ್ಕೆ ಆಮಂತ್ರಣ ಪತ್ರಿಕೆ ನೋಡಿರಿ…