ಮಂಗಳೂರು/ಉಡುಪಿ (ಫೆ.೨೦): ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘ/ ಕರಾವಳಿ ಕುಲಾಲ,ಕುಂಬಾರರ ಯುವವೇದಿಕೆ ಇದರ ಸಹಯೋಗದಲ್ಲಿ ಕವಿ ಸರ್ವಜ್ಞ ಜಯಂತಿ ಆಚರಣೆಯು ಫೆಬ್ರವರಿ 20, ಸೋಮವಾರದಂದು ಬೆಳಿಗ್ಗೆ ೧೧ ಗಂಟೆಗೆ ನಡೆಯಿತು.
ಕುಂಭ ನಿಗಮದ ಸ್ವಾತಂತ್ರ್ಯಕ್ಕೆ ಹೋರಾಡಲು ಸಮುದಾಯ ಸಿದ್ಧ : ಡಾ. ಅಣ್ಣಯ್ಯ ಕುಲಾಲ್
ಮಂಗಳೂರು: ಶೈಕ್ಷಣಿಕ ತಜ್ಞ ಸರ್ವಜ್ಞನಿಂದ ಕುಲಾಲ-ಕುಂಬಾರ ಸಮುದಾಯಕ್ಕೆ ನೈತಿಕ ಬಲ ಬಂದಿದೆ. ಆದರೆ ಸರ್ಕಾರ ಕೇವಲ ಸರ್ವಜ್ಞ ಜಯಂತಿ ಆಚರಿಸಿ ಸಮುದಾಯದ ಮನವೊಲಿಸಲು ಸಾಧ್ಯವಿಲ್ಲ. ದೇವರಾಜ ಅರಸು ನಿಗಮದಿಂದ ಕುಂಭ ನಿಗಮವನ್ನು ಸ್ವಾತಂತ್ರ್ಯಗೊಳಿಸಬೇಕೆಂಬ ಸಮುದಾಯದ ಕೂಗಿಗೆ ರಾಜಕೀಯ ಪಕ್ಷಗಳು ಮನ್ನಣೆ ನೀಡುತ್ತಿಲ್ಲ. ಇದಕ್ಕಾಗಿ ಸಮುದಾಯ ಉಗ್ರ ಹೋರಾಟಕ್ಕೆ ಮುಂದಾಗುವ ದಿನ ದೂರವಿಲ್ಲ ಎಂದು ಸರ್ವಜ್ಞವಾಣಿ ಪತ್ರಿಕೆಯ ಗೌರವ ಸಂಪಾದಕ, ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘದ ಕಾರ್ಯಾಧ್ಯಕ್ಷರಾದ ಪ್ರೊ| ಡಾ| ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಹೇಳಿದರು.
ಅವರು ಫೆ.೨೦ರಂದು ದ.ಕ. ಜಿಲ್ಲಾಡಳಿತ, ಜಿ.ಪಂ. ಮಂಗಳೂರು, ದ.ಕ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರಾವಳಿ ವಿಭಾಗದ ರಾಜ್ಯ ಕುಂಬಾರರ ಮಹಾ ಸಂಘ, ಮಂಗಳೂರು ಕರಾವಳಿ ಕುಲಾಲರ/ಕುಂಬಾರರ ಯುವವೇದಿಕೆ ವತಿಯಿಂದ ಜರಗಿತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ರಾಜ್ಯದಲ್ಲಿ ೨೦ ಲಕ್ಷದಷ್ಟು ಕುಲಾಲ-ಕುಂಬಾರ ಸಮುದಾಯದವರಿದ್ದರೂ ಸರ್ವಜ್ಞ ಜಯಂತಿಯ ಆಚರಣೆಗೆ ಹೋರಾಟ ನಡೆಸಬೇಕಾಯಿತು. ಇದು ಸರ್ವಜ್ಞನ ಬಗ್ಗೆ ಜನತೆಯಲ್ಲಿ ಜಿಜ್ಞಾಸೆ ಮೂಡಲು ಕಾರಣವಾಯಿತು. ಕೊನೆಗೂ ಮಣಿದ ಸರ್ಕಾರ ಸರ್ಜಜ್ಞ ಜಯಂತಿ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಿದೆ. ಈ ಮೂಲಕವಾದರೂ ಸಮುದಾಯಕ್ಕೆ ರಾಜಕೀಯವಾಗಿ ನ್ಯಾಯ ಸಿಗುವಂತಾಗಬೇಕು. ಸಮುದಾಯಕ್ಕೆ ರಾಜಕೀಯ ಶಕ್ತಿ ನೀಡುವ ಕೆಲಸ ಆಗಬೇಕು. ಇದಕ್ಕೆ ಜನಪ್ರತಿನಿಧಿಗಳು ವಿಧಾನ ಸಭೆಯಲ್ಲಿ ಧ್ವನಿಯೆತ್ತಬೇಕು. ಆಗ ಸರ್ವಜ್ಞ ಜಯಂತಿಗೆ ನಿಜವಾದ ಅರ್ಥ ಲಭಿಸುತ್ತದೆ ಎಂದರು. ಸರ್ವಜ್ಞ ನಮ್ಮ ಸಮುದಾಯದವನಾಗಿದ್ದರೂ ಆತನ ತತ್ವ ಕೇವಲ ನಮ್ಮ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಆತನ ತತ್ವ-ಸಿದ್ದಾಂತಗಳು ವಿಶ್ವಮಾನ್ಯ ಎಂದರು.
ಸರಕಾರಿ ಭಿಕ್ಷೆ ಬೇಕಾಗಿಲ್ಲ: ನಮಗೆ ರೂ.೫, ೧೦ ಲಕ್ಷದ ಸರಕಾರಿ ಭಿಕ್ಷೆ ಬೇಕಾಗಿಲ್ಲ. ಸಾಮಾಜಿಕ ನ್ಯಾಯದ ನೆಲೆಯಲ್ಲಿ ಸ್ವತಂತ್ರ ಕುಂಭ ನಿಗಮ ಕೊಟ್ಟು ಅದಕ್ಕೆ ರೂ. ೫೦ ಕೋಟಿ ಅನುದಾನ ಕೊಡಿ. ರಾಜಕೀಯವಾಗಿ ನಿರ್ಲಕ್ಷ್ಯಿಸದೆ ಈ ಮೂಲಕ ನಮಗೂ ವಿಧಾನ ಪರಿಷತ್ ಅಥವಾ ವಿಧಾನಸಭೆಯ ಮೆಟ್ಟಿಲು ಹತ್ತುವ ಅವಕಾಶ ನೀಡಿ. ಆಗ ಮಾತ್ರ ನಾವು ಸರ್ವಜ್ಞ ಜಯಂತಿಯನ್ನು ಕುಂಬಾರ ಸಮುದಾಯದ ಜೊತೆ ಆಚರಿಸುವುದು ಹೆಚ್ಚು ಅರ್ಥಪೂರ್ಣವಾಗುತ್ತದೆ. ಜೊತೆಗೆ ನಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ವಿಶೇಷ ಮೀಸಲಾತಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್. ಲೋಬೋ ಮಾತನಾಡಿ, ಸರ್ವಜ್ಞನ ವಚನ ಇಂದಿಗೂ ಪ್ರಸ್ತುತವಾದದ್ದು. ಇದರಿಂದ ಮಾನವನ ಜೀವನ ಪದ್ದತಿ ತಿದ್ದಲು ಸಾಧ್ಯ. ಕುಲಾಲ-ಕುಂಬಾರ ಸಮುದಾಯದಲ್ಲಿ ಬಂದ ಸರ್ವಜ್ಞ ನಿಂದ ಆ ಸಮುದಾಯಕ್ಕೆ ಗೌರವ. ಇಡೀ ಸಮಾಜದ ಸುಧಾರಣೆ ಶ್ರಮಿಸಿದ ಸಂತ ಸರ್ವಜ್ಞ ಜಗತ್ತಿನ ಎಲ್ಲಾ ಸಮುದಾಯದವರ ಆಸ್ತಿ ಎಂದ ಅವರು ಕುಲಾಲ ಸಮುದಾಯಕ್ಕೆ ದೊರೆಯುವ ಸೌಲಭ್ಯಗಳನ್ನು ಮುಟ್ಟಿಸುವ ಪ್ರಾಮಾಣಿಕೆ ಕೆಲಸ ಸರ್ಕಾರದಿಂದ ಆಗಬೇಕು ಎಂದರು.
ಸ್ವಾರ್ಥ ಇಲ್ಲದೆ ಸರಳತೆಯಿಂದ ಬದುಕುತ್ತಿದ್ದ ಸರ್ವಜ್ಞ ಕಣ್ಣಿಗೆ ಕಾಣಿದ್ದನ್ನು ನೇರವಾಗಿ ಹೇಳಿದವನು. ಆತನ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡಾಗ ನಮ್ಮ ಜೀವನದಲ್ಲೂ ಮಾನವೀಯತೆ ತುಂಬಲು ಸಾಧ್ಯ ಎಂದು ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಜಾನಕಿ ಎಂ. ಬ್ರಹ್ಮಾವರ ಹೇಳಿದರು.
ಶಿರ್ಷಿಕೆ ಅನಾವರಣ: ಕುಲಾಲ-ಕುಂಬಾರ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಪದ್ಮನಾಭ ಕುಲಾಲ್ ವೇಣೂರು ಸಂಪಾದಕತ್ವದಲ್ಲಿ ಹೊರಬರುತ್ತಿರುವ ಸರ್ವಜ್ಞವಾಣಿ ಪ್ರಾಯೋಗಿಕ ಮಾಸಿಕ ಸಂಚಿಕೆಯ ಶಿರ್ಷಿಕೆಯನ್ನು ಶಾಸಕ ಜೆ.ಆರ್. ಲೋಬೋ ಅನಾವರಣಗೊಳಿಸಿದರು.
ಬೆಂಗಳೂರು ಕರಾವಳಿ ಕುಲಾಲ ಕುಂಬಾರರ ವೇದಿಕೆ ರಾಜ್ಯಾಧ್ಯಕ್ಷ ತೇಜಸ್ವಿರಾಜ್, ದ.ಕ. ಜಿಲ್ಲಾ ಕರಾವಳಿ ಕುಲಾಲ ಕುಂಬಾರರ ವೇದಿಕೆಯ ಅಧ್ಯಕ್ಷ ಜಯೇಶ್ ಗೋವಿಂದ್ , ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾರ ಮಾತೃ ಸಂಘದ ಅಧ್ಯಕ್ಷರಾದ ಸುಜೀರ್ ಶ್ರೀಧರ್ ಕೆ., ಕರಾವಳಿ ಕುಲಾಲ ಕುಂಬಾರರ ಯುವವೇದಿಕೆ ವಿಭಾಗೀಯ ಅಧ್ಯಕ್ಷ ಮೋಹಿತ್ ಎನ್. ಕದ್ರಿ ಕಂಬಳ, ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು ಹಾಗೂ ಇತರ ಹಲವು ಗಣ್ಯರು ಉಪಸ್ಥಿತರಿದ್ದರು. ದ.ಕ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್ ಸ್ವಾಗತಿಸಿ ಉಪನ್ಯಾಸಕಿ ಮಂಜುಳಾ ಶೆಟ್ಟಿ ಮಂಗಳೂರು ಮತ್ತು ಅಶೋಕ್ ಕುಲಾಲ್ ಕೂಳೂರು ನಿರ್ವಹಿಸಿದರು.
ವರದಿ: ಪದ್ಮನಾಭ ಕುಲಾಲ್ ವೇಣೂರು