ಕುಂಬಾರ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ದ. ಕ ಜಿಲ್ಲಾ ಘಟಕದ ವತಿಯಿಂದ ಕವಿ ಸರ್ವಜ್ಞ ಜಯಂತಿ
ಮಂಗಳೂರು(ಫೆ.೨೦): ಸಮಾಜಮುಖಿ ಕೆಲಸಗಳಿಂದ ನಮ್ಮ ಹೆಸರು ಚಿರಸ್ಥಾಯಿಯಾಗಿರುತ್ತದೆ ಹಾಗೂ ಜೀವನದಲ್ಲಿ ಸಾರ್ಥಕ್ಯ ದೊರೆಯುತ್ತದೆ ಎಂದು ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ಅವರು ಕರ್ನಾಟಕ ರಾಜ್ಯ ಕುಂಬಾರ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ದ. ಕ ಜಿಲ್ಲಾ ಘಟಕದ ವತಿಯಿಂದ ಪಾಂಡೇಶ್ವರ ಕುಲಾಲ ಮಾತೃ ಸಂಘದ ಬಿ ಎಚ್ ಬಂಗೇರ ಸಭಾಭವನದಲ್ಲಿ ಫೆ. 19ರಂದು ನಡೆದ ಸರ್ವಜ್ಞ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ಜ್ಞಾನ ಸಂಪಾದನೆ ಜೊತೆಗೆ ವಿಜ್ಞಾನ -ತಂತ್ರಜ್ಞಾನ ಕುರಿತ ತಿಳುವಳಿಕೆ ಅಳವಡಿಸಿಕೊಳ್ಳಬೇಕು. ಸಮಾಜಮುಖಿ ಕೆಲಸ ಮಾಡುವಾಗ ಸಮಸ್ಯೆಗಳನ್ನು ಎದುರಿಸಿ ಮುನ್ನುಗ್ಗಿದಾಗ ಯಶಸ್ಸು ಖಚಿತ. ಇದನ್ನು ಸರ್ವಜ್ಞ ತನ್ನ ವಚನಗಳ ಮೂಲಕ ಸಮಾಜದ ಮುಂದಿರಿಸಿದ್ದಾನೆ ಎಂದು ಹೇಳಿದರು.
ರಾಜ್ಯ ಕುಂಬಾರ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಪಿ. ನಾಗರಾಜ್ ಮಾತನಾಡಿ ಹಿಂದುಳಿದ ಕುಂಬಾರ ಸಮುದಾಯಕ್ಕೆ ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಲು ಸಂಘ ಯತ್ನಿಸುತ್ತಿದೆ ಎಂದರು.
ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ ಕವಿ ಸರ್ವಜ್ಞನ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ, ಮಂಗಳೂರು ನಗರ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಜಿಲ್ಲಾ ಘಟಕದ ಸದಾನಂದ ನಾವರ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ದ. ಕ ಜಿಲ್ಲಾ ಘಟಕದ ಅಧ್ಯಕ್ಷ ಮಂಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕುಂಬಾರ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ದ.ಕ ಜಿಲ್ಲಾ ನಿರ್ದೇಶಕ ಆನಂದ ಬಂಜನ್ ಸಂಪಾದಕತ್ವದ `ಮತ್ತೆ ಹುಟ್ಟಿ ಬಾ ಸರ್ವಜ್ಞ’ ಕೃತಿಯನ್ನು ತಾಲೂಕು ವೈದ್ಯಾಧಿಕಾರಿ ಡಾ. ನವೀನ್ ಚಂದ್ರ ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಡಾ. ಅಣ್ಣಯ್ಯ ಕುಲಾಲ್, ಬಂಟ್ವಾಳ ವಿಭಾಗದ ಅಬಕಾರಿ ನಿರೀಕ್ಷಕ ಚಂದ್ರಕಾಂತ, ಕುಲಾಲ ಮಾತೃ ಸಂಘದ ಅಧ್ಯಕ್ಷ ಸುಜೀರ್ ಕುಡುಪು, ಉದ್ಯಮಿ ಪ್ರೇಮಾನಂದ ಕುಲಾಲ್, ಕರಾವಳಿ ಕುಲಾಲ ಯುವ ವೇದಿಕೆಯ ವಿಭಾಗೀಯ ಅಧ್ಯಕ್ಷ ಮೋಹಿತ್ ಎನ್. ಕದ್ರಿಕಂಬಳ ಮೊದಲಾದವರು ಭಾಗವಹಿಸಿದ್ದರು. ಪ್ರಸಾದ್ ಕುಲಾಲ್ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.