ಬೆಳ್ತಂಗಡಿ(ಫೆ.೧೯): ಪತ್ನಿ ಹಾಗೂ ಎರಡು ಪುಟ್ಟ ಮಕ್ಕಳನ್ನು ಹೊಂದಿರುವ ವ್ಯಕ್ತಿಯೊಬ್ಬರು ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಸಂಘ ಸಂಸ್ಥೆಗಳಿಂದ, ಸಹೃದಯ ದಾನಿಗಳಿಂದ ಕಿಡ್ನಿ ಡಯಾಲಿಸಿಸ್ಗಾಗಿ ಸಹೃದಯರು ನೆರವು ನೀಡುವಂತೆ ಮೊರೆಯಿಟ್ಟಿದ್ದಾರೆ.
ಬೆಳ್ತಂಗಡಿ ತಾಲೂಕು ಅಳದಂಗಡಿ ಬಳಿಯ ಸುಲ್ಕೇರಿಮೊಗ್ರು ಗ್ರಾಮದ ನಿವಾಸಿ ಬಾಬು ಮೂಲ್ಯ-ಗಿರಿಜಾ ದಂಪತಿಯ ಪುತ್ರ ರಾಮಣ್ಣ ಮೂಲ್ಯ (45) ಕಿಡ್ನಿ ವೈಫಲ್ಯಕ್ಕೀಡಾಗಿ ಸಾಕಷ್ಟು ನೋವು ಅನುಭವಿಸುತ್ತಿರುವ ನತದೃಷ್ಟರು.
ಚಾಲಕ ವೃತ್ತಿಯನ್ನು ಮಾಡಿಕೊಂಡು ತಮ್ಮ ಪುಟ್ಟ ಕುಟುಂಬಕ್ಕೆ ಆಧಾರವಾಗಿದ್ದ ರಾಮಣ್ಣ ಅವರು ಎರಡು ವರ್ಷಗಳ ಹಿಂದೆ ಅಸೌಖ್ಯಕ್ಕೀಡಾಗಿದ್ದು, ವೈದ್ಯಕೀಯ ಪರೀಕ್ಷೆ ಮಾಡಿದಾಗ ದಿಕ್ಕೇ ತೋಚದ ಸ್ಥಿತಿ. ಕಾರಣ ಇವರ ಎರಡೂ ಕಿಡ್ನಿ ವಿಫಲಗೊಂಡಿತ್ತು. ಜೀವನ ಸಾಗಿಸುವುದೇ ಕಷ್ಟದ ಪರಿಸ್ಥಿತಿಯಲ್ಲಿ ಮನೆ ಯಜಮಾನನ ಅನಾರೋಗ್ಯದ ಸುದ್ದಿ ಕೇಳಿ ಇಡೀ ಕುಟುಂಬವೇ ತತ್ತರಿಸಿ ಹೋಗಿದೆ. ಪ್ರಸ್ತುತ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಿಸಬೇಕು. ಇದಕ್ಕೆ ತಿಂಗಳಿಗೆ ಮೂವತ್ತು ಸಾವಿರದವರೆಗೆ ಹಣ ಬೇಕಾಗುತ್ತದೆ. ರಾಮಣ್ಣ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈಗಾಗಲೇ ಲಕ್ಷಾಂತರ ರೂಪಾಯಿ ಸಾಲಸೋಲ ಮಾಡಿ ಇದುವರೆಗೆ ಜೀವ ಉಳಿಸಿಕೊಂಡಿದ್ದಾರೆ. ಆದರೆ ಮುಂದಿನ ದಾರಿ ಏನೆಂಬುವುದು ಕುಟುಂಬದ ಚಿಂತೆಗೆ ಕಾರಣವಾಗಿದೆ. ಪತ್ನಿ ಕುಸುಮಾ ಬೀಡಿ ಕಟ್ಟಿ ಅಲ್ಪ ಸ್ವಲ್ಪ ಸಂಪಾದಿಸಿದ್ದೇ ಇದೀಗ ಜೀವನೋಪಾಯಕ್ಕೆ ದಾರಿ. ಇದರ ಜೊತೆ ಒಬ್ಬ 11 ವರ್ಷದ ಗಂಡು ಮತ್ತು 8 ವಯಸ್ಸಿನ ಮಗಳಿಗೆ ಶಿಕ್ಷಣ ನೀಡುವುದೂ ಸವಾಲು ಎಂಬಂಥ ಪರಿಸ್ಥಿತಿ.
ಸೂಕ್ತ ದಾನಿಗಳು ಸಿಕ್ಕಲ್ಲಿ ಕಿಡ್ನಿ ಕಸಿ ಮಾಡಬಹುದು. ಆದರೆ ಇದಕ್ಕೆ ರೂ. ಹತ್ತು ಲಕ್ಷಕ್ಕೂ ಹೆಚ್ಚುಹಣ ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಬದುಕು ಸಾಗಿಸುದೇ ಕಷ್ಟದಾಯಕವಾದ ಪರಿಸ್ಥಿತಿಯಲ್ಲಿ ಈ ಕುಟುಂಬಕ್ಕೆ ಇಷ್ಟೊಂದು ದೊಡ್ಡ ಮೊತ್ತದ ಹಣ ಸಂಗ್ರಹಿಸುವುದು ಕನಸಿನ ಮಾತು.
ಬಡತನದ ಬೇಗೆಯಲ್ಲಿ ಬೆಂದುಂಡ ಕುಟುಂಬಕ್ಕೆ ದಾನಿಗಳ ತುರ್ತು ಆಸರೆ ಬೇಕಾಗಿದೆ. ರಾಮಣ್ಣ ಮೂಲ್ಯ ಬದುಕು ಬೆಳಗಿಸಲು ಸಹೃದಯಿ ದಾನಿಗಳ ನಿರೀಕ್ಷೆಯಲ್ಲಿ ಬಡ ಕುಟುಂಬ ಕಾಯುತ್ತಿದೆ. ನಿಮ್ಮವನೆಂದು ತಿಳಿದು ನೆರವಿನ ಹಸ್ತ ಚಾಚಿದರೆ ಈ ಕುಟುಂಬಕ್ಕೆ ಕಷ್ಟಗಳನ್ನು ಜಯಿಸುವ ಬಲ ಬಂದೀತು. ನೆರವು ನೀಡಲು ಇಚ್ಛಿಸುವ ದಾನಿಗಳು ರಾಮಣ್ಣ ಮೂಲ್ಯ ಅವರ ಕೆಳಗಿನ ಬ್ಯಾಂಕ್ ಖಾತೆಗೆ ಹಣ ಸಹಾಯ ನೀಡಬಹುದು.
B. Ramanna Moolya,
Karnataka Bank, Aladanagady Branch,
S.B A/c No :0152500101090201
IFSC code : KARB0000015
Mobile No: 9845477480, 9663264170