ಮಂಗಳೂರು : ಹಿರಿಯ ಧಾರ್ಮಿಕ, ಸಾಮಾಜಿಕ, ರಾಜಕೀಯ ಮುತ್ಸದ್ಧಿ ಕೊಲ್ಯ ಸೀತಾರಾಮ ಬಂಗೇರ ಅವರಿಗೆ ಎಪ್ಪತ್ತೈದು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಫೆ.26ರಂದು ಉಳ್ಳಾಲ ವಲಯ ನಾಗರಿಕರ ಪರವಾಗಿ ಕೊಲ್ಯ ಶಾರದಾ ಸದನ ವಠಾರದಲ್ಲಿ ಪೌರ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಕುಲಾಲ ಸಮಾಜದ ಅಪರೂಪದ ನಾಯಕ ಸೀತಾರಾಮ ಬಂಗೇರ ಅವರ ಬಗ್ಗೆ ಮಾಹಿತಿ ಸಂಗ್ರಹಿಸಿ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಅವರು ಬರೆದ ವಿಶೇಷ ಬರಹ ಇಲ್ಲಿದೆ.
ನೇತ್ರಾವತಿ ನದಿಯ ಆಕಡೆ ಈ ಕಡೆ ಛೋಟಾ ಮಂಗಳೂರು ಖ್ಯಾತಿಯ ಉಳ್ಳಾಲ, ತೊಕ್ಕೊಟ್ಟು, ಕೊಲ್ಯ, ಸೋಮೇಶ್ವರ, ಕೋಟೆಕಾರು, ಬೀರಿ, ಕಿನ್ಯಾ ಮುಂತಾದ ಗ್ರಾಮಗಳು. ಇವೇ ಕರ್ನಾಟಕ ಕೇರಳ ಗಡಿಭಾಗದ ಪ್ರಮುಖ ಗ್ರಾಮಗಳು. ನದಿಯ ಇಕ್ಕೆಲಗಳಲ್ಲಿ ಈ ನಮ್ಮ ಲೇಖನದ ನಾಯಕನನ್ನು ಜನ ಅಣ್ಣ …ಮಾವ …ಅಜ್ಜಾ ..ಎಂದು ಕರೆಯುವುದನ್ನು ಕಾಣಬಹುದೇ ವಿನಃ ಹೆಸರು ಹಿಡಿದು ಕರೆಯುವವರು ವಿರಳ. ಕಾರಣ ಈ ಕೊಲ್ಯ ಸೀತಾರಾಮ ಬಂಗೇರರ ವ್ಯಕ್ತಿತ್ವವೇ ಹಾಗೆ..!
ಮಾಗಿದ ವಯಸ್ಸು ,ಜೀವನಾನುಭವದಿ ಬಾಗಿದ ಬದುಕು, ಸರಿ ತಪ್ಪುಗಳ ಅಳೆದು ತೂಗಿ ಮಾತಾಡುವ ಪರಿ, ಹದ್ದು ಮೀರಿದಾಗ ನೇರಾನೇರ ತರಾಟೆಗೆ ತೆಗೆದುಕೊಳ್ಳುವ ಬಗೆ, ಎದ್ದುಕಾಣುವ ಧಾರ್ಮಿಕ ಚಿಂತನೆ, ತಿದ್ದಿ ಹೇಳುವ ಸಾಮಾಜಿಕ ನಡೆ , ಖಡಾಖಡಿಯ ರಾಜಕೀಯ ತೀರ್ಮಾನಗಳು.. ಏರುಪೇರು-ಸೋಲು ಗೆಲುವುಗಳನ್ನ ಸಮಚಿತ್ತದಿ ಸ್ವೀಕರಿಸುವ ಜೀವನೋತ್ಸಹ ಅವರನ್ನು ಬೇರೆಯವರಿಗಿಂತ ಭಿನ್ನವಾಗಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲವೋ ಏನೋ ?
ಹೌದು.., ಅಂತಹ ಕೊಲ್ಯ ಸೀತಾರಾಮ ಬಂಗೇರರಿಗೆ ಈಗ 75 ವರ್ಷಗಳ ಮೇರು ವಯಸ್ಸು. 1941 ಸೆಪ್ಟೆಂಬರ್ 4 ರಂದು ಶ್ರೀಮತಿ ರುಕ್ಮಿಣಿ ಹಾಗು ಶ್ರೀ ಮಂಜಪ್ಪ ದಂಪತಿ ಗಳ ಮಗನಾಗಿ ಜನನ. ಸ್ವಾತಂತ್ರ್ಯ ಪೂರ್ವದ ಬಡತನ ಕಷ್ಟ ಕಾರ್ಪಣ್ಯದ ಕಠಿಣ ದಿನಗಳು. ಪರಿಸ್ಥಿತಿಯ ಒತ್ತಡದಿಂದ ಪ್ರಾಥಮಿಕ ಶಿಕ್ಷಣ ಮುಗಿಸಿ ಬೀಡಿ ಕಟ್ಟುವ ಕಾಯಕಕ್ಕೆ ಧುಮುಕಿ ಕುಟುಂಬಕ್ಕೆ ಆಸರೆಯಾದವರು. ಅದಾದ ಬಳಿಕ ರೈಟರ್ ಆಗಿ ಅಂಗಡಿಯಲ್ಲಿ ಕೆಲಸ ಮಾಡಿ ವರ್ಕ್ ಶಾಪ್ ನಲ್ಲಿ ವೆಲ್ದರ್ -ಫಿಟ್ಟರ್ ಆಗಿ ದುಡಿತ. ದುಡಿಯುತ್ತಾ ದುಡಿಯುತ್ತಾ 1974ರಲ್ಲಿ ತೊಕ್ಕೊಟ್ಟಿನ ಭಟ್ನಗರದಲ್ಲಿ ಭಾರತ್ ಇಂಡಸ್ಟ್ರೀಟ್ ಸ್ಥಾಪಿಸಿದರು. ಅಲ್ಲಿಂದಲೇ ಬೆಳೆದು ನಿಂತರು.
ಶ್ರೀಮತಿ ಸುಂದರಿಯವರನ್ನು ಕೈಹಿಡಿದು 4 ಗಂಡು, 2 ಹೆಣ್ಣು ಮಕ್ಕಳ ತುಂಬು ಕುಟುಂಬ ಇವರದ್ದು. ಉಳ್ಳಾಲ ಎಂದರೆ ಅಬ್ಬಕ್ಕ, ಪೋರ್ಚುಗೀಸರ ಎದುರು ಹಿಂದೂ-ಮುಸ್ಲಿಮ್ ಬಂಧುಗಳು ಏಕ ಮನಸ್ಸಿನಿಂದ ಹೋರಾಟ ಕೊಟ್ಟ ರಾಷ್ಟ್ರದ ಖ್ಯಾತ ಊರು. ಅಲ್ಲಿ ರಾಜಕೀಯದ ವಿಷಯ ಬಂದಾಗ ಬಂಗೇರರದ್ದು ಮರೆಯಲಾಗದ ಹೆಸರು. ಕಾಂಗ್ರೆಸ್, ಕಮ್ಯುನಿಸ್ಟ್ ಭದ್ರಕೋಟೆಯಾಗಿದ್ದ ಈ ನಾಡಲ್ಲಿ ಜನತಾ ಪಕ್ಷ, ಜನಸಂಘ ಹಾಗೂ ಬಿಜೆಪಿ ಗೆ ಭದ್ರ ಭುನಾದಿ ಹಾಕಿ ಕೊಡುವಲ್ಲಿ ಅಡಿಗಲ್ಲು ಹಾಕಿದವರಲ್ಲಿ ಇವರು ಪ್ರಮುಖರು ಎಂದರೆ ತಪ್ಪಾಗಲಾರದು.
1957ರ ಚುನಾವಣೆಯಲ್ಲಿ ಮಂಗಳೂರು -2 ಎಂದು ಹೆಸರಾಗಿದ್ದ ಸಮಯದಲ್ಲೇ ಇವರು ಎಳೆ ವಯಸ್ಸಿನಲ್ಲೇ ಜನತಾ ಪಕ್ಷದತ್ತ ವಾಲಿದ್ದರು. 1977ರ ಪಂಚಾಯತ್ ಚುನಾವಣೆ, 1982ರಲ್ಲಿ ಜನಸಂಘ ರಚನೆಯಾದಾಗ ಅಲ್ಲಿ ಪ್ರಮುಖ ಪಾತ್ರ ವಹಿಸಿ ಉಳ್ಳಾಲ ಕ್ಷೇತ್ರ ಸಮಿತಿಯ ಅಧ್ಯಕ್ಷರಾಗಿ (1984-87) ಜಿಲ್ಲಾ ಪಂಚಾಯತ್ ಗೆ ಸ್ಪರ್ಧಿಸಿ ಎರಡನೇ ಸ್ಥಾನ ಗಳಿಸಿದರು (1986).
1987ರಲ್ಲಿ ಜಿಲ್ಲಾ ಬಿಜೆಪಿಯ ಕಾರ್ಯದರ್ಶಿಯಾಗಿ ಅಂದಿನ ಅಧ್ಯಕ್ಷರಾಗಿದ್ದ ಧನಂಜಯ ಕುಮಾರ್ ಅವರ ಜೊತೆ ದುಡಿದಿದ್ದರು. 1996 ರಲ್ಲಿ ಉಳ್ಳಾಲದ ಪಂಚಾಯತ್ ಸದಸ್ಯರಾಗಿ ಉಳ್ಳಾಲದಲ್ಲಿ ಅಬ್ಬಕ್ಕನವರ ಪ್ರತಿಮೆ ಹಾಗೂ ವೃತ್ತ ಮಾಡುವಲ್ಲಿ ಶ್ರಮಿಸಿದವರು. ಹೀಗೆ ಜಿಲ್ಲಾ ಬಿಜೆಪಿಯ ಹಿರಿಯ ನಾಯಕನಾಗಿ, ಜಿಲ್ಲಾ ಕಾರ್ಯಕಾರಿಣಿಯ ವಿಶೇಷ ಆಹ್ವಾನಿತರಾಗಿ ಬಿಜೆಪಿಯ ರಾಜ್ಯ ಪರಿಷತ್ ನ ಸದಸ್ಯರಾಗಿ ಇಂದಿನವರೆಗೂ ಸಕ್ರೀಯವಾಗಿ ದುಡಿಯುತ್ತಿರುವ ಹಿರಿಯ ಜೀವ.
ರಾಜಕೀಯದಲ್ಲಿ ಇದ್ದರೂ ಸಹಾ ತನ್ನ ಸಾಮಾಜಿಕ ಹಾಗೂ ಧಾರ್ಮಿಕ ಹೊಣೆಯನ್ನು ಅರಿತು ನಡೆದವರು. ಹುಟ್ಟಿದ ಮನೆ,ಜಾತಿ, ಧರ್ಮ ಹಾಗೂ ಸಮಾಜಕ್ಕೆ ಅನ್ಯಾಯವಾದಾಗ ಸಿಡಿದೆದ್ದು ಸುದ್ದಿಯಾದವರಲ್ಲಿ ಬಂಗೇರರೂ ಸಹಾ ಒಬ್ಬರು. ಕೊಲ್ಯ ಶಾರದೋತ್ಸವ ಸಮಿತಿ (1984) ಸದಸ್ಯರಾಗಿ, ಅಧ್ಯಕ್ಷರಾಗಿ, ಗೌರವ ಅಧ್ಯಕ್ಷರಾಗಿ ಇಂದಿಗೂ ಯುವಕರಿಗೆ ಪ್ರೇರಣೆಯಾಗಿ ದುಡಿಯುತ್ತಿದ್ದಾರೆ.
ಇತಿಹಾಸ ಪ್ರಸಿದ್ಧ ಸೋಮೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರರಾಗಿ, ಮಲೆಯಾಳಿ ಚಾಮುಂಡೇಶ್ವರಿ ದೇವಸ್ಥಾನದ ಟ್ರಸ್ಟಿಯಾಗಿ, ಅಡ್ಕ-ಕುಂಜತ್ತೂರಿನ ಬಂಗೇರ ಮೂಲಸ್ಥಾನದ ಹಿರಿಯ ಗುರಿಕಾರರಾಗಿ ಧಾರ್ಮಿಕ ಬದುಕಿನ ಒಳ ಹೊರಗನ್ನು ಅನುಭವಿಸಿ,ಆಚರಿಸಿ ಉಳಿಸಿ ಬೆಳೆಸುವಲ್ಲಿ, ಸಂಸ್ಕಾರ ಸಂಸ್ಕೃತಿಯನ್ನ ಬಿತ್ತರಿಸುವಲ್ಲಿ ಸಾಕಷ್ಟು ಹೆಣಗಿದವರು. ಲ್ಯಾಂಡ್ ಡೆವಲಪ್ಮೆಂಟ್ ಬ್ಯಾಂಕ್ ನ ಸದಸ್ಯರಾಗಿ, ಕೊಲ್ಯ ಕುಲಾಲ ಸಂಘಕ್ಕೆ 4 ಬಾರಿ ಅಧ್ಯಕ್ಷರಾಗಿ, ಜಿಲ್ಲಾ ಕುಲಾಲ ಯಾನೆ ಮೂಲ್ಯರ ಸಂಘದ ಹಿರಿಯ ಮಾರ್ಗದರ್ಶಕರಾಗಿ, ಕೊಲ್ಯ ಕುಂಭೇಶ್ವರ ಸೊಸೈಟಿಯ ಸ್ಥಾಪಕ ಸದಸ್ಯ ಹಾಗೂ ನಂತರ ಅಧ್ಯಕ್ಷರಾಗಿ, ತೊಕ್ಕೊಟ್ಟು ಶಕ್ತಿ ಭಾರತ್ ವ್ಯಾಯಾಮ ಶಾಲೆಯ ಸ್ಥಾಪಕರಲ್ಲಿ ಒಬ್ಬರಾಗಿ ,ಪೋಷಕರಾಗಿ ಉಳ್ಳಾಲದ ಸುತ್ತುಮುತ್ತಲಿನ ಆಗು ಹೋಗುಗಳಿಗೆ, ಏಳು ಬೀಳುಗಳಿಗೆ ಹಿರಿಯ ಸಾಕ್ಷಿಯಾಗಿ ನಿಂತಿರುವವರು ಸೀತಾರಾಮ ಬಂಗೇರರು.
ಸಾಮಾಜಿಕ, ರಾಜಕೀಯ, ಧಾರ್ಮಿಕ ಕ್ಷೇತ್ರದ ಬೆಳವಣಿಗೆಗೆ ಬಂಗೇರರು ಕೊಟ್ಟ ಕೊಡುಗೆ ಅಪಾರ. ಆದರೆ ಅವರು ಅವುಗಳಿಂದ ಪಡೆದುಕೊಂಡ ಲಾಭ ಕಡಿಮೆ. ಈ ಮಾತನ್ನು ಇಡೀ ಉಳ್ಳಾಲಕ್ಕೆ ಉಳ್ಳಾಲವೇ ಹೇಳುತ್ತಿದೆ. ಇದು ಅವರಿಗೆ ಸಲ್ಲುವ ಅತೀ ದೊಡ್ಡ ಗೌರವ. ಇದು ನಾಯಕನೊಬ್ಬನು ಹೇಗಿರಬೇಕು ಎಂಬುದಕ್ಕೆ ಜ್ವಲಂತ ನಿದರ್ಶನ
ಬಂಗೇರರ ಬಂಗಾರದಂತಹ ವ್ಯಕ್ತಿತ್ವಕ್ಕೆ ಈಗ 75ರ ಮೆರುಗು. ಇಡೀ ಉಳ್ಳಾಲಕ್ಕೆ ಉಳ್ಳಾಲವೇ ಎದ್ದು ನಿಂತು ಪಕ್ಷ ,ಜಾತಿ, ಧರ್ಮ ಭೇದ ಮರೆತು ಆಚರಿಸುತ್ತಿರುವುದು ಅವರ ಮೇರು ವ್ಯಕ್ತಿತ್ವಕ್ಕೆ ಸಲ್ಲುವ ದೊಡ್ಡ ಗೌರವ.
ಡಾI ಎಂ. ಅಣ್ಣಯ್ಯ ಕುಲಾಲ್ ಉಳ್ತೂರು