ಕುಂದಾಪುರ(ಫೆ.೧೧): ಇಂದು ನಸುಕಿನ ಜಾವ ಹೆಮ್ಮಾಡಿಯಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಚಿತ್ರಕಲಾ ಶಿಕ್ಷಕ ಭೋಜ ಹಾಂಡ(58) ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಕಳೆದ ಹಲವು ವರ್ಷಗಳಿಂದ ಚಿತ್ರಕಲಾ ಶಿಕ್ಷಕರಾಗಿ ಕೋಟೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಇಂದು ಬೆಳಿಗ್ಗೆ ಹೆಮ್ಮಾಡಿ ಜಂಕ್ಷನ್ ಬಳಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಮುಂಬೈಯಿಂದ ಮಂಗಳೂರಿಗೆ ಸಾಗುತ್ತಿದ್ದ ಖಾಸಗಿ ಬಸ್ ಢಿಕ್ಕಿ ಹೊಡೆದಿತ್ತು. ಢಿಕ್ಕಿಯ ರಭಸಕ್ಕೆ ಅನತಿ ದೂರದವರೆಗೆ ಬಸ್ ಬೈಕನ್ನು ಎಳೆದೊಯ್ದಿತ್ತು. ಪರಿಣಾಮ ಬೈಕ್ ಸವಾರ ಭೋಜು ಹಾಂಡ ಹಾಗೂ ಹಿಂಬದಿ ಕುಳಿತಿದ್ದ ಬಾಲಕಿ ಅರ್ಪಿತಾ(11) ರಸ್ತೆಗಪ್ಪಳಿಸಿದ್ದರಿಂದ ಈರ್ವರಿಗೂ ಗಂಭೀರವಾದ ಗಾಯಗಳಾಗಿತ್ತು. ಭೋಜು ಹಾಂಡ ಅವರ ತಲೆ ಮತ್ತು ಎದೆ ಭಾಗಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕಿ ಅರ್ಪಿತಾಳನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
‘ಜನ ಮೆಚ್ಚಿದ ಶಿಕ್ಷಕ’ :
ಭೋಜು ಹಾಂಡರು ಉಡುಪಿ ಜಿಲ್ಲಾ ಚಿತ್ರಕಲಾ ಶಿಕ್ಷಕರಲ್ಲಿಯೇ ಹಿರಿಯ ಮತ್ತು ಸಾಕಷ್ಟು ಅನುಭವಿ ಹೊಂದಿದ ಶಿಕ್ಷಕರೆಂದು ಕರೆಸಿಕೊಂಡಿದ್ದರು. ಯಾರೂ ವಹಿಸಿಕೊಳ್ಳಲು ಮುಂದೆ ಬಾರದ ಉಡುಪಿ ಜಿಲ್ಲಾ ಚಿತ್ರಕಲಾ ಪರೀಕ್ಷಾ ಕೇಂದ್ರವನ್ನು ತಮ್ಮ ಶಾಲೆಯಲ್ಲಿಯೇ ಮಾಡುವ ಮಹತ್ತರವಾದ ಜವಾಬ್ದಾರಿ ತೆಗೆದುಕೊಂಡು ಅಚ್ಚುಕಟ್ಟು, ಶಿಸ್ತಿನಿಂದ ಪರೀಕ್ಷೆಗಳನ್ನು ನಿಭಾಯಿಸಿದ್ದರು. 1996 ರಲ್ಲಿ ಹಾಸನದಿಂದ ವರ್ಗಾವಣೆಗೊಂಡು ಕೋಟೇಶ್ವರ ಕಾಲೇಜಿನಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ಅವರು, ಸರಿಸುಮಾರು 21 ವರ್ಷಗಳ ಕಾಲ ಅದೇ ಶಿಕ್ಷಣ ಸಂಸ್ಥೆಯಲ್ಲಿ ಅವಿರತವಾಗಿ ಸೇವೆಗೈದಿದ್ದಾರೆ. ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದ ಭೋಜು ಹಾಂಡರು ಎಲ್ಲರಲ್ಲಿಯೂ ಉತ್ತಮವಾದ ಬಾಂಧವ್ಯ ಹೊಂದಿದ್ದರು. ಪ್ರಶಸ್ತಿಗಳ ಬೆನ್ನು ಹತ್ತದೇ ತನಗೆ ಬಂದೊಲಿದ ಜಿಲ್ಲಾ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿಯನ್ನು ಅತ್ಯಂತ ಸಂತೋಷದಿಂದಲೇ ಸ್ವೀಕರಿಸಿದ್ದರು.
ಸಾವು ಬದುಕಿನ ಹೋರಾಟಕ್ಕೆ ಅಂತ್ಯ ಹೇಳಿದ ಶಿಕ್ಷಕ
ಅಪಘಾತ ನಡೆಯುವಾಗ ಹಲ್ಮೆಟ್ ಧರಿಸಿದ್ದರೂ ಕೂಡ ಬಸ್ ಗುದ್ದಿದ ರಭಸಕ್ಕೆ ಹೆಲ್ಮೆಟ್ ಕಳಚಿ ಹೋಗಿತ್ತು. ರಸ್ತೆಗಪ್ಪಳಿಸಿದ ಅವರಿಗೆ ತಲೆ ಮತ್ತು ಎದೆ ಭಾಗಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ತಕ್ಷಣ ಹೆಮ್ಮಾಡಿಯ ಆಟೋ ಚಾಲಕರು ತಮ್ಮ ರಿಕ್ಷಾದಲ್ಲಿ ಕರೆತಂದು ಚಿನ್ಮಯಿ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಸಾವು ಬದುಕಿನ ಹೋರಾಟ ನಡೆಸುತ್ತಿದ್ದ ಅವರು ವಿಧಿಯ ಕ್ರೂರ ಲೀಲೆಯಿಂದ ಮರಳಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಅವರು ಸೇವೆ ಸಲ್ಲಿಸುತ್ತಿರುವ ಕೋಟೇಶ್ವರ ಕಾಲೇಜು ಪರಿಸರದಲ್ಲಿ ಮತ್ತು ಅವರ ನಿವಾಸವಿರುವ ಹೆಮ್ಮಾಡಿಯಲ್ಲಿ ಭೋಜು ಹಾಂಡ ಅವರ ಹಠಾತ್ ನಿಧನವಾರ್ತೆಗೆ ಜನ ಅಪಾರ ಶೋಕ ವ್ಯಕ್ತಪಡಿಸಿದ್ದಾರೆ,
ಮೃತರು ಪತ್ನಿ ವಸಂತಿ, ಮಕ್ಕಳಾದ ರೂಪಶ್ರೀ, ರಾಕೇಶ್, ರಾಜೇಶ್ ಅವರನ್ನು ಅಗಲಿದ್ದಾರೆ.