ಉಡುಪಿ : ಕುಂಬಾರ ಸಮುದಾಯದ ಬಗ್ಗೆ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆ ಮತ್ತು ಕರ್ನಾಟಕ ರಾಜ್ಯ ಕುಂಬಾರ ಮಹಾ ಸಂಘದ ವತಿಯಿಂದ ಪ್ರತಿಭಟನೆ ಇತ್ತೀಚೆಗೆ ನಡೆಯಿತು.
ಉಡುಪಿಯ ಕ್ಲಾಕ್ ಟವರ್ ಬಳಿ ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ಕುಂಬಾರ ಸಮುದಾಯದ ಬಗೆ ಡಿಕೆಶಿಯವರು ಕೀಳಾಗಿ ಮಾತನಾಡಿದ್ದಾರೆ. ಈ ಬಗ್ಗೆ ಕೂಡಲೇ ಕ್ಷಮೆ ಯಾಚಿಸಬೆಕು ಎಂದು ಒತ್ತಾಯಿಸಲಾಯಿತು. ಪ್ರತಿಭಟನಾಕಾರನ್ನು ಉದ್ದೇಶಿಸಿ ಕಾರ್ನಾಟಕ ರಾಜ್ಯ ಕುಂಬಾರ ಮಹಾ ಸಂಘದ ಕಾರ್ಯಾಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಮಾತನಾಡಿ, ಇತ್ತೀಚೆಗೆ ಶಿವಕುಮಾರ್ ರವರು ಸರ್ಕಾರ ಬಿದ್ದು ಹೋಗಲು ಕುಂಬಾರರು ಮಾಡಿದ ಮಡಿಕೆಯೇ ಎಂದು ವ್ಯಂಗ್ಯವಾಗಿ ಮಾತನಾಡಿದ್ದಾರೆ. ಇದರಿಂದ ಇಡೀ ಕುಂಬಾರ ಸಮುದಾಯಕ್ಕೆ ನೋವುಂಟಾಗಿದೆ. ರಾಜ್ಯದಲ್ಲಿ ರಾಜಕೀಯವಾಗಿ ಕುಂಬಾರರು ಸಮರ್ಥರಾಗಿದ್ದಾರೆ. ಒಬ್ಬ ಜವಾಬ್ದಾರಿಯುತ ವ್ಯಕ್ತಿ ಒಂದು ಸಮುದಾಯದ ಬಗ್ಗೆ ಕೀಳಾಗಿ ಮಾತನಾಡಬಾರದು. ಬಿದ್ದರೆ ಮಡಿಕೆಯೇ ಏನು, ಮುತ್ತೂ ಒಡೆದು ಹೋಗುತ್ತದೆ, ಎಚ್ಚರ ತಪ್ಪಿ ನಡೆದರೆ ತಲೆಯೂ ಒಡೆದು ಹೋಗಬಹುದು. ಇಂತಹ ಮಾತುಗಳನ್ನಾಡುವಾಗ ಜಾಗೃತೆ ವಹಿಸಬೇಕು ಎಂದು ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ಕುಲಾಲ ಸಮಾಜದ ಪ್ರಮುಖರಾದ ರಾಮ ಕುಲಾಲ್ ಪಕ್ಕಾಲು, ಐತು ಕುಲಾಲ್, ಸತೀಶ್ ಕುಲಾಲ್ ಕಡಿಯಾಳಿ, ಸಂತೋಷ್ ಕುಲಾಲ್, ಶಂಕರ ಕುಲಾಲ್, ಸತೀಶ್ ನಡೂರು, ಬಸವರಾಜ್, ರಾಜೇಶ್, ಉದಯ ಕುಲಾಲ್ ಕಳತ್ತೂರು, ಸಂಜೀವ ಕುಲಾಲ್ ಮುಂತಾದವರು ಭಾಗವಹಿಸಿದ್ದರು.