ಬೆಳ್ತಂಗಡಿ(ಜ..೧೬) : ಗುರುವಾಯನಕೆರೆ ಕುಲಾಲ ಮಂದಿರದಲ್ಲಿ ಬೆಳ್ತಂಗಡಿ ತಾಲೂಕು ಕುಲಾಲ ಕುಂಬಾರರ ಯುವ ವೇದಿಕೆಯ ಪದಗ್ರಹಣ ಸಮಾರಂಭವು ಇತ್ತೀಚಿಗೆ ಯಶಸ್ವಿಯಾಗಿ ನಡೆಯಿತು .
ಸಮಾರಂಭದಲ್ಲಿ ತಾಲೂಕು ಸಮಾವೇಶದ ಮೂಲಕ ಕುಲಾಲ/ಕುಂಬಾರ ಸಮುದಾಯಕ್ಕೆ ರಾಜಕೀಯ ಸ್ಥಾನಮಾನದ ಸಾಮಾಜಿಕ ನ್ಯಾಯಕ್ಕಾಗಿ ಹಕ್ಕೊತ್ತಾಯ ಮಾಡಲು ತೀರ್ಮಾನ ಮಾಡಲಾಯಿತು.
ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘದ ಕಾರ್ಯಧ್ಯಕ್ಷರೂ, ಕುಲಾಲ ಕುಂಬಾರ ಯುವ ವೇದಿಕೆಯ ಸ್ಥಾಪಕ ಅಧ್ಯಕ್ಷರೂ ಆದ ಡಾ. ಅಣ್ಣಯ್ಯ ಕುಲಾಲ್, ಕುಲಾಲ/ ಕುಂಬಾರರ ಯುವ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಹರೀಶ್ ಕಾರಿಂಜ ಉಪಸ್ಥಿತಿಯಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಬೆಳ್ತಂಗಡಿ ತಾಲೂಕಿನ ಕುಲಾಲ ಕುಂಬಾರರ ಯುವ ವೇದಿಕೆಯ ನೂತನ ಅಧ್ಯಕ್ಷರಾಗಿ ಲೋಕೇಶ್ ಕುಲಾಲ್ ಗುರುವಾಯನಕೆರೆ, ಪ್ರಧಾನ ಕಾರ್ಯದರ್ಶಿಗಳಾಗಿ ದಿನಕರ್ ಕುಲಾಲ್ ಕುಂಡದಬೆಟ್ಟು, ಕೋಶಾಧಿಕಾರಿಗಳಾಗಿ ಉಮೇಶ್ ಕುಲಾಲ್ ಗುರುವಾಯನಕೆರೆ ಇವರು ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಸುಮಾರು 45 ಯುವಕರು ಭಾಗವಹಿಸುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.
ಯುವವೇದಿಕೆ ಮತ್ತಷ್ಟು ಸಂಘಟನಾತ್ಮಕವಾಗಿ ಬೆಳೆಯಲಿ : ಡಾ. ಅಣ್ಣಯ್ಯ ಕುಲಾಲ್ ಉಳ್ತೂರು
2011ರಿಂದ ಇಲ್ಲಿಯವರೆಗೆ ಕುಲಾಲ ಯುವವೇದಿಕೆಯ ಜಿಲ್ಲೆ ಹಾಗು ವಿಭಾಗದ ಜವಾಬ್ದಾರಿಯ ಜೊತೆ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾಗಿ ಹರೀಶ್ ಕಾರಿಂಜ ರವರು ತಾಲೂಕು ಘಟಕವನ್ನ ರಾಜ್ಯದಲ್ಲೇ ಒಂದು ಅತ್ಯುತ್ತಮ ಯುವಘಟಕವನ್ನಾಗಿ ಕಟ್ಟಿ ಬೆಳೆಸಿ ಇಂದು ಕುಲಾಲ್ ಯುವವೇದಿಕೆಯ ರಾಜ್ಯ ಸಂಘಟನೆಯ ಕಾರ್ಯದರ್ಶಿಯಂತಹ ಮತ್ತಷ್ಟು ಜವಾಬ್ದಾರಿಯ ಹೊತ್ತಿದ್ದು ಅವರ ಗೌರವಾಧ್ಯಕ್ಷತೆಯಲ್ಲಿ ಬೆಲ್ತಂಗಡಿ ಯುವವೇದಿಕೆ ಮತ್ತಷ್ಟು ಸಂಘಟನಾತ್ಮಕವಾಗಿ ಬೆಳೆಯಲಿ ಇದಕ್ಕಾಗಿ ಹರೀಶ್ ಜೊತೆ ಹೆಣಗಿದ ಎಲ್ಲರಿಗೂ ಯುವವೇಧಿಕೆಯ ಕೇಂದ್ರ ಸಮಿತಿ ಅಭಾರಿಯಾಗಿದೆ ಎಂದು ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಸಂತಸ ವ್ಯಕ್ತಪಡಿಸಿದರು.
ಯುವವೇದಿಕೆಯ ಹುಟ್ಟು ಅದರ ಬೆಳವಣಿಗೆ ಗುರಿ ತತ್ವವನ್ನ ತಿಳಿಸಿ ಹೇಳಿ ಸಭೆಯಲ್ಲಿದ್ದ ಪದಾಧಿಕಾರಿಗಳ ಜೊತೆ ಚರ್ಚೆಯಲ್ಲಿ ಭಾಗವಹಿಸಿ, ಪ್ರಶ್ನೋತ್ತರಗಳಿಗೆ ಸ್ಪಂದಿಸಿದರು. ಅಲ್ಲದೆ ಮುಂಬರುವ ದಿನಗಳಲ್ಲಿ ತಾಲೂಕಿನಲ್ಲಿ ಇರುವ ಸುಮಾರು 25 ಸಾವಿರ ಕುಲಾಲ, ಕುಂಬಾರ,ಮೂಲ್ಯ ಸಮುದಾಯದವರನ್ನ ಸೇರಿಸಿ ತಾಲೂಕಿನ ಕೇಂದ್ರ ಭಾಗದಲ್ಲಿ ಯುವ ಸಮಾವೇಶ ನಡೆಸಿ ಕುಲಾಲ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ಪಡೆಯಲು ಹಕ್ಕೊತ್ತಾಯ ಮಾಡಲು ತೀರ್ಮಾನಿಸಲಾಯಿತು. ಅದಕ್ಕಾಗಿ ತಾಲೂಕು ಸಮಿತಿಯ ಪದಾಧಿಕಾರಿಗಳ ಜೊತೆ ಪ್ರತೀ ಜಿಲ್ಲಾ ಪಂಚಾಯತ್ ವ್ಯಾಪ್ತಿಯಿಂದ ಒಬ್ಬೊಬ್ಬ ಸಂಚಾಲಕರನ್ನ ನೇಮಿಸಿ ಅವರ ಮೂಲಕ ಪ್ರತೀ ತಾಲೂಕು ಪಂಚಾಯತ್ ಹಾಗು ಗ್ರಾಮ ಪಂಚಾಯತ್ ಮಠದ ಸಮಿತಿ ರಚಿಸಲು ತೀರ್ಮಾನಿಸಲಾಯಿತು. ಉಳ್ಳಾಲ, ಕುಳಾಯಿ, ಮಂಗಳೂರು ಹಾಗೂ ಉಡುಪಿಯಲ್ಲಿ ಜರುಗಲಿರುವ ಕ್ರೀಡಾಕೂಟ -ಸಮ್ಮೇಳನ-ಸರ್ವಜ್ನ ಜಯಂತಿ -ಸರ್ವಜ್ಞ ಟ್ರೋಫಿ ಹಾಗು ವಿಶ್ವ ಸರ್ವಜ್ಞ ಪ್ರಶಸ್ತಿ ಕಾರ್ಯಕ್ರಮದಲ್ಲೂ ಸಕ್ರೀಯವಾಗಿ ಭಾಗವಹಿಸಲು ತೀರ್ಮಾನಿಸಲಾಯಿತು.