ನೆರವಿಗಾಗಿ ಎದುರು ನೋಡುತ್ತಿದೆ ಬಡ ಕುಟುಂಬ
ಮಂಗಳೂರು(ಜ. ೧೬): ಕೂಲಿ ಕಾರ್ಮಿಕರಾಗಿದ್ದು ಕಟ್ಟಡವೊಂದರ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದಾಗ ಆಯತಪ್ಪಿ ಬಿದ್ದು ಬೆನ್ನುಮೂಳೆಗೆ ಗಂಭೀರ ಏಟು ಮಾಡಿಕೊಂಡು ನಡೆದಾಡುವ ಶಕ್ತಿಯನ್ನೇ ಕಳೆದುಕೊಂಡ ಸ್ಥಿತಿಗೆ ತಲುಪಿದ ವ್ಯಕ್ತಿಯೊಬ್ಬರು ಬಡತನದಿಂದ ಚಿಕಿತ್ಸೆ ಹಾಗೂ ಕುಟುಂಬ ಸಲಹಲು ಆರ್ಥಿಕ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ.
ಸುರತ್ಕಲ್ ಕಾಟಿಪಳ್ಳ-ಕೃಷ್ಣಾಪುರ ಯುವಕ ಮಂಡಲ ಸಮೀಪದ ನಿವಾಸಿ ವಾಸು ಕುಲಾಲ್ (47ವರ್ಷ) ಸೆಂಟ್ರಿಂಗ್ ಕೆಲಸಕ್ಕೆ ಹೋಗುತ್ತಾ ಜೀವನ ಸಾಗಿಸುತ್ತಿದ್ದರು. ಇದೀಗ ಬದುಕಿನಲ್ಲಿ ಎದುರಾದ ಆಕಸ್ಮಿಕ ದುರ್ಘಟನೆಯಿಂದ ನಡೆದಾಡುವ ಶಕ್ತಿಯನ್ನೇ ಕಳೆದುಕೊಂಡು ನಿತ್ಯದ ಪ್ರತಿ ಕೆಲಸಗಳಿಗೂ ಮನೆಮಂದಿಯನ್ನೇ ಆಶ್ರಿಸುವ ದಯನೀಯ ಸ್ಥಿತಿ ಆತನಿಗೆ ಒದಗಿದೆ.
ವಾಸು ಅವರು ಕಳೆದ ಅಕ್ಟೊಬರ್ ೦೪ರಂದು ಕುಳಾಯಿ ಸಮೀಪ ಕಟ್ಟಡವೊಂದರ ಸೆಂಟ್ರಿಂಗ್ ಕಾರ್ಯ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದರು. ತಕ್ಷಣ ಎಜೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಯಿತು. ಬೆನ್ನಿಗೆ ಗಾಯವಾಗಿ, ಬೆನ್ನುಹುರಿಗೆ ಗಂಭೀರ ಏಟು ತಗುಲಿದ್ದರಿಂದ ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಇದಕ್ಕಾಗಿ ಸಾಲಸೋಲ ಮಾಡಿ ಸುಮಾರು 2 ಲಕ್ಷ ರೂ. ಖರ್ಚು ಮಾಡಿದರೂ ಇನ್ನು ಸಹಜ ಸ್ಥಿತಿಗೆ ತಲುಪಲು ಸಾಧ್ಯವಾಗಿಲ್ಲ. ಬೆನ್ನಿನ ಗಾಯ ಇನ್ನೂ ವಾಸಿಯಾಗದ ಕಾರಣ ಬೆನ್ನುಹುರಿಗೆ ಸೂಕ್ತ ಚಿಕಿತ್ಸೆ ನೀಡಲೂ ಅಸಾಧ್ಯವಾಗಿದೆ. ಪ್ರಸ್ತುತ ಸುರತ್ಕಲ್ ಕಾನದಲ್ಲಿರುವ ಮಿಸ್ಕಿತ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ವಾಸು ಅವರು ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಕಿತ್ತು ತಿನ್ನುವ ಬಡತನ
ವಾಸು ಕುಲಾಲ್ ಅವರಿಗೆ ಪತ್ನಿ ಮೀರಾ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಾಲೇಜು ಓದುವ ಮಕ್ಕಳ ವಿದ್ಯಾಭ್ಯಾಸದ ಖರ್ಚು, ಪತಿಯ ಚಿಕಿತ್ಸೆ, ದೈನಂದಿನ ಖರ್ಚುಗಳಿಗಾಗಿ ಮೀರಾ ಅವರು ಬೀಡಿ ಕಟ್ಟಿ ಬರುವ ಆದಾಯವೊಂದೇ ಗತಿ. ಮನೆ ಕೆಲಸ, ಪತಿಯ ಆರೈಕೆಯ ಜೊತೆ ಹಗಲಿರುಳು ದುಡಿಯುತ್ತಾ ಸಂಸಾರದ ರಥ ಎಳೆಯಲು ಬಡ ಮಹಿಳೆ ಹರಸಾಹಸ ಪಡುತ್ತಿದ್ದಾರೆ.
ಈಗಾಗಲೇ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಕೈ ಬರಿದಮಾಡಿಕೊಂಡಿರುವ ಈ ಕುಟುಂಬ ದಾನಿಗಳ ನೆರವು ಎದುರು ನೋಡುತ್ತಿದೆ. ಈಗಾಗಲೇ ಕೆಲ ವ್ಯಕ್ತಿಗಳು, ಸಂಘ ಸಂಸ್ಥೆಗಳು ನೆರವು ನೀಡಿರುವುದನ್ನು ನೆನಪಿಸಿಕೊಳ್ಳುವ ಇವರು ದೈನ್ಯದಿಂದಲೇ ನೆರವಿಗಾಗಿ ಮೊರೆ ಇಡುತ್ತಿದ್ದಾರೆ. `ಕುಲಾಲ್ ವರ್ಲ್ಡ್ ಡಾಟ್ ಕಾಮ್ ಪ್ರತಿನಿಧಿಗಳು ಇವರ ಮನೆಗೆ ಖುದ್ದು ಭೇಟಿ ನೀಡಿ, ಇವರ ದಯನೀಯ ಪರಿಸ್ಥಿತಿಯನ್ನು ಕಂಡು ಸಹೃದಯ ವಾಟ್ಸಪ್ ಮಿತ್ರರಿಂದ ಆದಷ್ಟು ಧನ ಸಂಗ್ರಹಿಸಿ ನೀಡುವ ನಿರ್ಧಾರ ಕೈಗೊಂಡಿದೆ. ಪುಣ್ಯವಂತರು ಕೈಲಾದ ಧನ ಸಹಾಯ ನೀಡಿ ಸಹಕರಿಸಿದರೆ ಬಡ ಕುಟುಂಬಕ್ಕೆ ಕೊಂಚ ನೆಮ್ಮದಿ ಸಿಕ್ಕಂತಾಗುತ್ತದೆ.
ನೆರವು ನೀಡುವವರು `ಕುಲಾಲ್ ವರ್ಲ್ಡ್’ ವಾಟ್ಸಪ್ ಬಳಗದ ಅಡ್ಮಿನ್ ನರೇಶ್ ಅವರ ಕೆಳಗಿನ ಖಾತೆಗೆ ಜನವರಿ ಅಂತ್ಯದೊಳಗೆ ಜಮಾ ಮಾಡಬೇಕಾಗಿ ಕಳಕಳಿಯ ವಿನಂತಿ.
NARESH . K.T
CANARA BANK
BELTHANGADY BRANCH
SB A/C No. 2749101003564
IFSC Code: CNRB0002749
phone : 8880551111
(ಮಾಹಿತಿ : ಹೇಮಂತ್ ಕುಮಾರ್, ರಂಜಿತ್ ಕುಮಾರ್)
kulalworld.com