ಮಂಗಳೂರು (ಜ,೦೨): ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಕೋಡಿಕೆರೆ ಶಿವರಾಜ್ ಕುಲಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಕುಳಾಯಿ ನಿವಾಸಿ ದಿನೇಶ್ ಕುಲಾಲ್(೨೭)ಗೆ ನಗರದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಶಿವರಾಜ್ ಕುಲಾಲ್ ಕೊಲೆ ಪ್ರಕರಣದಲ್ಲಿ ದಿನೇಶ್ ಹಾಗೂ ಪ್ರಕಾಶ್ ಪ್ರಮುಖ ಆರೋಪಿಗಳಾಗಿದ್ದು, ಇವರಿಗೆ ಸೌದಿಯಲ್ಲಿರುವ ಅಶ್ರಫ್ ಎಂಬಾತ ಸುಪಾರಿ ನೀಡಿದ್ದ ಎನ್ನಲಾಗಿದೆ. ಪ್ರಕಾಶ್ನನ್ನು ೨೦೧೪ರಲ್ಲಿ ತಂಡವೊಂದು ಎನ್ಐಟಿಕೆ ಬಸ್ ನಿಲ್ದಾಣದಲ್ಲಿ ಮಾರಕಾಸ್ತ್ರಗಳಿಂದ ಕಡಿದು ಹತ್ಯೆಗೈದಿತ್ತು. ದಿನೇಶ್ ಜೈಲಿನಲ್ಲಿದ್ದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಕೊಲೆಯ ಆರೋಪಕ್ಕೆ ಜೀವಾವಧಿ ಶಿಕ್ಷೆ ಹಾಗೂ ೫೦೦೦ ರೂ. ದಂಡ, ಕೊಲೆಯ ಸಂಚು ಆರೋಪಕ್ಕೆ ೧ ವರ್ಷ ಜೈಲು ಶಿಕ್ಷೆ ಹಾಗೂ ೫೦೦೦ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ದಂಡದ ಮೊತ್ತವನ್ನು ಶಿವರಾಜ್ ಮನೆಯವರಿಗೆ ನೀಡುವಂತೆ ಆದೇಶದಲ್ಲಿ ಹೇಳಲಾಗಿದೆ. ಸರಕಾರ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಹರಿಶ್ಚಂದ್ರ ಉದ್ಯಾವರ್ ವಾದ ಮಂಡಿಸಿದ್ದರು.
ಕೋಡಿಕೆರೆ ನಿವಾಸಿ ಶಿವರಾಜ್ ಕುಲಾಲ್ ಕುಂಟಿಕಾನದ ಭಾರತ್ ಮೋಟರ್ಸ್ನಲ್ಲಿ ಕೆಲಸ ಮಾಡುತ್ತಿದ್ದು, ೨೦೧೨, ಜುಲೈ 19ರ ರಾತ್ರಿ ಕೆಲಸ ಮುಗಿಸಿ ಮನೆಗೆ ಹಿಂತಿರುಗಿದ್ದರು. ರಾತ್ರಿ 10 ಗಂಟೆಯ ಸುಮಾರಿಗೆ ಮನೆಗೆ ಬಂದಿದ್ದ ಅಪರಿಚಿತ ಯುವಕರಿಬ್ಬರು ಶಿವರಾಜ್ರಲ್ಲಿ ಕಾರ್ ಕೆಟ್ಟುಹೋಗಿದೆ ಬಂದುನೋಡಿ ಎಂಬುದಾಗಿ ಹೇಳಿ ಕರೆದಿದ್ದರು. ಶಿವರಾಜ್ ಅವರು ಅಪರಿಚಿತರ ಜೊತೆ ಹೋಗಿದ್ದು, ಮನೆಗೆ ಹಿಂತಿರುಗಿ ಬಂದಿರಲಿಲ್ಲ. ಮನೆಮಂದಿ ರಾತ್ರಿಯಿಡೀ ಶಿವರಾಜ್ರ ಮೊಬೈಲ್ ನಂಬರ್ ಅನ್ನು ಪ್ರಯತ್ನಿಸಿದ್ದರೂ ಸಂಪರ್ಕಕ್ಕೆ ಸಿಕ್ಕಿರ ಲಿಲ್ಲ. 20ರ ಮುಂಜಾನೆ ಶಿವರಾಜ್ರ ಮೃತದೇಹ ಕುತ್ತಿಗೆ ಬಿಗಿದು ಕೊಲೆಗೈಯಲ್ಪಟ್ಟ ಸ್ಥಿತಿಯಲ್ಲಿ ತೋಕೂರು ಬಳಿಯ ಜಾರಂದಾಯ ದೈವಸ್ಥಾನದ ಸಮೀಪ ಪತ್ತೆಯಾಗಿತ್ತು.
kulalworld.com