ಮಂಗಳೂರು(ಡಿ.೨೫) : ಯಾವುದೇ ಗೊಂದಲ ಗೋಜಲುಗಳಿಲ್ಲದೇ ಬೆಳೆದ ಕೆಲವೇ ಕೆಲವು ಬ್ಯಾಂಕ್ ಗಳಲ್ಲಿ ಕೊಲ್ಯ ಕುಂಭೇಶ್ವರ ವಿವಿಧೋದ್ದೇಶ ಸಹಕಾರಿ ಸಂಘ ಕೂಡಾ ಒಂದು ಎನ್ನಲು ಹೆಮ್ಮೆ ಎನಿಸುತ್ತದೆ ಎಂದು ಸಾಮಾಜಿಕ ಚಿಂತಕ ಡಾ. ಅಣ್ಣಯ್ಯ ಕುಲಾಲ್ ಹೇಳಿದರು.
ಉಚ್ಚಿಲ-ಸಂಕೊಳಿಗೆಯಲ್ಲಿ ಕುಂಭೇಶ್ವರ ವಿವಿಧೋದ್ದೇಶ ಸಹಕಾರಿ ಸಂಘದ ಎರಡನೇ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಹಕಾರಿ ಸಂಘಗಳಲ್ಲಿ ಹಣವನ್ನ ಹೂಡುವವರು ಅದರಿಂದ ಬರುವ ವಾರ್ಷಿಕ ಲಾಭ ಹಾಗು ವೈಯಕ್ತಿಕ ಲಾಭಗಳಿಗಿಂತ ಅದರಿಂದ ಸಹಕಾರಿ ತತ್ವದಂತೆ ಇನ್ನೊಬ್ಬ ಅಶಕ್ತನಿಗೆ ಹಾಗೂ ಬ್ಯಾಂಕನ್ನು ಸ್ಥಾಪಿಸಿದ ಸ್ವಜಾತಿಯ ಬಡವರಿಗೆ/ವಿದ್ಯಾರ್ಥಿಗಳಿಗೆ ಉಪಕಾರವಾಗುವತ್ತ ಹೆಚ್ಚು ಗಮನ ಕೊಟ್ಟಾಗ ಆ ಸಹಕಾರಿ ಸಂಘ ಜನಮನವನ್ನು ಗೆಲ್ಲುತ್ತದೆ. ಅಲ್ಲದೆ ಅಲ್ಲಿ ಬಿರುಕು ಗೊಂದಲಗಳಿಲ್ಲದೆ ಸಂಘ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಕುಂಭೇಶ್ವರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲ್ ಸಾಲ್ಯಾನ್ ಕಣ್ವತೀರ್ಥ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ. ಕೆ ಸಲೀಂ, ಸದಾಶಿವ ಉಳ್ಳಾಲ, ಧನಲಕ್ಷ್ಮೀ, ಧರ್ಣಪ್ಪ ಮಾಸ್ಟರ್, ರಾಜೇಶ್ ಉಚ್ಚಿಲ್, ರವಿಶಂಕರ್, ಕರೀಂ ನಾಗತೋಟ, ಉಮೇಶ್ ಉಚ್ಚಿಲ್, ವಸಂತಿ ಲೋಕೇಶ್ ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.