ಮೂಡುಬಿದಿರೆ(ಡಿ.೨೫): ಸೊಂಟಕ್ಕೆ ಏಟು ಮಾಡಿಕೊಂಡು ದಯನೀಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದ ತೋಡಾರು ಗ್ರಾಮದ ಶಾರದಾ ಕುಲಾಲ್ ಅವರಿಗೆ `ಕುಲಾಲ ಚಾವಡಿ’ ವಾಟ್ಸಾಪ್ ಬಳಗದ ಸದಸ್ಯರು ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾರೆ.
ಡಿ. ೨೫ರಂದು ಶಾರದಾ ಅವರ ಮನೆಗೆ ಭೇಟಿ ನೀಡಿದ `ಕುಲಾಲ ಚಾವಡಿ’ ಸದಸ್ಯರು ತಾವು ಸಂಗ್ರಹಿಸಿದ್ದ 15,900/- ರೂಪಾಯಿಯನ್ನು ಹಸ್ತಾoತರಿಸಿದರು. ಹಣ ಸ್ವೀಕರಿಸಿದ ಶಾರದಾ ಕುಲಾಲ್, ತಮ್ಮ ಶೋಚನೀಯ ಸ್ಥಿತಿಯನ್ನು ವಿವರಿಸಿ, ಹಣ ಸಹಾಯ ನೀಡಿ ಸ್ಪಂದಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಹಣ ನೀಡುವ ಸಂದರ್ಭ ವಾಟ್ಸಪ್ ಗ್ರೂಪಿನ ಸದಸ್ಯರಾದ ಹೇಮಂತ್ ಕುಲಾಲ್ ಕಿನ್ನಿಗೋಳಿ, ಸಂತೋಷ್ ಕುಲಾಲ್ ಕಾರ್ಕಳ ಪದವು, ಸುಧೀರ್ ಬಂಗೇರ ಕೆರ್ವಾಸೆ, ಉದಯ ಕುಲಾಲ್ ಕಳತ್ತೂರು, ಅರುಣ್ ಕುಲಾಲ್ ಮೂಳೂರು, ಹೃದಯ್ ಕುಲಾಲ್ ಕಾರ್ಕಳ, ಸತೀಶ್ ಕಜ್ಜೋಡಿ, ರಂಜಿತ್ ಸಾಲ್ಯಾನ್ ಮೂಡಬಿದಿರೆ, ದಯಾನಂದ ಬಂಗೇರ ಮೂಡಬಿದಿರೆ ಮುಂತಾದವರು ಉಪಸ್ಥಿತರಿದ್ದರು.
ಶಾರದಾ ಕುಲಾಲ್ ಅವರ ದಯನೀಯ ಸ್ಥಿತಿಯ ಕುರಿತು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಈ ಹಿಂದೆ ವಿಸ್ತೃತ ವರದಿ ಮಾಡಿತ್ತು. ಈ ವರದಿಗೆ ಸ್ಪಂದಿಸಿದ ಹಲವರು ಮಾನವೀಯ ನೆಲೆಯಲ್ಲಿ ಸ್ಪಂದಿಸಿದ್ದು, ಇತ್ತೀಚೆಗಷ್ಟೇ ದೋಹಾ ಕತಾರ್ ಕುಲಾಲ ಮಿತ್ರರು 25,000/- ರೂ. ಧನಸಹಾಯ ನೀಡಿದ್ದರು.
ಶಾರದಾ ಕುಲಾಲ್ ಅವರ ಕರುಣಾಜನಕ ಕಥೆ :
ಮೂಡಬಿದ್ರಿ ಸಮೀಪದ ತೋಡಾರು ಗ್ರಾಮದ ಸುಮಾರು ನಲವತ್ತೈದು ವರ್ಷ ವಯಸ್ಸಿನ ಶಾರದಾ ಕುಲಾಲ್ ತಮ್ಮ ವಯೋವೃದ್ಧ ತಾಯಿ ಸುಂದರಿ ಅವರ ಜೊತೆ ವಿದೇತ ನಗರ ಎಂಬಲ್ಲಿ ವಾಸಿಸುತ್ತಿದ್ದು, ಅನಾರೋಗ್ಯ ಮತ್ತು ತೀರಾ ಆರ್ಥಿಕ ಸಂಕಷ್ಟದಿಂದ ಜರ್ಜರಿತರಾಗಿದ್ದಾರೆ. ಮದುವೆಯಾಗಿ ಕೆಲ ವರ್ಷವಾದರೂ ಮಕ್ಕಳಾಗಿಲ್ಲ ಎನ್ನುವ ಚಿಂತೆ ಬಿಟ್ಟರೆ ಶಾರದಾ ಅವರ ಸಂಸಾರ ಚೆನ್ನಾಗಿಯೇ ಇತ್ತು. ಟ್ಯಾಕ್ಸಿ ಚಾಲಕರಾಗಿ ಬದುಕಿಗೆ ಊರುಗೋಲಾಗಿದ್ದ ಪತಿ ಅಶೋಕ್ ಕುಲಾಲ್ ಯಾವಾಗ ತೀರಿ ಹೋದರೋ ಅಂದಿನಿಂದ ಸಂಕಷ್ಟ ಬೆನ್ನುಹತ್ತತೊಡಗಿತು.
ಗೃಹಿಣಿಯಾಗಿದ್ದ ಶಾರದಾ ತನ್ನ ತಾಯಿಯನ್ನು ಸಾಕುವ ಜವಾಬ್ದಾರಿ ಹೊತ್ತುಕೊಂಡರು. ಹೆಚ್ಚೇನೂ ಓದದ ಅವರು ತೋಡಾರಿನ ಎಂಐಟಿಇ(ಮೈಟ್) ಕಾಲೇಜು ಬಳಿಯ ಕ್ಯಾಂಟೀನ್ ನಲ್ಲಿ ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿಕೊಂಡರು. ಬರುತ್ತಿದ್ದ ಅಲ್ಪ ಆದಾಯದಿಂದ ಇನ್ನೇನು ಹೊಟ್ಟೆ-ಬಟ್ಟೆಗೆ ದಾರಿಯಾಯಿತು ಎನ್ನುವಷ್ಟರಲ್ಲೇ ಮತ್ತೊಂದು ಆಘಾತ ಸಿಡಿಲಿನಂತೆ ಬಂದೆರಗಿತು. ಇತ್ತೀಚೆಗಷ್ಟೇ ತಮ್ಮ ಮನೆಯ ಅಂಗಳದಲ್ಲಿ ಕಾಲು ಜಾರಿ ಬಿದ್ದು ಶಾರದಾ ಅವರು ಸೊಂಟದ ಭಾಗಕ್ಕೆ ಬಲವಾದ ಏಟು ಮಾಡಿಕೊಂಡರು. ಎದ್ದೇಳಲಾಗದ ಸ್ಥಿತಿಯಲ್ಲಿದ್ದ ಇವರನ್ನು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಸೊಂಟದ ಭಾಗದಲ್ಲಿ ಸರ್ಜರಿ ನಡೆಸಿದ್ದು, ದುಡಿದ ಅಷ್ಟಿಷ್ಟು ಹಣ ಚಿಕಿತ್ಸೆಗೆ ಸಾಕಾಗಲಿಲ್ಲ. ಅವರಿವರು ನೆರವು ನೀಡಿದ ಫಲವಾಗಿ ಆಸ್ಪತ್ರೆಯಿಂದ ಬಿಡುಗಡೆ ಸಿಕ್ಕಿತು. ಚಿಕಿತ್ಸೆಯಿಂದ ಮತ್ತೆ ಮೊದಲಿನಂತೆ ಚೈತನ್ಯ ಪಡೆಯುವ ಕನಸು ಕಾಣುತ್ತಿದ್ದಾರೆ. ವೈದ್ಯರು ಸಂಪೂರ್ಣ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ದುಡಿಯದಿದ್ದರೆ ತನಗೆ ಮತ್ತು ತನ್ನನ್ನೇ ನಂಬಿಕೊಂಡಿರುವ ತಾಯಿ ಹೊಟ್ಟೆಗೆ ತಣ್ಣೀರ ಬಟ್ಟೆಯೇ ಗತಿ ಎಂಬಂತಾಗಿದೆ.
ಬದುಕು ಸಾಗಿಸುದೇ ಕಷ್ಟದಾಯಕವಾದ ಪರಿಸ್ಥಿತಿಯಲ್ಲಿರುವ ಈ ಕುಟುಂಬ ಆರ್ಥಿಕ ಸಮಸ್ಯೆ ಹಾಗೂ ಅನಾರೋಗ್ಯದಿಂದ ಬಳಲಿ ಬೆಂಡಾಗಿದೆ. ಮುಂದಿನ ದಾರಿ ಏನೆಂಬ ಚಿಂತೆಯಲ್ಲಿರುವ ಕುಟುಂಬಕ್ಕೆ ಸಹೃದಯಿಗಳ ಸಹಾಯದ ಆವಶ್ಯಕತೆ ಇದ್ದು, ಉದಾರ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಸಹಾಯ ಮಾಡಲಿಚ್ಛಿಸುವ ದಾನಿಗಳು ಕೆಳಗಿನ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಬಹುದು.
Sharada
A/c no: 1015 0105 1000 182
Ifsc code: VIJB0001015
Vijaya bank, Badaga Mijar Branch, Dakshina Kannada,
ಸಂಪರ್ಕ ಸಂಖ್ಯೆ : 8152069408